ಕರ್ನಾಟಕದ ಕೃಷಿ ಆರ್ಥಿಕತೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾವಿರಾರು ರೈತ ಕುಟುಂಬಗಳ ಬದುಕು, ಗ್ರಾಮೀಣ ಉದ್ಯೋಗ, ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳ ಆರ್ಥಿಕ ಚಟುವಟಿಕೆ ಕಬ್ಬಿನ ಉತ್ಪಾದನೆಯೊಂದಿಗೆ ಬೆಸೆದುಕೊಂಡಿವೆ. ಆದರೆ, ಕಬ್ಬು ಬೆಳೆಗಾರರ ಪಾಲಿಗೆ ಮಾತ್ರ ಈ ಬೆಳೆಯು ನಿರೀಕ್ಷಿತ ಆರ್ಥಿಕ ಭದ್ರತೆ ನೀಡುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೀಜ, ಗೊಬ್ಬರ, ಔಷಧ, ಕೃಷಿ ಕೂಲಿ, ನೀರಾವರಿ, ವಿದ್ಯುತ್, ಡೀಸೆಲ್, ಕಟಾವು ಮತ್ತು ಸಾಗಾಣಿಕೆ ವೆಚ್ಚಗಳ ನಡುವೆ ಕಬ್ಬಿನ ಬೆಲೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಏರಿಕೆಯಾಗದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಒಂದೆಡೆ ಹವಾಮಾನ ವೈಪರೀತ್ಯ, ಬರಗಾಲ, ಅತಿವೃಷ್ಟಿ, ನೀರಿನ ಅಭಾವ ಮತ್ತು ಕೀಟಬಾಧೆಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು, ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳ ಬೆಲೆ ನಿಗದಿ, ತೂಕ ಮತ್ತು ಸಕ್ಕರೆ ಇಳುವರಿ ಲೆಕ್ಕಾಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕಬ್ಬು ಬೆಳೆದ ರೈತನಿಗೆ ನ್ಯಾಯಯುತ ಬೆಲೆ ದೊರೆಯಬೇಕಾದರೆ ಕೇವಲ ಎಫ್‌ಆರ್‌ಪಿ ಹೆಚ್ಚಳವೊಂದೇ ಪರಿಹಾರವಲ್ಲ. ಕಬ್ಬಿನಿಂದ ಉತ್ಪತ್ತಿಯಾಗುವ ಸಕ್ಕರೆ ಮತ್ತು ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೂ ಪಾಲು ದೊರೆಯುವ ಸಮಗ್ರ ನೀತಿಯ ಅಗತ್ಯವಿದೆ.
ಎಫ್‌ಆರ್‌ಪಿ ಏರಿಕೆಗೂ ಉತ್ಪಾದನಾ ವೆಚ್ಚವೇ ಆಧಾರವಾಗಲಿ
ಕೇಂದ್ರ ಸರ್ಕಾರ 2026-27ನೇ ಸಕ್ಕರೆ ಹಂಗಾಮಿಗೆ ಶೇ.10.25ರ ಮೂಲ ಸಕ್ಕರೆ ಇಳುವರಿಗೆ ಪ್ರತಿ ಕ್ವಿಂಟಾಲ್ ಕಬ್ಬಿಗೆ ₹365ರಂತೆ ಎಫ್‌ಆರ್‌ಪಿ ನಿಗದಿಪಡಿಸಿದೆ. ಅಂದರೆ ಪ್ರತಿ ಟನ್‌ಗೆ ₹3,650. ಮೂಲ ಇಳುವರಿಗಿಂತ ಪ್ರತಿ ಶೇ.0.1ರಷ್ಟು ಹೆಚ್ಚುವರಿ ಇಳುವರಿಗೆ ₹3.56 ಪ್ರತಿ ಕ್ವಿಂಟಾಲ್ ಹೆಚ್ಚುವರಿ ದರ ನಿಗದಿಪಡಿಸಲಾಗಿದೆ. ಇಳುವರಿ ಶೇ.9.5ಕ್ಕಿಂತ ಕಡಿಮೆಯಾದರೂ ನಿಗದಿತ ಕನಿಷ್ಠ ದರಕ್ಕಿಂತ ಕಡಿತ ಮಾಡಬಾರದು ಎಂಬ ರಕ್ಷಣೆಯನ್ನೂ ಕೇಂದ್ರ ಸರ್ಕಾರ ಕಲ್ಪಿಸಿದೆ.
ಆದರೆ, ರೈತ ಸಂಘಟನೆಗಳ ಪ್ರಕಾರ ಈ ದರವು ಕರ್ನಾಟಕದ ವಾಸ್ತವಿಕ ಉತ್ಪಾದನಾ ವೆಚ್ಚವನ್ನು ಪರಿಗಣಿಸಿದಾಗ ಸಮರ್ಪಕವಾಗಿಲ್ಲ. ರಾಜ್ಯದ ಕಬ್ಬು ಅಭಿವೃದ್ಧಿ ಆಯುಕ್ತರು ಹಿಂದಿನ ವರ್ಷ ಒಂದು ಟನ್ ಕಬ್ಬು ಉತ್ಪಾದನೆಗೆ ₹4,450 ವೆಚ್ಚವಾಗುತ್ತದೆ ಎಂದು ಕೇಂದ್ರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗಕ್ಕೆ ವರದಿ ಸಲ್ಲಿಸಿರುವುದಾಗಿ ರೈತ ಮುಖಂಡರು ಉಲ್ಲೇಖಿಸುತ್ತಿದ್ದಾರೆ. ಈ ವೆಚ್ಚದ ಲೆಕ್ಕಾಚಾರವನ್ನು ಸಾರ್ವಜನಿಕವಾಗಿ ಪರಿಶೀಲನೆಗೆ ಮುಕ್ತಗೊಳಿಸಿ, ಅದರಲ್ಲಿ ಸೇರಿರುವ ಕೃಷಿ ಕೂಲಿ, ಭೂಮಿ ಬಾಡಿಗೆ, ನೀರಾವರಿ, ಬಂಡವಾಳದ ಮೇಲಿನ ಬಡ್ಡಿ ಮತ್ತು ಕುಟುಂಬದ ಶ್ರಮದ ಮೌಲ್ಯವನ್ನು ಸ್ಪಷ್ಟಪಡಿಸಬೇಕು ಎಂಬುದು ರೈತರ ಆಗ್ರಹ.
ಈ ಹಿನ್ನೆಲೆಯಲ್ಲಿ 10.25ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಟನ್‌ಗೆ ಕನಿಷ್ಠ ₹4,500 ಎಫ್‌ಆರ್‌ಪಿ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹1,000 ಪ್ರೋತ್ಸಾಹಧನ ನೀಡುವ ಮೂಲಕ ಒಟ್ಟು ₹5,500 ದರ ರೈತರಿಗೆ ದೊರೆಯುವಂತೆ ಮಾಡಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ. ಕೃಷಿ ಲಾಭದಾಯಕವಾಗಬೇಕಾದರೆ ರೈತನಿಗೆ ವೆಚ್ಚಕ್ಕಿಂತ ಹೆಚ್ಚುವರಿ ಆದಾಯ ದೊರೆಯುವ ಬೆಲೆ ನೀತಿ ರೂಪುಗೊಳ್ಳಬೇಕು.
ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೂ ಪಾಲು ಬೇಕು
ಸಕ್ಕರೆ ಕಾರ್ಖಾನೆಗಳ ಆದಾಯ ಕೇವಲ ಸಕ್ಕರೆ ಮಾರಾಟಕ್ಕೆ ಸೀಮಿತವಾಗಿಲ್ಲ. ಕಬ್ಬಿನ ಸಂಸ್ಕರಣೆಯಿಂದ ಮೊಲಾಸಿಸ್, ಬಗಾಸ್, ಪ್ರೆಸ್‌ಮಡ್ ಮುಂತಾದ ಉಪ ಉತ್ಪನ್ನಗಳು ದೊರೆಯುತ್ತವೆ. ಮೊಲಾಸಿಸ್‌ನಿಂದ ಎಥೆನಾಲ್ ಉತ್ಪಾದಿಸಲಾಗುತ್ತದೆ. ಬಗಾಸ್ ಬಳಸಿ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಮಾರಾಟ ಮಾಡುವ ಅವಕಾಶವೂ ಇದೆ. ಇತರ ಕೈಗಾರಿಕಾ ಉತ್ಪನ್ನಗಳ ಮೂಲಕವೂ ಕಾರ್ಖಾನೆಗಳಿಗೆ ಆದಾಯ ಬರುತ್ತದೆ. ಆದರೆ, ಈ ಎಲ್ಲ ಉತ್ಪನ್ನಗಳಿಗೆ ಮೂಲ ಕಚ್ಚಾ ವಸ್ತುವನ್ನು ಒದಗಿಸುವವನು ರೈತ. ಕಬ್ಬು ಇಲ್ಲದೆ ಸಕ್ಕರೆ ಕಾರ್ಖಾನೆಗಳಿಗೂ, ಎಥೆನಾಲ್ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳಿಗೂ ಕಚ್ಚಾ ವಸ್ತು ದೊರೆಯುವುದಿಲ್ಲ. ಹೀಗಿರುವಾಗ, ಉಪ ಉತ್ಪನ್ನಗಳಿಂದ ದೊರೆಯುವ ಲಾಭದಲ್ಲಿ ರೈತರಿಗೆ ಏಕೆ ಪಾಲು ನೀಡಬಾರದು ಎಂಬ ಪ್ರಶ್ನೆ ಈಗ ರೈತ ಚಳವಳಿಯ ಪ್ರಮುಖ ಬೇಡಿಕೆಯಾಗಿದೆ.
ಸಕ್ಕರೆ ವಲಯದ ಆದಾಯ ಹಂಚಿಕೆಗೆ ಸಂಬಂಧಿಸಿದಂತೆ ರಂಗರಾಜನ್ ಸಮಿತಿ ಶಿಫಾರಸು ಮಾಡಿದ್ದ ಆದಾಯ ಹಂಚಿಕೆ ಮಾದರಿಯನ್ನು ಆಧರಿಸಿ, ಸಕ್ಕರೆ ಹಾಗೂ ಪ್ರಮುಖ ಉಪ ಉತ್ಪನ್ನಗಳಿಂದ ದೊರೆಯುವ ಆದಾಯದಲ್ಲಿ ರೈತರ ಪಾಲನ್ನು ಖಚಿತಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಕಾರ್ಖಾನೆಗಳ ನೈಜ ಮಾರಾಟ, ಉತ್ಪಾದನಾ ಪ್ರಮಾಣ, ಎಥೆನಾಲ್ ಮತ್ತು ವಿದ್ಯುತ್ ಮಾರಾಟದ ಲೆಕ್ಕಪತ್ರಗಳನ್ನು ಪಾರದರ್ಶಕಗೊಳಿಸಬೇಕು. ಕೇವಲ ಕಾರ್ಖಾನೆಗಳ ಘೋಷಿತ ಲಾಭದ ಮೇಲೆ ಅವಲಂಬಿತವಾಗದೆ, ಪರಿಶೀಲಿಸಬಹುದಾದ ಆದಾಯ ಮತ್ತು ವೆಚ್ಚದ ಆಧಾರದಲ್ಲಿ ರೈತರ ಪಾಲು ನಿರ್ಧಾರವಾಗಬೇಕು.

ಈ ಕುರಿತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಈದಿನ.ಕಾಮ್ ಜೊತೆ ಮಾತನಾಡಿ, ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಅಡಿಯಲ್ಲಿ ಕಬ್ಬಿನ ಉಪ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ. ಮೊಲಾಸಿಸ್, ಬಗಾಸ್, ಎಥೆನಾಲ್, ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಉತ್ಪನ್ನಗಳಿಂದ ಬರುವ ಆದಾಯವನ್ನು ಪರಿಗಣಿಸಿ ರೈತರಿಗೆ ಲಾಭ ಹಂಚಿಕೆ ಮಾಡುವ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆಯ ಬಹುಪಾಲು ವಾಣಿಜ್ಯ ಬಳಕೆಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಿಹಿ ತಿಂಡಿ ಘಟಕಗಳು, ತಂಪು ಪಾನೀಯ ಕಂಪನಿಗಳು, ಆಹಾರ ಸಂಸ್ಕರಣಾ ಉದ್ಯಮಗಳು ಮತ್ತು ಇತರ ಬೃಹತ್ ವಾಣಿಜ್ಯ ಬಳಕೆದಾರರಿಗೆ ಪ್ರತ್ಯೇಕ ದರ ನಿಗದಿಪಡಿಸುವ ಸಾಧ್ಯತೆಯನ್ನೂ ಪರಿಶೀಲಿಸಬೇಕು. ಗೃಹಬಳಕೆದಾರರಿಗೆ ಸಾಮಾನ್ಯ ದರ ಮುಂದುವರಿಸಿ, ವಾಣಿಜ್ಯ ಬಳಕೆಯಿಂದ ದೊರೆಯುವ ಹೆಚ್ಚುವರಿ ಆದಾಯದ ಒಂದು ಭಾಗವನ್ನು ರೈತರ ಎಫ್‌ಆರ್‌ಪಿ ಹೆಚ್ಚಳಕ್ಕೆ ಬಳಸುವ ವ್ಯವಸ್ಥೆ ರೂಪಿಸಬೇಕು ಎಂಬುದು ಮತ್ತೊಂದು ಸಲಹೆ.
ಇಳುವರಿ ಮತ್ತು ತೂಕದಲ್ಲಿ ಪಾರದರ್ಶಕತೆ ಕಡ್ಡಾಯವಾಗಲಿ
ಕಬ್ಬು ಬೆಳೆಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಸಕ್ಕರೆ ಇಳುವರಿ ಲೆಕ್ಕಾಚಾರವೂ ಒಂದು. ಪ್ರಸ್ತುತ ಹಲವು ಕಾರ್ಖಾನೆಗಳಲ್ಲಿ ರೈತರು ಪೂರೈಸುವ ಕಬ್ಬಿನ ಒಟ್ಟು ಪ್ರಮಾಣದ ಆಧಾರದಲ್ಲಿ ಸರಾಸರಿ ಸಕ್ಕರೆ ಇಳುವರಿ ಲೆಕ್ಕ ಹಾಕಿ ದರ ನಿಗದಿಪಡಿಸುವ ಪದ್ಧತಿ ಇದೆ. ಇದರಿಂದ ಉತ್ತಮ ಗುಣಮಟ್ಟದ ಕಬ್ಬು ಬೆಳೆದ ರೈತರಿಗೂ ಕಡಿಮೆ ಇಳುವರಿಯ ಕಬ್ಬು ಪೂರೈಸಿದವರ ಸರಾಸರಿ ಲೆಕ್ಕಾಚಾರ ಅನ್ವಯವಾಗುವ ಸಾಧ್ಯತೆ ಇದೆ.
ಪ್ರತಿ ರೈತನ ಹೊಲದಿಂದ ಬರುವ ಕಬ್ಬಿನ ಗುಣಮಟ್ಟ ಮತ್ತು ಸಕ್ಕರೆ ಅಂಶವನ್ನು ವೈಜ್ಞಾನಿಕವಾಗಿ ಪರೀಕ್ಷಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಆದರೆ, ಹೊಲದಲ್ಲಿಯೇ ಇಳುವರಿ ಪರೀಕ್ಷೆ ಮಾಡುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿರುವುದರಿಂದ, ರೈತನ ಪ್ರತ್ಯೇಕ ಕಬ್ಬಿನ ಲಾಟ್ ಅಥವಾ ಸಾಗಣೆ ವಾಹನದಿಂದ ಪ್ರತಿನಿಧಿ ಮಾದರಿ ಸಂಗ್ರಹಿಸಿ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸುವ ವ್ಯವಸ್ಥೆ ರೂಪಿಸಬಹುದು. ಪರೀಕ್ಷೆಯ ವೇಳೆ ರೈತ ಅಥವಾ ಅವರ ಪ್ರತಿನಿಧಿಯ ಹಾಜರಾತಿ, ಮಾದರಿಯ ದಾಖಲಾತಿ, ಡಿಜಿಟಲ್ ವರದಿ ಮತ್ತು ಮರುಪರೀಕ್ಷೆಗೆ ಅವಕಾಶ ಇರಬೇಕು. ಹಿಂದಿನ ವರ್ಷದ ಇಳುವರಿ ಆಧಾರದಲ್ಲಿ ಪ್ರಸಕ್ತ ವರ್ಷದ ದರ ನಿರ್ಧರಿಸುವ ಬದಲು, ಆಯಾ ಹಂಗಾಮಿನಲ್ಲಿ ಪೂರೈಸಿದ ಕಬ್ಬಿನ ಗುಣಮಟ್ಟಕ್ಕೆ ಅನುಗುಣವಾಗಿ ಹಣ ಪಾವತಿಸಬೇಕು.
ಇದೇ ರೀತಿ ಕಬ್ಬು ಕಟಾವು ಯಂತ್ರಗಳ ಬಳಕೆಯ ಸಂದರ್ಭದಲ್ಲಿ ಶೇ.8ರಿಂದ 10ರಷ್ಟು ತೂಕವನ್ನು ವೇಸ್ಟೇಜ್ ಹೆಸರಿನಲ್ಲಿ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ವೈಜ್ಞಾನಿಕ ಪರೀಕ್ಷೆ ಮತ್ತು ಅಧಿಕೃತ ಮಾನದಂಡವಿಲ್ಲದೆ ಇಂತಹ ಕಡಿತ ಮಾಡುವುದು ರೈತರ ಆದಾಯಕ್ಕೆ ನೇರ ಹೊಡೆತ ನೀಡುತ್ತದೆ. ಕಾರ್ಖಾನೆಗಳ ತೂಕದ ಯಂತ್ರಗಳಿಗೆ ನಿಯಮಿತ ಮಾಪನಾಂಕ ಪರಿಶೀಲನೆ ಕಡ್ಡಾಯಗೊಳಿಸಬೇಕು. ರೈತರಿಗೆ ತೂಕದ ರಸೀದಿ, ವಾಹನದ ತೂಕ, ಕಡಿತದ ಪ್ರಮಾಣ ಮತ್ತು ಕಾರಣಗಳನ್ನು ಒಳಗೊಂಡ ಡಿಜಿಟಲ್ ದಾಖಲೆ ನೀಡಬೇಕು. ಸ್ವತಂತ್ರ ತೂಕ ಪರಿಶೀಲನಾ ಕೇಂದ್ರಗಳನ್ನೂ ಸ್ಥಾಪಿಸಬೇಕು ಎಂದರು.
ಕಟಾವು ಮತ್ತು ಸಾಗಾಣಿಕೆ ವೆಚ್ಚದ ಹೊರೆ ರೈತರ ಮೇಲೇಕೆ?
ಸರ್ಕಾರ ಘೋಷಿಸುವ ಎಫ್‌ಆರ್‌ಪಿ ಮತ್ತು ರೈತರ ಕೈಗೆ ನಿಜವಾಗಿ ತಲುಪುವ ಹಣದ ನಡುವೆ ದೊಡ್ಡ ಅಂತರವಿದೆ ಎಂಬುದು ಮತ್ತೊಂದು ಗಂಭೀರ ಸಮಸ್ಯೆ. ಕಬ್ಬು ಕಟಾವು ಕೂಲಿ ಮತ್ತು ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ಪ್ರತಿ ಟನ್‌ಗೆ ನೂರಾರು ರೂಪಾಯಿ ಕಡಿತವಾಗುತ್ತದೆ. ಇದರಿಂದ ಘೋಷಿತ ದರದ ಸಂಪೂರ್ಣ ಲಾಭ ರೈತರಿಗೆ ಸಿಗುವುದಿಲ್ಲ. ಹೀಗಾಗಿ, ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಅಂದರೆ ಎಕ್ಸ್‌ಫೀಲ್ಡ್ ಪ್ರೈಸ್ ಎಂದು ನಿಗದಿಪಡಿಸಬೇಕು. ಕಟಾವು ಮತ್ತು ಸಾಗಾಣಿಕೆ ವ್ಯವಸ್ಥೆಯನ್ನು ಕಾರ್ಖಾನೆಗಳೇ ನಿರ್ವಹಿಸಬೇಕು. ರೈತರೊಂದಿಗೆ ಲಿಖಿತ ಒಪ್ಪಂದ ಮಾಡಿಕೊಂಡು ಕಬ್ಬು ಕಟಾವಿನ ಅವಧಿ, ಸಾಗಾಣಿಕೆ, ಪಾವತಿ, ಕಟಾವು ವಿಳಂಬದಿಂದ ಉಂಟಾಗುವ ನಷ್ಟದ ಪರಿಹಾರ ಮತ್ತು ಹೊಣೆಗಾರಿಕೆಯನ್ನು ಸ್ಪಷ್ಟಪಡಿಸಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಎಫ್‌ಆರ್‌ಪಿಯಿಂದ ಕಡಿತಗೊಳಿಸದೆ, ಕಾರ್ಖಾನೆಗಳು ಪ್ರತ್ಯೇಕವಾಗಿ ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ಬೇಡಿಕೆಯಾಗಿದೆ.
14 ದಿನಗಳಲ್ಲಿ ಹಣ ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಮ
ಕಬ್ಬು ಪೂರೈಸಿದ ರೈತರಿಗೆ 14 ದಿನಗಳೊಳಗೆ ಹಣ ಪಾವತಿಸಬೇಕೆಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಸಕ್ಕರೆ ಕಬ್ಬು ನಿಯಂತ್ರಣ ಆದೇಶ 1966ರ ಪ್ರಕಾರ ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ವಿಳಂಬ ಅವಧಿಗೆ ಶೇ.15ರಷ್ಟು ವಾರ್ಷಿಕ ಬಡ್ಡಿ ಪಾವತಿಸಬೇಕು. ಬಾಕಿ ಹಣ ಮತ್ತು ಬಡ್ಡಿಯನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡುವ ಕಾನೂನುಬದ್ಧ ಅವಕಾಶವೂ ಇದೆ. ಆದರೆ, ಕೆಲವು ಕಾರ್ಖಾನೆಗಳು ರೈತರ ಹಣವನ್ನು ತಿಂಗಳುಗಟ್ಟಲೆ ಬಾಕಿ ಉಳಿಸಿಕೊಳ್ಳುತ್ತಿರುವ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಕಾರ್ಖಾನೆಯ ಪಾವತಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಬಾಕಿ ಹಣದ ಪ್ರಮಾಣ, ಪಾವತಿ ದಿನಾಂಕ, ವಿಳಂಬದ ಅವಧಿ ಮತ್ತು ವಿಧಿಸಲಾದ ಬಡ್ಡಿಯ ವಿವರಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಬೇಕು. ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಬಡ್ಡಿ ವಸೂಲಿ, ಬಾಕಿ ಹಣದ ಕಾನೂನುಬದ್ಧ ವಸೂಲಿ ಹಾಗೂ ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
ಬೆಂಕಿ ಅವಘಡ, ಬರಗಾಲ ಮತ್ತು ಬೆಳೆ ನಷ್ಟಕ್ಕೂ ವೈಜ್ಞಾನಿಕ ಪರಿಹಾರ
ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಆಕಸ್ಮಿಕ ಬೆಂಕಿ ಅವಘಡ ಅಥವಾ ಇತರ ಕಾರಣಗಳಿಂದ ಕಬ್ಬು ಬೆಳೆ ಸುಟ್ಟುಹೋದರೆ ರೈತರು ಭಾರೀ ನಷ್ಟ ಅನುಭವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಕಂದಾಯ ಇಲಾಖೆ ನೀಡುವ ಪರಿಹಾರ ಮೊತ್ತವನ್ನು ವಾಸ್ತವಿಕ ಉತ್ಪಾದನಾ ವೆಚ್ಚ ಮತ್ತು ನಿರೀಕ್ಷಿತ ಆದಾಯದ ಆಧಾರದಲ್ಲಿ ಪರಿಷ್ಕರಿಸಬೇಕು. ಬೆಂಕಿಯಿಂದ ಹಾನಿಗೊಳಗಾದ ಕಬ್ಬನ್ನು ಕಾರ್ಖಾನೆಗಳು ನುರಿಸುವ ಸಂದರ್ಭದಲ್ಲಿ ಎಫ್‌ಆರ್‌ಪಿ ಹಣದಲ್ಲಿ ಶೇ.25ರಷ್ಟು ಕಡಿತ ಮಾಡಲಾಗುತ್ತಿದೆ ಎಂಬ ರೈತರ ಆರೋಪವನ್ನೂ ಪರಿಶೀಲಿಸಬೇಕು. ಬೆಂಕಿಯಿಂದ ಹಾನಿಗೊಳಗಾದ ಕಬ್ಬಿನ ಸಕ್ಕರೆ ಅಂಶದ ವೈಜ್ಞಾನಿಕ ಪರೀಕ್ಷೆ ನಡೆಸದೆ ಏಕರೂಪ ಕಡಿತ ಮಾಡುವುದನ್ನು ನಿಲ್ಲಿಸಬೇಕು. ವಿಮಾ ರಕ್ಷಣೆ, ತುರ್ತು ಪರಿಹಾರ ಮತ್ತು ಕಾರ್ಖಾನೆಗಳ ಖರೀದಿ ನೀತಿಯನ್ನು ರೈತಸ್ನೇಹಿಯಾಗಿ ರೂಪಿಸಬೇಕು.
ಸರ್ಕಾರಗಳ ವಿರುದ್ಧ ರೈತ ಮುಖಂಡರ ಆಕ್ರೋಶ

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬೆಲೆ, ತೂಕ ಮತ್ತು ಸಕ್ಕರೆ ಇಳುವರಿ ಲೆಕ್ಕಾಚಾರದಲ್ಲಿ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಲಾಭ ಗಳಿಸುತ್ತಿದ್ದರೂ ಅದರಲ್ಲಿ ರೈತರಿಗೆ ಪಾಲು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಭಾಗದಲ್ಲಿಯೇ ಸಕ್ಕರೆ ಇಳುವರಿ ಮತ್ತು ಬೆಲೆ ವಿಚಾರದಲ್ಲಿ ರೈತರು ಅನ್ಯಾಯ ಎದುರಿಸುತ್ತಿದ್ದಾರೆ ಎಂಬುದು ಅವರ ಆರೋಪ. ಬೇರೆ ರಾಜ್ಯಗಳಲ್ಲಿ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಇರುವಾಗ ಕರ್ನಾಟಕದಲ್ಲಿ ರೈತರಿಗೆ ಸಮರ್ಪಕ ನೆರವು ದೊರೆಯುತ್ತಿಲ್ಲ. ಹಿಂದೆ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಕಾರ್ಖಾನೆಗಳಿಂದ ₹50 ಹಾಗೂ ಸರ್ಕಾರದಿಂದ ₹50 ಸೇರಿಸಿ ಒಟ್ಟು ₹100 ಹೆಚ್ಚುವರಿ ನೀಡಲಾಗಿತ್ತು. ಈಗ ಆ ರೀತಿಯ ನೆರವೂ ಇಲ್ಲದಂತಾಗಿದೆ ಎಂದು ಹೇಳಿದರು.
ರೈತರ ಸಮಸ್ಯೆಯನ್ನು ಕೇಂದ್ರ ಸರ್ಕಾರದತ್ತ ತಳ್ಳಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ರೈತರ ಪರ ಎಂದು ಹೇಳಿಕೊಳ್ಳುವ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಡಿಸೆಂಬರ್ 6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮುಂದಿನ ಹೋರಾಟದ ನಿರ್ಧಾರ ಪ್ರಕಟಿಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಹೋರಾಟದ ದೃಷ್ಟಿಯಿಂದ ಎಲ್ಲ ರೈತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ‘ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ’ಯನ್ನು ರಚಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಸಂಘಟನೆಗಳು ಆನ್‌ಲೈನ್ ಸಭೆ ಸೇರಿದಂತೆ ಹಲವು ಹಂತಗಳಲ್ಲಿ ಚರ್ಚಿಸಿ, ಕಬ್ಬು ಬೆಳೆಗಾರರ ಬೇಡಿಕೆ ಮತ್ತು ನೀತಿ ಸಂಬಂಧಿತ ವಿಚಾರಗಳಲ್ಲಿ ಒಮ್ಮತಕ್ಕೆ ಬಂದಿವೆ. ಇಂದು ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ ಕಬ್ಬು ಉದ್ಯಮದ ಸಮಸ್ಯೆ, ರೈತರ ಹಕ್ಕು ಮತ್ತು ಉಪ ಉತ್ಪನ್ನಗಳ ಆದಾಯ ಹಂಚಿಕೆಯನ್ನು ಒಳಗೊಂಡ ರಾಷ್ಟ್ರೀಯ ನೀತಿ ರೂಪಿಸುವ ಉದ್ದೇಶದಿಂದ ದುಂಡುಮೇಜಿನ ಸಭೆ ಕರೆಯಲಾಗುವುದು. ರಾಷ್ಟ್ರೀಯ ಸಮಿತಿ ಸದಸ್ಯನಾಗಿಯೂ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸಮನ್ವಯ ಸಮಿತಿ ಸದಸ್ಯ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪ್ರತಿ ಟನ್‌ಗೆ ₹1,000 ಪ್ರೋತ್ಸಾಹಧನ ನೀಡಬೇಕು. ಕೇಂದ್ರ ಸರ್ಕಾರ ಸಮಿತಿಯ ವರದಿಗಾಗಿ ಕಾಯದೆ ಅಗತ್ಯ ಕಾನೂನು ಕ್ರಮದ ಮೂಲಕ ಉಪ ಉತ್ಪನ್ನಗಳ ಲಾಭದಲ್ಲಿ ರೈತರ ಪಾಲು ಖಚಿತಪಡಿಸಬೇಕು ಎಂದು ಆಗ್ರಹಿಸಿದರು. ಕಬ್ಬು ಬೆಳೆದು ಕಚ್ಚಾ ವಸ್ತು ಒದಗಿಸುವ ರೈತರಿಲ್ಲದೆ ಕಾರ್ಖಾನೆಗಳಿಗೆ ಆದಾಯವೇ ಇಲ್ಲದಿರುವಾಗ, ರೈತರಿಗೆ ನ್ಯಾಯಯುತ ಪಾಲು ನೀಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಅಗತ್ಯವೆಂದು ಪ್ರತಿಪಾದಿಸಿದ್ದಾರೆ. ಕಾರ್ಖಾನೆಗಳ ಮುಂದೆ ಇರುವ ತೂಕದ ಯಂತ್ರಗಳು ಮತ್ತು ಸಕ್ಕರೆ ಇಳುವರಿ ಪರೀಕ್ಷೆಯಲ್ಲಿ ಆಧುನಿಕ ಎಐ ತಂತ್ರಜ್ಞಾನ ಸೇರಿದಂತೆ ಪಾರದರ್ಶಕ ಡಿಜಿಟಲ್ ವಿಧಾನಗಳನ್ನು ಅಳವಡಿಸಬೇಕು. ರಾಜ್ಯದ ಎಲ್ಲ ಕಾರ್ಖಾನೆಗಳಲ್ಲೂ ಏಕರೂಪ ಮಾನದಂಡ ಇರಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಪ್ರಾದೇಶಿಕ ವ್ಯತ್ಯಾಸದ ಹೆಸರಿನಲ್ಲಿ ರೈತರಿಗೆ ಬೇರೆಬೇರೆ ನ್ಯಾಯ ಸಿಗಬಾರದು ಎಂದು ಒತ್ತಾಯಿಸಿದ್ದಾರೆ.
ಒಗ್ಗಟ್ಟಿನ ಹೋರಾಟದಿಂದ ನೀತಿ ಬದಲಾವಣೆಯತ್ತ
ಕಬ್ಬು ಬೆಳೆಗಾರರ ಹೋರಾಟ ಈಗ ಕೇವಲ ಪ್ರತಿ ಟನ್‌ಗೆ ಹೆಚ್ಚುವರಿ ಬೆಲೆ ಕೇಳುವ ಹೋರಾಟವಾಗಿ ಉಳಿದಿಲ್ಲ. ಕೃಷಿ ಉತ್ಪಾದನಾ ವೆಚ್ಚಕ್ಕೆ ವೈಜ್ಞಾನಿಕ ಮಾನದಂಡ, ಪಾರದರ್ಶಕ ಇಳುವರಿ ಪರೀಕ್ಷೆ, ನ್ಯಾಯಯುತ ತೂಕ, ಕಟಾವು ಮತ್ತು ಸಾಗಾಣಿಕೆ ವೆಚ್ಚದ ಹೊಣೆಗಾರಿಕೆ, ಉಪ ಉತ್ಪನ್ನಗಳ ಆದಾಯ ಹಂಚಿಕೆ, ನಿಗದಿತ ಅವಧಿಯಲ್ಲಿ ಹಣ ಪಾವತಿ ಮತ್ತು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸೇರಿದಂತೆ ಸಮಗ್ರ ಕೃಷಿ ನೀತಿಯ ಬೇಡಿಕೆಯಾಗಿ ರೂಪುಗೊಂಡಿದೆ.
ರಾಜ್ಯ ಸರ್ಕಾರ ತಕ್ಷಣ ರೈತ ಸಂಘಟನೆಗಳು ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಮುಕ್ತ ಚರ್ಚೆ ನಡೆಸಿ, ಕಾಲಮಿತಿಯೊಳಗಿನ ನಿರ್ಧಾರ ಪ್ರಕಟಿಸಬೇಕು. ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿಯಲ್ಲಿನ ವೆಚ್ಚದ ಮಾನದಂಡವನ್ನು ಮರುಪರಿಶೀಲಿಸಬೇಕು. ಕಾರ್ಖಾನೆಗಳ ಆದಾಯ ಮತ್ತು ಉಪ ಉತ್ಪನ್ನಗಳ ಮಾರಾಟದ ಲೆಕ್ಕಪತ್ರಗಳನ್ನು ಪಾರದರ್ಶಕಗೊಳಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕಾನೂನು ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸಬೇಕು.
ಈ ವಿಶೇಷ ವರದಿ ಓದಿದ್ದೀರಾ? ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ
ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಮೂಲಕ ವಿವಿಧ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಬಂದಿರುವುದು ಹೋರಾಟದ ದೃಷ್ಟಿಯಿಂದ ಮಹತ್ವದ ಬೆಳವಣಿಗೆ. ಈ ಒಗ್ಗಟ್ಟು ಕೇವಲ ಪ್ರತಿಭಟನೆಗೆ ಸೀಮಿತವಾಗದೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರೈತರ ಪರವಾದ ಕಾನೂನುಬದ್ಧ ನೀತಿ ಬದಲಾವಣೆಗೆ ಕಾರಣವಾಗಬೇಕಿದೆ. ಕಬ್ಬು ಬೆಳೆಯುವ ರೈತ ಬದುಕಿದರೆ ಮಾತ್ರ ಸಕ್ಕರೆ ಉದ್ಯಮವೂ ಉಳಿಯುತ್ತದೆ. ಕಾರ್ಖಾನೆಗಳ ಲಾಭದ ಜೊತೆಗೆ ರೈತರ ಬದುಕಿಗೂ ಸಿಹಿ ತುಂಬುವ ನೀತಿ ರೂಪುಗೊಳ್ಳಬೇಕಿದೆ.




