ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಮಹಾ ದಂಗೆಯ ಮುನ್ಸೂಚನೆ ಸಿಕ್ಕಿವೆ. ಮೂಲ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಒಡೆಯಲು ಪ್ರಮುಖ ಕಾರಣಕರ್ತವಾಗಿದ್ದ ಬಿಜೆಪಿ ಮತ್ತು ಅದರ ಕೇಂದ್ರ ನಾಯಕತ್ವ, ಮುಖ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಗಳಕ್ಕೇ ಈಗ ಅಜಿತ್ ಪವಾರ್ ಬಣದ ಹಿರಿಯ ನಾಯಕರು ದೂರು ತೆಗೆದುಕೊಂಡು ಹೋಗಿದ್ದಾರೆ.
ಶರದ್ ಪವಾರ್ ಅವರಿಂದ ಅಜಿತ್ ಪವಾರ್ ಹೊರಬಂದು ಬಿಜೆಪಿಯೊಂದಿಗೆ ಕೈಜೋಡಿಸಿದ ಇತಿಹಾಸದ ಹಾದಿಯಲ್ಲೇ, ಈಗ ಸುನೇತ್ರಾ ಪವಾರ್ ಮತ್ತು ಅವರ ಪುತ್ರ ಪಾರ್ಥ್ ಪವಾರ್ ಅವರ ನಾಯಕತ್ವದ ವಿರುದ್ಧವೇ ಪಕ್ಷದಲ್ಲಿ ಮತ್ತೊಂದು ಬಂಡಾಯದ ಬೆಂಕಿ ಹೊತ್ತಿಕೊಂಡಿದೆ.
2023ರಲ್ಲಿ ಬಿಜೆಪಿ ನಾಯಕರ ಬೆಂಬಲದೊಂದಿಗೆ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರಿಗೆ ಶಾಕ್ ನೀಡಿ ಎನ್‌ಸಿಪಿಯನ್ನು ಇಬ್ಭಾಗ ಮಾಡಿದ್ದರು. ಎನ್‌ಡಿಎ (ಮಹಾಯುತಿ) ಮೈತ್ರಿಕೂಟ ಸೇರಿ ಉಪಮುಖ್ಯಮಂತ್ರಿಯಾಗಿದ್ದರು. ಆದರೆ, ಈಗ ಅಜಿತ್ ಪವಾರ್ ಅವರ ನಿಧನದ ನಂತರ ಪಕ್ಷದ ಸಂಪೂರ್ಣ ಅಧಿಕಾರ ಮತ್ತು ನಿರ್ಧಾರಗಳ ಹಕ್ಕು ಅವರ ಪತ್ನಿ ಸುನೇತ್ರಾ ಪವಾರ್ ಹಾಗೂ ಪುತ್ರ ಪಾರ್ಥ್ ಪವಾರ್ ಕೈಗೆ ತಲುಪಿದೆ.
ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತ: ಸಮಗ್ರ ತನಿಖೆಗೆ ಆಗ್ರಹಿಸಿ ಅಮಿತ್ ಶಾಗೆ ರೋಹಿತ್ ಪವಾರ್ ಪತ್ರ
ಹಿಂದೆ ಶರದ್ ಪವಾರ್ ಅವರ ‘ಕುಟುಂಬ ರಾಜಕಾರಣ’ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ವಿರೋಧಿಸಿ ಬಿಜೆಪಿಯತ್ತ ಹೆಜ್ಜೆ ಹಾಕಿದ್ದ ಅದೇ ಹಿರಿಯ ನಾಯಕರು, ಇಂದು ಸುನೇತ್ರಾ-ಪಾರ್ಥ್ ಅವರ ಕುಟುಂಬ ರಾಜಕಾರಣದ ವಿರುದ್ಧವೇ ದಂಗೆಯೇಳುವ ಹಂತಕ್ಕೆ ತಲುಪಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾ ಭೇಟಿ: ನಡೆದಿರುವುದೇನು?
ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ನೇತೃತ್ವದಲ್ಲಿ ಹಿರಿಯ ನಾಯಕರಾದ ಛಗನ್ ಭುಜಬಲ್, ಸುನಿಲ್ ತಟ್ಕರೆ, ದಿಲೀಪ್ ವಲ್ಸೆ ಪಾಟೀಲ್, ಹಸನ್ ಮುಶ್ರಿಫ್ ಮತ್ತು ಧನಂಜಯ್ ಮುಂಡೆ ಅವರನ್ನೊಳಗೊಂಡ ಪ್ರಭಾವಿ ನಿಯೋಗವು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದೆ.
ಈ ಮಹತ್ವದ ದೆಹಲಿ ಸಭೆಯಿಂದ ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ಅವರನ್ನು ಸಂಪೂರ್ಣವಾಗಿ ಹೊರಗಿಡಲಾಗಿತ್ತು. ಎನ್‌ಸಿಪಿ ಒಳಗಿನ ಈ ಗೊಂದಲಗಳು ಮಹಾಯುತಿಯ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮೈತ್ರಿಕೂಟದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ತಕ್ಷಣವೇ ಆಡಳಿತಾತ್ಮಕ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಅಮಿತ್ ಶಾ ನಾಯಕರಿಗೆ ಸೂಚಿಸಿದ್ದಾರೆ.
ಅನುಭವವಿಲ್ಲದಿದ್ದರೂ ಎನ್‌ಸಿಪಿ ಸಂಘಟನೆ, ನಾಯಕರ ನೇಮಕಾತಿ ಮತ್ತು ಮುಂಬೈ ಅಧ್ಯಕ್ಷರ ನೇಮಕದಂತಹ ಪ್ರಮುಖ ನಿರ್ಧಾರಗಳಲ್ಲಿ ಪಾರ್ಥ್ ಪವಾರ್ ಹಸ್ತಕ್ಷೇಪ ಮಾಡುತ್ತಿದ್ದು, ಹಿರಿಯರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಈ ಹಿಂದೆ ಅಜಿತ್ ಪವಾರ್ ಬಳಿಯಿದ್ದ ಪ್ರಭಾವಿ ಹಣಕಾಸು ಖಾತೆ ಪ್ರಸ್ತುತ ಬಿಜೆಪಿ ಬಳಿಯಿದ್ದು, ಅದನ್ನು ಎನ್‌ಸಿಪಿಗೆ ಮರಳಿ ಪಡೆಯಲು ತಾಯಿ-ಮಗನ ನಾಯಕತ್ವಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಹಿರಿಯರ ಆರೋಪ.
ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತ: ಸಮಗ್ರ ತನಿಖೆಗೆ ಆಗ್ರಹಿಸಿ ಅಮಿತ್ ಶಾಗೆ ರೋಹಿತ್ ಪವಾರ್ ಪತ್ರ
ಇನ್ನೊಂದೆಡೆ ಶರದ್ ಪವಾರ್ ಬಣ (NCP-SP) ಮತ್ತು ಅಜಿತ್ ಪವಾರ್ ಬಣಗಳನ್ನು ಮತ್ತೆ ಒಂದಾಗಿಸುವ ಮಾತುಕತೆಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಸುನೇತ್ರಾ ಮತ್ತು ಪಾರ್ಥ್ ಪವಾರ್ ಅವರನ್ನು ಹೊರಗಿಟ್ಟು ವಿಲೀನ ಪ್ರಕ್ರಿಯೆ ಮುಂದುವರಿಸುವ ಬಗ್ಗೆಯೂ ಅಮಿತ್ ಶಾ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ದೆಹಲಿ ಭೇಟಿಯ ವರದಿಗಳು ಹೊರಬಿದ್ದ ತಕ್ಷಣ ಸುನೇತ್ರಾ ಪವಾರ್ ಮುಂಬೈನಲ್ಲಿ ತುರ್ತು ಕೋರ್ ಕಮಿಟಿ ಸಭೆ ಕರೆದಿದ್ದರು. ಆದರೆ, ಅಸಮಾಧಾನಿತ ನಾಯಕರು ಛಗನ್ ಭುಜಬಲ್ ಅವರ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿ ಮುಂದಿನ ನಡೆ ನಿರ್ಧರಿಸುತ್ತಿದ್ದಾರೆ. ಆದರೆ ಎನ್‌ಸಿಪಿ ವಕ್ತಾರ ಉಮೇಶ್ ಪಾಟೀಲ್ ಅವರು “ಇದು ಕೇವಲ ಮೈತ್ರಿಕೂಟದ ಶಾಸನಬದ್ಧ ಭೇಟಿಯಾಗಿದ್ದು, ಎನ್‌ಸಿಪಿಯಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ” ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆಯಾಗಿ ಬಿಜೆಪಿಯ ಮೈತ್ರಿಯೊಂದಿಗೆ ಶರದ್ ಪವಾರ್ ಅವರನ್ನು ತೊರೆದು ಬಂದಿದ್ದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಅವರಂತಹ ಘಟಾನುಘಟಿ ನಾಯಕರು, ಈಗ ಅಜಿತ್ ಪವಾರ್ ಅವರ ಕುಟುಂಬದ ವಿರುದ್ಧವೇ ಅಮಿತ್ ಶಾ ಅವರ ಬಳಿ ದೂರು ಒಯ್ದಿರುವುದು NCPಯಲ್ಲಿ “ಬಂಡಾಯದ ಮೇಲೊಂದು ಬಂಡಾಯ” ಸೃಷ್ಟಿಯಾಗುವ ಸ್ಪಷ್ಟ ಸೂಚನೆಯಾಗಿದೆ.




