ಬಿಜೆಪಿ, ಆರ್‌ಎಸ್‌ಎಸ್ ಬೆಂಬಲಿಗರಲ್ಲಿರುವ ಭಯ, ಕೋಪ ಮತ್ತು ದ್ವೇಷವು ಅವರಿಗೆ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಬಿಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಊಟ ಮಾಡುವ ಸಮಯದಲ್ಲಿ ನಮ್ಮ ತಾಯಿ, ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು ಎಂಬ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ, 12ನೇ ಶತಮಾನದ ದೇವಾಲಯವೊಂದರಲ್ಲಿ ಪಾರ್ವತಿ, ಶಿವನ ತೊಡೆಯ ಮೇಲೆ ಕುಳಿತಿರುವ ಚಿತ್ರವನ್ನೂ ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೋಪ, ದ್ವೇಷದ ಬಲೆಯಲ್ಲಿ ಸಿಲುಕಿರುವ ಬಿಜೆಪಿ, ಆರ್‌ಎಸ್‌ಎಸ್ ಬೆಂಬಲಿಗರನ್ನು ಅದರಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಇದರಿಂದ ಅವರು ತಮ್ಮ ಜೀವನದಲ್ಲಿ ಪ್ರೀತಿಯ ಸೌಂದರ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸೋಮವಾರ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಅತ್ಮಕಥನ ʻBelonging : A Journey of Love’ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವಾಗ ತಮ್ಮ ತಂದೆ-ತಾಯಿ ನಡುವಿನ ಆತ್ಮೀಯ ಬಾಂಧವ್ಯವನ್ನು ನೆನಪಿಸಿಕೊಂಡು ಮಾತನ್ನಾಡಿದ್ದರು.
ರಾಹುಲ್‌ಗಾಂಧಿ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ತೀರ್ವ ಟೀಕೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂದಿಯವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವರು ರಾಹುಲ್ ಗಾಂಧಿಯವರನ್ನು ಟೀಕಿಸಿದರೆ, ಇನ್ನು ಕೆಲವರು ತಮ್ಮ ಕುಟುಂಬದ ವೈಯಕ್ತಿಕ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಕ್ಕಾಗಿ ಸಮರ್ಥಿಸಿಕೊಂಡಿದ್ದಾರೆ.



