“ಇಷ್ಟು ದಿನ ಪ್ರಿಯಾಂಕ್ ಖರ್ಗೆ ಎಂಬ ಹೆಸರು ಬಿಜೆಪಿಯವರಿಗೆ ಸುದ್ದಿಯಲ್ಲಿರಲು ವಸ್ತುವಾಗುತ್ತಿತ್ತು, ಕೆಲಸ ಕೊಟ್ಟಿತ್ತು. ಈಗ ಜೆಡಿಎಸ್ನವರಿಗೂ ಪ್ರಿಯಾಂಕ್ ಹೆಸರು ಪ್ರಿಯವಾಗುತ್ತಿದೆ. ನನ್ನ ವಿರುದ್ಧ ಕುಮಾರಸ್ವಾಮಿ ಅವರು ಮುಗಿಬೀಳುತ್ತಿದ್ದಾರೆ. ಆದರೆ, ತಮ್ಮದೇ ಅವಧಿಯಲ್ಲಿ ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಕುಮಾರಸ್ವಾಮಿ ಅವರೇ ಉತ್ತರಿಸಬೇಕಾದ ಪ್ರಶ್ನೆಗಳೇ ಹೆಚ್ಚಿವೆ ” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕೆಪಿಎಸ್ಸಿ ಅಕ್ರಮಗಳಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಿ ‘ಎಕ್ಸ್’ನಲ್ಲಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ. “ನನ್ನ ವಿರುದ್ಧ ಮುಗಿಬೀಳಲು ಕುಮಾರಸ್ವಾಮಿ ಅವರಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು. ಅಥವಾ ಕೆಪಿಎಸ್ಸಿ ಅಕ್ರಮಗಳ ಬಗ್ಗೆ ನೇರವಾಗಿ ಮಾತನಾಡಲು ಬಿಜೆಪಿಗರಿಗೆ ಸಾಧ್ಯವಾಗದ ಕಾರಣ ಕುಮಾರಣ್ಣರನ್ನು ವೇದಿಕೆಗೆ ತಂದು ಕೂರಿಸಿರಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಎಸ್ಸಿಯಲ್ಲಿನ ಅಕ್ರಮಗಳ ಕುರಿತು ಪ್ರಸ್ತಾಪಿಸಿದ ಸಚಿವರು, “ಕೆಪಿಎಸ್ಸಿ ಅಧ್ಯಕ್ಷರ ಅಕ್ರಮಗಳ ಬಗ್ಗೆ ಕುಮಾರಸ್ವಾಮಿಯವರು ತಮ್ಮ ಕೇಸರಿ ಮಿತ್ರರನ್ನೇ ಕೇಳಿದ್ದರೆ ಸೂಕ್ತ ಉತ್ತರ ಸಿಗುತ್ತಿತ್ತು. ಕೇಳಲು ಅಡ್ಜಸ್ಟ್ಮೆಂಟ್ ಮಿತ್ರತ್ವ ಅಡ್ಡ ಬರುತ್ತಿದೆಯೇ? ಕನಿಷ್ಠ ಪಕ್ಷ ಯತ್ನಾಳ್ ಅವರನ್ನಾದರೂ ಕೇಳಿದ್ದರೆ ಪೂರ್ಣ ಮಾಹಿತಿ ಸಿಗುತ್ತಿತ್ತು. ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದ್ದು ಯಾರು? ಅವರು ಯಾರ ಸಂಬಂಧಿ? ಎಷ್ಟು ಕೋಟಿಗೆ ಆ ಹುದ್ದೆ ಸೇಲ್ ಆಗಿತ್ತು? ಎಷ್ಟು ಅಕ್ರಮಗಳು ನಡೆದಿವೆ? ಎಂಬುದಕ್ಕೆಲ್ಲ ಬಿಜೆಪಿಯ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲೇ ಉತ್ತರವಿದೆ” ಎಂದು ಹೇಳಿದ್ದಾರೆ.
"ಪ್ರಿಯಾಂಕ್ ಖರ್ಗೆ" ಎಂಬ ಹೆಸರು ಇಷ್ಟು ದಿನ ಬಿಜೆಪಿಯವರಿಗೆ ಉದ್ಯೋಗ ನೀಡುತ್ತಿತ್ತು, ಸುದ್ದಿಯಲ್ಲಿರಲು ವಸ್ತುವಾಗುತ್ತಿತ್ತು..
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 29, 2026
ಈಗ ಜೆಡಿಎಸ್ ನವರಿಗೂ ಪ್ರಿಯಾಂಕ್ ಹೆಸರು ಪ್ರಿಯವಾಗುತ್ತಿದೆ!
ಕೇಂದ್ರ ಸಚಿವರಾದ ಸನ್ಮಾನ್ಯ ಕುಮಾರಸ್ವಾಮಿಯವರಿಗೆ ನನ್ನ ವಿರುದ್ಧ ಮುಗಿಬೀಳಲು ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು.
ಅಥವಾ ಕೆಪಿಎಸ್ಸಿ ಅಕ್ರಮಗಳ…
ಇದಷ್ಟೇ ಅಲ್ಲದೆ ಎಚ್ಡಿಕೆ ಆಡಳಿತಾವಧಿಯ ಹಳೆಯ ಸಂಗತಿಗಳನ್ನು ನೆನಪಿಸಿದ ಪ್ರಿಯಾಂಕ್, “ಕೆಪಿಎಸ್ಸಿಯಲ್ಲಿ ನಡೆಸಿರುವ ಅಕ್ರಮಗಳ ವಿಷಯ ಬಾಯಿ ತಪ್ಪಿ ಕುಮಾರಣ್ಣನ ಬಾಯಿಯಲ್ಲೇ ಹೊರಬಂದಿತ್ತು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರೊಬ್ಬರ ವಿರುದ್ಧ ಮಾತನಾಡುವಾಗ ‘ಅವರ ಹಲವು ಸಂಬಂಧಿಕರಿಗೆ ಕ್ಲಾಸ್ ಒನ್ ಹುದ್ದೆಗಳನ್ನು ಕೊಡಿಸಿದ್ದೇನೆ’ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದರು. ಅಂದರೆ, ಕೆಪಿಎಸ್ಸಿಯಲ್ಲಿ ಇವರೂ ಪ್ರಭಾವ ಬೀರಿದ್ದರೆಂದಾಯಿತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿಯವರು ನೇಮಿಸಿದ್ದ ಅಧ್ಯಕ್ಷರ ಕಾಲದಲ್ಲೂ, ಹಾಗೂ 1998ರ ಕೆಎಎಸ್ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದ ಬೃಹತ್ ಅಕ್ರಮವನ್ನು ರಾಜ್ಯದ ಜನ ಮರೆತಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
“ನನ್ನ ಮೈಗೆ ಕೆಸರು ಅಂಟಿಸುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಪ್ರತಿಯೊಂದು ಆರೋಪಕ್ಕೂ ವಾಸ್ತವಾಂಶಗಳನ್ನು ತೆರೆದಿಡಲು ಸಿದ್ಧ. ಆದರೆ, ತಮ್ಮ ಅವಧಿಯಲ್ಲಿ ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಕುಮಾರಸ್ವಾಮಿ ಉತ್ತರಿಸಬೇಕಾದ ಪ್ರಶ್ನೆಗಳೇ ಹೆಚ್ಚಿವೆ” ಎಂದು ಎಚ್ಚರಿಸಿದ್ದಾರೆ.



