ಭಾರತೀಯ ಚುನಾವಣಾ ಆಯೋಗವು 2027ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ಅಡಿಯಲ್ಲಿ ಗುಜರಾತ್‌ನ ಎಲ್ಲಾ 182 ವಿಧಾನಸಭಾ ಕ್ಷೇತ್ರಗಳ ಏಕೀಕೃತ ಕರಡು ಮತದಾರರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಹೊಸ ಪರಿಷ್ಕರಣೆಯ ಪ್ರಕಾರ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4.48 ಕೋಟಿಗೆ (4,48,77,288) ತಲುಪಿದ್ದು, ಕಳೆದ ಫೆಬ್ರವರಿ 17, 2026ರಂದು ಪ್ರಕಟವಾಗಿದ್ದ ಅಂತಿಮ ಪಟ್ಟಿಗೆ (4,40,30,725) ಹೋಲಿಸಿದರೆ ನಿವ್ವಳ 8,46,563 (ಶೇ. 1.92) ಮತದಾರರ ಹೆಚ್ಚಳ ದಾಖಲಾಗಿದೆ.
2027ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಮತದಾರರ ಪಟ್ಟಿ ಪರಿಷ್ಕರಣೆಯು ಅತ್ಯಂತ ಮಹತ್ವ ಪಡೆದುಕೊಂಡಿದೆ. ಜನವರಿ 1, 2027 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಬಾರಿಯ ಪರಿಷ್ಕರಣೆಯಲ್ಲಿ ಸೇರ್ಪಡೆ ಮತ್ತು ಕೈಬಿಡುವಿಕೆ ಎರಡರಲ್ಲೂ ಮಹಿಳೆಯರ ಪಾಲು ಹೆಚ್ಚಾಗಿರುವುದು ಗಮನಾರ್ಹವಾಗಿದೆ.
ಒಟ್ಟು 12,01,184 ಅರ್ಜಿಗಳನ್ನು ಅನುಮೋದಿಸಲಾಗಿದ್ದು, ಇದರಲ್ಲಿ 6,76,524 ಮಹಿಳೆಯರು (ಸುಮಾರು ಶೇ. 56.3), 5,24,610 ಪುರುಷರು (ಶೇ. 43.7) ಹಾಗೂ 50 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ.
ಸ್ಥಳಾಂತರ ಅಥವಾ ಇತರ ಕಾರಣಗಳಿಂದಾಗಿ ಒಟ್ಟು 3,54,621 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ 2,02,902 ಮಹಿಳೆಯರು, 1,51,716 ಪುರುಷರು ಹಾಗೂ ಮೂವರು ತೃತೀಯ ಲಿಂಗಿ ಮತದಾರರಿದ್ದಾರೆ.
ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೆ ಅಥವಾ ವಿವರಗಳಲ್ಲಿ ದೋಷವಿದ್ದರೆ ಸರಿಪಡಿಸಿಕೊಳ್ಳಲು ನಾಗರಿಕರಿಗೆ ನವೆಂಬರ್ 27ರಿಂದ ಡಿಸೆಂಬರ್ 26, ರವರೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಜನವರಿ 1, 2027ಕ್ಕೆ 18 ವರ್ಷ ಪೂರೈಸುವ ಯುವಜನರು ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ, 2027ರ ಏಪ್ರಿಲ್ 1, ಜುಲೈ 1 ಅಥವಾ ಅಕ್ಟೋಬರ್ 1ರಂದು 18 ವರ್ಷ ತುಂಬುವ ಯುವಕರೂ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಕೆಗೆ ನಮೂನೆಗಳು:-
ಫಾರ್ಮ್ 6: ಹೊಸ ಮತದಾರರ ಸೇರ್ಪಡೆಗೆ.
ಫಾರ್ಮ್ 6A: ಸಾಗರೋತ್ತರ (NRI) ಮತದಾರರ ನೋಂದಣಿಗೆ.
ಫಾರ್ಮ್ 7: ಹೆಸರು ಕೈಬಿಡಲು ಅಥವಾ ಆಕ್ಷೇಪಣೆ ಸಲ್ಲಿಸಲು.
ಫಾರ್ಮ್ 8: ವಿಳಾಸ ಬದಲಾವಣೆ, ತಿದ್ದುಪಡಿ, ಬದಲಿ ಗುರುತಿನ ಚೀಟಿ ಅಥವಾ ಅಂಗವೈಕಲ್ಯ ಸ್ಥಿತಿಯನ್ನು ದಾಖಲಿಸಲು.
ಮತದಾರರು voters.eci.gov.in ವೆಬ್‌ಸೈಟ್ ಅಥವಾ ECINET ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನಾಗರಿಕರ ಅನುಕೂಲಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳು ನವೆಂಬರ್ 29, ಡಿಸೆಂಬರ್ 6 ಮತ್ತು ಡಿಸೆಂಬರ್ 13ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಲಿದ್ದಾರೆ. ಕರಡು ಪಟ್ಟಿಯನ್ನು ceo.gujarat.gov.in ವೆಬ್‌ಸೈಟ್‌ನಲ್ಲಿ ಹಾಗೂ ಮತಗಟ್ಟೆಗಳಲ್ಲಿ ವೀಕ್ಷಿಸಬಹುದು.
ಮತದಾರರ ನೋಂದಣಾಧಿಕಾರಿಗಳ ಆದೇಶದಿಂದ ಅಸಮಾಧಾನಗೊಂಡವರು ಜನಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 24(ಎ) ಅಡಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಎಲ್ಲಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ, ಜನವರಿ 18, 2027ರಂದು ಗುಜರಾತ್‌ನ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.



