ಮದುವೆಗೆ ಚಿನ್ನ ಖರೀದಿಸುವುದನ್ನು ಒಂದು ವರ್ಷ ಮುಂದೂಡಿ, ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಿ (ವರ್ಕ್ ಫ್ರಮ್ ಹೋಮ್)’ – ಹೀಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ 7 ಪ್ರಮುಖ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಅಚ್ಚರಿಯ ಸಲಹೆಗಳು ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳ ತೀವ್ರ ಟೀಕೆಗೂ ಗುರಿಯಾಗಿವೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಆರ್ಥಿಕತೆಯನ್ನು ಕಾಪಾಡುವ ದೃಷ್ಟಿಯಿಂದ ಜನತೆ “ರೂಪಾಯಿಯ ರಕ್ಷಕರು” (Guardians of the Rupee) ಆಗಬೇಕು ಎಂದು ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ‘ವರ್ಕ್ ಫ್ರಮ್ ಹೋಮ್’ಗೆ ಆದ್ಯತೆ ನೀಡಿ, ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ತಡೆಯಿರಿ, ಪೆಟ್ರೋಲ್, ಡೀಸೆಲ್ ಬಳಕೆ ತಗ್ಗಿಸಲು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸಿ, ಅಡುಗೆ ಎಣ್ಣೆ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಅವಲಂಬನೆ ತಗ್ಗಿಸಿ, ನೈಸರ್ಗಿಕ ಕೃಷಿಯತ್ತ ಮುಖಮಾಡಿ, ವಿದೇಶಿ ಬ್ರ್ಯಾಂಡ್ ವಸ್ತುಗಳ ಬಳಕೆ ಕಡಿಮೆ ಮಾಡಿ, ‘ಸ್ವದೇಶಿ’ ಅಳವಡಿಸಿಕೊಳ್ಳಿ, ಒಂದು ವರ್ಷದವರೆಗೆ ಅನಗತ್ಯ ವಿದೇಶಿ ಪ್ರಯಾಣವನ್ನು ಕೈಬಿಡಿ ಎಂದು ಏಳು ಸಲಹೆಗಳನ್ನು ನೀಡಿದ್ದರು.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಪ್ರಧಾನಿಯವರ ಈ ಹೇಳಿಕೆಗಳು ಹೊರಬೀಳುತ್ತಿದ್ದಂತೆಯೇ ಸೋಮವಾರ ಷೇರುಪೇಟೆಯಲ್ಲಿ ಜ್ಯುವೆಲ್ಲರಿ ಕಂಪನಿಗಳ ಷೇರುಗಳು ಪಾತಾಳಕ್ಕಿಳಿದಿವೆ. ಕಲ್ಯಾಣ್ ಜ್ಯುವೆಲ್ಲರ್ಸ್, ಟೈಟಾನ್ ಹಾಗೂ ಸೆನ್ಕೋ ಗೋಲ್ಡ್‌ನಂತಹ ಪ್ರಮುಖ ಕಂಪನಿಗಳ ಷೇರುಗಳು ಶೇ. 5 ರಿಂದ ಶೇ. 9ರಷ್ಟು ದಿಢೀರ್ ಕುಸಿತ ಕಂಡಿವೆ. ಜಾಗತಿಕ ಅಸ್ಥಿರತೆ (ಯುದ್ಧದ ವಾತಾವರಣ) ನಡುವೆ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಉಳಿಸುವುದು ಈ ಸಲಹೆಗಳ ಹಿಂದಿನ ಮೂಲ ಉದ್ದೇಶ ಎನ್ನಲಾಗಿದೆ. ಭಾರತವು ಪ್ರತಿ ತಿಂಗಳು ಸರಾಸರಿ 60 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಿದ್ದು, ಇದಕ್ಕಾಗಿ ಸುಮಾರು 6 ಶತಕೋಟಿ ಡಾಲರ್ ವ್ಯಯವಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಮೋದಿಯವರ ಈ ನಡೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಈ ಸಲಹೆಗಳನ್ನು ಕೇವಲ ಮನವಿಯಲ್ಲ, ಬದಲಿಗೆ “ಪ್ರಧಾನಿ ಕಾರ್ಯಾಲಯದ ಗಂಭೀರ ನಿರ್ದೇಶನಗಳು” ಎಂದು ಟೀಕಿಸಿದ್ದಾರೆ.
“ಕೇಂದ್ರ ಸರ್ಕಾರವು ತಕ್ಷಣವೇ ಸಂಸತ್ತಿನ ಅಧಿವೇಶನವನ್ನು ಕರೆಯಬೇಕು. ಇಂತಹ ತುರ್ತು ನಿರ್ದೇಶನಗಳನ್ನು ನೀಡುವಂತಹ ದುಸ್ಥಿತಿ ದೇಶಕ್ಕೆ ಏಕೆ ಬಂದಿದೆ? ಆರ್ಥಿಕತೆಯ ನೈಜ ಪರಿಸ್ಥಿತಿ ಏನಾಗಿದೆ ಎಂಬುದನ್ನು ದೇಶದ ಜನತೆಯ ಮುಂದಿಡಬೇಕು,” ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು “ದೇಶದ ಆರ್ಥಿಕತೆ ನಿಜಕ್ಕೂ ಮುಚ್ಚಿಡಲಾದ ಬಿಕ್ಕಟ್ಟಿನಲ್ಲಿದೆಯೇ? ಟೊಳ್ಳು ಘೋಷಣೆಗಷ್ಟೇ ಸೀಮಿತ ಆಯ್ತಾ 5 ಟ್ರಿಲಿಯನ್ ಎಕಾನಮಿ, ದೇಶ ನಿಜಕ್ಕೂ ದಿವಾಳಿ ಅಂಚಿಕೆ ತಲುಪಿದೆಯೆ” ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.





