ಕೆಳ ನ್ಯಾಯಾಲಯವು ಸೂಕ್ತ ಕಾರಣಗಳನ್ನು ನೀಡಿ ಜಾಮೀನು ನಿರಾಕರಿಸಿದ ಆದೇಶವನ್ನು, ಮೇಲ್ಮನವಿ ನ್ಯಾಯಾಲಯವು (ಹೈಕೋರ್ಟ್) ಯಾವುದೇ ಸಮರ್ಥನೀಯ ಕಾರಣಗಳನ್ನು ನೀಡದೆ ಏಕಾಏಕಿ ರದ್ದುಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಆತುರದಲ್ಲಿ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮತ್ತು ನಾಲ್ವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌ನ ಕಲಬುರಗಿ ಪೀಠದ ಏಪ್ರಿಲ್ 9, 2026ರ ಆದೇಶವನ್ನು ರದ್ದುಗೊಳಿಸಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಾಗ ಹೈಕೋರ್ಟ್ ಯಾವುದೇ ಸೂಕ್ತ ಕಾರಣಗಳನ್ನು ನೀಡಿಲ್ಲ ಮತ್ತು ತೀವ್ರ ಆತುರದಲ್ಲಿ ಆದೇಶ ಹೊರಡಿಸಿದೆ ಎಂದು ಸುಪ್ರೀಂ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ 2026ರ ಮಾರ್ಚ್ 10ರಂದು ಈ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ದೂರುದಾರ ಸಿದ್ದಲಿಂಗಪ್ಪಗೌಡ ಬಿರಾದಾರ್ ಎಂಬುವವರ ಮನೆಗೆ ಕಬ್ಬಿಣದ ರಾಡ್ ಹಾಗೂ ಮರದ ದೊಣ್ಣೆಗಳೊಂದಿಗೆ ನುಗ್ಗಿದ್ದ ಆರೋಪಿಗಳು, ಅವರ ತಂದೆ ಶಾಂತಗೌಡ ಬಿರಾದಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜಮೀನು ವಿವಾದವೊಂದರಲ್ಲಿ ಶಾಂತಗೌಡ ಅವರು ಮಧ್ಯಸ್ಥಿಕೆ ವಹಿಸಿದ್ದೇ ಈ ಹಲ್ಲೆಗೆ ಕಾರಣವಾಗಿತ್ತು ಎನ್ನಲಾಗಿದೆ.
ಹಲ್ಲೆಯಿಂದಾಗಿ ಶಾಂತಗೌಡ ಅವರ ಪಕ್ಕೆಲುಬು, ಸೊಂಟ ಹಾಗೂ ಕಾಲಿನ ಮೂಳೆಗಳು ಮುರಿದಿದ್ದು, ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ದಾಳಿಯನ್ನು ತಡೆಯಲು ಬಂದ ದೂರುದಾರರ ಅತ್ತೆ ಹಾಗೂ ವಿಕಲಚೇತನ ಸಹೋದರಿಗೂ ಗಾಯಗಳಾಗಿದ್ದವು. ಪ್ರಕರಣದ ಗಾಂಭೀರ್ಯತೆ ಮತ್ತು ಆಯುಧಗಳ ಜಪ್ತಿ ಕಾರ್ಯ ಬಾಕಿಯಿರುವುದನ್ನು ಪರಿಗಣಿಸಿ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 4ರಂದು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಆದರೆ, ಕೇವಲ ಐದು ದಿನಗಳ ಅಂತರದಲ್ಲಿ (ಏಪ್ರಿಲ್ 9ರಂದು) ವಿಚಾರಣೆ ನಡೆಸಿದ ಹೈಕೋರ್ಟ್, “ಪ್ರಕರಣದ ಸ್ವರೂಪ ಮತ್ತು ಆರೋಪಿಗಳ ಹಿನ್ನೆಲೆ ಪರಿಗಣಿಸಿ ಷರತ್ತುಬದ್ಧ ಜಾಮೀನು ನೀಡುವುದು ಸೂಕ್ತ ಮತ್ತು ನ್ಯಾಯಸಮ್ಮತ” ಎಂಬ ಒಂದೇ ಸಾಲಿನ ಸಬೂಬು ನೀಡಿ ಜಾಮೀನು ಮಂಜೂರು ಮಾಡಿತ್ತು. ಈ ಬಗ್ಗೆ ಮೇಲ್ಮನವಿದಾರರ ಪರ ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ಪರೀಕ್ಷಿತ್ ಪಿತಾಲೆ ಅವರ ವಾದ ಆಲಿಸಿದ ಸುಪ್ರೀಂ ಕೋರ್ಟ್, “ಇಷ್ಟು ಗಂಭೀರವಾದ ಪ್ರಕರಣದಲ್ಲಿ ಜಾಮೀನು ನೀಡಲು ಹೈಕೋರ್ಟ್ ನೀಡಿರುವ ಈ ಕಾರಣಗಳು ಖಂಡಿತಾ ಸಮರ್ಪಕವಾಗಿಲ್ಲ” ಎಂದು ಹೇಳಿದೆ.
ಗಾಯಾಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವಾಗ, ಪ್ರತಿಯೊಬ್ಬ ಆರೋಪಿಯ ಪಾತ್ರವೇನು ಎಂಬುದನ್ನು ಪರಿಗಣಿಸದೆ, ಪ್ರಾಸಿಕ್ಯೂಷನ್‌ಗೆ (ಸರ್ಕಾರಿ ವಕೀಲರಿಗೆ) ಆಕ್ಷೇಪಣೆ ಸಲ್ಲಿಸಲು ಅಥವಾ ಸೂಕ್ತ ದಾಖಲೆ ಒದಗಿಸಲೂ ಅವಕಾಶ ನೀಡದೆ ನೋಟಿಸ್ ಜಾರಿಯಾದ ಅದೇ ದಿನ ಹೈಕೋರ್ಟ್ ಆದೇಶ ಹೊರಡಿಸಿದೆ ಎಂದು ಸುಪ್ರೀಂ ಕೋರ್ಟ್ ಬೆರಳು ಮಾಡಿದೆ. ಅಲ್ಲದೆ, ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಸಂತ್ರಸ್ತರಿಗೆ ಮತ್ತೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಮತ್ತೊಂದು ದೂರು ದಾಖಲಾಗಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಎಲ್ಲಾ ಆರೋಪಿಗಳು ನಾಲ್ಕು ವಾರಗಳೊಳಗೆ ಶರಣಾಗುವಂತೆ ಸೂಚಿಸಿದೆ. ಜೊತೆಗೆ, ಎರಡೂ ಕಡೆಯವರಿಗೆ ತಮ್ಮ ವಾದ ಮಂಡಿಸಲು ಸೂಕ್ತ ಅವಕಾಶ ನೀಡಿ ಜಾಮೀನು ಅರ್ಜಿಗಳನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.




