ಭಾರತವು ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರಂತಹ ಮಹಾನ್ ನಾಯಕರ ಆದರ್ಶಗಳ ಅಡಿಪಾಯದ ಮೇಲೆ ನಿರ್ಮಾಣವಾಗಿದೆ. ಗಾಂಧೀಜಿ ದೇಶದ ‘ಆತ್ಮ’, ಅಂಬೇಡ್ಕರ್ ‘ಬೆನ್ನೆಲುಬು’ ಹಾಗೂ ನೆಹರೂ ದೇಶದ ‘ಮಿದುಳು’. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು 120 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಈ ಮೂವರಿಗಿಂತ ದೊಡ್ಡವರಾಗಲು ಎಂದಿಗೂ ಸಾಧ್ಯವಿಲ್ಲ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ.
ಕೊಚ್ಚಿಯಲ್ಲಿ ನಡೆದ ‘ಕೊಚ್ಚಿಯ ಜಂತರ್ ಮಂತರ್’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ದೇಶದಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆ ಮರುಸ್ಥಾಪನೆಯಾಗುವವರೆಗೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಈ ಹೋರಾಟ ತಡೆಯಿಲ್ಲದೆ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಕೇಂದ್ರ ಸರ್ಕಾರದ ಆಡಳಿತವು ಬ್ರಿಟಿಷರ ಆಳ್ವಿಕೆಯಂತೆಯೇ ಇದೆ. ಸರ್ಕಾರವು ಪ್ರಜೆಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಯತ್ನಿಸುತ್ತಿದೆ. ದೇಶದ ಪ್ರಜೆಗಳು ಏನು ತಿನ್ನಬೇಕು, ಯಾರನ್ನು ಮದುವೆಯಾಗಬೇಕು ಮತ್ತು ಯಾರಿಗೆ ಮತ ಹಾಕಬೇಕು ಎಂಬುದನ್ನೂ ಸಹ ಸರ್ಕಾರವೇ ಹಂತ ಹಂತವಾಗಿ ನಿಯಂತ್ರಿಸಲು ಹೊರಟಿದೆ” ಎಂದು ಆರೋಪಿಸಿದ್ದಾರೆ.
“ದೆಹಲಿಯಲ್ಲಿ ರಾಷ್ಟ್ರಧ್ವಜದೊಂದಿಗೆ ಜಂತರ್ ಮಂತರ್ ಪ್ರವೇಶಿಸಿದ್ದಕ್ಕಾಗಿ ನಮ್ಮನ್ನು ಬಂಧಿಸಲಾಯಿತು. ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಜೈಲಿಗೆ ಕಳುಹಿಸಲಾಯಿತು. ಬ್ರಿಟಿಷರ ಕಾಲದ ನಂತರ ತ್ರಿವರ್ಣ ಧ್ವಜ ಹಿಡಿದಿದ್ದಕ್ಕಾಗಿ ಜೈಲಿಗೆ ಕಳುಹಿಸಿದ ಉದಾಹರಣೆ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ” ಎಂದದ್ದಾರೆ.
“ದೆಹಲಿ, ಮಹಾರಾಷ್ಟ್ರ, ಕೇರಳ ಅಥವಾ ತಮಿಳುನಾಡು ಸೇರಿದಂತೆ ದೇಶದ ಯಾವುದೇ ಭಾಗದಲ್ಲಾದರೂ ನಮ್ಮನ್ನು ಬಂಧಿಸಲಿ, ನಾವು ಜೈಲಿನಿಂದ ಹೊರಬಂದು ದೇಶಾದ್ಯಂತ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಕೊಂಡೊಯ್ದು ಹಾರಿಸುತ್ತೇವೆ” ಎಂದು ಪ್ರತಿಪಾದಿಸಿದ್ದಾರೆ.



