ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸೆ.29ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಈ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ.
ಚುನಾವಣಾ ವೇಳಾಪಟ್ಟಿಯಂತೆ ಅಕ್ಟೋಬರ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅ.7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಅ.9 ಕೊನೆಯ ದಿನ. ಅ.23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಕ್ಟೊಬರ್ 27ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 30 ವರ್ಷವಾಗಿರಬೇಕು. ಅಭ್ಯರ್ಥಿಯು ಕರ್ನಾಟಕದ ಯಾವುದೇ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು ಹಾಗೂ ಕಾನೂನಿನಡಿ ಅನರ್ಹರಾಗಿರಬಾರದು. ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಪದವೀಧರರು ಮಾತ್ರ ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ವಾಟರ್ ಆಕ್ಟಿವಿಟೀಸ್‌ಗೆ ಅಡ್ಡಿ: ರೆಸಾರ್ಟ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಜೀವ ಬೆದರಿಕೆ ಆರೋಪ
ಡಿ- ನೋವೋ ಪದ್ಧತಿಯಡಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ನವೆಂಬರ್ 1, 2025ರ ಅರ್ಹತಾ ದಿನಾಂಕದಂತೆ ಒಟ್ಟು 90,460 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಈ ಮತಕ್ಷೇತ್ರದಲ್ಲಿ 128 ಮೂಲ ಮತಗಟ್ಟೆಗಳು ಹಾಗೂ 9 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 137 ಮತಗಟ್ಟೆಗಳಿರಲಿವೆ. ಸೆಪ್ಟೆಂಬರ್ 22ರಂದು ಚುನಾವಣಾ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ ಪ್ರಕಟಿಸಿದ್ದು, ಅಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಸೆಪ್ಟೆಂಬರ್ 29ರಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ನಾಮಪತ್ರ ನಮೂನೆ-2ಇ, ಪರಿಷ್ಕೃತ ಪ್ರಮಾಣ ಪತ್ರ (ಅಫಿಡವಿಟ್) ನಮೂನೆ-26 ಸೇರಿದಂತೆ ಅಗತ್ಯ ನಮೂನೆಗಳನ್ನು ಪಡೆಯಬಹುದು. ಭರ್ತಿ ಮಾಡಿದ ನಾಮಪತ್ರಗಳನ್ನು ಅಭ್ಯರ್ಥಿಗಳು ಅಥವಾ ಅವರ ಸೂಚಕರು ಸೆ.29ರಿಂದ ಅಕ್ಟೊಬರ್ 6ರವರೆಗೆ ಸಾರ್ವತ್ರಿಕ ರಜೆ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದಾಗಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಕಲಂ 34ರ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹10 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ₹5 ಸಾವಿರ ಠೇವಣಿ ಇಡಬೇಕು. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿನ ಎಲ್ಲ ಅಂಕಣಗಳನ್ನು ಅಗತ್ಯ ಮಾಹಿತಿಯೊಂದಿಗೆ ಕಡ್ಡಾಯವಾಗಿ ಭರ್ತಿ ಮಾಡಬೇಕು. ಯಾವುದೇ ಅಂಕಣವನ್ನು ಖಾಲಿ ಬಿಟ್ಟರೆ ನಾಮಪತ್ರ ಪರಿಶೀಲನೆ ವೇಳೆ ಅದು ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ.
ಪ್ರಮಾಣ ಪತ್ರ, ನಮೂನೆ ಎಎ ಹಾಗೂ ನಮೂನೆ ಬಿಬಿಗಳನ್ನು ನಾಮಪತ್ರದೊಂದಿಗೆ ಸಲ್ಲಿಸದಿದ್ದಲ್ಲಿ, ಅ.6ರಂದು ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬೇಕು ಎಂದು ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ತಿಳಿಸಿದ್ದಾರೆ.




