ತನ್ನ ಉತ್ಪನ್ನಗಳ ಮೇಲೆ ‘100% ನ್ಯಾಚುರಲ್’ ಮತ್ತು ‘100% ಪ್ಯೂರ್’ (100% ಶುದ್ಧ) ಎಂಬ ಲೇಬಲ್‌ಗಳನ್ನು ಬಳಸದಂತೆ ಡಾಬರ್ ಇಂಡಿಯಾ ಸಂಸ್ಥೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಸೂಚಿಸಿದೆ. ಇಂತಹ ದಾರಿ ತಪ್ಪಿಸುವ ಮತ್ತು ಅಸ್ಪಷ್ಟವಾದ ಪ್ರಚಾರದ ಲೇಬಲ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆಯೂ ಆದೇಶಿಸಿದೆ.
ಡಾಬರ್ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಜೇನುತುಪ್ಪ, ಹಸುವಿನ ತುಪ್ಪ, ಆಪಲ್ ಸೈಡರ್ ವಿನೆಗರ್, ತೆಂಗಿನ ಎಣ್ಣೆ, ಎಳೆನೀರು ಹಾಗೂ ತೆಂಗಿನ ಹಾಲು ಸೇರಿದಂತೆ ಹಲವು ಉತ್ಪನ್ನಗಳನ್ನು ‘100% ನ್ಯಾಚುರಲ್’ ಮತ್ತು ‘100% ಆರ್ಗ್ಯಾನಿಕ್’ ಎಂದು ಪ್ರಚಾರ ಮಾಡುತ್ತಿತ್ತು. ‘ಎಫ್‌ಎಸ್ (ಜಾಹೀರಾತು ಮತ್ತು ಹಕ್ಕುಗಳು) ನಿಯಮಗಳು-2018’ರ ಪ್ರಕಾರ, ಇಂತಹ 100%ರಷ್ಟು ಶುದ್ಧತೆಯ ಹಕ್ಕುಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಇವು ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿರುವಾಗ, 100% ನೈಸರ್ಗಿಕ ಮತ್ತು ಶುದ್ಧ ಎಂಬ ಪ್ರಚಾರವು ಕಾಯ್ದೆಯ ಉಲ್ಲಂಘನೆಯಾಗುತ್ತವೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಈ ಹಿಂದೆ ನೀಡಿದ್ದ ಸೂಚನೆಯನ್ನು ಕಂಪನಿಯು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆರೋಪಿಸಿರುವ ಎಫ್‌ಎಸ್ಎಸ್‌ಎಐ, ಮುಂದಿನ 15 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಡಾಬರ್ ಸಂಸ್ಥೆಗೆ ಗಡುವು ನೀಡಿದೆ.



