ಕಾಂಗ್ರೆಸ್ ಗ್ಯಾರಂಟಿ | ‘ಉಚಿತ ಕೊಡುಗೆ’ ನೀಡಿದರೆ ಬೊಕ್ಕಸಕ್ಕೆ ಹೊರೆ ಆಗುತ್ತಾ? ವಾಸ್ತವ ಏನು?

Date:

ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರಗಳು ಆದಾಯ - ಸಾಲ - ವೆಚ್ಚವನ್ನು ನಿಯಮಗಳ ಪ್ರಕಾರ ನಿಭಾಯಿಸಿದರೆ ಈ ಉಚಿತ ಕೊಡುಗೆ ನೀಡುವುದರಿಂದ ಬೊಕ್ಕಸಕ್ಕೆ ನಷ್ಟವಾಗದು ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು

ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವಿಗೆ ಅನೇಕ ಕಾರಣಗಳಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನೀಡಲಾದ ಉಚಿತ ಕೊಡುಗೆ ಭರವಸೆಯೂ ಸೇರಿದೆ. ಈ ಉಚಿತ ಕೊಡುಗೆಗಳಿಂದ ಕರ್ನಾಟಕ ಸರ್ಕಾರದ ಮೇಲೆ ಬೀಳಲಿರುವ ಹೊರೆಯೆಷ್ಟು ಎನ್ನುವ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿದೆ.

ಇಷ್ಟೊಂದು ಪ್ರಮಾಣದಲ್ಲಿ ಉಚಿತ ಕೊಡುಗೆಗಳನ್ನು ನೀಡಿದರೆ ಕರ್ನಾಟಕ ರಾಜ್ಯ ಸಾಲದ ಸುಳಿಯೊಳಗೆ ಸಿಲುಕಲಿದೆ ಎನ್ನುವ ವಾಟ್ಸ್‌ ಆ್ಯಪ್ ಸಂದೇಶಗಳು ಹರಿದಾಡುತ್ತಿವೆ. ಹಾಗಿದ್ದರೆ ಅಂಕಿ- ಅಂಶಗಳು ಏನು ಹೇಳುತ್ತವೆ?

ಕಾಂಗ್ರೆಸ್ ಘೋಷಿಸಿದ ಉಚಿತ ಕೊಡುಗೆಗಳು ಯಾವುವು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್ ಪಕ್ಷ ಕುಟುಂಬದ ಮುಖ್ಯಸ್ಥೆಯಾಗಿರುವ ಪ್ರತಿ ಮಹಿಳೆಗೂ ಮಾಸಿಕ ₹2000, ಡಿಪ್ಲೋಮಾ ಓದುವ ನಿರುದ್ಯೋಗಿಗಳಿಗೆ ಮಾಸಿಕ ₹1500, ಪದವೀಧರರಿಗೆ ಮಾಸಿಕ ₹3000 ನೀಡುವುದಾಗಿ ಘೋಷಿಸಿದೆ. ಪಕ್ಷದ ಚುನಾವಣಾ ಪೂರ್ವ ಆಶ್ವಾಸನೆಗಳಲ್ಲಿ ಮಹಿಳೆಯರಿಗೆ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಹಾಗೂ ಪ್ರತಿ ಕುಟುಂಬಕ್ಕೂ 200 ಯುನಿಟ್‌ಗಳಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡುವ ಭರವಸೆ ನೀಡಲಾಗಿದೆ. ಜೊತೆಗೆ ಅನ್ನಭಾಗ್ಯ ಅಕ್ಕಿಯನ್ನು 10 ಕೇಜಿಗೆ ಏರಿಸಲಾಗುವುದು ಎಂದಿದೆ.

ಈ ಉಚಿತ ಕೊಡುಗೆಗಳ ಜೊತೆಗೆ ಪ್ರತಿವರ್ಷ ಆಳ ಸಾಗರ ಮೀನುಗಾರಿಕೆಗೆ 500 ಲೀಟರ್‌ಗಳಷ್ಟು ಡೀಸೆಲ್ ಅನ್ನು ತೆರಿಗೆ ರಹಿತವಾಗಿ ನೀಡುವುದು, ಎಲ್ಲಾ ಸಾಗರ ಮೀನುಗಾರರಿಗೆ ಮೀನುಗಾರಿಕೆಗೆ ರಜಾದಿನಗಳ ಭತ್ಯೆಯಾಗಿ ₹6000 ನೀಡುವುದು ಸೇರಿದೆ. ಗ್ರಾಮಗಳಲ್ಲಿ ಗ್ರಾಮೀಣ ಮಹಿಳೆಯರು/ಯುವಜನರನ್ನು ಜೊತೆಗೂಡಿಸಿಕೊಂಡು ಸಗಣಿಯನ್ನು ಕೇಜಿಗೆ ₹3ರಂತೆ ಖರೀದಿಸಿ ಗೊಬ್ಬರ ತಯಾರಿ ಕೇಂದ್ರಗಳನ್ನು ಸ್ಥಾಪಿಸುವ ಭರವಸೆ ನೀಡಿದೆ.

ವೆಚ್ಚದ ಅಂಕಿ- ಅಂಶಗಳು ಏನು ಹೇಳುತ್ತವೆ?

ಅಂಕಿ- ಅಂಶಗಳ ಪ್ರಕಾರ ನಗದು ಪಾವತಿಗಳು ಮತ್ತು ವಿದ್ಯುತ್ ಸಬ್ಸಿಡಿಯಿಂದ ರಾಜ್ಯದ ಬೊಕ್ಕಸಕ್ಕೆ ₹62,000 ಕೋಟಿ ಹೊರೆಯಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

“ರಾಜ್ಯ ಬಜೆಟ್‌ನಲ್ಲಿ ₹62000 ಕೋಟಿ ಉಚಿತ ಕೊಡುಗೆಗಳಿಗೆ ಮೀಸಲಿಡುವುದೆಂದರೆ ಅಂದಾಜು ಬಜೆಟ್‌ನ ಶೇ. 20ರಷ್ಟನ್ನು ನೀಡಬೇಕಾಗುತ್ತದೆ. ಕರ್ನಾಟಕದ 2023-24ರ ಬಜೆಟ್‌ನಲ್ಲಿ 2022-23ರ ಅವಧಿಗೆ ವಿತ್ತೀಯ ಕೊರತೆ ₹60,581 ಕೋಟಿ ಎಂದು ಅಂದಾಜಿಸಲಾಗಿದೆ. ಅದು ರಾಜ್ಯದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ. 2.60ರಷ್ಟು” ಎಂದು ಎಕನಾಮಿಕ್ ಟೈಮ್ಸ್ ವಿಶ್ಲೇಷಣೆ ಹೇಳಿದೆ.

ಆದರೆ, ಕಾಂಗ್ರೆಸ್‌ ನಾಯಕರ ಪ್ರಕಾರ ಈ ಉಚಿತ ಕೊಡುಗೆಗಳು ರಾಜ್ಯ ಬಜೆಟ್‌ನ ಶೇ. 15ರಷ್ಟು ಮಾತ್ರವೇ ಇರಲಿದೆ. ಮುಂದಿನ ಐದು ವರ್ಷಗಳಲ್ಲಿ ಬಜೆಟ್‌ನ ಗಾತ್ರ ಹೆಚ್ಚಾಗುತ್ತಾ ಹೋಗಲಿದೆ ಎನ್ನುವ ಅಂಶವನ್ನೂ ಅವರು ಮುಂದಿಟ್ಟಿದ್ದಾರೆ.

ರಾಜ್ಯದ ಆದಾಯ- ಸಾಲದ ವಾಸ್ತವವೇನು?

ಕರ್ನಾಟಕ ಇತ್ತೀಚೆಗಿನ ವರ್ಷದಲ್ಲಿ ಅತ್ಯುತ್ತಮ ಆದಾಯ ದಾಖಲಿಸಿದೆ. ಬಿಜೆಪಿ ಸರ್ಕಾರ ಆದಾಯ ಏರಿರುವ ವಿವರ ನೀಡಿದ ಬಜೆಟ್‌ ಅನ್ನೇ 2023ಯಲ್ಲಿ ಮಂಡಿಸಿತ್ತು. ಜಿಎಸ್‌ಟಿ ಸಂಗ್ರಹದಲ್ಲೂ ಅತ್ಯುತ್ತಮ ಪ್ರಗತಿ ದಾಖಲಿಸಿದೆ. 2022-23ರಲ್ಲಿ ಆದಾಯ ಸಂಗ್ರಹದ ಗುರಿ ₹72,000 ಕೋಟಿ ಎಂದು ಹೇಳಲಾಗಿತ್ತು. ಜನವರಿ ಅಂತ್ಯಕ್ಕೆ ₹83,000 ಕೋಟಿ (ಜಿಎಸ್‌ಟಿ ಪರಿಹಾರ ಹೊರತುಪಡಿಸಿ) ಆದಾಯ ಸಂಗ್ರಹವಾಗಿತ್ತು. ಇದು ಬಜೆಟ್ ಅಂದಾಜಿಗಿಂತ ಶೇ 15ರಷ್ಟು ಹೆಚ್ಚು.

ಆದರೆ, ಮಾಧ್ಯಮಗಳಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಕರ್ನಾಟಕದ ಸಾಲದ ಹೊರೆಯೂ ದೊಡ್ಡದಾಗೇ ಇದೆ. ರಾಜ್ಯದ ಒಟ್ಟು ಸಾಲ ಐದು ವರ್ಷಗಳಲ್ಲಿ ₹3.6 ಲಕ್ಷ ಕೋಟಿಗೆ ಏರಿದೆ. ಇದು ಇತ್ತೀಚೆಗಿನ ಬಜೆಟ್‌ನಲ್ಲಿ ₹5.6 ಲಕ್ಷ ಕೋಟಿಗೇರಿದೆ. ಈ ಸಾಲದಲ್ಲಿ ಶೇ. 30ರಷ್ಟು ಏರಿಕೆಯಾದರೂ 2026-27ರಲ್ಲಿ ₹7.3 ಲಕ್ಷ ಕೋಟಿಗೆ ತಲುಪಲಿದೆ. ಈ ಅವಧಿಗೆ ಬಡ್ಡಿ ದರದ ಹೊರೆಯೇ ₹50,300 ಕೋಟಿಗೆ ಏರಬಹುದು. ಆದರೆ ಆದಾಯ ಬೆಳೆಯುವ ಕಾರಣ ಸಾಲವನ್ನು 2026-27ರಲ್ಲಿ ₹2.9 ಲಕ್ಷ ಕೋಟಿಗೆ ಇಳಿಸಬಹುದೆಂಬ ನಿರೀಕ್ಷೆಯೂ ಇದೆ.

ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ರಾಜ್ಯ ವಿದ್ಯುತ್ ಕ್ಷೇತ್ರಕ್ಕೆ ಒಪ್ಪಿಗೆಯಾಗದೆ ಇರಬಹುದು. ಈಗಾಗಲೇ ಐದು ವಿದ್ಯುತ್ ಸರಬರಾಜು ಕಂಪನಿಗಳು ₹14,401 ಕೋಟಿ ನಷ್ಟ ಎದುರಿಸುತ್ತಿವೆ. ಈ ವರ್ಷವೇ ₹4,581 ಕೋಟಿ ನಷ್ಟ ಎದುರಿಸಿವೆ. ಸರ್ಕಾರಿ ಇಲಾಖೆಗಳು, ನಿಗಮಗಳು, ಪಂಚಾಯತ್‌ಗಳೇ ದೊಡ್ಡ ಪ್ರಮಾಣದಲ್ಲಿ ಪಾವತಿ ಬಾಕಿ ಉಳಿಸಿಕೊಂಡಿವೆ.

ಉಚಿತ ಕೊಡುಗೆಗಳ ಜೊತೆಗೆ 2.5 ಲಕ್ಷ ಸರ್ಕಾರಿ ಉದ್ಯೋಗ ಸೇರಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ. ಇದರಿಂದ ರಾಜ್ಯದ ವೇತನ ಶುಲ್ಕವೂ ಏರುವ ಸಾಧ್ಯತೆ ಇದೆ.

ಅರ್ಥಶಾಸ್ತ್ರಜ್ಞರು ಏನು ಹೇಳುತ್ತಾರೆ?

ಅರ್ಥಶಾಸ್ತ್ರಜ್ಞರಾದ ಪ್ರೊ ಟಿ ಆರ್ ಚಂದ್ರಶೇಖರ್ ಅವರ ವಿಶ್ಲೇಷಣೆ ಪ್ರಕಾರ, “ದೇಶವು 1950ರಿಂದ 2014ರವರೆಗೆ (64 ವರ್ಷಗಳಲ್ಲಿ) ಎಷ್ಟು ಸಾಲ ಮಾಡಿತ್ತೋ ಅದರ ಎರಡು ಪಟ್ಟು ಸಾಲವನ್ನು ಮೋದಿ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ಮಾಡಿದೆ. ಕರ್ನಾಟಕಕ್ಕೆ ಹಣದ ಕೊರತೆಯಿಲ್ಲ. ಆದರೆ ಕೇಂದ್ರ ಸರ್ಕಾರವು ಅನ್ಯಾಯ ಮಾಡುತ್ತಿದೆ. ಇದನ್ನು ಸರಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಕೇಂದ್ರ ಸರ್ಕಾರ ಪ್ರತಿ ವರ್ಷ ತೆರಿಗೆ ರಾಶಿಯಿಂದ ಹಣವನ್ನು ರಾಜ್ಯಕ್ಕೆ ವರ್ಗಾವಣೆ ಮಾಡುತ್ತದೆ ಮತ್ತು ಅನುದಾನ ನೀಡುತ್ತದೆ. ಕರ್ನಾಟಕ ರಾಜ್ಯದ ಬಜೆಟ್‌ನ ಎರಡು ಸಂಪನ್ಮೂಲದ ಮೂಲ ಅದೇ. ಕೇಂದ್ರ ಸರ್ಕಾರವು ಸಂವಿಧಾನಾತ್ಮಕ ಒಕ್ಕೂಟ ತತ್ವವನ್ನು ಪಾಲಿಸಿದರೆ, ವಾರ್ಷಿಕ ರಾಜ್ಯಕ್ಕೆ ಕನಿಷ್ಠ ₹60,000 ಕೋಟಿಯಿಂದ ₹65,000 ಕೋಟಿ ಹಣ ದೊರೆಯುತ್ತದೆ. ಈ ಹಣದಿಂದ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ನೀಡಿರುವ ವಾಗ್ದಾನಗಳನ್ನು ಸಾಲ ಮಾಡದೆ ಮತ್ತು ಅಭಿವೃದ್ಧಿ ವೆಚ್ಚ ಕಡಿತ ಮಾಡದೆ ಪೂರೈಸಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಹೇಳಿಕೆಗೆ ಅವರ ವಿವರಣೆ ಹೀಗಿದೆ:
ಕರ್ನಾಟಕಕ್ಕೆ ಎರಡು ರೀತಿಯ ಸಂಪನ್ಮೂಲಗಳಿಂದ ದೊರೆತ ಹಣ:
– 2015-16ರಲ್ಲಿ ₹37911 ಕೋಟಿ
– 2017-18ರಲ್ಲಿ ₹47145 ಕೋಟಿ
– 2018-19ರಲ್ಲಿ ₹50621 ಕೋಟಿ
– 2019-20ರಲ್ಲಿ ₹50924 ಕೋಟಿ
– 2020-21ರಲ್ಲಿ ₹37980 ಕೋಟಿ
– 2021-22ರಲ್ಲಿ ₹54269 ಕೋಟಿ
– 2022-23ರಲ್ಲಿ ₹46987 ಕೋಟಿ
– 2023-24ರಲ್ಲಿ ₹50257 ಕೋಟಿ
ವರ್ಷ ವರ್ಷವೂ ಕೇಂದ್ರ ಸರ್ಕಾರದ ಆದಾಯ ಏರಿಕೆಯಾಗುತ್ತಿದೆ. ಆದರೆ ಇದಕ್ಕೆ ಸರಿಯಾಗಿ ರಾಜ್ಯಕ್ಕೆ ವರ್ಗಾವಣೆ ಮಾಡುವ ಮೊತ್ತದಲ್ಲಿ ಏರಿಕೆಯಾಗುತ್ತಿಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರದ ಒಟ್ಟು ಬಜೆಟ್ ಗಾತ್ರ 2016-16 (₹17.65 ಲಕ್ಷ ಕೋಟಿ) ರಿಂದ 2023-24ರ (₹45.03 ಲಕ್ಷ ಕೋಟಿ) ನಡುವೆ ಶೇ. 155.13 ರಷ್ಟು ಏರಿಕೆಯಾಗಿದೆ. ಅದು ಕರ್ನಾಟಕಕ್ಕೆ ವರ್ಗಾಯಿಸುತ್ತಿರುವ ಮೊತ್ತದ ಏರಿಕೆ ಇದೇ ಅವಧಿಯಲ್ಲಿ ಶೇ. 32.56 ರಷ್ಟೇ ಆಗಿದೆ.

ಕೇಂದ್ರ ಸರ್ಕಾರದ 15ನೆಯ ಹಣಕಾಸಿನ ಆಯೋಗದ ಶಿಫಾರಸ್ಸಿನ ಪ್ರಕಾರ ರಾಜ್ಯಗಳಿಗೆ ತನ್ನ ತೆರಿಗೆ ರಾಶಿಯಲ್ಲಿ ಶೇ. 41ರಷ್ಟನ್ನು ವರ್ಗಾಯಿಸಬೇಕು. ಕೇಂದ್ರದ 2023-24ರ ತೆರಿಗೆ ರಾಶಿ ₹33.61 ಲಕ್ಷ ಕೋಟಿ. ಇದರಲ್ಲಿ 2023-23 ರಲ್ಲಿ ವರ್ಗಾಯಿಸಿರುವ ಮೊತ್ತ ಕೇವಲ ₹10.21 ಲಕ್ಷ ಕೋಟಿ (ಶೇ.30.37). ಇದರಿಂದ ರಾಜ್ಯಗಳಿಗೆ ಉಂಟಾದ ನಷ್ಟ ₹3.57 ಲಕ್ಷ ಕೋಟಿ. ಕೇಂದ್ರ ಸರ್ಕಾರವು ತನ್ನ ತೆರಿಗೆ ರಾಶಿಯಿಂದ ಶೇ. 41ರಷ್ಟನ್ನು ವರ್ಗಾಯಿಸಿದ್ದರೆ ಕರ್ನಾಟಕಕ್ಕೆ ಕನಿಷ್ಠ ₹13,000 ಲಕ್ಷ ಕೋಟಿ ದೊರೆಯುತ್ತಿತ್ತು.

ಈ ಸುದ್ದಿ ಓದಿದ್ದೀರಾ?: ಬೇರೆ ರಾಜ್ಯಗಳಲ್ಲೂ ಸದ್ದು ಮಾಡುತ್ತಿರುವ 40% ಕಮಿಷನ್

ಉಚಿತ ಕೊಡುಗೆಗಳು ನೀಡುವುದು ತಪ್ಪೆ?

ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳು ನೀಡುವ ಉಚಿತ ಕೊಡುಗೆಗಳ ಭರವಸೆಯನ್ನು ‘ರೇವ್ಡಿ’ ಸಂಸ್ಕೃತಿ ಎಂದು ಟೀಕಿಸಿ ಅರ್ಥವ್ಯವಸ್ಥೆಗೆ ಅದು ಉತ್ತಮವಲ್ಲ ಎಂದು ಅನೇಕ ಬಾರಿ ಹೇಳಿದ್ದಾರೆ.

ರಾಜ್ಯದ ಬೊಕ್ಕಸಕ್ಕೆ ಇವುಗಳಿಂದ ಎಷ್ಟು ನಷ್ಟವಾಗುತ್ತಿದೆ ಎನ್ನುವ ವಿವರ ಒಂದು ಕಡೆಯಾದರೆ, ಈ ಕೊಡುಗೆಗಳಿಗೆ ಜನರು ಅರ್ಹರಲ್ಲವೆ ಎನ್ನುವ ಪ್ರಶ್ನೆಯೂ ಏಳುತ್ತದೆ. ಹೌದು, ಕಾಂಗ್ರೆಸ್ ಘೋಷಿಸಿದ ಎಲ್ಲಾ ಕೊಡುಗೆಗಳು ರಾಜ್ಯದ ಜನತೆಯ ಮೂಲಭೂತ ಅಗತ್ಯಗಳಾಗಿವೆ. ಜನಸಾಮಾನ್ಯರ ಮೂಲಭೂತ ಅಗತ್ಯಗಳನ್ನು ಒದಗಿಸುವುದು ಪ್ರತೀ ಸರ್ಕಾರದ ಕರ್ತವ್ಯ. ಮಹಿಳೆಯರು ಮನೆಯಿಂದ ಹೊರ ಹೋಗಬೇಕೆಂದರೆ ಕುಟುಂಬದ ಪುರುಷರಿಂದ ಬಸ್ಸಿಗೆ ಹಣ ಕೇಳುವ ಒದ್ದಾಟ ರಾಜ್ಯದ ಬಹುತೇಕ ಮನೆಗಳಲ್ಲಿ ಇಂದಿಗೂ ಇದೆ. ನ್ಯಾಪ್‌ಕಿನ್‌ನಂತಹ ಅಗತ್ಯಗಳನ್ನು ತನಗೂ ತನ್ನ ಮಗಳಿಗೂ ನೀಡಲಾಗದ ಮಹಿಳೆಗೆ ಮಾಸಿಕ ರೂ 2000 ಅತಿ ಅಗತ್ಯವಾಗಿರುತ್ತದೆ.

ಕೊನೆಯದಾಗಿ ಹೇಳಬೇಕೆಂದರೆ, ಒಂದು ಕಾಲದಲ್ಲಿ ಕಟ್ಟಿಗೆ ಒಲೆಗಳ ಹೊಗೆಯಿಂದ ಕಷ್ಟಪಡುತ್ತಿದ್ದ ಮಹಿಳೆಯರಿಗೆ ಅಡುಗೆ ಇಂಧನ ಮೂಲಭೂತ ಅಗತ್ಯವಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಂತಹ ಅಡುಗೆ ಇಂಧನವನ್ನು ‘ದುಬಾರಿ’ ಪಟ್ಟಿಯಲ್ಲಿ ಸೇರಿಸಿರುವುದನ್ನೇ ಕಾಂಗ್ರೆಸ್ ತನ್ನ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಪದೇಪದೆ ಪ್ರಶ್ನಿಸಿತ್ತು. ಅಡುಗೆ ಇಂಧನ, ವಿದ್ಯುತ್, ಉದ್ಯೋಗ ಮೊದಲಾದ ಮೂಲಭೂತ ಅಗತ್ಯಗಳನ್ನೇ ಒದಗಿಸಲಾಗದ ಸರ್ಕಾರ, ಇನ್ನೇನು ಆಡಳಿತ ನಡೆಸಲು ಸಾಧ್ಯವಿದೆ?

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ದುನಿಯಾ ವಿಜಯ್​​​​​​ ವಿಚ್ಛೇದನ ಅರ್ಜಿ ವಜಾಗೊಳಿಸಿದ ಕೋರ್ಟ್

ನಟ ದರ್ಶನ್​​ ವಿವಾದದ ನಡುವೆ ಇದೀಗ ಸ್ಯಾಂಡಲ್​​​​ವುಡ್‌ನ ಮತ್ತೋಬ್ಬ​​​​​ ನಟ ದುನಿಯಾ...

ದಲಿತ ಯುವಕರ ದಾರಿ ತಪ್ಪಿಸುತ್ತಿದೆ ಕೋಮುವಾದಿ ಸಂಘಟನೆ; ಮುತ್ತು ಬಿಳಿಯಲಿ ಆರೋಪ

ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ 'ದಲಿತ ಮಿತ್ರ ಮೇಳ ಗದಗ' ಎಂಬ...

ಜುಲೈ ಮೂರನೇ ವಾರದಲ್ಲಿ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವಾಲಯದ ಜವಾಬ್ದಾರಿಯನ್ನು ಬುಧವಾರ...

ಕಲಬುರಗಿ | ಭಿಕ್ಷೆ ಬೇಡಿ ಬದುಕುತ್ತಿರುವ ಅಲೆಮಾರಿ ಸಮುದಾಯಕ್ಕಿಲ್ಲ ನೆಲೆ

ಅಲೆಮಾರಿ ಸಮುದಾಯದ 40 ಕುಟುಂಬಗಳ ಜನರು ಜೇವರ್ಗಿ ಪಟ್ಟಣದ ಕೊಳ್ಳಕೂರು ಕ್ರಾಸ್...