ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಅವರ ನಿಜವಾದ ಹೆಸರು ಡೂಗಜ್ಜ- ಎಂದಲ್ಲ. ಭೀಮಸೇನಾಚಾರ್ಯರು. ಆದರೆ ನಮ್ಮೂರವರೆಲ್ಲರೂ ಕರೆಯುವದು ಡೂಗಜ್ಜನೆಂದೇ. ಅವರಿಗೂ ಸಿಟ್ಟಿಲ್ಲ ಹಾಗೆ ಕರೆದರೆ. ಅವರು ಈ ಹೊಸ ಹೆಸರನ್ನು ಗಳಿಸಿ ಎರಡು ಪಟ್ಟದ ಮೇಲಾಗಿರಬಹುದೆಂದು ನನ್ನ ತಿಳಿವಳಿಕೆ. ಡೂಗಜ್ಜನನ್ನು ಯಾರಾದರೂ ಕಾಣಬೇಕಾದರೆ, ನಮ್ಮೂರ ನಾರಾಯಣ ದೇವರ ಗುಡಿಯಲ್ಲಿಯ ನೃಸಿಂಹತೀರ್ಥದ ಪಾವಟಿಗೆಯ ಮೇಲೆ; ಇಲ್ಲವೆ ಸಭಾಮಂಟಪದೆದುರಿಗಿದ್ದ ಗರುಡದೇವರ ಗುಡಿಯಲ್ಲಿ. ಈ ಎರಡು ಸ್ಥಳಗಳನ್ನು ಬಿಟ್ಟು ಅವರೆಂದೂ ಬೇರೆ ಕಡೆಗೆ ಇರುತ್ತಿದ್ದಿಲ್ಲ. ಅಗ್ರಹಾರದ ಹುಡುಗರಿಗೆಲ್ಲ ಡೊಗಜ್ಜನೆಂದರೆ ಬೆಲ್ಲದಚ್ಚು. ನಮ್ಮೂರ ಗೋಕುಲಾಷ್ಟಮಿ, ನವರಾತ್ರಿ ಬಹಳ ಪ್ರಸಿದ್ದ. ಇವು ಬಂದವೆಂದರೆ, ಅಗ್ರಹಾರದ ಹುಡುಗರನ್ನು ಹಿಡಿದವರೇ ಇಲ್ಲ. ತೆರೆಗಳಂತೆ- ಈ ಹುಡುಗರ ತಂಡಗಳು ಗುಡಿಯಲ್ಲಿ ಆನಂದದಿಂದ ಅಲೆದಾಡುತ್ತಿರುವದನ್ನು ನೋಡಿದರೆ, ಯಾವನಿಗೆ ತನ್ನ ಬಾಲ್ಯದ ನೆನಪಾಗಿ ಮೈ ಜುಮ್ಮೆಂದು ಕರುಳು ಕುಣಿದಾಡಲಿಕ್ಕಿಲ್ಲ!

- Advertisement -

ಗೋಕುಲಾಷ್ಟಮಿಯ ದಿನ ರಾತ್ರಿ ಹನ್ನೆರಡು ಗಂಟೆಗೆ ಕೀರ್ತನ. ಮರುದಿನ ಮುಂಜಾನೆ ಗೋಪಾಲಕಾವಲಿ. ಅಲ್ಲಿಂದ ಊರ ಬ್ರಾಹ್ಮಣರಿಗೆಲ್ಲ ಊಟ, ಯಾರ ಮನೆಯಲ್ಲಿಯೂ ಅಡಿಗೆ ಇಲ್ಲ. ಎಲ್ಲರೂ ಗುಡಿಗೆ ಊಟಕ್ಕೆ ಬರುವವರೇ. ಆದರೆ ನಮ್ಮ ಡೂಗಜ್ಜನು ಮಾತ್ರ ಬೇಗನೆ ತನ್ನ ಊಟ ತೀರಿಸಿಕೊಂಡು, ನೃಸಿಂಹದೇವರ ಪಾವಟಿಗೆಯ ಮೇಲೆ ಎಂದಿನಂತೆ ಕುಳಿತಿರುತ್ತಿದ್ದನು. ನವರಾತ್ರಿಯಲ್ಲಿಯೂ ಹೀಗೇ. ಯಾರು ಬಂದರೂ ಡೂಗಜ್ಜನು ಮಾತ್ರ ಗುಡಿಗೆ ಊಟಕ್ಕೆ ಬರುತ್ತಿರಲಿಲ್ಲ. ನಮಗೆ ಇದರ ಅರ್ಥವೇ ಆಗಿದ್ದಿಲ್ಲ. ನಾವಾಗ ಇನ್ನೂ ಚಿಕ್ಕವರು. ಏನೂ ತಿಳಿಯುತ್ತಿರಲಿಲ್ಲ. ಒಂದು ದಿನ ಮಧ್ಯಾಹ್ನ ಡೂಗಜ್ಜನು ಗರುಡ ದೇವರ ಗುಡಿಯಲ್ಲಿ, ಧೋತರವನ್ನು ತುಂಬ ಹೊದ್ದುಕೊಂಡು ಕುಳಿತಿದ್ದನು. ನಾವು ‘ಚಿಣಿ ಫಣಿ’ ಆಟವಾಡಲಿಕ್ಕೆ- ಅಂದು ಆದಿತ್ಯವಾರವಾದ್ದರಿಂದ- ಗುಡಿಗೆ ಹೋದೆವು. ಡೂಗಜ್ಜನನ್ನು ನೋಡಿ ಆಟವನ್ನು ಬಿಟ್ಟುಕೊಟ್ಟು, ಅವನ ಹತ್ತಿರ ಎಲ್ಲರೂ ಬಂದು ಕುಳಿತು, ಕತೆ ಹೇಳೆಂದು ಒತ್ತಾಯಪಡಿಸಿದೆವು. ಡೂಗಜ್ಜನು ಒಂದು ಕತೆ ಹೇಳಿ ಮುಗಿಸುವಷ್ಟರಲ್ಲಿ ನಾನು ಕೇಳಿದೆ: ‘ಡೂಗಜ್ಜ- ನೀನು ಗುಡಿಗೆ ಊಟಕ್ಕೇಕೆ ಬರುವದಿಲ್ಲ?’ ಎಂದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಡೂಗಜ್ಜನು ಒಂದು ದೀರ್ಘವಾದ ನಿಟ್ಟುಸಿರನ್ನು ಹಾಕಿ, ಕೆಳದನಿಯಲ್ಲಿಯೇ ಉತ್ತರಕೊಟ್ಟನು ‘ನನಗೆ ಶ್ರೀಗಳವರಿಂದ ಬಹಿಷ್ಕಾರವಿದೆ.’

ನನಗೆ ಇದರರ್ಥವು ತಿಳಿಯಲಿಲ್ಲ. ಮತ್ತೆ ಕೇಳಿದೆ: ‘ಬಹಿಷ್ಕಾರ ಅಂದರೆ?’

ಡೂಗಜ್ಜನ ಒಳಸೇರಿದ ಕಣ್ಣುಗಳು ನೀರುತುಂಬಿದುದರಿಂದ ಹೊಳೆಯತೊಡಗಿದವು. ಮೆಲ್ಲನೆ, ಏನೋ ನೆವಮಾಡಿ ಕಣ್ಣುಗಳನ್ನು ಒರಸಿಕೊಂಡು, ಉಸಿರನ್ನು ಮೇಲಕ್ಕೆಳೆದುಕೊಂಡು, ‘ಮಗೂ- ಏನೆಂದು ಹೇಳಲಿ? ನಾನು ಪಾಪಿ! ನನ್ನ ಪಾಪದ ಸೋಂಕು ಉಳಿದವರಿಗೆ ತಟ್ಟಬಾರದೆಂದು ಶ್ರೀಗಳವರು ನನ್ನನ್ನು ಸಮಾಜದಿಂದ ಹೊರಗಿಟ್ಟಿದ್ದಾರೆ. ಇದೇ ಬಹಿಷ್ಕಾರ…’ ಎಂದು ಉತ್ತರಕೊಟ್ಟು ಮೇಲಕ್ಕೆಳೆದುಕೊಂಡಿದ್ದ ಉಸಿರನ್ನು ಹೊರಕ್ಕೆ ಹಾಕಿದನು.

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ನನ್ನ ಕುತೂಹಲವು ಅವರ ನಿಟ್ಟುಸಿರುಗಳಿಂದ ಹೆಚ್ಚಾಗುತ್ತಾ ನಡೆಯಿತು. ‘ಏನೋ ಇದೆ. ಕೇಳಬೇಕು’ ಎಂಬ ಆಶೆಯು ಬಲಿಯುತ್ತಾ ಬಂದಿತು ಕೊನೆಗೆ ಕೇಳಿಯೇಬಿಟ್ಟೆ. ‘ಅದು ಯಾವ ಪಾಪ, ಡೂಗಜ್ಜ- ನೀನು ಮಾಡಿದ್ದು?’

ಡೂಗಜ್ಜನು ಕಣ್ಣುಗಳನ್ನು ತಿಕ್ಕುತ್ತಾ ಬೇಸರದ ದನಿಯಲ್ಲಿ ‘ಅಪ್ಪಾ, ನನ್ನ ಪಾಪದ ಕತೆ ದೊಡ್ಡದಿದೆ. ಅದರಿಂದೇನು ಪ್ರಯೋಜನ? ಹೇಳಬೇಕೆಂದರೆ ಹೇಳುತ್ತೇನೆ, -ನಿರ್ವಾಹವಿಲ್ಲ’ ಎಂದು ನಮ್ಮ ಶುದ್ಧ-ಮುಗ್ಧ ಕುತೂಹಲಕ್ಕೆ ಮರುಳಾಗಿ ಉತ್ತರಕೊಟ್ಟನು. ಎಲ್ಲ ಹುಡುಗರೂ ಒಂದೇ ದನಿಯಲ್ಲಿ ‘ಹೇಳು- ಹೇಳು’ ಎಂದು ಕೂಗಿದರು.

ಹೊದ್ದಿದ್ದ ಧೋತರವನ್ನು ತೆಗೆದು ಟೊಂಕಕ್ಕೆ ಸುತ್ತಿ, ಡೂಗಜ್ಜನು ಪ್ರಾರಂಭ ಮಾಡಿದನು.

ರಕ್ತಾಕ್ಷಿ ಸಂವತ್ಸರದ ಜ್ಯೇಷ್ಠ ಶುದ್ಧ ಪಂಚಮಿಯ ದಿವಸ ನಮ್ಮೂರ ಮಾಮ್ಲೇದಾರರ ತಾಯಿಯ ಶ್ರಾದ್ಧವನ್ನು ತೀರಿಸಿಕೊಂಡು, ರಾಯರ ಕೂಡ ಸ್ವಲ್ಪ ಹರಟೆಯನ್ನು ಹೊಡೆದು, ಮನೆಗೆ ತಿರುಗಿ ಬರಬೇಕಾದರೆ ರಾತ್ರಿಯಾಯಿತು. ಆಹ್ನಿಕವನ್ನು ತೀರಿಸಿಕೊಂಡು ಮಲಗಬೇಕಾದರೆ ಐದು ತಾಸು ರಾತ್ರಿಗೆ ಬಂತು. ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದೆ ಮಾತ್ರ; ಇನ್ನೂ ನಿದ್ರೆ ಹತ್ತಿರಲಿಲ್ಲ. ಆಗ ‘ಆಚಾರs ಆಚಾರss’ ಎಂದು ಹೊರಗೆ ಯಾರೋ ಕರೆದಂತಾಯಿತು. ಏಳಲಾರದೆ ಮಲಗಿದಲ್ಲಿಂದಲೇ ‘ಯಾರವರು? ಏನು ಕೆಲಸ?’ ಎಂದು ಕೇಳಿದೆ. ‘ನಾನ್ರಿ, ಬಸಪ್ಪ, ಮಾಮ್ಲೇದಾರ ಮನೀ ಆಳು. ಮಾಮ್ಲೇದಾರ್ ಸಾಹೇಬರು ನಿಮ್ಮನ್ನ ಈಗ ಕರಕೊಂಡು ಬಾ ಅಂತ ಹೇಳ್ಯಾರ್‍ರಿ’ ಎಂದು ಮಾಮ್ಲೇದಾರ ಮನೆಯ ಆಳು ಉತ್ತರಕೊಟ್ಟ. ಬಳಿಕ ಹೊಟ್ಟೆ ಭಾರವಾದದ್ದರಿಂದ ಸಾವಕಾಶವಾಗಿ ಹಾಸಿಗೆಯಿಂದ ಮೇಲಕ್ಕೆದ್ದು, ತಲೆಬಾಗಿಲಿಗೆ ಬಂದು ಮುಟ್ಟುತ್ತಿರುವಾಗಲೆ ‘ಯಾತಕ್ಕೋ ಬಸಪ್ಪಾ?’ ಎಂದು ಮತ್ತೊಂದು ಪ್ರಶ್ನೆ ಮಾಡಿದೆ. ಅದಕ್ಕೆ ‘ಯಾತಕೊ ಏನೋ ಗೊತ್ತಿಲ್ರಿ. ಗಡಾ ಕರಕೊಂಡು ಬಾ ಅಂತ ಈಟ ಹೇಳ್ಯಾರ್‍ರಿ’ ಎಂದು ಉತ್ತರಕೊಟ್ಟ. ‘ಏತಕ್ಕಿರಬಹುದು? ನಿನ್ನೆ ಇನ್ನೂ ಶ್ರಾದ್ದವಾಗಿದೆ. ಮತ್ತೇನಿರಬಹುದು? ದೊಡ್ಡವರ ಕೆಲಸ’ ಎಂದು ಮನಸಿನಲ್ಲಿ ಗೊಣಗುಟ್ಟುತ್ತ ಬಾಗಿಲು ತೆರೆದು, ಧೋತರವೊಂದನ್ನು ಹೊದ್ದುಕೊಂಡು, ಬಸಪ್ಪನ ಕೂಡ ಹೊರಟೆ. ಮನೆಯಲ್ಲಿ ಮಗಳೊಬ್ಬಳೆ ಇನ್ನೂ ಲಗ್ನವಾಗಿರಲಿಲ್ಲ. ನನ್ನ ಹೆಂಡತಿ ಸತ್ತು ಎರಡು ವರ್ಷಗಳ ಮೇಲಾಗಿತ್ತು. ಮಗಳಿಗೆ ‘ಗಟ್ಟಿಯಾಗಿ ಬಾಗಿಲು ಹಾಕಿಕೊಂಡು ಮಲಗು, ಜೋಕೆ. ಈಗ ಬರುತ್ತೇನೆ’ ಎಂದು ಎಚ್ಚರಿಕೆಯ ಪರಾಕನ್ನು ತಿರುತಿರುಗಿ ಹೇಳಿ ಮುಂದೆ ಸಾಗಿದೆ. ಬಸಪ್ಪ ಮುಂದೆ ಮುಂದೆ; ನಾನು ಅವನ ಹಿಂದೆ ಹಿಂದೆ. ಮಾಮ್ಲೇದಾರರ ಮನೆ ಮುಟ್ಟುವದಕ್ಕೆ ಸರಿಯಾಗಿ, ಮಾಮ್ಲೇದಾರರೇ ಅಂಗಿ ರುಮಾಲು ಹಾಕಿಕೊಂಡು ಹೊರ ಅಂಗಳದಲ್ಲಿ ಬಂದು ನಿಂತಿದ್ದರು. ನನ್ನನ್ನು ನೋಡಿದೊಡನೆ ‘ಓಹೋ, ಬಂದಿರಾ? ಬರ್‍ರಿ ಹೋಗೋಣ. ಬಸಪ್ಪಾ, ಕಂದೀಲು ತೆಗೆದುಕೊಂಡು ಮುಂದೆ ನಡೆ’ ಎಂದು, ಬಸಪ್ಪನು ಬರುವದರೊಳಗಾಗಿ ಅಂಗಳವನ್ನು ದಾಟಿ ಬೀದಿಗೆ ಬಂದರು. ಆಗ ಸುಮಾರು ಒಂದೂವರೆ-ಎರಡು ಗಂಟೆ ರಾತ್ರಿಯಾಗಿರಬಹುದು. ಮಂದವಾದ ಬೆಳದಿಂಗಳು ಬಿದ್ದಿತ್ತು. ದಾರಿ ಕಾಣದಷ್ಟು ಕತ್ತಲೇನು ಇದ್ದಿಲ್ಲ. ಆದರೆ ಮಾಮ್ಲೇದಾರರಿಗೆ ಮಾತ್ರ ಅಷ್ಟು ಬೆಳಕು ಸಾಲದು. ಅಂತಲೇ ಬಸಪ್ಪನಿಗೆ ಕಂದೀಲು ತರಹೇಳಿದರು. ಬಸಪ್ಪನು ಓಡುತ್ತಾ ಹೋಗಿ ಕಂದೀಲು ತೆಗೆದುಕೊಂಡು ಬಂದು ನಮ್ಮನ್ನು ಕೂಡಿದನು. ಆಹೊತ್ತು ಮಾಮ್ಲೇದಾರರು ನನ್ನ ಕೂಡ ವಿಶೇಷ ಮಾತಾಡಲೇ ಇಲ್ಲ. ಗಂಭೀರರಾಗಿ ಮುಂದೆ ಸಾಗಿದ್ದರು. ನನಗೆ ಯಾವುದಕ್ಕೂ ಧೈರ್ಯವಿದ್ದಿಲ್ಲ. ‘ಎಲ್ಲಿಗೆ?’ ಎಂದು ಕೇಳಿದರೆ ಅಪಶಕುನವಾಗಬಹುದೆಂದು, ಬಾಯ ತುದಿಯವರೆಗೆ ಒಂದಿದ್ದ ಆ ಪ್ರಶ್ನೆಯನ್ನು ಅದೆಷ್ಟೋ ಸಾಹಸದಿಂದ ಹತ್ತಿಕ್ಕಿ, ಪಿಟ್ಟೆಂದು ಮಾತಾಡದೆ, ಅವರ ಹಿಂದಿನಿಂದ ಸಾಗಿದ್ದೆ. ಆದರೆ ತಲೆಯಲ್ಲಿ ‘ಎಲ್ಲಿಗೆ? ಏತಕ್ಕೆ?’- ಈ ಎರಡು ಪ್ರಶ್ನೆಗಳು ಮಾತ್ರ ತಿರುಗುತ್ತಲೇ ಇದ್ದವು. ಇಪ್ಪತ್ತು ನಿಮಿಷದ ಹಾದಿಯನ್ನು ನಡೆದ ಮೇಲೆ, ಊರ ಹೊರಗಿನ ಒಂದು ಭವ್ಯವಾದ ಬಂಗ್ಲೆಯ ಎದುರಿಗೆ ಬಂದು ನಿಂತೆವು. ನಮ್ಮೂರಿಗೆ ಯಾವ ಸಾಹೇಬರೇ ಬರಲಿ, ಅವರು ಇಳಿದುಕೊಳ್ಳುವದು ಇದೇ ಬಂಗೈಯಲ್ಲಿ. ಸಾಹೇಬರಿಗೆ ಅನುಕೂಲವಾಗುವಂತಹ ಎಲ್ಲ ವ್ಯವಸ್ಥೆಯೂ ಅಲ್ಲಿ ಇರುವದು. ತಂತಿಯ ದೀಪಗಳು ಕೂಡ ಬಂದು ಒಂದು ವರ್ಷದ ಮೇಲಾಯಿತು. ಇಷ್ಟು ದಿನಗಳವರೆಗೆ ನಾನು ಆ ಬಂಗ್ಲೆಯನ್ನು ದೂರದಿಂದಲೇ ನೋಡಿದ್ದೆ. ಒಳಗೆ ಹೋಗಿ ನೋಡಿರಲಿಲ್ಲ. ಇಂದು ಮಾಮ್ಲೇದಾರರ ಪುಣ್ಯಯೋಗದಿಂದ ಎಲ್ಲವೂ ನೋಡಲಿಕ್ಕೆ ಸಿಕ್ಕಿತು.

ಇದನ್ನು ಓದಿದ್ದೀರಾ?: ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ರಾತ್ರಿಯ ಸಮಯ. ಚಂದ್ರನು ಅದೇ ಮುಳುಗುವದರಲ್ಲಿದ್ದಾನೆ. ಕತ್ತಲು ಕವಿಯುತ್ತಿದೆ. ಊರು ಬಿಟ್ಟು ಒಂದು ಮೈಲು ದೂರದಲ್ಲಿ ಯಾರ ನೆರವಿಲ್ಲದಲ್ಲಿ, ಒಂಟಿಯಾಗಿ ಈ ಬಂಗ್ಲೆಯು ನಿಂತುಕೊಂಡಿದೆ. ಒಳಗೆಲ್ಲ ತಂತಿಯ ದೀಪಗಳು ಒಂದೇ ಸವನೆ ಉರಿಯುತ್ತಿವೆ. ನಿಶ್ಯಬ್ದ! ಹೊರಗೆ ಐದಾರು ಜನರು ಓಡಾಡುತ್ತಿದ್ದರೂ, ಸಿನೇಮಾದಲ್ಲಿಯ ಮೂಕ ಗೊಂಬೆಗಳಂತೆ ಒಬ್ಬರನ್ನೊಬ್ಬರು ಪಿಳಿ ಪಿಳಿ ನೋಡುತ್ತಾ, ಮಾತನಾಡಿಸದೆ ಹಾಗೇ ತಿರುಗಾಡುತ್ತಿದ್ದುದರಿಂದ, ಅಲ್ಲಿಯ ನಿಶ್ಯಬ್ದತೆಯ ಗಂಭೀರಭಾವವು ಮತ್ತಿಷ್ಟು ಹೆಚ್ಚುತ್ತಿದ್ದಿತು. ಇದನ್ನೆಲ್ಲ ನೋಡಿ ನನಗೆ ಭಯವಾಯಿತು. ಮೈ ಜುಮ್ಮೆಂದಿತು. ಒಳಗಿನ ಜೀವ ‘ಅಯ್ಯೋ?’ ಎಂದು ನಡುಗಿತು. ‘ಮಾಮ್ಲೇದಾರರು ನನ್ನನ್ನೇಕೆ ಇಲ್ಲಿಗೆ ಈಗ ಕರೆದುಕೊಂಡು ಬಂದರು?’ ಇದನ್ನು ಕೇಳಿ ಬಿಡಬೇಕೆಂದರೆ ಏನೆನ್ನುವರೋ ಎಂಬ ಭಯ. ಕೇಳದೆ ಬಿಟ್ಟರೆ ಒಳಗಿನ ದುಗುಡ ಕಡಿಮೆಯಾಗಲೊಲ್ಲದು. ನನ್ನ ಬುದ್ಧಿಗೆ ಯಾವುದೂ ತೋಚಲಿಲ್ಲ. ಸುಮ್ಮನೆ ರಾಯರ ಬೆನ್ನು ಹಿಡಿದು ಸಾಗಿದೆ. ಮೊದಲು ಒಂದು ಚಿಕ್ಕ ಗೇಟು. ಅದರೊಳಗಿಂದ ಹಾಯ್ದು ಮುಂದೆ ಹೋದರೆ ಒಂದು ಕಲ್ಲಿನ ಮಂಟಪ. ಬಂಗ್ಲೆಯೊಳಕ್ಕೆ ಹೋಗಬೇಕಾದರೆ ಈ ಕಲ್ಲಿನ ಮಂಟಪದೊಳಗಿಂದ ಹಾಯ್ದು ಹೋಗಲೇಬೇಕು. ಈ ಮಂಟಪದಲ್ಲಿ ನಾಲೈದು ಜನರು ನಿಂತುಕೊಂಡಿದ್ದರು. ನಮ್ಮನ್ನು ನೋಡಿದೊಡನೆ- ಆದರದಿಂದ- ಅವರೊಳಗಿನವನೊಬ್ಬನು ಮುಂದೆ ಬಂದು ಸಲಾಂ ಹೊಡೆದು, ಹೀಗೆ ಬರಬೇಕೆಂದು ಕೈತೋರಿಸಿದನು. ಅವನು ತೋರಿಸಿದ ದಿಕ್ಕು ಹಿಡಿದು ರಾಯರು ಮುಂದೆ ನಡೆದರು. ಅವರ ಹಿಂದೆ ಹಿಂದೆ ನಾನು ನಡೆದೆನು. ಎಡಕ್ಕಿರುವ ಕೊಠಡಿಯೊಳಗಿಂದ ಹಾಯ್ದು, ಒಳಬಾಗಿಲಿನಿಂದಲೇ ಮೊಗಸಾಲೆಯನ್ನು ಪ್ರವೇಶಿಸಿದೆವು. ಬಿಳಿಯ ಸುಣ್ಣ ಹಚ್ಚಿದ ಎತ್ತರವಾದ ಗೋಡೆಗಳು. ಕಬ್ಬಿಣದ ಕಂಬಿಗಳ ತೊಲೆಯ ಮೇಲೆ, ಶಾಬಾದವಾಡಿಯ ಕಲ್ಲುಗಳನ್ನು ಜೋಡಿಸಿ, ಅವಕ್ಕೂ ಸುಣ್ಣವನ್ನು ಹಚ್ಚಿದ್ದರು. ಕಿಟಕಿಗಳ ಬಾಗಿಲುಗಳಿಗೂ, ಅವುಗಳ ಕಬ್ಬಿಣದ ಬಾರುಗಳಿಗೂ ಕೂಡಿಯೇ ಬಿಳಿಯ ವಾರ್ನಿಸು ಬಳೆಯಿಸಿದ್ದರು. ಮಧ್ಯದಲ್ಲಿ ಒಂದು ದೊಡ್ಡ ತಂತಿಯ ದೀಪವು ನೇತಾಡುತ್ತಿದ್ದಿತು. ಅದೂ ಬಿಳಿಯದೇ. ಅಲ್ಲಿಯೇ ಒಂದು ಮೂಲೆಯಲ್ಲಿ ಬುರುಕೆಯನ್ನು ಹಾಕಿಕೊಂಡು ಕುಳಿತ ಪಲ್ಲಂಗವು ಕೂಡ ಬಿಳಿಯದೇ. ಆ ಪಲ್ಲಂಗದ ಬಳಿಯಲ್ಲಿ ನಿಂತಿದ್ದ ವ್ಯಕ್ತಿಯು ಕೂಡ ಆಪಾದಮಸ್ತಕ ಬಿಳಿಯುಡುಪನ್ನೇ ಧರಿಸಿದ್ದನು. ಎತ್ತ ನೋಡಿದರೂ ಬೆಳ್ಳಗೆ. ಈ ಬಿಳಿ ಬೆಳಕಿಗಾಗಿ ನನ್ನ ತಲೆ ಚಿಟ್ಟು ಹಿಡಿದುಹೋಯಿತು. ನಮ್ಮನ್ನು ಕರೆದು ತಂದಿದ್ದ ಆಳು, ನಾವು ಮೊಗಸಾಲೆಯನ್ನು ಪ್ರವೇಶಿಸಿದೊಡನೆಯೆ ಹೊರಟು ಹೋದನು. ಅಲ್ಲಿ ಮೊದಲು ಆ ಬಿಳಿಯುಡುಪಿನ ವ್ಯಕ್ತಿಯೊಂದನ್ನು ಬಿಟ್ಟು ನನಗೆ ಯಾರೂ ಕಾಣಲಿಲ್ಲ. ಸುತ್ತೆಲ್ಲ ನೋಡಿದೆ. ಏನೂ ತಿಳಿಯಲಿಲ್ಲ. ಮಾಮ್ಲೇದಾರರು ಮುಂದೆ ಹೋಗಿ, ತನಗಾಗಿರಿಸಿದ್ದ ಕುರ್ಚಿಯ ಮೇಲೆ ಕುಳಿತುಕೊಂಡು, ತಮ್ಮ ಮಗ್ಗುಲಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ನನಗೆ ಸನ್ನೆ ಮಾಡಿದರು. ಅಲ್ಲಿಂದ ನಾನು ಹೋಗಿ, ಅವರ ಹತ್ತಿರ ಅಂಜುತ್ತಂಜುತ್ತ ಕುಳಿತುಕೊಂಡೆ. ಒಂದು ಕ್ಷಣಕಾಲ ಗತಿಸಿತು. ಬಳಿಕ ಬಿಳಿಯುಡುಪಿನ ವ್ಯಕ್ತಿಯು ಪಲ್ಲಂಗದ ಬುರುಕೆಯನ್ನು ನಸುವೆ ಸರಿಸಿದನು. ಪಲ್ಲಂಗದ ಮೇಲೆ ಸಾಹೇಬರ ಉಡುಪಿನಲ್ಲಿ ಒಂದು ವ್ಯಕ್ತಿಯು ಮಲಗಿ, ಅರೆಗಣ್ಣು ಮುಚ್ಚಿದುದನ್ನು ಅಸ್ಪಷ್ಟವಾಗಿ ಕಂಡೆನು. ಬಿಳಿಯುಡುಪಿನ ವ್ಯಕ್ತಿಯು ಬುರುಕೆಯೊಳಕ್ಕೆ ತನ್ನ ಗೋಣು ಚಾಚಿ, ಮಲಗಿದ ವ್ಯಕ್ತಿಯ ಕಿವಿಯಲ್ಲಿ ಏನನ್ನೋ ಹೇಳಿ, ಮತ್ತೆ ಮೊದಲಿನಂತೆ ಸ್ತಬ್ಧವಾಗಿ ನಿಂತುಕೊಂಡನು. ಇನ್ನೂ ಒಂದು ಕ್ಷಣ ಓಡಿತು. ಮಲಗಿದ ವ್ಯಕ್ತಿಯು ಮೆಲ್ಲನೆ ಪಲ್ಲಂಗದ ಬುರುಕೆಯನ್ನು ತನ್ನ ಎಡಗೈಯಿಂದ ಸರಿಸಿ, ನಮ್ಮನ್ನು ದಿಟ್ಟಿಸಿ ನೋಡಿ, ದಿಗ್ಗನೆ ಎದ್ದು ಪಲ್ಲಂಗದಿಂದ ಕೆಳಕ್ಕೆ ಹಾರಿ ಬಂದು ನನ್ನ ಪಾದಗಳನ್ನು ಗಟ್ಟಿಯಾಗಿ ಹಿಡಿದನು. ಇದನ್ನೆಲ್ಲ ನೋಡಿ ಮೊದಲಿನಿಂದಲೂ ಗಾಬರಿಗೊಂಡಿದ್ದ ನನ್ನ ಅವಸ್ಥೆಯನ್ನು ಏನು ಹೇಳಲಿ! ಕೈಕಾಲುಗಳು ಥರಗುಟ್ಟಿ ನಡಗುತಿದ್ದವು. ಮೈಯೆಲ್ಲಾ ಬೆವರೊಡೆಯಿತು. ನಾಲಗೆ ಒಣಗಿ ಹೋಯಿತು. ಮಾತೇ ಹೊರಡಲಿಲ್ಲ. ಒಮ್ಮೆ ರಾಯರ ಕಡೆಗೆ, ಮತ್ತೊಮ್ಮೆ ಕಾಲುಗಳನ್ನು ಹಿಡಿದಾತನ ಕಡೆಗೆ ಹುಚ್ಚು ತುಂಬಿದ ಕಣ್ಣುಗಳಿಂದ ನೋಡಿದೆ. ಅವರೂ ನನ್ನ ಹಾಗೆಯೇ ದಂಗುಬಡಿದು ಕುಳಿತಿದ್ದರು. ಇದನ್ನು ನೋಡಿ ಬಿಳಿಯುಡುಪಿನ ವ್ಯಕ್ತಿಯು ಮುಂದೆ ಬಂದು, ಆತನನ್ನು ಎತ್ತಿ ಮತ್ತೆ ಪಲ್ಲಂಗದ ಮೇಲೆ ಕುಳ್ಳಿರಿಸಿದನು. ಇದೇ ಸಂಧಿಯನ್ನು ಸಾಧಿಸಿ ಓಡಿ ಹೋಗಬೇಕೆಂದೆನಿಸಿತು. ಆದರೆ ರಾಯರ ಮುಖ ನೋಡಿ ಭಯಗೊಂಡು, ಆದದ್ದಾಗಲಿಯೆಂದು ಸುಮ್ಮನೆ ಕುಳಿತೆ. ಅಲ್ಲಿಂದ ಆ ಸಾಹೇಬನು ಬಿಳಿಯುಡುಪಿನ ವ್ಯಕ್ತಿಯನ್ನು ಕರೆದು, ಕಿವಿಯಲ್ಲಿ ಏನೋ ಹೇಳಿ, ನಮ್ಮ ಕಡೆಗೆ ಒಂದೇ ಸಮನೆ ನೋಡತೊಡಗಿದನು. ನಾನು ಮತ್ತೆ ಗಾಬರಿಯಾದೆ. ‘ಗಾಬರಿಯಾಗಬೇಡಿರಿ’ ಎಂದು ಸಾಹೇಬನು ನನ್ನ ಹುಚ್ಚಿಟ್ಟ ಮುಖವನ್ನು ನೋಡಿ ನುಡಿದನು. ಬಿಳಿಯುಡುಪಿನವನಿಗೆ ನನ್ನ ಈ ಸ್ಥಿತಿಯನ್ನು ನೋಡಿ, ಕನಿಕರವೋ-ತಿರಸ್ಕಾರವೋ ನನಗೆ ಗೊತ್ತಾಗಲಿಲ್ಲ. ಸಾಹೇಬನನ್ನು ನೋಡಿ ಒಂದು ತೆರದ ತೃಪ್ತಿಯ ಮುಗುಳ್ನಗೆಯನ್ನು ನಗುವನು. ನನ್ನನ್ನು ನೋಡಿ ಹೆಮ್ಮೆಯ ಒಂದು ಗಂಭೀರಭಾವವನ್ನು ಮುಖದ ಮೇಲೆ ತೋರಿಸುವನು. ಒಮ್ಮೊಮ್ಮೆ ಒಳಗೊಳಗೇ ನಗುವನು. ಇದರ ಅರ್ಥವೇನೂ ನನಗೆ ಗೊತ್ತಾಗಲಿಲ್ಲ. ದೊಡ್ಡವರ ಸಹವಾಸ- ಎಂದುಕೊಂಡು ಸುಮ್ಮನೆ ಕುಳಿತುಕೊಂಡೆ. ರಾಯರು ಮಾತ್ರ ಸ್ವಲ್ಪ ಮುಖವನ್ನು ತಗ್ಗಿಸಿದರು. ಸಾಹೇಬರು ಕಂಡು ಕಾಣದವರಂತೆ ನಮ್ಮೆಲ್ಲರನ್ನೂ ನೋಡಿ, ಮುಖದ ಮೇಲೆ ಯಾವ ಭಾವವನ್ನೂ ತೋರಿಸದೆ ಶಾಂತರಾಗಿ ಮಾತಾಡಲಿಕ್ಕೆ ಪ್ರಾರಂಭ ಮಾಡಿದರು:

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

‘ಆಚಾರ್ಯರೆ, ಪಾದ್ರಿಯವರೆ, ಗಾಬರಿಯಾಗಬೇಡಿರಿ. ನನ್ನಿಂದ ಈಗ ಹೊರಡುವ ಮಾತುಗಳು ನಿಮ್ಮನ್ನು ನೋಯಿಸಬಹುದು. ಆದರೆ ಮಾಡುವದೇನು? ಸತ್ಯವು ಕಠೋರವಾಗಿದ್ದರೂ ಅದನ್ನು ನುಡಿಯುವ ವೇಳೆಯು ನನ್ನ ಪಾಲಿಗೆ ಬಂದಿದೆ. ದಯೆಯಿಟ್ಟು ನೀವಿಬ್ಬರೂ ನನ್ನನ್ನು ಮನ್ನಿಸಬೇಕು. ನನ್ನನ್ನೀಗ ಶಂಕಿಸಬೇಡಿರಿ. ನಾನೀಗ ಮರಣಶಯ್ಯೆಯ ಮೇಲಿದ್ದೇನೆ. ಉಸಿರುಸಿರೂ, ಅಕ್ಷರಕ್ಷರವೂ, ಪಾಶ್ಚಾತ್ತಾಪದಿಂದ ಪರಿತಪ್ತವಾದ ಹೃದಯಾಗ್ನಿ ಕುಂಡದೊಳಗಿಂದ ಹಾಯ್ದು ಬರುತ್ತಿವೆಯೆಂದು ಭಾವಿಸಬೇಕು. ಯಾವ ಮಾತನ್ನೂ ಮರೆಮಾಚದೆ ಹೇಳುತ್ತೇನೆ, ಕೇಳಬೇಕು. ‘ಮಾಡಿದ ಪಾಪವನ್ನು ಆಡಿ ಕಳೆದುಕೊಳ್ಳಬೇಕೆಂಬುದನ್ನು ಸಾವಿನ ಸವಿಯನ್ನರಿತ ಸತ್ಯವಂತರು ಹೇಳುವರು. ಆ ಸತ್ಯವಂತರ ಸತ್ಯವನ್ನು ಸ್ಮರಿಸಿ, ನಾನೀಗ ಹೇಳುತ್ತೇನೆ. ನನ್ನ ಅವಸಾನ ಕಾಲವು ಸಮೀಪಿಸಿದ್ದರಿಂದ ಎಲ್ಲವನ್ನೂ ಹೇಳಲಿಕ್ಕಾಗುತ್ತದೆಯೋ ಇಲ್ಲವೊ, ನಾನು ಹೇಳಲಾರೆ. ಮೊದಲು ಯಾವುದು- ಕೊನೆಯಾವುದು ಎಂಬುದರ ಅರಿವು ಕೂಡಾ ನನಗೆ ಉಳಿಯಲಿಕ್ಕಿಲ್ಲ. ಎದೆ ನೋವು ಇನ್ನೂ ಹೆಚ್ಚುತ್ತಲೇ ಇದೆ. ಆದ್ದರಿಂದ ಸಾವಧಾನದಿಂದ ಕೇಳಬೇಕೆಂದು ನಾನು ಮೊದಲು ತಮ್ಮನ್ನು ಪ್ರಾರ್ಥಿಸುತ್ತೇನೆ.

”ನಾನು ಮೊದಲು ಬ್ರಾಹ್ಮಣನು. ವೈಷ್ಣವ ಮತದವನು. ತಂದೆ ತಾಯಿಗಳಿಬ್ಬರೂ ನಾನು ಚಿಕ್ಕವನಿರುವಾಗಲೇ ತೀರಿಕೊಂಡರು. ಅನಾಥನಾದ ನಾನು ಅಂದಿನಿಂದಲೇ ನಮ್ಮ ಸಮಾಜಕ್ಕೆ ಭಾರವಾದೆ. ಆದರೆ ನನ್ನ ಪುಣ್ಯಾಂಶವು ಇನ್ನೂ ತೀರಿದ್ದಿಲ್ಲವೆಂದೇ ಸೋದರಮಾವನ ಮನೆಯಲ್ಲಿದ್ದುಕೊಂಡು, ಕನ್ನಡ ಅಭ್ಯಾಸ ಮುಗಿಸಿದೆ. ಅಷ್ಟೊತ್ತಿಗೆ ಸೋದರ ಮಾವನೂ ತೀರಿಕೊಂಡನು. ಅಲ್ಲಿಂದ ನನ್ನ ಜೀವನಕ್ರಮವೇ ಬೇರೆಯಾಯಿತು ಮೊದಲಿನಿಂದಲೂ ದೇವರಲ್ಲಿ ವಿಶ್ವಾಸವುಳ್ಳವನು. ಆದರೆ ಹೊಟ್ಟೆಗಾಗಿ ನಾನು ಹೋರಾಡಬೇಕಾದ್ದರಿಂದ ದೇವರನ್ನು ಕೆಲವು ಕಾಲ ಮರೆತೆ. ಆದರೆ ದ್ವೇಷಿಸಲಿಲ್ಲ. ಮನೆಮನೆಗೆ ಅಂಡಲೆದು ನನ್ನ ಜೀವನವು ಬೇಸರಗೊಂಡಿತು. ಆಶೆ ನಿರಾಶೆಗಳ ಹೊಯ್ದಾಟ ನನ್ನಲ್ಲಿ ಹೆಚ್ಚು. ನನಗೆ ಹೊಟ್ಟೆಗಿಲ್ಲದಿದ್ದರೂ ಆಗ ನನಗೆ ಸಾಯಬೇಕೆಂಬ ಕಲ್ಪನೆಯು ಬಂದಿರಲಿಲ್ಲ. ‘ಇನ್ನೂ ಬಾಳಬೇಕು. ಕಲಿಯಬೇಕು. ಮುಂದಾಗಬೇಕು’ ಇವೇ ನನ್ನನ್ನು ಇಲ್ಲಿಯವರೆಗೆ ತಂದು ಮುಟ್ಟಿಸಿದವು. ವಾರ ಹಚ್ಚಿಕೊಂಡು ಇಂಗ್ಲಿಷ್ ಏಳು ಈಯತ್ತೆಗಳನ್ನು ಮುಗಿಸಿದೆ. ಇದೇ ರೀತಿಯಾಗಿ ಭಿಕ್ಷೆ ಬೇಡಿ ಕಾಲೇಜಿಗೆ ಹೋಗಿ, ಬಿ.ಎ. ಕೂಡಾ ಪಾಸಾದೆ. ನನ್ನ ಪುಣ್ಯದ ಫಲವು ಇಲ್ಲಿಗೆ ತೀರಿದಂತಾಯಿತು. ದುರ್ದೈವಕ್ಕೆ ಅದೇ ವರ್ಷ ಮದುವೆಯಾಯಿತು. ಬಿ.ಎ. ಆಗಿದ್ದೇನೆ, ಎಲ್ಲಿಯಾದರೂ ಸುಖವಾಗಿರಬಹುದೆಂದು ತಿಳಿದುಕೊಂಡಿದ್ದೆ. ಆದರೆ ನನಗಿಂತಲೂ ನನ್ನ ದೈವ ಮುಂದೋಡಿ ಬಂದು ಕುಳಿತಿತ್ತು. ಅಲ್ಲಿ ಹುಡುಕು ಇಲ್ಲಿ ಹುಡುಕು- ಎನ್ನುವದರೊಳಗಾಗಿ ಮೂರು ವರ್ಷಗಳು ದಾಟಿದವು. ನೌಕರಿ ಸಿಗಲಿಲ್ಲ. ‘ಬಡತನಕ್ಕೆ ಶನಿಯ ಕಾಟ’ ಎಂಬುವಂತೆ ಒಂದು ಗಂಡು ಕೂಸು ಹುಟ್ಟಿತು. ಇಬ್ಬರಿದ್ದವರು ಮೂವರಾದೆವು. ‘ಹೊಟ್ಟೆಯ ಗತಿ ಏನು?’ ಎಂದು ಬಹಳ ವಿಚಾರ ಮಾಡಿದೆ. ಯಾವುದೂ ಬಗೆಹರಿಯಲಿಲ್ಲ. ಹೋದ ಹೋದಲ್ಲಿ ‘ನಿಮ್ಮದು ಯಾವ ಜಾತಿ?’ ಎಂದು ಕೇಳಿ ಬ್ರಾಹ್ಮಣನೆಂದೊಡನೆ ನಿರ್ದಾಕ್ಷಿಣ್ಯವಾಗಿ ಹಿಂದೂಡಿದರು. ‘ಅಯ್ಯೋ! ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ತಪ್ಪಾಯಿತೇ? ಎಂದು ಬಹಳ ಕಸವಿಸಿ ಪಟ್ಟೆ. ಆದರೇನು ಪ್ರಯೋಜನ? ಕಸವಿಸಿಯನ್ನು ಯಾರು ಕೇಳುವವರು! ಹಡೆದ ಮಕ್ಕಳಿಗೆ ಕೂಡಾ ದುಡಿಸಿಕೊಂಡು ಹೊಟ್ಟೆಗೆ ಹಾಕದ ನಮ್ಮ ಸಮಾಜವನ್ನು ಅದೆಷ್ಟೋ ಹಳಿದೆ ಮನದಲ್ಲಿ. ಕುತ್ತಿಗೆಯನ್ನು ಹಿಸುಕಿ ಅರೆಜೀವ ಮಾಡುವ ಬಡತನದ ಭಯಂಕರ ಭೂತಕ್ಕೆ ಅಂಜಿ ನಡುಗಿದೆ. ಕಣ್ಣುಗಳು ತಾನಾಗಿಯೇ ಮುಚ್ಚಿಕೊಂಡವು. ಆಗ, ಹೊಟ್ಟೆಗಿಲ್ಲದೆ ಬೆಂದು ಬಾಡಿದ ನನ್ನ ಹೆಂಡತಿಯ ಮುಖದ ಚಿತ್ರ, ಅವಳ ಎದೆಯ ಹಾಲು ಬಾರದ್ದಕ್ಕೆ ಆಕ್ರೋಶ ಮಾಡುವ ಆ ಕಂದನ ಕರಳು ಕಿವುಚುವ ಚಿತ್ರ, ಅಯ್ಯೋ! ಇಷ್ಟು ಕಲಿತೂ, ಇವರ ಹೊಟ್ಟೆಗೆ ಹಾಕಲಿಕ್ಕೆ ನನ್ನಲ್ಲಿ ಶಕ್ತಿ ಇಲ್ಲವಲ್ಲ! ಎಂದು ಕಳವಳಗೊಂಡು, ಮುಂಗಾಣದೆ ತಲೆಗೆ ಕೈ ಹಚ್ಚಿಕೊಂಡು ಕುಳಿತ ನನ್ನ ಚಿತ್ರ, ಈ ಮೂರೂ ಚಿತ್ರಗಳು ನನ್ನ ಮುಚ್ಚಿದ ಕಣ್ಣುಗಳೆದುರಿಗೆ ಬಂದು ನಿಂತವು. ನಿರ್ವಿಣ್ಣರಾದ ನನ್ನ ಹೆಂಡತಿ ಮಕ್ಕಳ ಎದೆಯ ಮೇಲೆ ಸಮಾಜದ ಸೈತಾನವು ಪ್ರಳಯ ತಾಂಡವವನ್ನಾಡುತ್ತಿರುವಂತೆ ನನಗೆ ಭಾಸವಾಯಿತು. ಚಿಟ್ಟನೆ ಚೀರಿ ಕಣ್ಣು ತೆರೆದೆ. ಮೈಮೇಲಿನ ಕೂದಲು ನೆಟ್ಟಗಾಗಿದ್ದವು. ನಡಗುವದು ಇನ್ನೂ ಕಡಿಮೆಯಾಗಿರಲಿಲ್ಲ. ಮನಸು ಕಲಮಲವಾಗಿತ್ತು. ನನ್ನ ಈ ಸಂಕಟವು ಪರರಿಗೆ ತಿಳಿಯಲಿಲ್ಲ. ಇಷ್ಟಾದರೂ ಇನ್ನೂ ಬದುಕಬೇಕೆಂಬ ಆಶೆ ಬಿಟ್ಟಿರಲಿಲ್ಲ. ಕೂಲಿ ಮಾಡಿಯಾದರೂ ಹೊಟ್ಟೆ ಹೊರಕೊಳ್ಳಬೇಕೆಂದರೆ ದೇಹವನ್ನೆಲ್ಲಾ ತಲೆಗೂ-ಬಡತನಕ್ಕೂ ಹಂಚಿಕೊಟ್ಟ ನನ್ನಂತಹನಿಗೆ ಸಾಧ್ಯವೆ? ಇಲ್ಲ. ಭಿಕ್ಷೆ ಬೇಡಿಯಾದರೂ ನೋಡಬೇಕೆಂದು ಹದಿನೈದು ದಿವಸಗಳವರೆಗೆ ಭಿಕ್ಷೆ ಬೇಡುವದರೊಳಗಾಗಿ ಹಾಕುವವರೇ ಸಿಗದಂತಾದರು. ಬಹಳ ಸಂಕಟವಾಯಿತು. ಮಾಡುವದೇನು? ಇತ್ತ ಸಮಾಜವೂ ಕೈಬಿಟ್ಟಿತು. ಅತ್ತ ಧರ್ಮವೂ ಕೈಬಿಟ್ಟಿತು. ಅಂದಿನಿಂದ ಮಾತ್ರ ನನ್ನ ವಿಚಾರದಲ್ಲಿ ಸ್ವಲ್ಪ ಬದಲಾವಣೆಯಾಯಿತು. ‘ನಿನ್ನಿಂದ ನನಗೆ ಏನೂ ಅವಶ್ಯವಿಲ್ಲ. ನಿನಗೆ ನಾನು ಅನ್ನವನ್ನು ಕೊಡಲಾರೆ’ ಎಂದು ಜಗತ್ತು ನನಗೆ ಸಾರಿ ಸಾರಿ ಹೇಳಿದಂತಾಯಿತು. ಜಗತ್ತಿನಲ್ಲಿ ನನಗೆ ಸ್ಥಾನವಿಲ್ಲವೆಂದು ತಿಳಿದ ಮೇಲೆ ನಾನು ಮಾಡುವದೇನು? ಜಗತ್ತು ಬಿಟ್ಟು ಹೋಗುವದು. ಒಂದು ರಾತ್ರಿ, ಹೆಂಡತಿ-ಮಗು ಇವರನ್ನು ಬಿಟ್ಟು ಸಾವನ್ನರಸಬೇಕೆಂದು ಹೊರಬಿದ್ದೆ. ಉಟ್ಟ ಧೋತರವೊಂದನ್ನು ಬಿಟ್ಟು, ಮೈಮೇಲೆ ಮತ್ತೇನೂ ಇರಲಿಲ್ಲ. ಎಲ್ಲಿಯಾದರೂ ಮಲಗುವದು, ನೀರು ಕುಡಿಯುವದು, ಮತ್ತೆ ಮುಂದೆ ಸಾಗುವದು. ಹೀಗೆ ಒಂದು ದಿನವಾಯಿತು. ಎರಡು ದಿನವಾಯಿತು. ಮೂರು ದಿನವಾಯಿತು. ಸಾವು ಸಿಗಲಿಲ್ಲ. ಮೂರನೆಯ ದಿವಸ ಸಂಜೆಗೆ ಒಂದು ಹಳ್ಳಿಗೆ ಬಂದೆ. ಅಂದು ಆದಿತ್ಯವಾರ. ಆ ಊರಲ್ಲಿ ಜನರ ಗದ್ದಲ ಹೆಚ್ಚಾಗಿದ್ದಿತು. ಸಂತೆ ಇರಬಹುದೆಂದು ಮೊದಲು ನನ್ನ ತಿಳಿವಳಿಕೆಯಾಯಿತು. ಆದರೆ ಮುಂದೆ ಅರ್ಧತಾಸಿನ ಮೇಲೆ ಈ ಪಾದ್ರಿಗಳ ಭೆಟ್ಟಿಯಾಯಿತು. ಇವರೇ ನನ್ನನ್ನು ಮೊದಲು ಮಾತನಾಡಿಸಿದರು. ‘ನಿಮ್ಮದು ಯಾವೂರು?’ ಎಂದು. ಅದಕ್ಕೆ ನಾನು ಉತ್ತರ ಕೊಡದೆ ‘ಇಂದು ಈ ಊರ ಸಂತೆಯೇ?’ ಎಂದು ಕೇಳಿದೆ. ‘ಅಲ್ಲ! ಇಂದು ಆದಿತ್ಯವಾರ. ಚರ್ಚಿಗೆ ಜನರು ಬಂದಿದ್ದಾರೆ. ನಿಮ್ಮದು ಯಾವೂರು?’ ಎಂದು ಮತ್ತೆ ಕೇಳಿದರು. ನಾನು ಯಾವುದೋ ಒಂದು ಸುಳ್ಳು ಊರನ್ನು ಹೇಳಿ, ಅವರನ್ನು ಮೋಸ ಮಾಡಿದೆ. ಅಲ್ಲಿಂದ ಪಾದ್ರಿಗಳು- ‘ನೀವು ಎಲ್ಲಿಗೆ ಹೊರಟಿದ್ದೀರಿ? ಏತಕ್ಕಾಗಿ ಹೊರಟಿದ್ದೀರಿ? ಮೈಮೇಲೆ ಬಟ್ಟೆ ಬರೆಗಳೇಕೆ ಇಲ್ಲ? ನೋಡಿದರೆ ಓದಿಕೊಂಡವರಂತೆ ಕಾಣುತ್ತೀರಿ. ನಿಮಗೆ ಆಪ್ತರು ಯಾರೂ ಇಲ್ಲವೆ? ನಾನು ನಿಮ್ಮ ಒಂಧುವೆಂದು ತಿಳಿದು, ನನ್ನೆದುರಿಗೆ ನೀವು ಎಲ್ಲವನ್ನೂ ಹೇಳಬೇಕು. ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ’ ಎಂದು ನನಗೆ ಗಂಟೇ ಬಿದ್ದರು. ನಾನೂ ತುಣು ತುಣುಕಾಗಿ ನನ್ನ ಕತೆಯನ್ನು ಅವರಿಗೆ ತಿಳಿಸಿದೆ. ಅವರು ಅದರ ಸೂಕ್ಷ್ಮವನ್ನರಿತು ‘ನೀವು ಕ್ರಿಶ್ಚನ್ನರಾಗುವಿರಾ?’ ಎಂದು ಪರ್ಯಾಯದಿಂದ ಕೇಳಿದರು. ಅದಕ್ಕೆ ನಾನೂ ಪರ್ಯಾಯದಿಂದ ‘ನಾಳೆ ನಿಮಗೆ ತಿಳಿಸುತ್ತೇನೆ’ ಎಂದು ಉತ್ತರ ಕೊಟ್ಟು, ಅವರು ತಮ್ಮೊಡನೆ ಬರಲು ಅದೆಷ್ಟು ಆಗ್ರಹಪಡಿಸಿದರೂ, ಅವರ ಮನಸ್ಸನ್ನು ಮುರಿದು, ಆ ಊರಲ್ಲಿಯ ಧರ್ಮಶಾಲೆಯಲ್ಲಿ ಬಂದು ಒಬ್ಬನೇ ಮಲಗಿಕೊಂಡೆ. ನಿದ್ರೆ ಹತ್ರಲಿಲ್ಲ. ಭೀಕರ ಚಿತ್ರಗಳು ಮನಸಿನಲ್ಲಿ ಮೂಡತೊಡಗಿದವು. ಜೀವವು, ನೀರಿನಲ್ಲಿ ಮುಳುಗಿದವನು ಉಸಿರಾಡಿಸಲಿಕ್ಕೆ ಅವಕಾಶವಿಲ್ಲದೆ, ಕಕ್ಕಸಬಡುವಂತೆ, ಅನಿರ್ಣಯದ ಮುಸುಕಿನಲ್ಲಿ ಸಿಕ್ಕು ಕಕ್ಕಸಬಡುತ್ತಿತ್ತು. ಧರ್ಮವಾತ್ಸಲ್ಯವೊಂದು ಕಡೆಯಾದರೆ ಹೊಟ್ಟೆಯ ಎಳೆತ ಮತ್ತೊಂದು ಕಡೆ. ನನ್ನ ತರ್ಕಶುದ್ಧವಾದ ಅಂತಃಕರಣವು ನಮ್ಮ ಸಮಾಜದ ಅವನತಿಯನ್ನು ಕಂಡು ಕಲಮಲಗೊಂಡರೂ, ಆ ಸಮಾಜವನ್ನು ಎತ್ತಿ ಹಿಡಿಯಲು ಶಕ್ತಿಯಿಲ್ಲದೆ ಕುಸಿಬಿದ್ದಿತು. ಅಯ್ಯೋ ಬ್ರಾಹ್ಮಣ್ಯವೇ! ‘ವೈಶ್ಯ ಕರ್ಮ ಮಾಡಿಯೂ ಅದೆಷ್ಟು ಜನ ಬ್ರಾಹ್ಮಣರಾಗಿ ಉಳಿದಿಲ್ಲ. ಶೂದ್ರರಂತೆ ಆಚರಿಸಿದರೂ ಅವರು ಬ್ರಾಹ್ಮಣರಾಗಿಯೇ ಉಳಿದಿದ್ದಾರೆ. ಕೇವಲ ಹೊಟ್ಟೆಗಾಗಿ ಸೇವಾವೃತ್ತಿಯನ್ನು ಕೈಕೊಂಡ ಬ್ರಾಹ್ಮಣರು, ಇನ್ನೂ ಬ್ರಾಹ್ಮಣರಾಗಿಯೇ ಉಳಿದಿದ್ದಾರೆ. ಇವರೆಲ್ಲರೂ ಪ್ರಚ್ಛನ್ನ ಬ್ರಾಹ್ಮಣರು. ಕೇವಲ ಹೊಟ್ಟೆಗಾಗಿ ನಾನೇಕೆ ಕ್ರಿಶ್ಚನ್ನನಾಗಬಾರದು? ಕ್ರಿಶ್ಚನ್ನನ ಕರ್ಮವನ್ನು ಮಾಡಿದಾಗಲೂ ನಾನು ಬ್ರಾಹ್ಮಣನಾಗಿಯೇ ಉಳಿಯಬಹುದಲ್ಲವೇ?… ನನ್ನ ಹೆಂಡತಿ ಮಕ್ಕಳ ಗತಿ?! ಏನಾದರೂ ಮಾಡಲಿಕ್ಕೆ ಬಂದೀತು. ಈಗ ನಾನು ಪ್ರಚ್ಛನ್ನ ಬ್ರಾಹ್ಮಣನಾಗಬೇಕು’ ಹೀಗೆಲ್ಲ ವಿಚಾರ ಮಾಡಿ, ಒಂದು ನಿರ್ಣಯಕ್ಕೆ ಬಂದು ಮುಟ್ಟಿದೆ. ಆ ನಿರ್ಣಯವು, ಆ ರಾತ್ರಿಯಲ್ಲಿ ನನಗೆ ಸಮಂಜಸವೆಂದೇ ತೋರಿತು. ಆದರೆ ಅದಕ್ಕಾಗಿ ನಾನು ಕೊಟ್ಟಿರುವ ಬೆಲೆಯ ಅರಿವು ಮಾತ್ರ ಆಗ ನನಗಿರಲಿಲ್ಲ. ಈಗ ಗೊತ್ತಾಗಿದೆ. ಆ ರಾತ್ರಿಯು ನನ್ನ ಇಡೀ ಜೀವಮಾನವನ್ನು ನಿರ್ಣಯಿಸಿದ ರಾತ್ರಿಯು, ಅದನ್ನು ನಾನು ಎಂದೂ ಮರೆಯುವಂತಿಲ್ಲ. ಹೂಶ್ ! ಉಬ್ಬಸ ಬರಹತ್ತಿದೆ. ಎದೆ ನೋವು. ಹೆ..ಚ್ಚಾ..ಗಿ..ದೆ!” ಎಂದು ಸ್ವಲ್ಪ ದಿಂಬಿಗೆ ಒರಗಿದರು. ಅಲ್ಲಿಂದ ಆಳು ಒಳಗಿನಿಂದ ‘ಕಾಫೀ’ ತಂದುಕೊಟ್ಟನು. ಅದನ್ನು ಕುಡಿದರು. ಸ್ವಲ್ಪ ಹಗುರಾದಂತಾಯಿತು. ಮತ್ತೆ ಮಾತನಾಡಿದರು.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

”ನಾನು ಇಷ್ಟೆಲ್ಲ ವಿಚಾರ ಮಾಡಿ ಒಂದು ನಿರ್ಣಯಕ್ಕೆ ಬಂದಾಗ ರಾತ್ರಿ ಎರಡು ಗಂಟೆಯಾಗಿರಬಹುದು. ತಲೆಯ ಭಾರವು ಸ್ವಲ್ಪ ಹಗುರಾದಂತಾಗಿ, ಅದೇ ನಿದ್ರೆ ಹತ್ತುವದರಲ್ಲಿತ್ತು. ಅಷ್ಟರಲ್ಲಿ ಯಾರೋ ಬರುವ ಕಾಲ ಸಪ್ಪಳು ಕೇಳಿ, ಮತ್ತೆ ಎದ್ದು ಕುಳಿತೆ. ಹತ್ತಿರ ಬರುವವರೆಗೆ ಯಾರೆಂಬುದು ಗೊತ್ತಾಗಲಿಲ್ಲ. ಗಾಬರಿಯಾಗಿ ‘ಯಾರವರು?’ ಎಂದು ಕೇಳಿದೆ. ನಗುತ್ತಾ ‘ನಾನು’ ಎಂದು ಇದೇ ಪಾದ್ರಿಗಳು ಉತ್ತರ ಕೊಟ್ಟರು. ಧ್ವನಿಯ ಮೇಲೆ ನನಗೆ ಗುರುತು ಹತ್ತಿತು. ‘ಬರ್‍ರಿ- ಬರ್‍ರಿ’ ಎಂದು ಎದ್ದು ಹೋಗಿ, ಅವರನ್ನು ಕೈಹಿಡಿದು ಕರೆದುಕೊಂಡು ಒಂದು, ನಾನು ಮಲಗಿದ್ದಲ್ಲಿ ಕುಳ್ಳಿರಿಸಿ, ನಾನೂ ಅವರ ಹತ್ತಿರ ಕುಳಿತುಕೊಂಡೆನು. ಪಾದ್ರಿಗಳು ಅಲ್ಲಿಂದ ತಮ್ಮ ಜೇಬಿನೊಳಗಿಂದ ಐದಾರು ಕಿತ್ತಳೆ ಹಣ್ಣುಗಳನ್ನು ತೆಗೆದು, ನನಗೆ ತಿನ್ನಲು ಕೊಟ್ಟರು. ಮೂರು ದಿವಸಗಳಿಂದ ಹೊಟ್ಟೆಯಲ್ಲಿ ಏನೂ ಇಲ್ಲದ್ದರಿಂದ, ಅವುಗಳನ್ನು ಗಬಗಬನೆ ತಿಂದು ಮುಗಿಸಿದೆ. ಇದನ್ನು ನೋಡಿ ಪಾದ್ರಿಗಳು ‘ಸಾವಕಾಶವಾಗಲಿ’ ಎಂದು ಚೇಷ್ಟೆ ಮಾಡಿದರು. ನನಗೆ ಅದೆಲ್ಲ ಲಕ್ಷವಿದ್ದಿಲ್ಲ. ಮುಂದೆ ಕೆಲ ಹೊತ್ತಿನ ಮೇಲೆ ಆ ಮಾತು- ಈ ಮಾತುಗಳಾದ ಬಳಿಕ ನಾನೇ ಪಾದ್ರಿಗಳಿಗೆ ನನ್ನ ನಿಶ್ಚಯವನ್ನು ತಿಳಿಸಿದೆ. ಅವರಿಗೆ ಬಹಳ ಆನಂದವಾಯಿತು. ನನ್ನನ್ನು ಕರೆದುಕೊಂಡು ತಮ್ಮ ಮನೆಗೆ ಮೊದಲು ಹೋದರು. ಅಲ್ಲಿ ಬೆಳಗಾಗುವವರೆಗೆ ಮಲಗಿಕೊಂಡೆ. ಮುಂಜಾನೆ ಬೇಗನೆ ಎದ್ದು, ಪಾದ್ರಿಗಳು ಮಮತೆಯಿಂದ ನನ್ನ ಹೆಗಲ ಮೇಲೆ ಕೈ ಹಾಕಿ, ತಮ್ಮ ಚರ್ಚಿಗೆ ನನ್ನನ್ನು ಕರೆದುಕೊಂಡು ಹೋಗಿ, ದೀಕ್ಷೆಯನ್ನು ಕೊಟ್ಟರು. ಆಚಾರ್‍ಯರೇ, ತಮಗೆ ಒಂದು ಮಾತು ಇಲ್ಲಿ ಹೇಳಬೇಕಾಗಿದೆ. ನಾನು ಕ್ರಿಶ್ಚನ್ನನಾಗಿದ್ದರೂ ತತ್ತಿ, ಮಾಂಸ, ಸರಾಯಿ, ಇವಾವುವುಗಳನ್ನೂ ಇನ್ನೂವರೆಗೂ ಸ್ವೀಕರಿಸಿಲ್ಲ. ಪರಸ್ತ್ರೀಯರನ್ನು ಕಾಮುಕ ದೃಷ್ಟಿಯಿಂದ ನೋಡಿಲ್ಲ. ಹೂಶ್- ಬಾಯಾರಿತು!” ಎಂದು ಮತ್ತೆ ಕಣ್ಣು ಮುಚ್ಚಿದರು. ಮತ್ತೆ ಕಾಫೀ ಕುಡಿದು, ಮೊದಲಿಗಿಂತ ಕ್ಷೀಣ ಧ್ವನಿಯಲ್ಲಿ ಮಾತನಾಡಿದರು:

ಈ ಅವಸಾನಕಾಲ ಸಮೀಪಿಸಿತು. ನಾಲಗೆ ಒಳಸೇರಹತ್ತಿದೆ… ಇಲ್ಲಿಯವರೆಗೆ ಆದದ್ದೆಲ್ಲಾ ಒಂದು ತೆರ. ಇದರ ಮುಂದಿನದೆಲ್ಲ ಮತ್ತೊಂದು ತೆರ. ‘ಕ್ರಿಶ್ಚನ್ನನಾದೆ’ ಎಂಬುದು ಗೊತ್ತಾದೊಡನೆ ಮನಸಿಗೆ ಮುಳ್ಳು ಚುಚ್ಚಿದಂತಾಯಿತು. ಆದರೂ ಯಾವದನ್ನೂ ತೋರಗೊಡದೆ, ಕೆಲಕಾಲ ಪಾದ್ರಿಗಳ ಹಿಂದೆ ತಿರುಗಾಡಿದೆ. ನನ್ನ ಮೇಲೆ ಅವರ ಅಭಿಮಾನ ಹೆಚ್ಚಿತು. ನನ್ನಂತಹ ಸುಶಿಕ್ಷಿತನು ಕ್ರಿಶ್ಚನ್ನನಾದದ್ದಕ್ಕಾಗಿ ಅವರೂ ಮೇಲಕ್ಕೇರಿದರು. ನನ್ನ ಅಂತಃಕರಣದಲ್ಲಿಯ ಬಡಿದಾಟವನ್ನು ಅವರಿಗೆ ನಾನು ಇಂದಿನವರೆಗೂ ತೋರಿಸಿಲ್ಲ. ಈ ಹೊತ್ತು ಕೊನೆಗೆ ಹೇಳುತ್ತೇನೆ. ಪಾದ್ರಿಗಳ ವಶೀಲಿಯಿಂದ ನನಗೆ ಒಮ್ಮೆಲೇ ಪ್ರೊಬೇಶನರ್ ಮಾಮ್ಲೇದಾರರ ಕೆಲಸವು ದೊರೆಯಿತು. ಹೊಟ್ಟೆಯ ಚಿಂತೆ ತಪ್ಪಿತು. ಆದರೆ ಮನೆಯವರ ಗತಿ ಏನು? ಎಂದು ವಿಚಾರ ಮಾಡಿದೆ. ನಾನು ಇದ್ದಲ್ಲಿಯೆ ಅವರನ್ನು ಕರೆಯಿಸುವದು ಸಾಧ್ಯವಿದ್ದಿಲ್ಲ. ನಾನು ಅವರಲ್ಲಿಗೆ ಹೋಗುವದೂ ಸಾಧ್ಯವಿದ್ದಿಲ್ಲ. ಆಯಿತು, ಹೆಂಡತಿ ಮಕ್ಕಳನ್ನು ಮರೆಯಲ್ಲಿಟ್ಟು, ನಾನು ದೂರವಿದ್ದುಕೊಂಡು, ಅವರ ಹೊಟ್ಟೆಗೆ ಹಾಕುವ ಹೊತ್ತು ಬಂದಿತಲ್ಲಾ! ಎಂದು ನನ್ನಷ್ಟಕ್ಕೆ ನಾನೇ ಕನಿಕರ ಪಟ್ಟುಕೊಂಡೆ. ನನ್ನ ಜೀವನದಲ್ಲಿ, ಒಂದು ದೊರೆಯಿತು ಎನ್ನುವಷ್ಟರಲ್ಲಿ ಇನ್ನೊಂದು ಜಾರಿತು. ಮರೆಯಲ್ಲಿದ್ದುಕೊಂಡೇ ನನ್ನ ಹೆಂಡತಿ ಮಕ್ಕಳ ಯೋಗಕ್ಷೇಮವನ್ನು ನೋಡುತ್ತಿರುತ್ತೇನೆ. ಪಾಂಡುರಾಜನ ಶಾಪದಂತೆ, ಇದೊಂದು ನನಗೆ ಯಾರಿಂದಲೋ ಶಾಪವೆಂದು ತಿಳಿದು ಸುಮ್ಮನಿದ್ದೇನೆ. ಮುಂದೆ ಮಾಮ್ಲೇದಾರನ ಕೆಲಸದಿಂದ ಡೆಪ್ಯುಟಿ ಕಲೆಕ್ಟರನ ಕೆಲಸದವರೆಗೆ ಕ್ರಮೇಣ ಬಂದು ಮುಟ್ಟಿದ್ದೇನೆ. ದುಡ್ಡಿನ ಯಾವ ತಾಪವೂ ಇಲ್ಲ. ಮರ್ಯಾದೆಗೆ ಕೊರತೆಯಿಲ್ಲ. ಆದರೆ ಮನಸ್ಸಿನ ಶಾಂತಿಯೊಂದು ಮಾಯವಾಗಿದೆ. ಪಾದ್ರಿಯವರೇ, ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನಾನೇನು ನಮ್ಮ ಧರ್ಮದಲ್ಲಿ ದೇವರು ಸಿಕ್ಕಲಿಲ್ಲವೆಂದು ನಿಮ್ಮ ಧರ್ಮಕ್ಕೆ ಶರಣು ಬರಲಿಲ್ಲ. ಕೇವಲ ಹೊಟ್ಟೆಗಾಗಿ ಇದೊಂದು ವೇಷವೆಂದು ನಿಮ್ಮ ಧರ್ಮವನ್ನು ಸ್ವೀಕರಿಸಿದ್ದೇನೆ. ನಾನಿನ್ನೂ ಬ್ರಾಹ್ಮಣನಾಗಿಯೇ ಉಳಿದಿದ್ದೇನೆ. ನಿಮ್ಮ ಧರ್ಮವನ್ನು ಸ್ವೀಕರಿಸಿದ್ದೇನೋ ನಿಜ. ಆದರೆ ನಿಮ್ಮ ಧರ್ಮದ ಕಟ್ಟಳೆಗಳನ್ನು ಮುರಿದ ಪಾಪದ ಹೊರೆಯು ನನ್ನ ತಲೆಯಮೇಲೆ ಕುಳಿತಿದೆ. ಒಂದು ದಿನವೂ ಮೂರ್ತಿ ಪೂಜೆಯನ್ನು ಬಿಡಲಿಲ್ಲ. ಬೇಕಾದರೆ ನನ್ನ ಆ ದೇವರ ಮನೆಯನ್ನು ನೋಡಬಹುದು. ಯಾರಿಗೂ ನಾನು ಮಾಡುತ್ತಿರುವದು ಗೊತ್ತಾಗಬಾರದೆಂದು, ಆ ದೇವರ ಮನೆಯ ಬೀಗದ ಕೈಯನ್ನು ನನ್ನ ಹತ್ತಿರವೇ ಇಟ್ಟುಕೊಳ್ಳುತ್ತಿದ್ದೆ. ಪಾದ್ರಿಯವರೇ, ನನ್ನದೊಂದು ಕೊನೆಯ ಆಶೆಯಿದೆ. ನೀವು ಅದನ್ನು ನಡೆಯಿಸಿಕೊಡಲಿಕ್ಕೇಬೇಕು. ಜನ್ಮಭೂಮಿಯಲ್ಲಿಯೇ ಮಡಿಯಬೇಕೆಂದು ಪ್ರತಿಯೊಬ್ಬ ಮಾನವನ ಆಶೆಯಿರುತ್ತದೆ. ಹಾಗೆಯೇ ನಾನು ಹುಟ್ಟಿದ ಧರ್ಮದಲ್ಲಿಯೇ ಸಾಯಬೇಕೆಂದು ಗೊತ್ತು ಮಾಡಿಕೊಂಡಿದ್ದೇನೆ. ತಾವು ದಯವಿಟ್ಟು ಕೊನೆಯ ಸಂಸ್ಕಾರಗಳನ್ನು ನನ್ನ ಹುಟ್ಟಿದ ಧರ್ಮದಂತೆಯೇ ಮಾಡಲಿಕ್ಕೆ ಅಪ್ಪಣೆಯನ್ನು ಕೊಡಬೇಕು. ಆಚಾರ್ಯರೇ, ನಾನು ಪಾದ್ರಿಗಳಿಗೆ ಹೇಳಿದ್ದನ್ನು ಕೇಳಿದಿರಾ? ಅವರನ್ನು ನಾನು ಕೇಳಿಕೊಂಡಂತೆಯೇ ನಿಮ್ಮನ್ನೂ ಕೇಳಿಕೊಳ್ಳುತ್ತೇನೆ. ನನ್ನ ಕೊನೆಯ ಸಂಸ್ಕಾರಗಳು ನನ್ನ ಹುಟ್ಟಿದ ಧರ್ಮದಂತೆಯೇ ಆಗಬೇಕು. ನೀವೇ ಅದನ್ನು ನೆರವೇರಿಸಬೇಕು. ನನಗೆ ಗೋರಿಯನ್ನು ಕಟ್ಟಿಸಿಕೊಳ್ಳುವದು ಬೇಡ. ಆಚಾರ್ಯರೆ, ಇನ್ನೊಂದು ಮಾತು; ಸಮಾಜದ ವಕ್ರಕಟಾಕ್ಷದಿಂದ ನನ್ನ ಹೆಂಡತಿ ಮಕ್ಕಳನ್ನು ಪಾರು ಮಾಡುವ ಶಕ್ತಿಯು ತಮ್ಮಲ್ಲಿದ್ದರೆಯೆ ನೀವು ನನ್ನ ಈ ಚರಿತ್ರೆಯನ್ನು ಎಲ್ಲರಿಗೂ ತಿಳುಹಬೇಕು. ಇಲ್ಲದಿದ್ದರೆ ಬೇಡ. ನಾನು ಮನೆಬಿಟ್ಟು ಬಂದು ಹನ್ನೆರಡು ವರ್ಷಗಳ ಮೇಲಾಯಿತು. (ನನ್ನ ಮಗನು ಈಗ ದೊಡ್ಡವನಾಗಿರಬಹುದಲ್ಲವೇ? ನನ್ನ ಹೆಂಡತಿಯು ಈಗ ಹೇಗಿರ ಬಹುದು?) ನನ್ನ ಹೆಂಡತಿಗೆ ನಾನು ತೀರಿಕೊಂಡ ಸುದ್ದಿಯನ್ನು ತಿಳುಹಬೇಕು. ಸಮಾಜವು ಅವಳನ್ನು ಈಗಾಗಲೇ ವಿಧವೆಯನ್ನಾಗಿ ಮಾಡಿರಬಹುದು!… ಆಚಾರ್ಯರೆ, ಬಡತನದ ಭೂತಕ್ಕೆ ಅಂಜಿ, ಹೊಟ್ಟೆಯ ಪಾಡಿಗಾಗಿ, ಮನಸ್ಸಿನ ಶಾಂತಿಯನ್ನೂ ಧರ್ಮವನ್ನೂ ಕಳೆದುಕೊಂಡ ಈ ಪಾಪಿಗೆ ತಕ್ಕ ಪ್ರಾಯಶ್ಚಿತ್ತವೇನಾದರೂ ಉಂಟೇ? ಹಿಂದಿನ ಜನ್ಮದಲ್ಲಿಯ ಪಾಪಕ್ಕಾಗಿ ಈ ಜನ್ಮದಲ್ಲಿ ಅನುಭವಿಸಿದ್ದೆಲ್ಲ ಪ್ರಾಯಶ್ಚಿತ್ತವೇ. ಇನ್ನು ಈ ಜನ್ಮದಲ್ಲಿಯ ಪಾಪಕ್ಕೆ ಇನ್ನಾವ ಪ್ರಾಯಶ್ಚಿತ್ತವೋ ಕಾಣೆ, ನನ್ನನ್ನು ಬಿಟ್ಟುಬಿಡಿರಿ. ನನ್ನ ಪಾಡು ನನಗೆ. ನನ್ನ ಈ ಕತೆಯು ಗೊತ್ತಾದ ಮೇಲೆ ಸಮಾಜವು, ಪವಿತ್ರವಾದ ಆ ನನ್ನ ಮಗುವನ್ನು ಎತ್ತಿಕೊಳ್ಳುವದೇ? ಆಚಾರ್ಯರೆ, ಅವರಿಬ್ಬರನ್ನು ನಿಮ್ಮ ಉಡಿಯಲ್ಲಿ ಹಾಕಿದ್ದೇನೆ… ನನ್ನ ಮೊದಲಿನ ಹೆಸರು ಕೃಷ್ಣ. ಈಗಿನ ಹೆಸರು ಕೃಸ್ಟೋ. ಆಯಿತು… ಆಯಿತು… ಪಾದ್ರಿಯವರೆ… ಆಚಾರ್ಯರೆ… ಆಚಾರ್ಯರೆ,… ಪಾದಿಯವರೆ,… ಕ್ಷಮಿಸಿರಿ… ಆಚಾರ್ಯರೆ… ಇಕೊ… ಅಯ್ಯೊ… ನಾ-ರಾ-ಯ-ಣ…”

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಎಂದು ಹಿಂದಕ್ಕೆ ಬಿದ್ದುಬಿಟ್ಟರು. ನಮ್ಮ ರಾಯರು ಹತ್ತಿರ ಹೋಗಿ ನೋಡಿದರು. ಪ್ರಾಣಹೋಗಿಬಿಟ್ಟಿತ್ತು. ರಾಯರು ಗಾಬರಿಯಾಗಿ ನನ್ನ ಕಡೆಗೆ ನೋಡಿದರು. ನಾನೂ ಅವರನ್ನೇ ನೋಡಿದೆ. ಪಾದ್ರಿಗಳ ಮುಖವು ಮಾತ್ರ ಬಿಳುಪಿಟ್ಟಿತ್ತು. ಪೆಚ್ಚು ಮುಖ ಮಾಡಿದ್ದರು. ‘ಅಯ್ಯೋ, ನಾನು ಮೋಸ ಹೋದೆನಲ್ಲ!’ ಎಂಬ ಭಾವವು ಮುಖದ ಮೇಲೆ ಒಡೆದು ಕಾಣುತ್ತಿತ್ತು. ಹೆಣದ ಮುಖವನ್ನು ದಿಟ್ಟಿಸಿ ನೋಡಿದರು. ಅಲ್ಲಿಂದ ಯಾರ ಜೊತೆಗೂ ಮಾತಾಡದೆ, ಒಂದು ತೆರದ ತಿರಸ್ಕಾರದ ನಗೆನಗುತ್ತ ಹೊರಗೆ ಹೊರಟುಹೋದರು. ರಾಯರು ಮತ್ತು ನಾನು ಇಬ್ಬರೇ ಉಳಿದೆವು. ‘ಏನೇ ಆಗಲಿ, ನಮ್ಮ ಸಂಸ್ಕಾರ ಮಾಡಿಬಿಡೋಣ’ ಎಂದು ರಾಯರು ನನಗೆ ಹೇಳಿದರು. ನಾನು ‘ಹೂಂ ಆಗಲಿ’ ಎಂದು ಹೇಳಿ, ಅಗ್ರಹಾರಕ್ಕೆ ಬಂದು, ನಮ್ಮಲ್ಲಿಯ ಇಬ್ಬರು ಮೂವರನ್ನು ಕರೆದುಕೊಂಡು ಹೋಗಿ, ಅಗ್ನಿ ಸಂಸ್ಕಾರ ಮಾಡಿ ಬಂದೆವು. ಮುಂದೆ ಎಂಟು ದಿನಗಳೊಳಗಾಗಿ ಈ ಸುದ್ದಿ ಊರಲ್ಲೆಲ್ಲಾ ಹಬ್ಬಿ, ರಾಯರಿಗೂ ನಮಗೂ ಕೂಡಿಯೇ ಶ್ರೀಗಳವರಿಂದ ಬಹಿಷ್ಕಾರ ಪತ್ರಗಳು ಬಂದವು. ಆದರೆ ರಾಯರು ಪ್ರಾಯಶ್ಚಿತ್ತ ಮಾಡಿಕೊಂಡು (ಶ್ರೀಗಳವರು ಪ್ರಸನ್ನರಾಗುವಂತೆ) ಶುದ್ಧರಾದರು. ನಾನು ಮಾತ್ರ ಹಾಗೆ ಮಾಡಲಿಕ್ಕೆ ಗತಿಯಿಲ್ಲದೆ ಅಶುದ್ಧನಾಗಿಯೆ ಉಳಿದಿದ್ದೇನೆ. ಆ ಸಾಹೇಬರ ಹೆಂಡತಿಗೆ ಗಂಡನ ಸುದ್ದಿಯೆಲ್ಲವನ್ನೂ ತಿಳುಹಿಸಿದೆ. ‘ಗಂಡ ಓಡಿಹೋಗಿ ಹನ್ನೆರಡು ವರ್ಷಗಳ ಮೇಲಾಗಿದ್ದರೂ ಇನ್ನೂ ಕಮಲಮ್ಮನು ಶುದ್ಧವಾಗಿಲ್ಲ. ಧರ್ಮಪರಾಯಣರಾದ ಶ್ರೀಗಳವರು ಪರಾಮರಿಸಬೇಕು’ ಎಂದು ಒಬ್ಬ ಆಚಾರ್ಯರು ಶ್ರೀಗಳವರಿಗೆ ಪತ್ರ ಬರೆದು, ನಮಗಿಂತಲೂ ಮೊದಲೇ ಅವರಿಗೆ ಬಹಿಷ್ಕಾರ ಪತ್ರಗಳನ್ನು ವಿತರಿಸಿದ್ದರು. ಆ ಹೆಣ್ಣು ಮಗಳು ಗೋಳಾಡುವದನ್ನು ನೋಡಿದರೆ, ಯಾರಿಗೂ ಕನಿಕರ ಹುಟ್ಟದೆ ಇರದು. ಮಾಡುವದೇನು? ಹೂಶ್-ಅಪ್ಪಾ. ಹೋಗಿರಿ ಇನ್ನು ಆಡಲಿಕ್ಕೆ; ಕತೆ ಮುಗಿಯಿತು ಎಂದು ಹೇಳಿದರು. ನಾವು ಚಿಣಿ ಫಣಿ ಆಟವಾಡಲಿಕ್ಕೆ ಹೊರಟು ಬಂದೆವು. ಪಾಟಿಯ ಮೇಲೆ ಬರೆದು ಅಳಿಸಿದಂತೆ, ಈ ಕತೆಯು ನಮ್ಮ ಆಟದ ಉಬ್ಬಿನಲ್ಲಿ ಅಳಿಸಿಹೋಯಿತು.

ಜಿ.ಬಿ. ಜೋಶಿ

ಜಿ.ಬಿ. ಜೋಶಿ(1904-1993): ಗೋವಿಂದ ಭೀಮಾಚಾರ್ಯ ಜೋಶಿ 1904 ಜುಲೈ 29ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಇವರು 1933ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಅವರಲ್ಲೊಬ್ಬರು. ಗ್ರಂಥ ಪ್ರಕಟಣೆಗಳು ಅವರ ಪ್ರೀತಿ ಆಸ್ಥೆಗಳೂ ಹೌದು, ಜೊತೆಗೆ ಅದು ಅವರ ಧ್ಯೇಯವೂ ಆಗಿತ್ತು. ವಿಮರ್ಶೆಯ ನಿಯತಕಾಲಿಕ ‘ಮನ್ವಂತರ’ವನ್ನು ಪ್ರಾರಂಭಿಸಿದರು. ಇವರು ‘ಜಡಭರತ’ ಹಾಗೂ ‘ಅನಾಮಧೇಯ’ ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ. ಪ್ರಕಟಿತ ಕೃತಿಗಳು: ಮೂಕಬಲಿ, ಸತ್ತವರ ನೆರಳು, ಕದಡಿದ ನೀರು, ಆ ಊರು ಈ ಊರು, ನಾನೇ ಬಿಜ್ಜಳ, ಪರಿಮಳದವರು, ಜರ್ಮನ್ ಬಂಗ್ಲೆ(ನಾಟಕಗಳು); ಧರ್ಮಸೆರೆ(ಕಾದಂಬರಿ); ಜೀವಫಲ(ಕವನ ಸಂಕಲನ). ಇವರ ನಾಟಕಗಳು ದಿವಂಗತ ಬಿ.ವಿ.ಕಾರಂತರಿಂದ ಹಾಗೂ ನೀ.ನಾ.ಸಂ. ತಂಡದವರಿಂದ ರಂಗಭೂಮಿಯ ಮೇಲೆ ಪ್ರಯೋಗಗೊಂಡಿವೆ. ವಿಶೇಷತಃ ಬಿ.ವಿ. ಕಾರಂತರಿಂದ ಪ್ರದರ್ಶಿತವಾದ ‘ಸತ್ತವರ ನೆರಳು’ ತುಂಬಾ ಜನಪ್ರಿಯ ನಾಟಕಪ್ರದರ್ಶನವಾಗಿತ್ತು. ಇವರ ‘ಧರ್ಮಸೆರೆ’ ಕಾದಂಬರಿಯನ್ನು ಪುಟ್ಟಣ್ಣ ಕಣಗಾಲ್ ಅವರು ಚಲನಚಿತ್ರವನ್ನಾಗಿ ಮಾಡಿದ್ದಾರೆ. ಇವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಪ್ರಕಾಶಕರ ಒಕ್ಕೂಟದಿಂದ ವಿಶಿಷ್ಟ ಪ್ರಕಾಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು 1993 ಡಿಸೆಂಬರ 26ರಂದು ನಿಧನರಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...