ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಡಿಎಂಕೆ ಸಚಿವ ಪಿ. ಮೂರ್ತಿ ಅವರಿಗೆ ಸೇರಿದ ಮಧುರೈನ ನಾಲ್ಕು ಪ್ರಮುಖ ಸ್ಥಳಗಳ ಮೇಲೆ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಮಧುರೈ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿ ಮಾಜಿ ಸಚಿವರ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ನಡೆದಿದೆ. ಎರಡೂ ಪ್ರಕರಣಗಳಲ್ಲಿ ಪಿ. ಮೂರ್ತಿ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಮಧುರೈ ಜಿಲ್ಲೆಯ ಸತಿರವೆಲ್ಲಪಟ್ಟಿ ಸೇರಿದಂತೆ ವಿವಿಧೆಡೆ ಮಾಜಿ ಸಚಿವ ಪಿ. ಮೂರ್ತಿ ಕಲ್ಲು ಕ್ವಾರಿಗಳನ್ನು ನಿರ್ವಹಿಸುತ್ತಿದ್ದರು. ಈ ಕ್ವಾರಿಗಳಲ್ಲಿ ನಿಗದಿತ ಮಿತಿಯನ್ನು ಮೀರಿ ಖನಿಜಗಳನ್ನು ಹೊರತೆಗೆಯಲಾಗಿದೆ ಹಾಗೂ ಸರ್ಕಾರಿ ಭೂಮಿಯನ್ನೂ ಅತಿಕ್ರಮಿಸಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದಾಗ ಈ ಅಕ್ರಮಗಳು ದೃಢಪಟ್ಟಿವೆ. ಅಧಿಕಾರಿಗಳ ವರದಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹5.5 ಕೋಟಿ ನಷ್ಟ ಉಂಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಮಧುರೈ ನಗರ ವ್ಯಾಪ್ತಿಯ ಅಯ್ಯರ್ ಬಂಗಲೆ ಪ್ರದೇಶದಲ್ಲಿರುವ ಪಿ. ಮೂರ್ತಿ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಡಿಎಂಕೆ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಮಾಜಿ ಸಚಿವರ ಮನೆ ಹಾಗೂ ದಾಳಿ ನಡೆದ ಸ್ಥಳಗಳ ಮುಂದೆ ಜಮಾಯಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇನ್ನು ದಾಳಿಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪಿ. ಮೂರ್ತಿ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ನನ್ನ ವಿರುದ್ಧ ದಾಖಲಾಗಿರುವುದು ಸಂಪೂರ್ಣ ಸುಳ್ಳು ಪ್ರಕರಣಗಳು. ನಾವು ಕಾನೂನು ಹೋರಾಟ ನಡೆಸಿ ನ್ಯಾಯಾಲಯದಲ್ಲಿ ನ್ಯಾಯ ಪಡೆಯುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ವಾರಿ ವಿವಾದದ ಕುರಿತು ವಿವರಣೆ ನೀಡಿದ ಅವರು, “2019ರಲ್ಲಿ ಜಿಲ್ಲಾಡಳಿತದಿಂದ ನಾನು ನಿಯಮಾನುಸಾರ ಅನುಮತಿ ಪಡೆದಿದ್ದೆ. ಸತಿರವೆಲ್ಲಪಟ್ಟಿಯಲ್ಲಿರುವ ನನ್ನ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ರಾಜಮಣಿ ಮತ್ತು ಆನಂದರಾಜ್ ಎಂಬುವವರಿಗೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಆ ಸ್ಥಳವು ಗಣಿಗಾರಿಕೆಗೆ ಸೂಕ್ತವಾಗಿಲ್ಲದ ಕಾರಣ ಅವರಿಬ್ಬರೂ ಕೆಲವೇ ವರ್ಷಗಳಲ್ಲಿ ಕೆಲಸ ನಿಲ್ಲಿಸಿದ್ದರು. ಈ ನಡುವೆ, ಅದೇ ಸ್ಥಳದ ಸಮೀಪವಿರುವ ನನ್ನ ಪಟ್ಟಾ ಜಮೀನಿನಿಂದ ಕೆಂಪು ಮಣ್ಣನ್ನು ತೆಗೆಯಲಾಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಅದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ, ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೆ” ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಅನೇಕ ಮಾಜಿ ಸಚಿವರ ವಿರುದ್ಧ ನಿರಂತರವಾಗಿ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಈ ದಾಳಿಯು ಆಡಳಿತ ಪಕ್ಷದ ರಾಜಕೀಯ ದ್ವೇಷವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಲು ಪಿ. ಮೂರ್ತಿ ನಿರಾಕರಿಸಿದರು. ಸದ್ಯ ಪೊಲೀಸರ ಶೋಧ ಕಾರ್ಯ ಮುಂದುವರಿದಿದ್ದು, ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆಯ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



