ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ‘ಮುಕ್ತ ವ್ಯಾಪಾರ ಒಪ್ಪಂದ’ (Free Trade Agreement–FTA) ಮುಂದಿನ ಒಂದು ತಿಂಗಳೊಳಗೆ ಜಾರಿಗೆ ಬರುವ ಸಾಧ್ಯತೆ ಇದೆ. ಒಪ್ಪಂದವನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಅಧಿಕೃತ ಪ್ರಕ್ರಿಯೆಗಳನ್ನು ಎರಡೂ ದೇಶಗಳು ಪೂರ್ಣಗೊಳಿಸುತ್ತಿವೆ. ಈಗ ಪರಸ್ಪರ ರಾಜತಾಂತ್ರಿಕ ನೋಟುಗಳ ವಿನಿಮಯ ನಡೆಯಬೇಕಿದೆ ಎಂದು ನ್ಯೂಜಿಲೆಂಡ್ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್ಕ್ಲೇ ಹೇಳಿದ್ದಾರೆ.
ನ್ಯೂಜಿಲೆಂಡ್ ಸಂಸತ್ತು ಸೆಪ್ಟೆಂಬರ್ 15ರಂದು ಭಾರತ–ನ್ಯೂಜಿಲೆಂಡ್ FTA ಜಾರಿಗೆ ಅಗತ್ಯವಿರುವ ಕಾನೂನನ್ನು ಅಂಗೀಕರಿಸಿದೆ. ನ್ಯೂಜಿಲೆಂಡ್ ಸಂಸತ್ತಿನ ಅಧಿಕೃತ ದಾಖಲೆಗಳ ಪ್ರಕಾರ, ಮಸೂದೆ ಪರವಾಗಿ 93 ಮತಗಳು ಮತ್ತು ವಿರುದ್ಧವಾಗಿ 29 ಮತಗಳು ಬಿದ್ದಿವೆ. ಸೆಪ್ಟೆಂಬರ್ 17ರಂದು ಮಸೂದೆಗೆ ರಾಜಮುದ್ರೆಯೂ ದೊರೆತಿದ್ದು, ನ್ಯೂಜಿಲೆಂಡ್ ಕಡೆಯ ಆಂತರಿಕ ಶಾಸನಾತ್ಮಕ ಪ್ರಕ್ರಿಯೆ ಪೂರ್ಣಗೊಂಡಿದೆ.
ಭಾರತ ಮತ್ತು ನ್ಯೂಜಿಲೆಂಡ್ ಈಗ ಒಪ್ಪಂದ ಜಾರಿಗೆ ಅಗತ್ಯವಿರುವ ಅಧಿಕೃತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಪ್ಪಂದ ಜಾರಿಯಾಗುವ ದಿನಾಂಕ ನಿಗದಿಯಾಗಲಿದೆ. “ನಾವು ಈಗ ಒಪ್ಪಂದ ಜಾರಿಗೆ ಅತ್ಯಂತ ಸಮೀಪದಲ್ಲಿದ್ದೇವೆ. ಮುಂದಿನ ಒಂದು ತಿಂಗಳೊಳಗೆ ಇದು ಜಾರಿಗೆ ಬರುವ ನಿರೀಕ್ಷೆ ಇದೆ” ಎಂದು ಮೆಕ್ಕ್ಲೇ ಹೇಳಿದ್ದಾರೆ.
ಏನಿದು ಎಫ್‌ಟಿಎ?
ಎಫ್‌ಟಿಎ (Free Trade Agreement) ಎಂದರೆ – ಎರಡು ಅಥವಾ ಹೆಚ್ಚು ದೇಶಗಳು ಪರಸ್ಪರ ವ್ಯಾಪಾರ ಮಾಡುವಾಗ ಸರಕುಗಳ ಮೇಲೆ ವಿಧಿಸುವ ಆಮದು ಸುಂಕವನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ತೆಗೆದುಹಾಕುವುದು, ಸೇವಾ ವಲಯಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುವುದು, ಹೂಡಿಕೆಗೆ ಅನುಕೂಲ ಕಲ್ಪಿಸುವುದು ಹಾಗೂ ವ್ಯಾಪಾರದಲ್ಲಿನ ಕೆಲವು ಅಡೆತಡೆಗಳನ್ನು ಕಡಿಮೆ ಮಾಡುವ ಒಪ್ಪಂದ.
ಸರಳವಾಗಿ ಹೇಳುವುದಾದರೆ, ಭಾರತದಲ್ಲಿ ತಯಾರಾದ ಔಷಧ, ಬಟ್ಟೆ, ಯಂತ್ರೋಪಕರಣ ಅಥವಾ ಇತರ ಉತ್ಪನ್ನವನ್ನು ನ್ಯೂಜಿಲೆಂಡ್‌ಗೆ ಕಳುಹಿಸಿದಾಗ ಅಲ್ಲಿ ಭಾರತದ ಸರಕುಗಳ ಮೇಲೆ ಆಮದು ಸುಂಕ ವಿಧಿಸಲಾಗುವುದಿಲ್ಲ ಅಥವಾ ಕಡಿಮೆ ವಿಧಿಸಲಾಗುತ್ತದೆ. ಇದರಿಂದ, ಭಾರತೀಯ ಉತ್ಪನ್ನದ ಬೆಲೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗುತ್ತದೆ. ಪರಿಣಾಮ, ಭಾರತದ ಉತ್ಪನ್ನಗಳು ನ್ಯೂಜಿಲೆಂಡ್ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅಂತೆಯೇ, ನ್ಯೂಜಿಲೆಂಡ್ ಉತ್ಪನ್ನಗಳಿಗೂ ಭಾರತ ಕೂಡ ಸುಂಕ ವಿನಾಯಿತಿ ನೀಡುತ್ತವೆ. ನ್ಯೂಜಿಲೆಂಡ್ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗಳನ್ನು ಆಕ್ರಮಿಸಿಕೊಳ್ಳುತ್ತವೆ. ದೇಶೀಯ ಉತ್ಪನ್ನಗಳಿಗೆ ಪೈಪೋಟಿ ಕೊಡುತ್ತವೆ.
ಆದಾಗ್ಯೂ, ಎಫ್‌ಟಿಎ ಅಡಿಯಲ್ಲಿ ಉಭಯ ರಾಷ್ಟ್ರಗಳ ಎಲ್ಲ ಉತ್ಪನ್ನಗಳಿಗೂ ಸುಂಕವನ್ನು ರದ್ದುಗೊಳಿಸುವುದಿಲ್ಲ. ಉತ್ಪನ್ನಗಳ ಆಧಾರದ ಮೇಲೆ ತೆರಿಗೆ ವಿನಾಯಿತಿ/ಕಡಿತ ನಿರ್ಧಾರವಾಗುತ್ತದೆ ಎಂದು ಎರಡೂ ರಾಷ್ಟ್ರಗಳು ಹೇಳಿಕೊಂಡಿವೆ.
ಭಾರತ–ನ್ಯೂಜಿಲೆಂಡ್ ಒಪ್ಪಂದದಲ್ಲಿ ಭಾರತದಿಂದ ನ್ಯೂಜಿಲೆಂಡ್‌ಗೆ ರಫ್ತಾಗುವ ಸರಕುಗಳಿಗೆ ಶೂನ್ಯ ಸುಂಕದ ಮಾರುಕಟ್ಟೆ ಪ್ರವೇಶ ದೊರೆಯಲಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದೆ. ಬಟ್ಟೆ ಮತ್ತು ಉಡುಪು, ಚರ್ಮ ಮತ್ತು ಪಾದರಕ್ಷೆ, ಇಂಜಿನಿಯರಿಂಗ್ ಸರಕು, ಔಷಧ, ಕೃಷಿ ಉತ್ಪನ್ನ, ಸಮುದ್ರೋತ್ಪನ್ನ, ರಾಸಾಯನಿಕ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಭಾರತೀಯ ವಲಯಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಸಚಿವಾಲಯ ಹೇಳಿದೆ.
ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಬರುವ ಸರಕುಗಳಿಗೆ ಸಂಪೂರ್ಣ ಶೂನ್ಯ ಸುಂಕವನ್ನು ಒಂದೇ ದಿನದಲ್ಲಿ ನೀಡಲಾಗುವುದಿಲ್ಲ. ನ್ಯೂಜಿಲೆಂಡ್‌ನ ಪ್ರಸ್ತುತ ಭಾರತ ರಫ್ತಿನ ಸುಮಾರು 57% ಭಾಗಕ್ಕೆ ಒಪ್ಪಂದ ಜಾರಿಯಾದ ಮೊದಲ ದಿನದಿಂದಲೇ ಸುಂಕ ರದ್ದಾಗಲಿದೆ. ಹಂತ ಹಂತವಾಗಿ ಈ ಪ್ರಮಾಣ 82%ಕ್ಕೆ ಏರಲಿದೆ; ಮತ್ತೊಂದು 13% ರಫ್ತಿಗೆ ಸುಂಕದಲ್ಲಿ ಗಣನೀಯ ಕಡಿತ ದೊರೆಯಲಿದೆ ಎಂದು ಸಚಿವಾಲಯ ಹೇಳಿಕೊಂಡಿದೆ. ಆದಾಗ್ಯೂ, ಒಟ್ಟಾರೆ ನ್ಯೂಜಿಲೆಂಡ್‌ನ ಪ್ರಸ್ತುತ ರಫ್ತಿನ ಸುಮಾರು 95% ಭಾಗಕ್ಕೆ ಭಾರತದಲ್ಲಿ ಸುಂಕ ಸೌಲಭ್ಯ ಸಿಗಲಿದೆ.
ನ್ಯೂಜಿಲೆಂಡ್‌ನ ಕುರಿ ಮಾಂಸ, ಉಣ್ಣೆ, ಕಲ್ಲಿದ್ದಲು ಸೇರಿದಂತೆ ಕೆಲವು ಉತ್ಪನ್ನಗಳಿಗೆ ಮೊದಲ ದಿನದಿಂದಲೇ ಸುಂಕ ವಿನಾಯಿತಿ ದೊರೆಯಲಿದೆ. ಮೀನು ಮತ್ತು ಸಮುದ್ರೋತ್ಪನ್ನಗಳ ಸುಂಕವನ್ನು ಕೆಲವು ವರ್ಷಗಳಲ್ಲಿ ಹಂತ ಹಂತವಾಗಿ ತೆಗೆದುಹಾಕಲಾಗುತ್ತದೆ. ಕಿವಿ ಹಣ್ಣು ಮತ್ತು ಸೇಬುಗಳಿಗೂ ಸುಂಕ ಕಡಿತದ ಸೌಲಭ್ಯಗಳನ್ನು ಭಾರತ ಒದಗಿಸಿದೆ.
ಭಾರತೀಯ ಔಷಧ, ರಾಸಾಯನಿಕ ಮತ್ತು ಯಂತ್ರೋಪಕರಣಗಳಿಗೆ ಅವಕಾಶ
ಒಪ್ಪಂದ ಜಾರಿಗೆ ಬಂದ ಬಳಿಕ ಭಾರತೀಯ ರಫ್ತುದಾರರಿಗೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಮೊದಲ ದಿನದಿಂದಲೇ ದೊಡ್ಡ ಅವಕಾಶ ಸಿಗಲಿದೆ. ವಿಶೇಷವಾಗಿ ರಾಸಾಯನಿಕ, ಔಷಧ, ಯಂತ್ರೋಪಕರಣ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವ್ಯಾಪಾರ ಹೆಚ್ಚುವ ನಿರೀಕ್ಷೆ ಇದೆ ಎಂದು ಮೆಕ್ಕ್ಲೇ ಹೇಳಿದ್ದಾರೆ.
ಭಾರತದ ವಾಣಿಜ್ಯ ಸಚಿವಾಲಯದ ಮಾಹಿತಿಯ ಪ್ರಕಾರ, FTAಗೂ ಮೊದಲು ಕೆಲವು ಭಾರತೀಯ ಉತ್ಪನ್ನಗಳ ಮೇಲೆ 5ರಿಂದ 10%ವರೆಗೆ ಸುಂಕವಿತ್ತು; ಒಪ್ಪಂದದಡಿ ಇವು ಶೂನ್ಯಕ್ಕೆ ಇಳಿಯಲಿವೆ. ಇದರಿಂದ, ಭಾರತದ ಔಷಧ ಮತ್ತು ಜೆನೆರಿಕ್ ಔಷಧ ತಯಾರಿಕಾ ಕಂಪನಿಗಳು, ಕೈಗಾರಿಕಾ ರಾಸಾಯನಿಕ ಉತ್ಪಾದಕರು, ಯಂತ್ರೋಪಕರಣ ಮತ್ತು ಎಂಜಿನಿಯರಿಂಗ್ ಸರಕು ತಯಾರಕರು ಹಾಗೂ ಬಟ್ಟೆ–ಚರ್ಮ ಉತ್ಪನ್ನಗಳ ರಫ್ತುದಾರರಿಗೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಅವಕಾಶ ಸಿಗಬಹುದು.
ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!
ಸರಕು ವ್ಯಾಪಾರ ಮಾತ್ರವಲ್ಲದೆ ಸೇವಾ ವಲಯಕ್ಕೂ ಒಪ್ಪಂದದಡಿ ಸುಂಕ ವಿನಾಯಿತಿಗಳು ದೊರೆಯಲಿವೆ. ಮಾಹಿತಿ ತಂತ್ರಜ್ಞಾನ, ವೃತ್ತಿಪರ ಸೇವೆಗಳು, ದೂರಸಂಪರ್ಕ, ಪ್ರವಾಸೋದ್ಯಮ ಹಾಗೂ ಇತರ ಹಲವು ಸೇವಾ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳು ಮತ್ತು ವೃತ್ತಿಪರರಿಗೆ ಹೆಚ್ಚಿನ ಅವಕಾಶ ದೊರೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಒಂಬತ್ತು ತಿಂಗಳಲ್ಲಿ ಮಾತುಕತೆ
ಭಾರತ–ನ್ಯೂಜಿಲೆಂಡ್ ನಡುವೆ ಎಫ್‌ಟಿಎ ಮಾತುಕತೆ2025ರ ಮಾರ್ಚ್‌ನಲ್ಲಿ ಆರಂಭವಾಗಿತ್ತು. ಒಂಬತ್ತು ತಿಂಗಳ ಮಾತುಕತೆಯ ಬಳಿಕ 2025ರ ಡಿಸೆಂಬರ್‌ನಲ್ಲಿ ಒಪ್ಪಂದದ ಕುರಿತು ಮಾತುಕತೆ ಪೂರ್ಣಗೊಂಡಿತ್ತು. ನಂತರ 2026ರ ಏಪ್ರಿಲ್ 27ರಂದು ದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್ಕ್ಲೇ ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಪ್ರಸ್ತುತ ಭಾರತ–ನ್ಯೂಜಿಲೆಂಡ್ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವು ಸುಮಾರು 3.95 ಬಿಲಿಯನ್ ನ್ಯಾಜಿಲೆಂಡ್ ಡಾಲರ್ ಇದೆ. ಎಫ್‌ಟಿಎ ಜಾರಿಯಾದ ಬಳಿಕ ಸರಕು, ಸೇವೆ, ಹೂಡಿಕೆ ಮತ್ತು ಜನರ ಸಂಚಾರ ಹೆಚ್ಚುವ ಮೂಲಕ ದ್ವಿಪಕ್ಷೀಯ ಆರ್ಥಿಕ ಸಂಬಂಧ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಎರಡೂ ಸರ್ಕಾರಗಳು ನಿರೀಕ್ಷಿಸಿವೆ.
ಜಾಗತಿಕವಾಗಿ ಸುಂಕ ಸಮರ, ವ್ಯಾಪಾರ ನಿರ್ಬಂಧ ಹಾಗೂ ಅನಿಶ್ಚಿತತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ–ನ್ಯೂಜಿಲೆಂಡ್ ನಡುವಿನ ಎಫ್‌ಟಿಎ ಉದ್ಯಮಗಳಿಗೆ ಹೆಚ್ಚು ಸ್ಥಿರವಾದ ವ್ಯಾಪಾರ ನಿಯಮಗಳನ್ನು ಒದಗಿಸಲಿದೆ ಎಂದು ಮೆಕ್ಕ್ಲೇ ಹೇಳಿದ್ದಾರೆ. ಆದರೆ, ಈ ಒಪ್ಪಂದದಿಂದ ಯಾವ ವಲಯಕ್ಕೆ ಎಷ್ಟು ಲಾಭ ಅಥವಾ ಸ್ಪರ್ಧಾತ್ಮಕ ಒತ್ತಡ ಉಂಟಾಗುತ್ತದೆ ಎಂಬುದು, ಒಪ್ಪಂದ ಜಾರಿಯಾದ ಬಳಿಕ ಎದುರಾಗುವ ನೈಜ ವ್ಯಾಪಾರ ಪರಿಣಾಮಗಳಿಂದ ಇನ್ನಷ್ಟು ಸ್ಪಷ್ಟವಾಗಲಿದೆ.




