ಬಿಆರ್‌ಎಸ್ (BRS) ಟಿಕೆಟ್‌ನಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಖೈರತಾಬಾದ್ ಕ್ಷೇತ್ರದಿಂದ ಗೆದ್ದು, ಆ ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಾಸಕ ದಾನಂ ನಾಗೇಂದರ್ ಅವರನ್ನು ಅನರ್ಹಗೊಳಿಸಿ ತೆಲಂಗಾಣ ಹೈಕೋರ್ಟ್ ಶುಕ್ರವಾರ (ಸೆ. 18) ಮಹತ್ವದ ತೀರ್ಪು ಪ್ರಕಟಿಸಿದೆ. ದಾನಂ ನಾಗೇಂದರ್ ಅವರನ್ನು ಅನರ್ಹಗೊಳಿಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಈ ಹಿಂದೆ ವಜಾಗೊಳಿಸಿದ್ದ ತೆಲಂಗಾಣ ವಿಧಾನಸಭೆ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಅವರ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಿ.ಎಂ. ಮೊಹಿಯುದ್ದೀನ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. “2023ರಲ್ಲಿ ಬಿಆರ್‌ಎಸ್ ಅಭ್ಯರ್ಥಿಯಾಗಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಂದರ್, 2024ರಲ್ಲಿ ಕಾಂಗ್ರೆಸ್ ಟಿಕೆಟ್‌ನಡಿ ಸಿಕಂದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹೀಗಾಗಿ ಅವರನ್ನು ಏಪ್ರಿಲ್ 23, 2024ರಿಂದಲೇ ಅನ್ವಯವಾಗುವಂತೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ” ಎಂದು ನ್ಯಾಯಪೀಠ ಘೋಷಿಸಿದೆ.
ಮಾರ್ಚ್ 11ರಂದು ಸ್ಪೀಕರ್ ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹುಜೂರಾಬಾದ್‌ನ ಬಿಆರ್‌ಎಸ್ ಶಾಸಕ ಪಾಡಿ ಕೌಶಿಕ್ ರೆಡ್ಡಿ ಮತ್ತು ನಿರ್ಮಲ್‌ನ ಬಿಜೆಪಿ ಶಾಸಕ ಅಲ್ಲೇಟಿ ಮಹೇಶ್ವರ್ ರೆಡ್ಡಿ ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಪ್ಯಾರಾಗ್ರಾಫ್ 2 (1) (ಎ) ಪ್ರಕಾರ, ಬಿಆರ್‌ಎಸ್ ಟಿಕೆಟ್‌ನಲ್ಲಿ ಗೆದ್ದಿದ್ದ ನಾಗೇಂದರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಬೇಕು ಎಂದು ಅವರು ವಾದಿಸಿದ್ದರು. ಆಗಸ್ಟ್ 21ರಂದೇ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ದಾನಂ ನಾಗೇಂದರ್ ಸೇರಿದಂತೆ ಒಟ್ಟು 10 ಬಿಆರ್‌ಎಸ್ ಶಾಸಕರು 2024ರ ಮಾರ್ಚ್‌ನಿಂದ ಆಗಸ್ಟ್ ಅವಧಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಡಿಯಂ ಶ್ರೀಹರಿ, ಪೋಚರಂ ಶ್ರೀನಿವಾಸ್ ರೆಡ್ಡಿ, ತೇಲಂ ವೆಂಕಟ್ ರಾವ್, ಎಂ. ಸಂಜಯ್ ಕುಮಾರ್, ಅರೆಕಪೂಡಿ ಗಾಂಧಿ, ಟಿ. ಪ್ರಕಾಶ್ ಗೌಡ್, ಬಿ. ಕೃಷ್ಣಮೋಹನ್ ರೆಡ್ಡಿ, ಕಾಳೆ ಯಾದಯ್ಯ ಮತ್ತು ಗೂಡೆಂ ಮಹಿಪಾಲ್ ರೆಡ್ಡಿ ಪಕ್ಷಾಂತರ ಮಾಡಿದ್ದ ಇತರ ಶಾಸಕರಾಗಿದ್ದಾರೆ.
ಶಾಸಕರ ಅನರ್ಹತೆಗೆ ಸ್ಪೀಕರ್ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ 2024ರ ಏಪ್ರಿಲ್‌ನಲ್ಲಿ ಬಿಆರ್‌ಎಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ, ಅನರ್ಹತೆ ಅರ್ಜಿಗಳನ್ನು ಇತ್ಯರ್ಥಪಡಿಸಲು ವೇಳಾಪಟ್ಟಿ ನಿಗದಿಪಡಿಸುವಂತೆ 2024ರ ಸೆ. 9ರಂದು ಸ್ಪೀಕರ್‌ಗೆ ಸೂಚಿಸಿತ್ತು. ಆದರೆ ನವೆಂಬರ್ 27ರಂದು ಹೈಕೋರ್ಟ್ ವಿಭಾಗೀಯ ಪೀಠವು ಈ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 2025ರ ಜುಲೈ 31ರಂದು ಸುಪ್ರೀಂ ಕೋರ್ಟ್, ಮೂರು ತಿಂಗಳೊಳಗೆ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಸ್ಪೀಕರ್‌ಗೆ ಕಟ್ಟುನಿಟ್ಟಿನ ಗಡುವು ನೀಡಿತ್ತು.
ಅಂತಿಮವಾಗಿ ಈ 10 ಶಾಸಕರ ವಿರುದ್ಧದ ಅರ್ಜಿಗಳನ್ನು ಸ್ಪೀಕರ್ ಕಚೇರಿ ವಜಾಗೊಳಿಸಿತ್ತು. ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಬಿಆರ್‌ಎಸ್ ಹಾಗೂ ಬಿಜೆಪಿ ನಾಯಕರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ದಾನಂ ನಾಗೇಂದರ್ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಿದ್ದು, ಉಳಿದ ಶಾಸಕರ ಪ್ರಕರಣಗಳ ವಿಚಾರಣೆ ಮುಂದುವರಿದಿದೆ.




