ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿರುವ ಸಹಾಯಕ ಹೈಕಮಿಷನ್‌ನಲ್ಲಿ ನಿಯೋಜಿತರಾಗಿದ್ದ ಭಾರತೀಯ ಅಧಿಕಾರಿಯೊಬ್ಬರು ಮಂಗಳವಾರ ಆವರಣದೊಳಗೆ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ಅಧಿಕಾರಿಯನ್ನು ಹರಿಯಾಣದ ನರೇಂದ್ರ ಧಾರ್ (35) ಎಂದು ಗುರುತಿಸಲಾಗಿದೆ. ಅವರು ಚಟ್ಟೋಗ್ರಾಮ್‌ನ ಖುಲ್ಶಿ ಪ್ರದೇಶದಲ್ಲಿ ಭಾರತೀಯ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಭಾರತೀಯ ಅಧಿಕಾರಿಗಳಿಗೆ ಲಂಚ; ಮೋದಿ ಆಪ್ತ ಅದಾನಿ ಬಂಧನಕ್ಕೆ ಅಮೆರಿಕ ವಾರೆಂಟ್ ಯಾಕೆ?
ಚಟ್ಟೋಗ್ರಾಮ್ ಮೆಟ್ರೋಪಾಲಿಟನ್ ಪೊಲೀಸರ ಪ್ರಕಾರ, ಮಂಗಳವಾರ ಬೆಳಿಗ್ಗೆ ಅಧಿಕಾರಿ ತನ್ನ ಕೋಣೆಯ ಒಳಗೆ ಇದ್ದರು. ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇತರೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ಮೃತದೇಹವನ್ನು ಕೋಣೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಧಿಕಾರಿಗಳು ಇನ್ನೂ ಸಾವಿನ ಕಾರಣವನ್ನು ಬಹಿರಂಗಪಡಿಸಿಲ್ಲ. “ಸದ್ಯ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಲಾಗುವುದು ಮತ್ತು ಮರಣೋತ್ತರ ಪರೀಕ್ಷೆಯ ನಂತರ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಹೈಕಮಿಷನ್ ಅಧಿಕಾರಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಮರಣೋತ್ತರ ಪರೀಕ್ಷೆಯ ಔಪಚಾರಿಕತೆಗಳು ಪೂರ್ಣಗೊಂಡ ನಂತರ ಮೃತದೇಹವನ್ನು ಭಾರತೀಯ ಮಿಷನ್‌ಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.




