ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೈತರ ಬದುಕಿಗೆ ಆಶಾಕಿರಣವಾಗಿದ್ದ ಶ್ರೀ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಆರಂಭವಾಗಿ ಹತ್ತು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆ ಹೋರಾಟಕ್ಕೆ ಸಜ್ಜಾಗಿದ್ದು, ಈ ಕುರಿತು ನಡೆದ ವಿವಿಧ ಗ್ರಾಮಗಳ ಸಭೆಗಳಲ್ಲಿ ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಜಗದೀಶ ದೇವರಡ್ಡಿ ಮಾತನಾಡಿದರು.
ಚನ್ನಾಪೂರ, ನಂದಿಹಾಳ, ಬಟಕುರ್ಕಿ, ನಾಗನೂರು, ಸಾಲಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ಮಾತನಾಡಿದ ಅವರು, “ಶ್ರೀ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಶಕ್ತಿ ಶಾಸಕ ಅಶೋಕ ಪಟ್ಟಣ ಅವರಿಗೆ ಮಾತ್ರ ಇದೆ. ತಾಲೂಕಿನ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಶೋಕ ಪಟ್ಟಣವರು ವೀರಭದ್ರೇಶ್ವರ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ವೀರಭದ್ರೇಶ್ವರ ಯೋಜನೆ ಆರಂಭವಾಗಿ 10 ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಕಾರಣಗಳಿಂದ ಯೋಜನೆ ಕಡೆಗೆ ಅಗತ್ಯ ಗಮನ ಹರಿಸಲಾಗಿಲ್ಲ. ಇದರಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಇದೇ ತಿಂಗಳ 25ರಂದು ಸಾಲಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಬಿ.ಎಸ್. ನಾಯಕ್ ಮಾತನಾಡಿ, “ಅಶೋಕ ಪಟ್ಟಣವರು ತಾಲೂಕಿಗೆ ದೊಡ್ಡ ನೀರಾವರಿ ಯೋಜನೆಗಳನ್ನು ತಂದಿರುವುದು ಸತ್ಯ. ಆದರೆ ಅವುಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿರುವುದರಿಂದ ರೈತರು ಹೋರಾಟದ ಮಾರ್ಗ ಹಿಡಿಯುವ ಪರಿಸ್ಥಿತಿ ಬಂದಿದೆ” ಎಂದು ಹೇಳಿದರು.
ಸಭೆಯಲ್ಲಿ ರೈತ ಸಂಘಟನೆಯ ಮುಖಂಡರು, ಗ್ರಾಮಸ್ಥರು ಹಾಗೂ ರೈತರು ಉಪಸ್ಥಿತರಿದ್ದರು.



