ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಸರ್ಕಾರವು ಸಾರ್ವಜನಿಕರ ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ರೋಶದ ಬಳಿಕ ತನ್ನ ವಿವಾದಾತ್ಮಕ ನಿರ್ಧಾರವೊಂದನ್ನು ವಾಪಸ್ ಪಡೆದುಕೊಂಡಿದೆ. ಸಾರ್ವಜನಿಕ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ), 2005ರ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಹೊರಡಿಸಲಾಗಿದ್ದ ಗೆಜೆಟ್ ಅಧಿಸೂಚನೆಯನ್ನು ವಿಜಯ್ ಸರ್ಕಾರವು ರದ್ದುಗೊಳಿಸಿದೆ.
ಇತ್ತೀಚೆಗೆ ತಮಿಳುನಾಡು ಸರ್ಕಾರವು ಆರ್‌ಟಿಐ ಕಾಯ್ದೆಯ ಸೆಕ್ಷನ್ 24(4) ಅನ್ನು ಬಳಸಿಕೊಂಡು, ರಾಜ್ಯದ ಸಾರ್ವಜನಿಕ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆಯನ್ನು ‘ಖ್ಯಾತ ಗೂಢಚಾರಿ ಮತ್ತು ಭದ್ರತಾ ಸಂಸ್ಥೆ’ ಎಂದು ವರ್ಗೀಕರಿಸಿತ್ತು. ಈ ವರ್ಗೀಕರಣದ ಮೂಲಕ ಇಲಾಖೆಯ ಕೆಲಸ ಕಾರ್ಯಗಳು, ಲಾಕ್‌ಅಪ್ ಸಾವುಗಳು, ಕೋಮು ಗಲಭೆಗಳು ಹಾಗೂ ಬಂಧನಗಳ ಕುರಿತಾದ ಯಾವುದೇ ಮಾಹಿತಿಯನ್ನು ಆರ್‌ಟಿಐ ಮೂಲಕ ನೀಡದಂತೆ ವಿನಾಯಿತಿ ನೀಡಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ತಮಿಳುನಾಡು | ವಿಜಯ್ ಸರ್ಕಾರ ಪತನಕ್ಕೆ ಯತ್ನ, ಟಿವಿಕೆ ಶಾಸಕನಿಗೆ 35 ಕೋಟಿ ರೂ. ಆಮಿಷ
ಸರ್ಕಾರದ ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ನಾಗರಿಕ ಹಕ್ಕುಗಳ ಹೋರಾಟಗಾರರು, ಆರ್‌ಟಿಐ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸರ್ಕಾರದ ಈ ಕ್ರಮವು ತಮಿಳುನಾಡನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಪರಿವರ್ತಿಸುವ ಯತ್ನ ಎಂದು ಸಿಪಿಐ(ಎಂ) ಎಂಪಿ ಸು ವೆಂಕಟೇಶನ್ ಆರೋಪಿಸಿದ್ದರು.
ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಸೇರಿದಂತೆ ಹಲವು ನಾಯಕರು, ಪಾರದರ್ಶಕ ಆಡಳಿತಕ್ಕೆ ಈ ನಿರ್ಧಾರ ಕೊಡಲಿಪೆಟ್ಟು ನೀಡುತ್ತದೆ ಹಾಗೂ ಪೋಲೀಸ್ ಕಸ್ಟಡಿ ಸಾವುಗಳಂತಹ ಗಂಭೀರ ವಿಚಾರಗಳನ್ನು ಮುಚ್ಚಿಹಾಕಲು ದಾರಿಯಾಗುತ್ತದೆ ಎಂದು ಕಿಡಿಕಾರಿದ್ದರು.
ಎಲ್ಲ ಕಡೆಗಳಿಂದ ಹರಿದುಬಂದ ತೀವ್ರ ಟೀಕೆಗಳು ಮತ್ತು ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರ, ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆಯು ಸೆಪ್ಟೆಂಬರ್ 21ರಂದು ಹೊರಡಿಸಿದ್ದ ಆದೇಶ ಸಂಖ್ಯೆ 57 ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದೆ.




