ತಮಿಳುನಾಡಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಉರುಳಿಸಲು ಯತ್ನ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆಡಳಿತ ಪಕ್ಷದ ಶಾಸಕರೊಬ್ಬರನ್ನು ಸೆಳೆಯಲು ಬರೋಬ್ಬರಿ 35 ಕೋಟಿ ರೂ. ಆಮಿಷ ಒಡ್ಡಿದ ಆರೋಪದ ಮೇಲೆ ಮೂವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಆಡಳಿತಾರೂಢ ಟಿವಿಕೆ ಹಾಗೂ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ನಡುವೆ ಶಾಸಕರ ಖರೀದಿ ಕುರಿತಂತೆ ಆರೋಪ ಹಾಗೂ ಪ್ರತ್ಯಾರೋಪಗಳು ತಾರಕಕ್ಕೇರಿವೆ.
ಕೃಷ್ಣಗಿರಿ ಜಿಲ್ಲೆಯ ಊತಂಗರೈ ಕ್ಷೇತ್ರದ ಟಿವಿಕೆ ಶಾಸಕ ಡಾ. ಎನ್. ಇಳಯರಾಜ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮುಂಬರುವ ದಿನಗಳಲ್ಲಿ ವಿಧಾನಸಭೆಯಲ್ಲಿ ಸ್ಪೀಕರ್ ವಿರುದ್ಧ ಮಂಡನೆಯಾಗಲಿರುವ ನಿರ್ಣಯದ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಅಥವಾ ಪಕ್ಷಾಂತರ ಮಾಡುವಂತೆ ಶಾಸಕ ಇಳಯರಾಜ ಅವರನ್ನು ಸಂಪರ್ಕಿಸಲಾಗಿತ್ತು.
ಇದಕ್ಕೆ ಪ್ರತಿಯಾಗಿ 35 ಕೋಟಿ ರೂ. ನೀಡುವುದಾಗಿ ‘ಇಂಡಿಯನ್ ಪೊಲಿಟಿಕಲ್ ಡೆಮಾಕ್ರಟಿಕ್ ಸ್ಟ್ರಾಟಜೀಸ್’ (ಐಪಿಡಿಎಸ್) ಎಂಬ ಸಮೀಕ್ಷಾ ಸಂಸ್ಥೆ ನಡೆಸುತ್ತಿರುವ ತಿರುನಾವುಕ್ಕರಸು ಎಂಬಾತ ಆಮಿಷ ಒಡ್ಡಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಆಫರ್ ಅನ್ನು ಶಾಸಕರು ತಿರಸ್ಕರಿಸಿದಾಗ, ವಿಷಯವನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ಶಾಸಕರ ದೂರಿನ ಮೇರೆಗೆ ಚೆನ್ನೈ ಪೊಲೀಸ್ ಆಯುಕ್ತರ ಸೂಚನೆಯಂತೆ ಕಾರ್ಯಾಚರಣೆ ನಡೆಸಿದ ವಿಶೇಷ ತಂಡವು ತಿರುನಾವುಕ್ಕರಸು ಹಾಗೂ ಆತನ ಸಹಚರರಾದ ನರೇಶ್ ಮತ್ತು ತ್ಯಾಗರಾಜನ್ ಎಂಬುವವರನ್ನು ಬಂಧಿಸಿದೆ.
ಇದನ್ನು ಓದಿದ್ದೀರಾ? FCRA ಅಸ್ತ್ರ ಬಳಸಿ NGOಗಳ ಕತ್ತು ಹಿಸುಕಿದ ಮೋದಿ ಆಡಳಿತ; ಆರೆಸ್ಸೆಸ್ ಸಂಸ್ಥೆಗಳಿಗೆ ಏಕಿಲ್ಲ…
ಬಂಧಿತ ನರೇಶ್ ಹಾಗೂ ತಮಿಳುನಾಡಿನ ಮಾಜಿ ಸಚಿವ, ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರ ಸಹೋದರ ವಿ. ಅಶೋಕ್ ಕುಮಾರ್ ನಡುವೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೆಂಥಿಲ್ ಬಾಲಾಜಿ ಮತ್ತು ಅಶೋಕ್ ಕುಮಾರ್ ಅವರ ನಿರ್ದೇಶನದ ಮೇರೆಗೇ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಟಿವಿ-ಕೆ ಸರ್ಕಾರದ ವಿದ್ಯುತ್ ಸಚಿವ ಆರ್. ನಿರ್ಮಲ್ ಕುಮಾರ್, “ಕಳೆದ 40 ದಿನಗಳಿಂದ ನಮ್ಮ ಶಾಸಕರನ್ನು ಸೆಳೆಯಲು ಡಿಎಂಕೆ ಯತ್ನಿಸುತ್ತಿದೆ. ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಅವರು ವಿಜಯ್ ಸರ್ಕಾರವನ್ನು ಉರುಳಿಸಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸುಮಾರು 15 ರಿಂದ 20 ಶಾಸಕರಿಗೆ 50 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇನ್ನೊಂದೆಡೆ, ಮುಖ್ಯಮಂತ್ರಿ ವಿಜಯ್ ಅವರೇ ಶಾಸಕರ ಖರೀದಿಗೆ ಇಳಿದಿದ್ದಾರೆ ಎಂದು ಡಿಎಂಕೆ ಪ್ರತ್ಯಾರೋಪ ಮಾಡಿದೆ. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ಈ ಕುರಿತು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಅಧಿಕೃತ ದೂರು ನೀಡಿದ್ದಾರೆ.




