ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡುವ ಮೂಲಕ ಸಂವಿಧಾನದ ಆಶಯಗಳು, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸ್ವಾತಂತ್ರ್ಯದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.
ಬೀದರ್ ತಾಲೂಕಿನ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ 2026–27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ ಹಾಗೂ ಪ್ರಬಂಧ ಸ್ಪರ್ಧೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಧ್ಯಾಪಕ ಡಾ. ಮನೋಹರ ಮೇತ್ರೆ ಅವರು ‘ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು, ಸಾಧನೆ ಮತ್ತು ಬರಹ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, “ಅಂಬೇಡ್ಕರ್ ಅವರು ಎದುರಿಸಿದ ಸಾಮಾಜಿಕ ಅಡೆತಡೆಗಳು ಹಾಗೂ ಕಷ್ಟಗಳ ನಡುವೆಯೂ ಶಿಕ್ಷಣದ ಮೇಲಿನ ಆಸಕ್ತಿಯನ್ನು ಕೈಬಿಡದೆ ನಿರಂತರವಾಗಿ ಅಧ್ಯಯನ ಮಾಡಿ ವಿಶ್ವದರ್ಜೆಯ ಜ್ಞಾನ ಸಂಪಾದಿಸಿದರು” ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಮಾತನಾಡಿ, “ಅಂಬೇಡ್ಕರ್ ಅವರು ಎಷ್ಟೇ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಶಿಕ್ಷಣವನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಆದ್ದರಿಂದ ವಿದ್ಯಾರ್ಥಿಗಳು ಅವರ ಜೀವನವನ್ನು ಕೇವಲ ಪಠ್ಯವಾಗಿ ಓದದೆ, ಬದುಕಿಗೆ ಮಾರ್ಗದರ್ಶನ ನೀಡುವ ಪ್ರೇರಣೆಯಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ದೊಡ್ಡ ಕನಸು ಕಾಣಬೇಕು. ಆ ಕನಸನ್ನು ನನಸಾಗಿಸಲು ಪ್ರತಿದಿನವೂ ಶ್ರಮಿಸಬೇಕು” ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ ಮಾತನಾಡಿ,”ಅಂಬೇಡ್ಕರ್ ಅವರು ಜೀವನದಲ್ಲಿ ಓದು ಮತ್ತು ಶಿಕ್ಷಣಕ್ಕೆ ನೀಡಿದ ಮಹತ್ವ ಇಂದಿನ ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯಾಗಬೇಕು. ಅವರ ಓದು, ಪರಿಶ್ರಮ ಹಾಗೂ ಸಾಧನೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆದರ್ಶವಾಗಿಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶರಣಪ್ಪ ಎಸ್.ಮಲಗೊಂಡ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹಾಗೂ ಸಾಮಾಜಿಕ ಅರಿವು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಮಮತಾ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ : ಹುಲಸೂರ | ಮುಚಳಂಬ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಆಗ್ರಹ
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನವರಂಗ ಮಾಣಿಕರಾವ್, ಗ್ರಂಥಪಾಲಕ ಡಾ.ರಾಜಕುಮಾರ ಟಿ., ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಶಾಂತಕುಮಾರ ಪಾಟೀಲ, ಡಾ.ಜೈಶಿಲ್ಲಾ, ಬಾಪು ಮಡಿಕೆ, ವಿಜಯಕುಮಾರ್ ಸ್ವಾಮಿ, ದಯಾನಂದ ರೆಡ್ಡಿ, ಮಲ್ಲಿಕಾರ್ಜುನ ಮೂಲಗೆ, ಕು. ಕ್ಲೈಮೆಂಟಿನಾ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಿಡಿಸಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸವೀತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂಜುಕುಮಾರ ಅಪ್ಪೆ ಸ್ವಾಗತಿಸಿದರು. ಡಾ.ಶಾಂತಕುಮಾರ ಪಾಟೀಲ ನಿರೂಪಿಸಿದರು. ಡಾ.ದಶವಂತ ಬಂಡೆ ವಂದಿಸಿದರು.




