ದೆಹಲಿಯ ಶಾಲೆಯೊಂದರಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿಶ್ರಾಂತ ಪ್ರಾಧ್ಯಾಪಕಿ ಝೋಯಾ ಹಸನ್ ಅವರು ಮಾಡಬೇಕಿದ್ದ ಭಾಷಣವನ್ನು ಕೊನೆಯ ಗಳಿಗೆಯಲ್ಲಿ ರದ್ದುಗೊಳಿಸಲಾಗಿದೆ. ಶಾಲೆಯ ಆವರಣದ ಹೊರಗೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಲೋಧಿ ಎಸ್ಟೇಟ್ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದ ಸ್ವಾತಂತ್ರ್ಯ ದಿನಾಚರಣೆ ಹಾಗೂ ವಿದ್ಯಾರ್ಥಿವೇತನ ಪ್ರದಾನ ಸಮಾರಂಭಕ್ಕೆ ಝೋಯಾ ಹಸನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು.
ಮಾಹಿತಿ ತಿಳಿದ ಸುಮಾರು 10 ರಿಂದ 15 ವಿಎಚ್ಪಿ ಕಾರ್ಯಕರ್ತರು ಶಾಲೆಯ ಹೊರಗೆ ಜಮಾಯಿಸಿದ್ದರು. ತಕ್ಷಣವೇ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಯಿತು. ಭದ್ರತೆಯ ಕಾಳಜಿಯಿಂದಾಗಿ ಪ್ರಾಧ್ಯಾಪಕಿಯ ಭಾಷಣ ಹಾಗೂ ಅವರ ಪ್ರವೇಶವನ್ನು ರದ್ದುಗೊಳಿಸಬೇಕಾಯಿತು ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. “ಕೆಲವು ಕಿಡಿಗೇಡಿಗಳು ಬೆಳ್ಳಂಬೆಳಿಗ್ಗೆ ಶಾಲೆಯ ಹೊರಗೆ ಜಮಾಯಿಸಿದ್ದರು. ರಾಜಕೀಯ ಕಾರಣಗಳಿಂದಾಗಿ ಪರಿಸ್ಥಿತಿ ಬಿಗಡಾಯಿಸುವ ಆತಂಕವಿದ್ದಿದ್ದರಿಂದ ಈ ಕ್ರಮ ಕೈಗೊಳ್ಳಲಾಯಿತು” ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಪೊಲೀಸರ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಅಥವಾ ಶಾಲೆಯೇ ಸ್ವಯಂಪ್ರೇರಿತವಾಗಿ ರದ್ದುಗೊಳಿಸಿದೆಯೇ ಎಂಬುದರ ಬಗ್ಗೆ ಶಾಲಾ ಆಡಳಿತ ಮಂಡಳಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಝೋಯಾ ಹಸನ್ ಅವರ ಬದಲಿಗೆ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಗುಜರಾತ್ ಎಜುಕೇಶನ್ ಸೊಸೈಟಿ (ಜಿಇಎಸ್) ಅಧ್ಯಕ್ಷೆ ಶ್ವೇತಾ ಕಲ್ಯಾಣವಾಲಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಕಾರ್ಯಕ್ರಮವು ಯಾವುದೇ ಅಡ್ಡಿಯಿಲ್ಲದೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, “ಶಾಲೆಯ ಆಡಳಿತ ಮಂಡಳಿಯೇ ಭದ್ರತೆಯ ಆತಂಕ ವ್ಯಕ್ತಪಡಿಸಿ ನಮಗೆ ಮಾಹಿತಿ ನೀಡಿತ್ತು. ಹಾಗಾಗಿ ಕಾರ್ಯಕ್ರಮ ರದ್ದುಗೊಳಿಸುವ ನಿರ್ಧಾರವನ್ನು ಅವರೇ ತೆಗೆದುಕೊಂಡಿರಬಹುದು. ನಾವು ಕೇವಲ ಭದ್ರತೆ ಒದಗಿಸಲು ಮಾತ್ರ ಅಲ್ಲಿಗೆ ತೆರಳಿದ್ದೆವು, ಕಾರ್ಯಕ್ರಮ ರದ್ದುಗೊಳಿಸುವಂತೆ ನಾವು ಯಾವುದೇ ಒತ್ತಡ ಹೇರಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ವಿಜ್ಞಾನಿಯಾಗಿರುವ ಝೋಯಾ ಹಸನ್ ಅವರು ‘ಬಹುತ್ವದ ಮಹತ್ವ’ (Why pluralism matters) ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಸಿದ್ಧರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಳೆದ ಕೆಲವು ವಾರಗಳಿಂದ ಶಾಲೆಯ ಪ್ರಾಂಶುಪಾಲೆ ಅನುರಾಧಾ ಜೋಶಿ ಅವರು ನನ್ನ ಸಂಪರ್ಕದಲ್ಲಿದ್ದರು. ಇಂದು (ಶುಕ್ರವಾರ) ಬೆಳಿಗ್ಗೆ 8.30ರ ಸುಮಾರಿಗೆ ಶಾಲೆಯ ಶಿಕ್ಷಕಿಯೊಬ್ಬರು 9.30ಕ್ಕೆ ನನ್ನ ನಿವಾಸಕ್ಕೆ ಬರುವುದಾಗಿ ಸಂದೇಶ ಕಳುಹಿಸಿದ್ದರು. ಆದರೆ, ಅವರ ಬದಲಿಗೆ ಶಾಲೆಯ ಭದ್ರತಾ ಮುಖ್ಯಸ್ಥರು ಬಂದು ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದರು,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ವಿಎಚ್ಪಿ ಪ್ರತಿಭಟನೆಯಿಂದಾಗಿ ಶಾಲೆಗೆ ಪೊಲೀಸರು ಬಂದಿದ್ದಾರೆ. ನನ್ನ ಹಾಗೂ ವಿದ್ಯಾರ್ಥಿಗಳ ಭದ್ರತೆಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಭದ್ರತಾ ಮುಖ್ಯಸ್ಥರು ತಿಳಿಸಿದರು. ಆದರೆ ಪೊಲೀಸರು ನೇರವಾಗಿ ನನ್ನನ್ನು ಸಂಪರ್ಕಿಸಿಲ್ಲ. ನಾನು ಮಾತನಾಡಬೇಕಿದ್ದ ವಿಷಯದ ಬಗ್ಗೆ ಶಾಲೆಗೆ ಮೊದಲೇ ತಿಳಿಸಲಾಗಿತ್ತು. ಆ ಬಗ್ಗೆ ಶಾಲೆಯು ಯಾವುದೇ ತಕರಾರು ವ್ಯಕ್ತಪಡಿಸಿರಲಿಲ್ಲ. ನಾನು ಯಾವ ವಿಷಯದ ಮೇಲೆ ಮಾತನಾಡಬೇಕು ಅಥವಾ ಮಾತನಾಡಬಾರದು ಎಂದು ಅವರು ಷರತ್ತು ವಿಧಿಸಿರಲಿಲ್ಲ,” ಎಂದು ಝೋಯಾ ಹಸನ್ ಹೇಳಿದ್ದಾರೆ.
ಈ ಬೆಳವಣಿಗೆಯನ್ನು ಶಿಕ್ಷಣ ತಜ್ಞರು ತೀವ್ರವಾಗಿ ಖಂಡಿಸಿದ್ದಾರೆ. ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅವರು ‘ಎಕ್ಸ್’ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಭದ್ರತೆಯ ನೆಪವೊಡ್ಡಿ ಶಾಲಾ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿ ಪ್ರಾಧ್ಯಾಪಕಿಯ ಭಾಷಣವನ್ನು ರದ್ದುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಮತ್ತೋರ್ವ ಶಿಕ್ಷಣ ತಜ್ಞ ಅಪೂರ್ವಾನಂದ್ ಪ್ರತಿಕ್ರಿಯಿಸಿ, “ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಬೇಕಿತ್ತೇ ಹೊರತು, ವಿದ್ಯಾರ್ಥಿಗಳನ್ನು ಭೇಟಿಯಾಗದಂತೆ ಪ್ರಾಧ್ಯಾಪಕಿಯನ್ನು ತಡೆಯಬಾರದಾಗಿತ್ತು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




