“ಎಲ್ಲಾ ನಾಗರಿಕರನ್ನು ಸರ್ಕಾರದ ಗುಲಾಮರನ್ನಾಗಿ ಮಾಡಲಾಗುತ್ತಿದೆ” ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ್ ಜಮ್ದಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ರಾಜಕಾರಣಿ ಮತ್ತು ಕಾರ್ಯಕರ್ತರ ವಿರುದ್ಧ ಗಡಿಪಾರು ಆದೇಶ ಹೊರಡಿಸಿದ್ದಕ್ಕಾಗಿ ಮುಂಬೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (SDPI) ಪ್ರಧಾನ ಕಾರ್ಯದರ್ಶಿ ಸಯೀದ್ ಅಹ್ಮದ್ ಅಬ್ದುಲ್ ವಾಹಿದ್ ಚೌಧರಿ ಅವರ ವಿರುದ್ಧ 2025ರ ಡಿಸೆಂಬರ್ 3ರಂದು ಪೊಲೀಸ್ ಆಯುಕ್ತರು ಗಡಿಪಾರು ಆದೇಶವನ್ನು ಹೊರಡಿಸಿದ್ದರು. ಈ ಆದೇಶವನ್ನು 2026ರ ಮಾರ್ಚ್ 27ರಂದು ಕೊಂಕಣ ವಿಭಾಗದ ವಿಭಾಗೀಯ ಆಯುಕ್ತರು ಎತ್ತಿಹಿಡಿದಿದ್ದರು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಜನರ ವಾಕ್ ಸ್ವಾತಂತ್ರ್ಯ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ನ್ಯಾಯಮೂರ್ತಿಗಳನ್ನೇ ಕೇಂದ್ರ ಸರ್ಕಾರ ಬೆದರಿಸುತ್ತಿದೆ; ಪ್ರಶಾಂತ್ ಭೂಷಣ್ ಆರೋಪ
ಒಂದು ವರ್ಷದ ಗಡಿಪಾರು ಆದೇಶವನ್ನು ವಜಾಗೊಳಿಸಿದ ಜಸ್ಟೀನ್ ಮಾಧವ್, “ಏನಿದು? ಎಲ್ಲಾ ನಾಗರಿಕರನ್ನು ಭಾರತ ಸರ್ಕಾರದ ಗುಲಾಮರನ್ನಾಗಿ ಮಾಡಲಾಗುತ್ತಿದೆ. ಜನರು ಪ್ರತಿಭಟಿಸುವಂತಿಲ್ಲ, ಆಂದೋಲನ ಮಾಡುವಂತಿಲ್ಲ. ಇದೆಲ್ಲ ಏನು? ಈಗ ಹಲವು ದಾಖಲೆಗಳು ಸೋರಿಕೆಯಾಗಿವೆ. ಜನರು ಪ್ರತಿಭಟಿಸಿದರೆ, ನೀವು ಅವರ ಮೇಲೂ ಪ್ರಕರಣ ಹೂಡುತ್ತೀರಿ.. ಏನಿದೆಲ್ಲ” ಎಂದು ಪ್ರಶ್ನಿಸಿದರು.
“ಪೊಲೀಸರು ಸಿಎಂ ಅಥವಾ ಪಿಎಂ ಸೇವಕರಲ್ಲ”
“ಪ್ರತಿಭಟಿಸುವುದು ನಾಗರಿಕರ ಹಕ್ಕು. ಅರ್ಜಿದಾರರು ‘ಬಿಜೆಪಿ ಸರ್ಕಾರ ಮುರ್ದಾಬಾದ್’, ‘ಅಮಿತ್ ಶಾ ಮುರ್ದಾಬಾದ್’ ಮುಂತಾದ ಘೋಷಣೆಗಳನ್ನು ಎತ್ತಿದ್ದಾರೆ. ನಾಗರಿಕರು ಅಂತಹ ಘೋಷಣೆಗಳನ್ನು ಏಕೆ ಕೂಗಬಾರದು? ಅಂತಹ ಘೋಷಣೆಗಳಿಗೆ ಗಡಿಪಾರು ಆದೇಶ ಯಾಕೆ? ಅಷ್ಟಕ್ಕೂ ಪೊಲೀಸರು ಸಾರ್ವಜನಿಕ ಸೇವಕರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯ ಸೇವಕರಲ್ಲ” ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರದ ನಿರ್ಧಾರದ ವಿರುದ್ಧ ಮೋರ್ಚಾಗಳು ಮತ್ತು ಧರಣಿಗಳನ್ನು ಆಯೋಜಿಸುವುದು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಗಡೀಪಾರಿಗೆ ಆಧಾರವಾಗದು. ಚೌಧರಿ ಅವರ ಗಡೀಪಾರು ಆದೇಶಕ್ಕೆ ಸಹಿ ಹಾಕಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ನ್ಯಾಯಮೂರ್ತಿಗಳು ಎಚ್ಚರಿಸಿದ್ದಾರೆ.
“ಸಂವಿಧಾನದ ವಿಧಿ 19, 21 ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಅರ್ಜಿದಾರರ ವಿರುದ್ಧದ ಕ್ರಮವು ಅವರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಧಿ ಹೇಳುತ್ತದೆ” ಎಂದರು.
ಇದನ್ನೂ ಓದಿ: ನ್ಯಾಯಮೂರ್ತಿಗಳೇ, ದಯವಿಟ್ಟು ನೀವೇ ಹಿಂದೆ ಸರಿಯಿರಿ; ಹೈಕೋರ್ಟ್‌ನಲ್ಲಿ ಕೇಜ್ರಿವಾಲ್ ಖತರ್ನಾಕ್ ವಾದ ಮಂಡನೆ
ಈ ಸಂದರ್ಭದಲ್ಲೇ ಕುದುರೆ ವ್ಯಾಪಾರದ ಬಗ್ಗೆಯೂ ನ್ಯಾಯಮೂರ್ತಿಗಳು ಮಾತನಾಡಿದ್ದಾರೆ. ಮಹಾರಾಷ್ಟ್ರದಲ್ಲಿನ ಪ್ರಸ್ತುತ ರಾಜಕೀಯ ಘಟನೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. “ನಿನ್ನೆ ಮೊನ್ನೆ, 10 ವರ್ಷದ ಮಗುವೊಂದು ಅಪಘಾತದಲ್ಲಿ ಸಾವನ್ನಪ್ಪಿತು. ಆದರೆ ರಾಜ್ಯದ ವಿಧಾನಸಭೆಯಲ್ಲಿ ಚರ್ಚೆಯಾಗುವುದೇನು? ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೇಗೆ ಪಕ್ಷಾಂತರ ಮಾಡಿಕೊಂಡ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಏನಿದು” ಎಂದು ಟೀಕಿಸಿದ್ದಾರೆ.
“ನೀವು ಕೂಡ ಪಕ್ಷ ಬದಲಾಯಿಸಬೇಕು. ಹೇಗೂ ಇಡೀ ಮಹಾರಾಷ್ಟ್ರದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ನಿಮ್ಮ ಬಳಿ ಕೆಲವು ಎಫ್‌ಐಆರ್‌ಗಳಿವೆ. ಪ್ರಕರಣಗಳನ್ನು ಬದಲಾಯಿಸುವುದನ್ನು ಪರಿಗಣಿಸಿ, ವಾಷಿಂಗ್ ಮೆಷಿನ್ ಇದೆ” ಎಂದು ಮಾರ್ಮಿಕವಾಗಿ ನುಡಿದರು.
ನ್ಯಾಯಮೂರ್ತಿಗಳ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧನಂಜಯ್ ಶಿಂದೆ, “ಪ್ರಜಾಪ್ರಭುತ್ವದಲ್ಲಿ, ಸರ್ಕಾರವನ್ನು ಟೀಕಿಸುವುದು, ಪ್ರತಿಭಟಿಸುವುದು ಮತ್ತು ಅಧಿಕಾರವನ್ನು ಪ್ರಶ್ನಿಸುವುದು ಅಪರಾಧಗಳಲ್ಲ. ಬದಲಿಗೆ ನಾಗರಿಕರ ಮೂಲಭೂತ ಹಕ್ಕುಗಳು. ಕಾನೂನನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯುತ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷ ಅಥವಾ ಅಧಿಕಾರದಲ್ಲಿರುವವರಿಗೆ ಅಲ್ಲ, ಸಂವಿಧಾನಕ್ಕೆ ನಿಷ್ಠರಾಗಿರಬೇಕು” ಎಂದು ಹೇಳಿದ್ದಾರೆ.




