ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸರ್ಕಾರಿ ಗೌರವಗಳ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಇಂದು ತಿಳಿಸಿದ್ದಾರೆ. ಇರಾನ್ ರಾಜಧಾನಿ ಟೆಹರಾನ್‌ನಿಂದ ಆಹ್ವಾನ ಬಂದ ಒಂದು ದಿನದ ಬೆನ್ನಲ್ಲೇ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಖುರ್ಷಿದ್, “ನಾನು ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ ಮತ್ತು ಅತ್ಯುನ್ನತ ನಾಯಕ ಆಯತೊಲ್ಲಾ ಸೈಯದ್ ಅಲಿ ಖಮೇನಿ ಅವರ ಸರ್ಕಾರಿ ಗೌರವಗಳ ಅಂತ್ಯಕ್ರಿಯೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ. ಟೆಹರಾನ್ ಸರ್ಕಾರವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಲ್ಮಾನ್ ಖುರ್ಷಿದ್ ಮತ್ತು ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯ ಪವನ್ ಖೇರಾ ಅವರಿಗೆ ಆಹ್ವಾನ ಕಳುಹಿಸಿತ್ತು. ಇತ್ತ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇರಾನ್ ಆಹ್ವಾನ ನೀಡಿತ್ತು. ಆದರೆ, ಕೇಂದ್ರ ಸರ್ಕಾರವು ಭಾರತದ ಅಧಿಕೃತ ಪ್ರತಿನಿಧಿಗಳಾಗಿ ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೇನ್ (ನಿವೃತ್ತ) ಮತ್ತು ಕೇಂದ್ರ ಸಚಿವ ಪಬಿತ್ರ ಮಾರ್ಗರಿಟಾ ಅವರನ್ನು ಕಳುಹಿಸಲು ನಿರ್ಧರಿಸಿದೆ.
ಕಳೆದ ಫೆಬ್ರವರಿ ಅಂತ್ಯದಲ್ಲಿ ಟೆಹರಾನ್‌ನಲ್ಲಿ ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಯಲ್ಲಿ ಖಮೇನಿ ಹತರಾಗಿದ್ದರು. ಅವರ ನಿಧನದ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಉತ್ತರಾಧಿಕಾರಿಯಾಗಿದ್ದಾರೆ. ಜೂನ್ 3ರಂದು ಇರಾನ್ ಅಧಿಕಾರಿಗಳು ಖಮೇನಿ ಅವರ ಅಂತ್ಯಕ್ರಿಯೆಯನ್ನು ಸಾರ್ವಜನಿಕವಾಗಿ ನಡೆಸುವ ಯೋಜನೆಯನ್ನು ಪ್ರಕಟಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಾಂಗೀಯ ನಿಂದನೆ ಎಂಬ ರೋಗ ಮತ್ತು ಫಿಫಾ ಫುಟ್‌ಬಾಲ್
ಅಧಿಕೃತ ಮಾಧ್ಯಮಗಳ ವರದಿಯ ಪ್ರಕಾರ, ಜುಲೈ 4 ರಿಂದಲೇ ಬಹುದಿನಗಳ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಲಿವೆ. ಜುಲೈ 7 ರಂದು ರಾಜಧಾನಿ ಟೆಹ್ರಾನ್‌ನ ದಕ್ಷಿಣದಲ್ಲಿರುವ ಪವಿತ್ರ ನಗರವಾದ ‘ಕೋಮ್’ (Qom) ನಲ್ಲಿ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮವಾಗಿ ಜುಲೈ 9 ರಂದು ಈಶಾನ್ಯ ಇರಾನ್‌ನಲ್ಲಿರುವ ಖಮೇನಿ ಅವರ ಹುಟ್ಟೂರಾದ ಮಶ್ಹಾದ್‌ನಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ.
ಸಾಮಾನ್ಯವಾಗಿ ಇಸ್ಲಾಮಿಕ್ ನಿಯಮಗಳ ಪ್ರಕಾರ, ಮೃತಪಟ್ಟ ವ್ಯಕ್ತಿಯನ್ನು ಆದಷ್ಟು ಬೇಗ, ಅಂದರೆ 24 ಗಂಟೆಗಳ ಒಳಗೆ ದಫನ್ ಮಾಡಬೇಕು. ಆದರೆ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಇದಕ್ಕೆ ವಿನಾಯಿತಿ ನೀಡಲಾಗುತ್ತದೆ. ಫೆಬ್ರವರಿ 28 ರಿಂದ ಇರಾನ್ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಯುದ್ಧದಲ್ಲಿ ತೊಡಗಿರುವುದರಿಂದ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ವಿಳಂಬವಾಗಿವೆ.




