ಪ್ರೇಮ ವಿವಾಹವಾಗಿದ್ದ ರಾಜಸ್ಥಾನ ಮೂಲದ ಯುವತಿಯನ್ನು ಆಕೆಯ ಕುಟುಂಬಸ್ಥರೇ ಸುಪಾರಿ ನೀಡಿ ಅಪಹರಿಸಲು ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬುಧವಾರ ನಡೆದ ಈ ಕರಾಳ ಘಟನೆಯಲ್ಲಿ, ಯುವತಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗುತ್ತಿದ್ದ ದುಷ್ಕರ್ಮಿಗಳು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಆರು ಮಂದಿ ಸಾರ್ವಜನಿಕರು ಗಾಯಗೊಂಡಿದ್ದು, ಕಾರನ್ನು ಬೆನ್ನಟ್ಟಿದ ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಮೆಲ್ವಾಸ್ ಗ್ರಾಮದ ಗುಣರಾಮ್ ಎಂಬುವವರ ಪುತ್ರಿ 21 ವರ್ಷದ ಪೂಜಾ ಅಪಹರಣಕ್ಕೊಳಗಾದ ಯುವತಿ. ಈಕೆ ಒಂಬತ್ತು ತಿಂಗಳ ಹಿಂದಷ್ಟೇ ತನ್ನ ಪ್ರಿಯಕರ, 23 ವರ್ಷದ ಓಂ ಪ್ರಕಾಶ್ ಎಂಬಾತನನ್ನು ಕುಟುಂಬದ ವಿರೋಧದ ನಡುವೆಯೂ ವಿವಾಹವಾಗಿದ್ದಳು. ಮದುವೆಯ ಬಳಿಕ ಈ ನವದಂಪತಿ ರಾಜಸ್ಥಾನದಿಂದ ಬೆಂಗಳೂರಿಗೆ ಆಗಮಿಸಿ, ಅಗ್ರಹಾರ ದಾಸರಹಳ್ಳಿಯಲ್ಲಿ ವಾಸವಿದ್ದರು.
ಪೂಜಾಳ ಪ್ರೇಮ ವಿವಾಹದಿಂದ ತೀವ್ರ ಅಸಮಾಧಾನಗೊಂಡಿದ್ದ ಆಕೆಯ ಕುಟುಂಬಸ್ಥರು, ಆಕೆಯನ್ನು ವಾಪಸ್ ಕರೆತರಲು ಅಥವಾ ಅಪಹರಿಸಲು ನಾಲ್ವರು ದುಷ್ಕರ್ಮಿಗಳನ್ನು ಬೆಂಗಳೂರಿಗೆ ಕಳುಹಿಸಿದ್ದರು. ಯೋಜನೆ ರೂಪಿಸಿಕೊಂಡು ಬಂದಿದ್ದ ಈ ತಂಡವು, ಪೂಜಾ ವಾಸವಿದ್ದ ಮನೆಗೆ ನುಗ್ಗಿ ಆಕೆಯನ್ನು ಬಲವಂತವಾಗಿ ಹುಂಡೈ ವೆನ್ಯೂ (ನೋಂದಣಿ ಸಂಖ್ಯೆ: RJ 22 CC 9691) ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಲು ಯತ್ನಿಸಿದೆ.
ಯುವತಿಯನ್ನು ಕಿಡ್ನ್ಯಾಪ್ ಮಾಡಿ ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ, ರಸ್ತೆಯಲ್ಲಿದ್ದ ಹಲವು ವಾಹನಗಳಿಗೆ ಈ ಕಾರು ಗುದ್ದಿದೆ. ಸರಣಿ ಅಪಘಾತದ ಪರಿಣಾಮವಾಗಿ ಪೃಥ್ವಿರಾಜ್ (12), ಯಶಿಕಾ (9), ಅಮುಲ್ (35), ಮಣಿ (64), ಜಯಲಕ್ಷ್ಮಿ (57) ಹಾಗೂ ಸಂತೋಷ್ (33) ಎಂಬುವವರು ಗಾಯಗೊಂಡಿದ್ದಾರೆ. ಇವರಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ 57 ವರ್ಷದ ಜಯಲಕ್ಷ್ಮಿ ಅವರನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಸರಣಿ ಅಪಘಾತ ಮಾಡುತ್ತಿದ್ದಂತೆಯೇ ಎಚ್ಚೆತ್ತ ಸಾರ್ವಜನಿಕರು, ಸಿನಿಮೀಯ ರೀತಿಯಲ್ಲಿ ಕಾರನ್ನು ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ದುಷ್ಕರ್ಮಿಗಳನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು, ರಾಜಸ್ಥಾನ ಮೂಲದ ರಾಕೇಶ್ (31), ಕರಣ್ (25) ಮತ್ತು ಅಯಾನ್ (18) ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಘಟನೆಯಲ್ಲಿ ವಾಹನ ಚಲಾಯಿಸುತ್ತಿದ್ದ ಪ್ರಮುಖ ಆರೋಪಿ ಸದ್ದಾಂ ಎಂಬಾತ ಸಾರ್ವಜನಿಕರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಎಸ್‌ಯುವಿ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಬಲೆಬೀಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




