ಪೈಪ್ಡ್ ಗ್ಯಾಸ್ ಲಭ್ಯವಿದ್ದಲ್ಲಿ ಸಂಪರ್ಕ ತೆಗೆದುಕೊಳ್ಳಲು ನಿರಾಕರಿಸುವ ಮನೆಗಳಿಗೆ ಎಲ್‌ಪಿಜಿ ಪೂರೈಕೆ ಬಂದ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
ಮಾರ್ಚ್ 25ರಂದು ಆದೇಶ ಹೊರಡಿಸಿರುವ ಸರ್ಕಾರ, ಮೂರು ತಿಂಗಳ ಗಡುವು ನೀಡಿದ್ದು ಈ ಅವಧಿಯೊಳಗೆ ಪಿಎನ್‌ಜಿ ಸಂಪರ್ಕ ಪಡೆಯದ ಮನೆಗಳಿಗೆ ಎಲ್‌ಪಿಜಿ ವಿತರಣೆ ನಿಲ್ಲಿಸಲಾಗುವುದು ಎಂದು ಹೇಳಿದೆ.
ಮಧ್ಯ ಪ್ರಾಚ್ಯ ಸಂಘರ್ಷದಿಂದ ಎದುರಾಗಿರುವ ಅನಿಲ ಮತ್ತು ತೈಲ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಕೊರತೆ ಉಲ್ಬಣಿಸುತ್ತಿದೆ. ಈಗ ಸರ್ಕಾರವು ಸಾರ್ವಜನಿಕರಿಗೆ ಪಿಎನ್‌ಜಿ ಸಂಪರ್ಕ ಹೊಂದುವಂತೆ ಒತ್ತಾಯ ಮಾಡುತ್ತಿದೆ. ಪಿಎನ್‌ಜಿ ಲಭ್ಯವಿರುವೆಡೆ ಎಲ್‌ಪಿಜಿ ಸಂಪರ್ಕ ತಪ್ಪಿಸಿ, ಪಿಎನ್‌ಜಿ ಲಭ್ಯವಿರದ ಪ್ರದೇಶಗಳಿಗೆ ಎಲ್‌ಪಿಜಿ ಪೂರೈಕೆ ಮಾಡಲು ಸರ್ಕಾರ ಯತ್ನಿಸುತ್ತಿದೆ ಎನ್ನಲಾಗಿದೆ.
ಅಗತ್ಯ ಸರಕುಗಳ ಕಾಯ್ದೆಯ ಮೂಲಕ ತರಲಾಗಿರುವ ಈ ಆದೇಶವನ್ನು ಸಂಬಂಧಪಟ್ಟ ಇಲಾಖೆಗಳು ಮತ್ತು ಸಾರ್ವಜನಿಕರು ಪಾಲಿಸಬೇಕೆಂದು ಸರ್ಕಾರ ಆದೇಶಿಸಿದೆ. ಪಿಎನ್‌ಜಿ ಸಂಪರ್ಕಕ್ಕೆ ಬಂದ ಅರ್ಜಿಯನ್ನು ಶೀಘ್ರವಾಗಿ ಪರಿಶೀಲಿಸಿ ದರ ನಿಗದಿ ಪಡಿಸಬೇಕು ಹಾಗೂ ನಿರ್ದಿಷ್ಟ ಸಮಯದೊಳಗೆ ಸಂಪರ್ಕಕ್ಕೆ ಅನುಮತಿ ನೀಡಬೇಕೆಂದು ಸೂಚನೆ ನೀಡಲಾಗಿದೆ.

ಜನವಸತಿ ಪ್ರದೇಶಗಳಲ್ಲಿ ಪಿಎನ್‌ಜಿ ಘಟಕಗಳು ಮೂರು ದಿನದ ಒಳಗಾಗಿ ಸಂಪರ್ಕಕ್ಕೆ ಅನುಮತಿ ನೀಡಬೇಕು. ಘಟಕ ಕೊನೆಗಒಳ್ಳುವ ಪ್ರದೇಶಗಳಲ್ಲಿ 48 ಗಂಟೆಗಳ ಒಳಗೆ ಅನುಮತಿ ನೀಡುವುದು ಮತ್ತು ಇಂತಹ ಪ್ರದೇಶಗಳಿಂದ ಬರುವ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
ಖಾಸಗಿ ಸ್ವಾಮ್ಯದ ಸಂಸ್ಥೆಗಳು ಪಿಎನ್‌ಜಿ ಸಂಪರ್ಕ ಕಲ್ಪಿಸಲು ಬೇಕಾದ ಪೂರ್ವತಯಾರಿಯನ್ನು ಮಾಡಿಕೊಳ್ಳುವಂತೆ ಈ ಅಧಿಸೂಚನೆ ಸೂಚಿಸಿದೆ.ಪಿಎನ್‌ಜಿಯು ಪೈಪ್ ಮೂಲಕ ನೇರ ಬರ್ನರ್‌ಗಳಿಗೆ ಗ್ಯಾಸ್ ಪೂರೈಕೆ ಆಗುತ್ತದೆ. ಇದು ಎಲ್‌ಪಿಜಿಗಿಂತಲೂ ಉತ್ತಮ ಆಯ್ಕೆ ಎಂದು ಹೇಳಲಾಗಿದೆ ಪ್ರಸ್ತುತ ಭಾರತದ ಒಂದು ಕೋಟಿ ಜನರು ಮಾತ್ರ ಪಿಎನ್‌ಜಿ ಸೌಕರ್ಯ ಹೊಂದಿದ್ದಾರೆ 33 ಕೋಟಿ ಎಲ್‌ಪಿಜಿ ಗ್ರಾಹಕರಿದ್ದು ಇಷ್ಟು ದೊಡ್ಡ ಮೊತ್ತದ ಸಂಪರ್ಕ ವ್ಯವಸ್ಥೆ ಒಮ್ಮೆಲೆ ಕಲ್ಪಿಸುವುದು ಸವಾಲಿನ ವಿಷಯ.
ಇನ್ನು ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಇಲಾಖೆಯ ಕಾರ್ಯದರ್ಶಿ ನೀರಜ್ ಮಿತ್ತಲ್ ಬಿಕ್ಕಟ್ಟು ಬೇರೊಂದು ಅವಕಾಶವನ್ನು ಹುಟ್ಟುಹಾಕಿದೆ. ಎಂದು ಬರೆದುಕೊಂಡಿದ್ದಾರೆ.




