ಅಂತರರಾಷ್ಟ್ರೀಯ ಹುಲಿಗಳ ದಿನದ ಅಂಗವಾಗಿ (ಜುಲೈ 29) ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ 2022-23ನೇ ಸಾಲಿನ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಗಣತಿಯನ್ನು ಬಿಡುಗಡೆ ಮಾಡಿದ್ದು, ಮಧ್ಯಪ್ರದೇಶ 785 ಹುಲಿಗಳೊಂದಿಗೆ ಮೊದಲ ಸ್ಥಾನ ಹಾಗೂ ಕರ್ನಾಟಕ 563 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನಮ್ಮ ರಾಜ್ಯದ ಜನತೆಯ ಸಹಕಾರ ಹಾಗೂ ಅರಣ್ಯ ಇಲಾಖೆಯ ಅವಿರತ ಪ್ರಯತ್ನದ ಫಲವಾಗಿ ಹುಲಿಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ 526 ರಿಂದ 785ಕ್ಕೆ ಏರಿಕೆಯಾಗಿರುವುದು ಸಂತಸದ ವಿಷಯ ಎಂದು ತಿಳಿಸಿದ್ದಾರೆ.
“ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ ನಾವೆಲ್ಲರೂ ಒಟ್ಟಾಗಿ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಸಂರಕ್ಷಿಸುವ ಪ್ರತಿಜ್ಞೆ ತೆಗೆದುಕೊಳ್ಳೋಣ” ಎಂದು ಹೇಳಿದ್ದಾರೆ.
ಮೊದಲೆರಡು ಸ್ಥಾನಗಳಲ್ಲಿರುವ ಮಧ್ಯಪ್ರದೇಶ ಮತ್ತು ಕರ್ನಾಟಕ ಹೊರತುಪಡಿಸಿದರೆ ಉತ್ತರಾಖಂಡ್ 560, ಮಹಾರಾಷ್ಟ್ರ 444,ತಮಿಳು ನಾಡು 306, ಅಸ್ಸಾಂ 227, ಕೇರಳ 213, ಉತ್ತರ ಪ್ರದೇಶ 205 ಹುಲಿಗಳಿವೆ. ಜಾರ್ಖಂಡ್‌ನಲ್ಲಿ 01, ಗೋವಾದಲ್ಲಿ 05 ಮಾತ್ರ ಹುಲಿಗಳಿವೆ. ನಾಗಾಲ್ಯಾಂಡ್ ಹಾಗೂ ಮಿಜೋರಾಂ ಹುಲಿಗಳಿಲ್ಲದ ರಾಜ್ಯಗಳು. ಇದರೊಂದಿಗೆ ಭಾರತದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ 3682.
ಅತಿಹೆಚ್ಚು ಹುಲಿಗಳು ಇರುವ ಪ್ರದೇಶವಾಗಿ ಚಾಮರಾಜನಗರ ಜಿಲ್ಲೆಯ ‘ಬಂಡೀಪುರ ಹುಲಿಗಳ ಸಂರಕ್ಷಿತ ಪ್ರದೇಶ’ ಹೊರಹೊಮ್ಮಿದ್ದು, ದೇಶದಲ್ಲಿ ಅತಿಹೆಚ್ಚು ಹುಲಿಗಳು ಹೊಂದಿದ ಎರಡನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 191 ಹುಲಿಗಳಿವೆ ಎಂದು ಅಂದಾಜು ಮಾಡಲಾಗಿದೆ. ನಾಗರಹೊಳೆ ಸಂರಕ್ಷಿತಾರಣ್ಯದಲ್ಲಿ 185, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 60, ಭದ್ರಾದಲ್ಲಿ 44 ಹಾಗೂ ಕಾಳಿಯಲ್ಲಿ 29 ಹುಲಿಗಳಿವೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಮಗನಿಗೆ ಹುಡುಗಿ ಹುಡುಕಿ ಎಂದು ರೈತ ಮಹಿಳೆಗೆ ಹೇಳಿದ ಸೋನಿಯಾ ಗಾಂಧಿ; ತಕ್ಷಣಕ್ಕೆ ಪ್ರತಿಕ್ರಿಯಿಸಿದ ರಾಹುಲ್!
ಜಿಂ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 319 ಹುಲಿಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಕ್ಷಿತಾರಣ್ಯವಾಗಿದೆ. ಬಂಡೀಪುರ ಎರಡನೇ ಸ್ಥಾನದಲ್ಲಿದೆ.
2022ರ ಹುಲಿಗಣತಿಯ ಪ್ರಕಾರ ಭಾರತವು 3167 ಹುಲಿಗಳನ್ನು ಹೊಂದಿದೆ. ಇದು ಜಾಗತಿಕ ಸಂಖ್ಯೆಯ ಶೇಕಡಾ
75 ರಷ್ಟು ಹುಲಿಗಳನ್ನು ಹೊಂದಿದೆ.