ಮಧ್ಯಪ್ರದೇಶ ಲೋಕಸಭೆ | ಕೇಂದ್ರದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ವರವಾಗುವುದೇ?

Date:

ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿರುವ ಮಧ್ಯ ಪ್ರದೇಶ ಕಳೆದ ಎರಡು ದಶಕಗಳಿಂದ ರಾಜಕಾರಣದಲ್ಲಿ ಹಿಂದುತ್ವದ ಹಣೆಪಟ್ಟಿ ಕಟ್ಟಿಕೊಂಡಿದೆ. ಕೇಸರಿ ಜಪ ಮಾಡಿಕೊಂಡು 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಯಾವ ಕ್ಷೇತ್ರದಲ್ಲಿಯೂ ಅಭಿವೃದ್ದಿಯ ಸಾಧನೆ ತೋರಿಲ್ಲ. ಸ್ವತಃ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಎಲ್ಲ ಸೂಚ್ಯಂಕಗಳಲ್ಲಿಯೂ ಮಧ್ಯ ಪ್ರದೇಶದ್ದು ಕಳಪೆ ಪ್ರದರ್ಶನವಾಗಿದೆ.

ರಾಜ್ಯ ರಾಜಕಾರಣದಲ್ಲಿ 2004 ರಿಂದ ಬಿಜೆಪಿಯೇ ಇಲ್ಲಿನ ಭದ್ರಕೋಟೆಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿತಾದರೂ ಕೇಂದ್ರದ ನೀಚ ರಾಜಕಾರಣ ಆಪರೇಷನ್‌ ಕಮಲದಿಂದಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಿದ್ದ ಕಮಲ್‌ ನಾಥ್‌ ರಾಜೀನಾಮೆ ನೀಡಬೇಕಾಯಿತು. ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಯ ಉಗ್ರ ಹಿಂದುತ್ವವಾದ ಹಾಗೂ ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ಮತ್ತೆ ಪರಾಭವಗೊಳ್ಳಬೇಕಾಯಿತು.

ಈಗ ಮಧ್ಯಪ್ರದೇಶದಲ್ಲಿ ಏ.19 ಹಾಗೂ ಮೇ.13ರ ಎರಡು ಹಂತಗಳ ಮತದಾನದೊಂದಿಗೆ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದೆ. 29 ಕ್ಷೇತ್ರಗಳ ಈ ರಾಜ್ಯದಲ್ಲಿ 2014 ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಂಡು ಮೇಲುಗೈ ಸಾಧಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಧ್ಯ ಪ್ರದೇಶದ ಕಳೆದ ಎರಡು ಲೋಕಸಭೆ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದರೆ ಬಿಜೆಪಿಗೆ ಯಾವ ಪಕ್ಷವೂ ಸರಿಸಾಟಿಯಿಲ್ಲವೆಂಬಂತೆ ಗೆಲ್ಲುತ್ತ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 27 ಸ್ಥಾನ ಗೆಲುವಿನೊಂದಿಗೆ ಶೇ 58ರಷ್ಟು ಮತಗಳನ್ನು ಪಡೆದುಕೊಂಡಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.34.5 ಮತಗಳಿಸಿದರೂ ಗೆದ್ದಿದ್ದು ಮಾತ್ರ ಒಂದು ಸ್ಥಾನ. ಕಾಂಗ್ರೆಸ್ ನಾಯಕ ಕಮಲ್‌ನಾಥ್ ಅವರ ಭದ್ರಕೋಟೆ ಛಿಂದವಾಢದಲ್ಲಿ ಅವರ ಮಗ ನಕುಲ್ ನಾಥ್ ಜಯಗಳಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿ ಸೋಲಿಸುವ ಅಭ್ಯರ್ಥಿಗಳಿಗೆ ಮತ ನೀಡಿ: ರೈತ ನಾಯಕ ರಾಕೇಶ್ ಟಿಕಾಯತ್ ಮನವಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ 11 ಸಂಸದರನ್ನು ಕೈ ಬಿಟ್ಟು, ಹೊಸ ಮುಖಗಳಿಗೆ ಮಣೆಹಾಕಿದೆ. ಆಡಳಿತ ವಿರೋಧಿ ಅಲೆ ತಪ್ಪಿಸಿಕೊಳ್ಳುವುದಕ್ಕಾಗಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ. ಈ ಬಾರಿ ಏನೇ ಆದರೂ ಹೆಚ್ಚಿನ ಸ್ಥಾನಗಳೊಂದಿಗೆ ಬಿಜೆಪಿಯನ್ನು ಮಣಿಸಬೇಕೆಂದು ಹಠ ತೊಟ್ಟಿರುವ ಕಾಂಗ್ರೆಸ್ ಇತ್ತೀಚಿನ ವಿಧಾನಸಭೆಯಲ್ಲಿ ಗೆಲುವು ಗಳಿಸಿದ್ದ ಶಾಸಕರಲ್ಲಿ ಹಲವರನ್ನೇ ಕಣಕ್ಕಿಳಿಸಿದೆ.

2009ರಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ

ರಾಜ್ಯದಲ್ಲಿ ಒಬಿಸಿ ಮತದಾರರ ಪ್ರಮಾಣ ಶೇ 18ರಷ್ಟಿದೆ. ಮಂಡಲ್ ಆಯೋಗ ರಚನೆಯಾಗುವುದಕ್ಕೂ ಮೊದಲೇ ಕಾಂಗ್ರೆಸ್‌ನ ಅರ್ಜುನ್ ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಒಬಿಸಿಗಳ ಮೀಸಲಾತಿಯನ್ನು ಶೇ 25ರಷ್ಟು ನೀಡಲಾಗಿತ್ತು. ದಿಗ್ವಿಜಯ ಸಿಂಗ್ ಅವರು ಯುಪಿಎ ಅವಧಿಯಲ್ಲಿ ಕೇಂದ್ರದ ಸಚಿವರಾಗಿದ್ದಾಗ ಈ ಪ್ರಮಾಣವನ್ನು ಶೇ 27ರಷ್ಟಕ್ಕೆ ಹೆಚ್ಚಿಸಿದರು. ಈ ಕಾರಣದಿಂದ 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿತ್ತು. 12 ಸ್ಥಾನ ಗೆದ್ದು, ಶೇ.40.14 ಮತ ಗಳಿಸಿಕೊಂಡಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ತೋರಿದ ಉತ್ತಮ ಸಾಧನೆ ವಿಧಾನಸಭೆ ಚುನಾವಣೆಯಲ್ಲಿ ಮರುಕಳಿಸಲಿಲ್ಲ.

2004ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯದಲ್ಲಿ ಹಿಂದುತ್ವ ರಾಜಕಾರಣದೊಂದಿಗೆ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತಾ ಸಾಗಿತು. ಕೇಸರಿ ಪಕ್ಷಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಕೂಡ ಇತ್ತೀಚಿನ ಕೆಲವು ವರ್ಷಗಳಿಂದ ಒಬಿಸಿಗಳಿಂದ ಅಂತರ ಕಾಯ್ದುಕೊಂಡು ಹಿಂದುತ್ವದ ಜಪಕ್ಕೆ ಮೊರೆ ಹೋಗಿ ತಾನು ಕೂಡ ಹಿಂದೂ ಸಮುದಾಯವನ್ನು ಪ್ರತಿನಿಧಿಸುತ್ತೇನೆ ಎಂಬ ಸಂದೇಶ ರವಾನಿಸಲು ಆರಂಭಿಸಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹಿನ್ನಡೆಗೆ ಇದು ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕಾಂಗ್ರೆಸ್, ‘ಹಿಂದೂ’ ನಾಮಬಲದಲ್ಲಿ ಮತ ಪಡೆಯಲು ಮುಂದಾಗಿ ಒಬಿಸಿ ನಾಯಕರನ್ನೂ ಬೆಳಸಲಿಲ್ಲ ಎಂದು ಹಲವು ಹಿರಿಯ ನಾಯಕರು ಹೈಕಮಾಂಡ್‌ ನಾಯಕರ ಬಳಿ ನೋವು ತೋಡಿಕೊಂಡಿದ್ದಾರೆ.

ಇತ್ತೀಚಿಗೆ ಬಿಜೆಪಿ ಕೂಡ ಒಬಿಸಿ ಮತ ಗಳಿಕೆಯಲ್ಲಿ ಮೇಲುಗೈ ಸಾಧಿಸುತ್ತ ಬರುತ್ತಿದೆ. ಒಬಿಸಿ ಸಮುದಾಯಕ್ಕೆ ಸೇರಿದವರಿಗೆ ಹೆಚ್ಚು ಸ್ಥಾನ ನೀಡಲಾಯಿತು. ಇದರಿಂದ ರಾಜ್ಯದ ನಾಯಕರು ಕೇಂದ್ರದಲ್ಲಿ ದೊಡ್ಡ ಹುದ್ದೆಗಳನ್ನು ಪಡೆದುಕೊಂಡರು. ಇಲ್ಲಿಂದ ನಂತರ ಒಬಿಸಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬರುತ್ತಿವೆ. ಇದರೊಂದಿಗೆ ಬಿಜೆಪಿಯ ಹಿಂದುತ್ತ ರಾಜಕಾರಣವೂ ಸೇರಿಕೊಂಡಿದೆ. ಇದು ಕೇಸರಿ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುತ್ತಿದ್ದಾರೆ ಮಧ್ಯ ಪ್ರದೇಶದ ಬಿಜೆಪಿ ನಾಯಕರು.

ಕಾಂಗ್ರೆಸ್‌ ವಿಚಾರಕ್ಕೆ ಬಂದರೆ ಜಾತಿ ಗಣತಿ ವಿಚಾರಗಳನ್ನು ನಾಯಕರುಗಳು ವೇದಿಕೆಗಳಲ್ಲಿ ಹೇಳಿದರೆ ಪ್ರಯೋಜನವಾಗದು. ಈ ಸಮುದಾಯದ ನಾಯಕರನ್ನು ಬೆಳೆಸಬೇಕು. ಇದರ ಜೊತೆಗೆ ಜಾತಿ ಗಣತಿಯ ಲಾಭದ ಕುರಿತು ಜನರಿಗೆ ಜಾಗೃತಿ ಮೂಡಿಸದ ಹೊರತು ಕಾಂಗ್ರೆಸ್‌ನ ಜಾತಿ ಗಣತಿ ವಿಚಾರವು ಈ ಸಮುದಾಯದ ಜನರಿಗೆ ತಲುಪುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಾಯಕರು.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಬಿಜೆಪಿಯ ಅದಕ್ಷ, ಭ್ರಷ್ಟಾಚಾರ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಇದು ಮಧ್ಯ ಪ್ರದೇಶದಲ್ಲೂ ಪರಿಣಾಮ ಬೀರಿದೆ. ಮಾಧ್ಯಮಗಳಲ್ಲಿ ಪ್ರಚಾರ ನಡೆಸುವ ಕೇಂದ್ರ ಸರ್ಕಾರ ಕೂಡ ನಿರೀಕ್ಷಿತ ಮಟ್ಟದಲ್ಲಿ ರಾಜ್ಯಕ್ಕೆ ಅನುದಾನವಾಗಲಿ ಅಥವಾ ಯೋಜನೆಗಳಾಗಲಿ ಜಾರಿಗೊಳಿಸಿಲ್ಲ. ಅಲ್ಲದೆ ರಾಜ್ಯದಲ್ಲಿ ಕೇಸರಿ ಪಕ್ಷ 20 ವರ್ಷ ಆಡಳಿತ ನಡೆಸುತ್ತಿದ್ದರೂ ಮಧ್ಯ ಪ್ರದೇಶ ಮಾತ್ರ ಅಭಿವೃದ್ಧಿ ಪಥದತ್ತ ಒಂಚೂರು ಮುಂದೆ ಸಾಗಲಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಆಗಾಗ ನೀಡುತ್ತಿರುವ ವರದಿಗಳೆ ಸಾಕ್ಷಿಯಾಗಿವೆ. ಇವೆಲ್ಲ ಕಾರಣಗಳು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸನ್ನು ಕೈ ಹಿಡಿಯುವುದರ ಜೊತೆ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಪಲ್ಟಿ; 6 ಮಂದಿ ನಾಪತ್ತೆ

17 ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಪಲ್ಟಿಯಾಗಿರುವ ಘಟನೆ ಬಿಹಾರ...

ನೀರಿನ ಸಮಸ್ಯೆ| ದೆಹಲಿ ಜಲ ಮಂಡಳಿ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು

ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಬಿಜೆಪಿಯ ಮಹಿಳಾ ಪ್ರತಿಭಟನಾಕಾರರು ಚತ್ತರ್‌ಪುರದಲ್ಲಿರುವ...

ಅಡುಗೆಮನೆಯಲ್ಲಿ ಪುರುಷ, ಫುಟ್‌ಬಾಲ್ ಮೈದಾನದಲ್ಲಿ ಬಾಲಕಿ; ಪಿತೃಪ್ರಭುತ್ವವನ್ನು ಛಿದ್ರಗೊಳಿಸುವ ಕೇರಳದ ಶಾಲಾ ಪಠ್ಯಗಳು

ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ....

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...