ಈ ದಿನ ಸಂಪಾದಕೀಯ | ಬರ-ನೆರೆ ಎಂದಾಕ್ಷಣ ಅಧಿಕಾರಸ್ಥರು-ಅಧಿಕಾರಿಗಳು ಎದ್ದು ಕೂರುವುದೇಕೆ?

Date:

ನೆರೆ ಮತ್ತು ಬರ- ಎರಡೂ ಪ್ರಕೃತಿಯ ವಿಪತ್ತುಗಳಾಗಿರಬಹುದು. ಆದರೆ ಅವು ಮಾನವೀಯ ದುರಂತಗಳಾಗಿ ಬದಲಾಗುವುದು ಆಡಳಿತದ ಸಿದ್ಧತೆ, ಯೋಜನೆ ಮತ್ತು ಜಾರಿಯ ಮೇಲೆ ಅವಲಂಬಿತವಾಗಿದೆ. ಇಲ್ಲಿಯವರೆಗಿನ ಸರ್ಕಾರಗಳು, ಪ್ರಕೃತಿ ವಿಪತ್ತನ್ನು ದುರಂತವಾಗದಿರಲು ತಡೆಯಲು ವಿಫಲವಾಗಿವೆ. ಏಕೆಂದರೆ, ಅಧಿಕಾರಸ್ಥರದು ಪ್ರಾಮಾಣಿಕ ಪ್ರಯತ್ನವಲ್ಲ ಎಂಬುದು ಪ್ರತಿ ವರ್ಷ ಸಾಬೀತಾಗುತ್ತಲೇ ಸಾಗಿದೆ.

ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದು ಹಳ್ಳ-ಕಟ್ಟೆ-ಕೆರೆ-ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆ–ಸೇತುವೆಗಳು ಮುರಿದು ಬಿದ್ದಿವೆ. ಬೆಳೆ ಹಾನಿಯಾಗಿ ರೈತರನ್ನು ಕಷ್ಟ-ನಷ್ಟಕ್ಕೀಡುಮಾಡಿದೆ. ಜನರು ಆತಂಕದಲ್ಲಿದ್ದಾರೆ. ನೆರೆ ಸಂತ್ರಸ್ತರಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಬೀಳದೆ ಬರಗಾಲದ ಛಾಯೆ ಆವರಿಸಿದೆ. ಒಂದೆಡೆ ನೆರೆ, ಮತ್ತೊಂದೆಡೆ ಬರ. ಸರ್ಕಾರಕ್ಕೆ ಸಮಸ್ಯೆ, ಸವಾಲು ಒಟ್ಟೊಟ್ಟಿಗೇ ಎದುರಾಗಿದೆ.

- Advertisement -

ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ. ಸಮಸ್ಯೆ ಪ್ರಕೃತಿಯದ್ದಲ್ಲ. ಹವಾಮಾನ ಬದಲಾವಣೆ, ಅಸಮರ್ಪಕ ಜಲ ನಿರ್ವಹಣೆ, ಯೋಜನಾ ಕೊರತೆ ಮತ್ತು ನಿಷ್ಕ್ರಿಯ ಆಡಳಿತಯಂತ್ರದ ಪರಿಣಾಮವಾಗಿದೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾದ ಆರಂಭದಲ್ಲಿಯೇ, ಬರ-ನೆರೆ ಎದುರಾಗಿ, ಅವರ ಆಡಳಿತಶೈಲಿಯನ್ನು ಒರೆಗೆ ಹಚ್ಚುವ, ಅವಲೋಕಿಸುವ ಸಂದರ್ಭ ಒದಗಿ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಸುರಿಯುತ್ತಿದೆ. ಜೊತೆಗೆ ಪಕ್ಕದ ಮಹಾರಾಷ್ಟ್ರದಿಂದ ಕೃಷ್ಣಾ ನದಿ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ-ನಿಪ್ಪಾಣಿ ತಾಲೂಕುಗಳಿಗೆ ಹರಿದು ಬರುತ್ತಿದೆ. ಮನೆಗಳು ಜಲಾವೃತವಾಗಿವೆ, ಬೆಳೆಗಳು ನಾಶವಾಗಿವೆ, ಸುಮಾರು 11 ಸೇತುವೆಗಳು ಕೊಚ್ಚಿಹೋಗಿವೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆ ವ್ಯತ್ಯಯಗೊಂಡಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

ಈ ಪ್ರತಿಕೂಲ ಪರಿಸ್ಥಿತಿಯನ್ನು ಜನ ಪ್ರತಿವರ್ಷ ಅನುಭವಿಸುತ್ತಲೇ ಬಂದಿದ್ದಾರೆ. ಆದರೂ, ನದಿ ಪಾತ್ರಗಳ ಅತಿಕ್ರಮಣ, ಕೆರೆ–ಕಾಲುವೆಗಳ ಒತ್ತುವರಿ, ಅವೈಜ್ಞಾನಿಕ ವಿಸ್ತರಣೆ ಮತ್ತು ಪಶ್ಚಿಮ ಘಟ್ಟದ ಪರಿಸರ ಹಾನಿಯಂತಹ ಮೂಲ ಕಾರಣಗಳಿಗೆ ಪರಿಹಾರವೂ ಸಿಗದಾಗಿದೆ.

ಇದನ್ನು ಓದಿದ್ದೀರಾ?: ಬೀದಿ ವ್ಯಾಪಾರಿಗಳ ಬದುಕು ಧ್ವಂಸಗೈಯುವುದೇ ಕಾಂಗ್ರೆಸ್‌ನ ಸಮಾಜವಾದವೇ?

ನೆರೆಗೆ ವ್ಯತಿರಿಕ್ತವಾಗಿ ರಾಜ್ಯದ ಮತ್ತೊಂದು ಭಾಗದಲ್ಲಿ ಬರ ಕಾಣಿಸಿಕೊಂಡಿದೆ. ಸುಮಾರು 15 ಜಿಲ್ಲೆಗಳಲ್ಲಿ ಮಳೆಗಾಗಿ ರೈತರು ಆಕಾಶದತ್ತ ಕಣ್ಣು ನೆಟ್ಟಿದ್ದಾರೆ. ಜೂನ್‌ನಲ್ಲಿ ಬಿದ್ದ ಅಲ್ಪ ಮಳೆಗೆ ರೈತರು, ಮಣ್ಣು ಹದಗೊಳಿಸುವುದರಿಂದ ಹಿಡಿದು ಬಿತ್ತನೆ ಕಾರ್ಯ, ಗೊಬ್ಬರ ಖರೀದಿ, ಅದರ ಖರ್ಚು ವೆಚ್ಚಕ್ಕಾಗಿ ಸಾಲ ಮಾಡಿದ್ದಾಗಿದೆ. ಆದರೆ ಮುಂಗಾರು ಕೈಕೊಟ್ಟಿದೆ. ಜೊತೆಗೆ ಆಹಾರಧಾನ್ಯದ ಕೊರತೆ ಎದುರಾಗಿದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಬರವನ್ನು ಕೇವಲ ಮಳೆಯ ಕೊರತೆಯೆಂದು ನೋಡುವುದು ತಪ್ಪು. ಅದು ಕೃಷಿ ಆದಾಯದ ಕುಸಿತ, ಗ್ರಾಮೀಣ ಉದ್ಯೋಗದ ಅಭಾವ, ವಲಸೆ, ಸಾಲದ ಒತ್ತಡ ಮತ್ತು ಸಾಮಾಜಿಕ ಅಸ್ಥಿರತೆಯ ಸಂಕೇತವಾಗಿಯೂ ನೋಡಬೇಕಾಗುತ್ತದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ನೆರೆ ಮತ್ತು ಬರ ಎರಡಕ್ಕೂ ಪ್ರತ್ಯೇಕ ಕಾರ್ಯಯೋಜನೆಗಳನ್ನು ರೂಪಿಸಿದೆ. ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆ, ವಿಪತ್ತು ನಿರ್ವಹಣಾ ಪಡೆಗಳ ನಿಯೋಜನೆ, ಪರಿಹಾರ ಕೇಂದ್ರಗಳ ಸಿದ್ಧತೆ, ಕುಡಿಯುವ ನೀರಿನ ಪೂರೈಕೆ, ಬೆಳೆ ಸಮೀಕ್ಷೆ, ಪರಿಹಾರ ಧನ, ಬೆಳೆ ವಿಮೆ, ಮೇವು ಬ್ಯಾಂಕ್‌ಗಳು ಮತ್ತು ತುರ್ತು ಅನುದಾನಗಳಂತಹ ಕ್ರಮಗಳನ್ನು ಕೈಗೊಳ್ಳುವುದಿದೆ.

ರಾಜ್ಯದಲ್ಲಿ 2023, 2024 ಮತ್ತು 2025ರಲ್ಲಿಯೂ ಇದೇ ರೀತಿ ಬರ-ನೆರೆ, ಒಂದೇ ವರ್ಷದಲ್ಲಿ ಎರಡೂ ಸಂಭವಿಸಿದ್ದವು. 2023ರ ಬರಕ್ಕೆ ಕೇಂದ್ರದಿಂದ 3,454 ಕೋಟಿ ಎನ್‌ಡಿಆರ್‍ಎಫ್, 929 ಕೋಟಿ ಎಸ್‌ಡಿಆರ್‍ಎಫ್ ಪರಿಹಾರ ಬಿಡುಗಡೆಯಾಗಿದೆ. ಹಾಗೆಯೇ 2024-25ರಲ್ಲಿ 976 ಕೋಟಿ ಎಸ್‌ಡಿಆರ್‍ಎಫ್ ಪರಿಹಾರ ವಿತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಆ ಬೃಹತ್ ಮೊತ್ತ ಸಂತ್ರಸ್ತರಿಗೆ ತಲುಪಿತೆ? ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.

ಈ ಸತ್ಯ ಗೊತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮೊನ್ನೆ ಕಲಬುರಗಿಯಲ್ಲಿ, ‘ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಯನ್ನು ಅಧಿಕಾರಿಗಳು ಎಷ್ಟರಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದರ ಮೇಲೆ ಬರ-ನೆರೆಯ ನಿರ್ವಹಣೆ ನಿಂತಿದೆ.   

ಏತನ್ಮಧ್ಯೆ, ಬರದ ಬಗ್ಗೆ ಆಡಳಿತ ಪಕ್ಷವೇ ಮುಂದಾಗಿರುವುದು, ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದು ವಿರೋಧ ಪಕ್ಷಗಳನ್ನು ನಿದ್ರೆಯಿಂದ ಎಚ್ಚರಗೊಳ್ಳುವಂತೆ ಮಾಡಿದೆ. ಎಚ್ಚೆತ್ತ ವಿರೋಧ ಪಕ್ಷಗಳು ಒಂದಷ್ಟು ಸದ್ದು ಮಾಡುತ್ತಿವೆ. ಪ್ರವಾಸದ ನೆಪದಲ್ಲಿ ಪ್ರಚಾರ ಪಡೆಯಲು ಹವಣಿಸುತ್ತಿವೆ. ಸರ್ಕಾರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದತ್ತ ನೋಡುತ್ತದೆ, ದೂರುತ್ತದೆ. ಅಸಲಿಗೆ, ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಆಳುವ-ಕೇಳುವ ಪಕ್ಷಗಳ ಕಣ್ಣೊರೆಸುವ ತಂತ್ರದ ಭಾಗವೇ ಆಗಿಹೋಗಿದೆ.

ಬರ-ನೆರೆಯಿಂದಾಗುವ ಅನಾಹುತಗಳು, ಒಂದು ರೀತಿಯಲ್ಲಿ ಹೃದಯವಿದ್ರಾವಕವೆನಿಸಿದರೆ; ಧುತ್ತನೆ ಎದುರಾಗುವ ಅವಘಡಗಳು ಪರೋಕ್ಷವಾಗಿ ಅಧಿಕಾರಸ್ಥರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತವೆ. ರಕ್ಷಣಾ ಕಾರ್ಯಾಚರಣೆ, ಸುರಕ್ಷಿತ ತಾಣಗಳತ್ತ ಸಂತ್ರಸ್ತರ ರವಾನೆ, ತಾತ್ಕಾಲಿಕ ಊಟ-ವಸತಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಯತ್ತ ಗಮನ ಹರಿಸುವ ಜಿಲ್ಲಾಡಳಿತ; ಆ ನಂತರ ಕೊಚ್ಚಿಹೋದ ರಸ್ತೆಗಳು, ಮುರಿದುಬಿದ್ದ ಸೇತುವೆಗಳ ಮರು ನಿರ್ಮಾಣದ ಕಾಮಗಾರಿಗಳತ್ತ ಕಣ್ಣಾಯಿಸುತ್ತದೆ. ‘ತುರ್ತು’ ನೆಪದಲ್ಲಿ ಕೋಟ್ಯಂತರ ರೂಪಾಯಿಗಳು- ಕಳೆದ ಮೂರು ವರ್ಷಗಳ ಲೆಕ್ಕವನ್ನು ನೋಡಿದರೂ, ಸುಮಾರು 5,360 ಕೋಟಿ ರೂಪಾಯಿಗಳು ನೀರಿನಂತೆಯೇ ಹರಿದುಹೋಗಿದೆ.

ಕರ್ನಾಟಕಕ್ಕೆ ಈಗ ಬೇಕಾಗಿರುವುದು ಬರ ಮತ್ತು ನೆರೆ ಪರಿಹಾರಗಳಲ್ಲ, ಆಳುವ-ಕೇಳುವ ಪಕ್ಷಗಳ ಪತ್ರಿಕಾ ಹೇಳಿಕೆಗಳಲ್ಲ, ಸಮಗ್ರ ಹವಾಮಾನ ಹೊಂದಾಣಿಕೆ ನೀತಿ. ಪ್ರತಿಯೊಂದು ಜಿಲ್ಲೆಗೂ ಹವಾಮಾನ ಅಪಾಯ ನಕ್ಷೆ, ಪ್ರತಿಯೊಂದು ತಾಲೂಕಿಗೂ ಜಲ ಸಮತೋಲನ ಯೋಜನೆ, ಪ್ರತಿಯೊಂದು ನಗರಕ್ಕೂ ಮಳೆನೀರಿನ ಸಂಗ್ರಹಣಾ ಯೋಜನೆ ಮತ್ತು ಪ್ರತಿಯೊಬ್ಬ ರೈತನಿಗೂ ಹವಾಮಾನ ಆಧಾರಿತ ಕೃಷಿ ಸಲಹೆ ಅಗತ್ಯ.

ಇದನ್ನು ಓದಿದ್ದೀರಾ?: ಅಧಿಕಾರಸ್ಥರ ಅತಿಯಾಸೆಗೆ ಬಿಡದಿ ರೈತರು ಬಲಿಯಾಗಬೇಕೇ?

ನೆರೆ ಮತ್ತು ಬರ- ಎರಡೂ ಪ್ರಕೃತಿಯ ವಿಪತ್ತುಗಳಾಗಿರಬಹುದು. ಆದರೆ ಅವು ಮಾನವೀಯ ದುರಂತಗಳಾಗಿ ಬದಲಾಗುವುದು ಆಡಳಿತದ ಸಿದ್ಧತೆ, ಯೋಜನೆ ಮತ್ತು ಜಾರಿಯ ಮೇಲೆ ಅವಲಂಬಿತವಾಗಿದೆ. ಇಲ್ಲಿಯವರೆಗಿನ ಸರ್ಕಾರಗಳು, ಪ್ರಕೃತಿ ವಿಪತ್ತನ್ನು ದುರಂತವಾಗದಿರಲು ತಡೆಯಲು ವಿಫಲವಾಗಿವೆ. ಏಕೆಂದರೆ, ಅಧಿಕಾರಸ್ಥರದು ಪ್ರಾಮಾಣಿಕ ಪ್ರಯತ್ನವಲ್ಲ ಎಂಬುದು ಪ್ರತಿ ವರ್ಷ ಸಾಬೀತಾಗುತ್ತಲೇ ಸಾಗಿದೆ.   

ಹಾಗಾಗಿ ರಾಜ್ಯಕ್ಕೆ ಈಗ ಬೇಕಾಗಿರುವುದು ದಕ್ಷತೆ ಮತ್ತು ಪ್ರಾಮಾಣಿಕತೆಯುಳ್ಳ ಆಡಳಿತ. ಅಂತಹ ಆಡಳಿತವಿರುವ ಸರ್ಕಾರದ ಯಶಸ್ಸು, ವಿಕೋಪದಿಂದ ಎಷ್ಟು ಜೀವಗಳು ಮತ್ತು ಜೀವನೋಪಾಯವನ್ನು ರಕ್ಷಿಸಿತು ಎಂಬುದರ ಮೇಲೆ ನಿಂತಿರುತ್ತದೆ. ಹಾಗೆಯೇ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ಪ್ರಾಮಾಣಿಕವಾಗಿ ನೀಡಿತೆ ಎಂಬುದನ್ನೂ ಒಳಗೊಂಡಿರುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಈ ಪ್ರಕೃತಿ ವಿಕೋಪವನ್ನು ಹೇಗೆ ನಿರ್ವಹಿಸಬಲ್ಲದು ಎಂಬುದನ್ನು ಕಾದು ನೋಡಬೇಕಾಗಿದೆ.  

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...