ಗುಂಡ್ಮಿ ಜುಮ್ಮಾ ಮಸೀದಿ ಕಮಿಟಿ ಸಾಸ್ತಾನದ ವತಿಯಿಂದ ನವೆಂಬರ್ 6ರಂದು ಶುಕ್ರವಾರ ಜುಮ್ಮಾ ನಮಾಜ್ ಬಳಿಕ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ವಿಚಾರ ಸಂಕಿರಣ ಹಾಗೂ ಅಗತ್ಯವಿರುವವರಿಗೆ ಗಾಲಿಕುರ್ಚಿ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಪಿಎಸ್ಐ) ಮಹಾಂತೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಯುವಜನತೆ ಅದರ ವ್ಯಸನಕ್ಕೆ ಬಲಿಯಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸಮಾಜದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿಯ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹುಸೇನ್ ಹೈಕಾಡಿ ಅವರು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ NNO ಉಡುಪಿ ವತಿಯಿಂದ ಗಾಲಿಕುರ್ಚಿ ನೀಡಲಾಯಿತು NNO ಅಧ್ಯಕ್ಷರಾದ ನಖ್ವಾ ಯಹ್ಯಾ ಹಾಗೂ ಹುಸೇನ್ ಹೈಕಾಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುಹಾನ್ ಕಾರ್ಯಕ್ರಮ ನಿರೂಪಿಸಿದರು. ಜಾಹಿರ್ ಮೊಹಮ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸಮಾಜದಲ್ಲಿ ಮಾದಕ ದ್ರವ್ಯ ಸೇವನೆಯ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯವಿರುವವರಿಗೆ ನೆರವಾಗುವ ಮೂಲಕ ಮಸೀದಿ ಆಡಳಿತ ಮಂಡಳಿ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮುಂದಾಯಿತು.






