ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ತಯಾರಿಕೆ, ಮಾರಾಟ ಮತ್ತು ಸಂಗ್ರಹಣೆಗೆ ವಿಧಿಸಲಾಗಿದ್ದ ನಿಷೇಧವನ್ನು ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠ ಮತ್ತೆ ಜಾರಿಗೊಳಿಸಿದೆ.
ಮಾಂಸಾಹಾರ ನಿಷೇಧವನ್ನು ತೆರವುಗೊಳಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಜಿಲ್ಲಾಧಿಕಾರಿಗಳು ಆಗಸ್ಟ್ 10ರಂದು ಹೊರಡಿಸಿದ್ದ ನಿಷೇಧದ ಅಧಿಸೂಚನೆ ಮುಂದಿನ ವಿಚಾರಣೆಯವರೆಗೂ ಜಾರಿಯಲ್ಲಿರಲಿದೆ.
ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಾಶ್ ರಂಜನ್ ಪಾಠಕ್ ಮತ್ತು ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸೋಮನಾಥ ದೇವಾಲಯದ ಸುತ್ತಮುತ್ತ ಮಾಂಸ, ಮೀನು ಹಾಗೂ ಮಾಂಸಾಹಾರ ಪದಾರ್ಥಗಳ ತಯಾರಿಕೆ, ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಗಿರ್ ಸೋಮನಾಥ ಜಿಲ್ಲಾಧಿಕಾರಿಗಳು ಜುಲೈ 10ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರು. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ನಂತರ ಆಗಸ್ಟ್ 10ರಂದು ಅಂತಿಮ ಅಧಿಸೂಚನೆ ಹೊರಡಿಸಿ, ಸೋಮನಾಥ ದೇವಾಲಯದ 500 ಮೀಟರ್ ವ್ಯಾಪ್ತಿಯೂ ಸೇರಿದಂತೆ ಒಟ್ಟು ಏಳು ನಿರ್ದಿಷ್ಟ ಪ್ರದೇಶಗಳು ಮತ್ತು ರಸ್ತೆಗಳಲ್ಲಿ ನಿಷೇಧ ಜಾರಿಗೊಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸ್ಥಳೀಯ ರೆಸ್ಟೋರೆಂಟ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಅಕ್ಟೋಬರ್ 30ರಂದು ನ್ಯಾಯಮೂರ್ತಿ ನಿಶಾ ಎಂ. ಠಾಕೋರ್ ಅವರ ಏಕಸದಸ್ಯ ಪೀಠ ಜಿಲ್ಲಾಧಿಕಾರಿಗಳ ಅಧಿಸೂಚನೆಯನ್ನು ರದ್ದುಗೊಳಿಸಿ, ರೆಸ್ಟೋರೆಂಟ್ ಮಾಲೀಕರ ಪರವಾಗಿ ತೀರ್ಪು ನೀಡಿತ್ತು.
ಈ ತೀರ್ಪು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಗುಜರಾತ್ ಸರ್ಕಾರ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತು. ಸಂಜೆ ಸುಮಾರು 5.30ಕ್ಕೆ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ವಿಚಾರಣೆ ವೇಳೆ ರೆಸ್ಟೋರೆಂಟ್ ಮಾಲೀಕರ ಪರ ವಕೀಲರು, ನಿರ್ದಿಷ್ಟ ಪ್ರದೇಶಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇಲ್ಲ. ಅಲ್ಲದೆ, ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟದ ಚಟುವಟಿಕೆಗಳನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಇದನ್ನು ಪರಿಗಣಿಸಿದ್ದ ನ್ಯಾಯಮೂರ್ತಿ ನಿಶಾ ಠಾಕೋರ್, ಆಹಾರ ಸೇವನೆಯು ವೈಯಕ್ತಿಕ ಆಯ್ಕೆಯ ವಿಚಾರವಾಗಿದ್ದು, ಧಾರ್ಮಿಕ ಭಾವನೆಗಳ ನೆಪದಲ್ಲಿ ಸಂಪೂರ್ಣ ನಿಷೇಧ ಹೇರುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
“ಹಿಂದೂ ಧರ್ಮವು ಏಕರೂಪದ್ದಲ್ಲ. ಆಹಾರ ಸೇವನೆಯ ಆಯ್ಕೆ ಮತ್ತು ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಹೀಗಾಗಿ ಮಾಂಸಾಹಾರ ಸೇವನೆಯನ್ನು ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗುವುದಿಲ್ಲ. ಅದು ವೈಯಕ್ತಿಕ ಆಯ್ಕೆಯಾಗಿದೆ” ಎಂದು ಏಕಸದಸ್ಯ ಪೀಠ ಹೇಳಿತ್ತು.
ಇದನ್ನೂ ಓದಿ: ಸಾಬರಮತಿ ಆಶ್ರಮ ಪುನರಾಭಿವೃದ್ಧಿ ವಿರುದ್ಧ ಮಹಾತ್ಮ ಗಾಂಧಿ ಮರಿ ಮೊಮ್ಮಗ ಸುಪ್ರೀಂ ಕೋರ್ಟ್ ಮೊರೆ
ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ವಾದ ಮಂಡಿಸಿದರು. ದೀಪಾವಳಿ ಮತ್ತು ಗುಜರಾತಿ ಹೊಸ ವರ್ಷದ ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಸೋಮನಾಥ ದೇವಾಲಯ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಪ್ರದೇಶಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಮಾಂಸ, ಮೀನು ಮತ್ತು ಮಾಂಸಾಹಾರ ಪದಾರ್ಥಗಳನ್ನು ತರುವುದಕ್ಕೆ ಅವಕಾಶ ನೀಡಿದರೆ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಅವರು ವಾದಿಸಿದರು. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಂದರ್ಭದಲ್ಲಿ ಅನಾನುಕೂಲತೆ, ಗೊಂದಲ ಹಾಗೂ ಭದ್ರತಾ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದೂ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ವಾದಗಳನ್ನು ಪರಿಗಣಿಸಿದ ವಿಭಾಗೀಯ ಪೀಠ, ಆಗಸ್ಟ್ 10ರ ಜಿಲ್ಲಾಧಿಕಾರಿಗಳ ಅಂತಿಮ ಅಧಿಸೂಚನೆಯನ್ನು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿಡಲು ಆದೇಶಿಸಿತು.
ರೆಸ್ಟೋರೆಂಟ್ ಮಾಲೀಕರಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಾಲಯ, ಈ ಮೇಲ್ಮನವಿಯನ್ನು 2018ರಲ್ಲಿ ಸಲ್ಲಿಸಲಾದ ಸಂಬಂಧಿತ ಅರ್ಜಿಯೊಂದಿಗೆ ವಿಚಾರಣೆ ನಡೆಸಲು ನಿರ್ಧರಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 25ಕ್ಕೆ ನಿಗದಿಪಡಿಸಲಾಗಿದೆ.





