ಗುಜರಾತ್‌ನ ಮೋರ್ಬಿ ಜಿಲ್ಲೆಯ ಜೆತ್ಪರ್ ಗ್ರಾಮದಲ್ಲಿ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಕಂಪನಿಯು ಕೈಗೆತ್ತಿಕೊಂಡಿರುವ ಬೃಹತ್ ವಿದ್ಯುತ್ ಪ್ರಸರಣ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆಗೆ ಕೊನೆಗೂ ಗುಜರಾತ್ ಬಿಜೆಪಿ ಸರ್ಕಾರ ಮಣಿದಿದೆ. ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಕಳೆದ ಮೂರು ವಾರಗಳಿಗೂ ಹೆಚ್ಚು ಕಾಲದಿಂದ (ಜೂನ್ 9 ರಿಂದ) ಮೊರ್ಬಿಯ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಜೂನ್ 17ರಿಂದ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೀಗ ಗುಜರಾತ್ ಸರ್ಕಾರ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ.
ಇದನ್ನೂ ಓದಿ: ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?
ಏನಿದು ಯೋಜನೆ?
ಗುಜರಾತ್‌ನ ಕಚ್ ಜಿಲ್ಲೆಯ ‘ಖಾವ್ಡಾ’ ಎಂಬಲ್ಲಿ ವಿಶ್ವದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ (Renewable Energy Zone) ನಿರ್ಮಾಣವಾಗುತ್ತಿದೆ. ಇಲ್ಲಿ ಉತ್ಪಾದನೆಯಾಗುವ ಸೌರ ಮತ್ತು ಪವನ ವಿದ್ಯುತ್ ಅನ್ನು ದೇಶದ ಇತರ ಭಾಗಗಳಿಗೆ ಸಾಗಿಸಲು ಬೃಹತ್ ವಿದ್ಯುತ್ ಕಾರಿಡಾರ್‌ಗಳನ್ನು (Transmission Corridors) ನಿರ್ಮಿಸಲಾಗುತ್ತಿದೆ.
ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾದ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಅಡಿಯಲ್ಲಿ ಬರುವ ‘ಹಲ್ವಾಡ್ ಟ್ರಾನ್ಸ್‌ಮಿಷನ್ ಲಿಮಿಟೆಡ್’ ಈ ಕಾಮಗಾರಿಯನ್ನು ನಡೆಸುತ್ತಿದೆ. ಕಚ್‌ನಿಂದ ಮೋರ್ಬಿ ಜಿಲ್ಲೆಯ ಹಲ್ವಾಡ್‌ವರೆಗೆ ಸುಮಾರು 246 ಕಿಲೋಮೀಟರ್ ಉದ್ದದ 765 ಕೆವಿ (kV) ಸಾಮರ್ಥ್ಯದ ಹೈ-ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗ ಇದಾಗಿದೆ.
ಈ ಬೃಹತ್ ವಿದ್ಯುತ್ ಲೈನ್‌ಗಳು ಗುಜರಾತ್‌ನ ಸುಮಾರು 20 ಜಿಲ್ಲೆಗಳ 400ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ಹಾದುಹೋಗುತ್ತವೆ. ಇದರಲ್ಲಿ ಮೋರ್ಬಿ ಜಿಲ್ಲೆಯ ಜೆತ್ಪರ್ ಗ್ರಾಮವು ಈ ಯೋಜನೆಯಿಂದ ಅತ್ಯಂತ ತೀವ್ರವಾಗಿ ಬಾಧಿತಗೊಂಡಿರುವ ಕೇಂದ್ರಬಿಂದುವಾಗಿದೆ.
ರೈತರ ತೀವ್ರ ಆಕ್ರೋಶಕ್ಕೆ ಕಾರಣವೇನು?
ಮೊರ್ಬಿಯ ರೈತರು ಕೇವಲ “ನಮಗೆ ಹಣ ಸಾಲದು” ಎಂಬ ಕಾರಣಕ್ಕೆ ಮಾತ್ರ ಪ್ರತಿಭಟಿಸುತ್ತಿಲ್ಲ. ಅವರ ಆಕ್ರೋಶದ ಹಿಂದೆ ತಲೆಮಾರುಗಳ ಕೃಷಿ ಭವಿಷ್ಯದ ಆತಂಕಗಳಿವೆ.
ಇದನ್ನೂ ಓದಿ: ಬಿಹಾರದ ಭೂಮಿ ಲೂಟಿ: ಅದಾನಿ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮೋದಿ ಸರ್ಕಾರದ ನೇರ ಪಾತ್ರ
ಮೋರ್ಬಿ ಭಾಗದ ಬಹುತೇಕ ರೈತರು ಕಡಲೇಕಾಯಿ, ಹತ್ತಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪಾಟೀದಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈಗ ಜಮೀನಿನ ಮಧ್ಯೆ ಬೃಹತ್ ವಿದ್ಯುತ್ ಗೋಪುರಗಳನ್ನು ನೆಡುವುದರಿಂದ ಮತ್ತು ಅವುಗಳ ಮೇಲೆ ದಪ್ಪನೆಯ ಹೈ-ಟೆನ್ಷನ್ ತಂತಿಗಳನ್ನು ಎಳೆಯುವುದರಿಂದ ಆ ಭೂಮಿಯ ಮೌಲ್ಯ ಶೂನ್ಯವಾಗುತ್ತದೆ. ಆ ಜಾಗವನ್ನು ಬೇರೆ ಯಾರಿಗೂ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.
ಒಮ್ಮೆ ಜಮೀನಿನ ಮೇಲೆ ಹೈ-ವೋಲ್ಟೇಜ್ ತಂತಿಗಳು ಹಾದುಹೋದರೆ, ಸುರಕ್ಷತೆಯ ದೃಷ್ಟಿಯಿಂದ ಆ ಭಾಗದಲ್ಲಿ ಟ್ರ್ಯಾಕ್ಟರ್‌ಗಳು, ಹಾರ್ವೆಸ್ಟರ್‌ಗಳು (ಬೆಳೆ ಕೊಯ್ಲು ಯಂತ್ರ) ಅಥವಾ ದೊಡ್ಡ ಜೆಸಿಬಿಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಕೃಷಿ ಕಾರ್ಯಾಚರಣೆಗಳು ಅತ್ಯಂತ ಅಪಾಯಕಾರಿಯಾಗುತ್ತವೆ.
ಅಷ್ಟು ಮಾತ್ರವಲ್ಲದೆ ಈವರೆಗೆ ಸರ್ಕಾರ ಮತ್ತು ಅದಾನಿ ಕಂಪನಿಯು ‘ಜಂತರಿ ದರ’ ಅಂದರೆ ಸರ್ಕಾರಿ ನಿಗದಿಪಡಿಸಿದ ಭೂಮಿಯ ಕನಿಷ್ಠ ಮೌಲ್ಯ ಆಧಾರದ ಮೇಲೆ ಪರಿಹಾರ ನೀಡಲು ಮುಂದಾಗಿದ್ದವು. ಆದರೆ, ಮೋರ್ಬಿಯಲ್ಲಿ ಜಮೀನುಗಳ ನಿಜವಾದ ಮಾರುಕಟ್ಟೆ ಬೆಲೆ ಈ ಜಂತರಿ ದರಕ್ಕಿಂತ ಐದರಿಂದ ಹತ್ತು ಪಟ್ಟು ಹೆಚ್ಚಾಗಿದೆ. ಉದಾಹರಣೆಗೆ, ಕೋಟಿ ಬೆಲೆಬಾಳುವ ಭೂಮಿಗೆ ಸರ್ಕಾರಿ ದರದ ಲೆಕ್ಕದಲ್ಲಿ ಕೆಲವೇ ಲಕ್ಷ ರೂಪಾಯಿಗಳನ್ನು ನೀಡಿ ಭೂಮಿ ವಶಪಡಿಸಿಕೊಳ್ಳಲಾಗುತ್ತಿತ್ತು. ಇದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅದಾನಿಯಂತಹ ಖಾಸಗಿ ಕಂಪನಿಗಳು ರೈತರ ಭೂಮಿಯಲ್ಲಿ ಮೂಲಸೌಕರ್ಯ ನಿರ್ಮಿಸಿ, ದಶಕಗಳ ಕಾಲ ಕೋಟ್ಯಂತರ ರೂಪಾಯಿ ವಿದ್ಯುತ್ ವ್ಯವಹಾರ ನಡೆಸಿ ಲಾಭ ಗಳಿಸುತ್ತವೆ. ಆದರೆ ಭೂಮಿ ಕಳೆದುಕೊಳ್ಳುವ ರೈತನಿಗೆ ಕೇವಲ ಒಂದು ಬಾರಿ ಅತ್ಯಂತ ಕಡಿಮೆ ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತದೆ. ಇದು ಅನ್ಯಾಯ ಎಂಬುದು ರೈತರ ಆಕ್ಷೇಪ.
ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಕೃಷಿಕರು ಸಾಮೂಹಿಕವಾಗಿ ತಲೆ ಮುಂಡನ (ತಲೆ ಬೋಳಿಸಿಕೊಳ್ಳುವುದು) ಮಾಡಿಸಿಕೊಂಡು ವಿಶಿಷ್ಟವಾಗಿ ಪ್ರತಿಭಟಿಸಿದ್ದರು. ಅಮರಣಾಂತ ಉಪವಾಸ ಸತ್ಯಾಗ್ರಹವಾಗಿ ಬದಲಾದ ಈ ಪ್ರತಿಭಟನೆಯಲ್ಲಿ 40 ಡಿಗ್ರಿ ತಾಪಮಾನದ ಬಿಸಿಲಿನಲ್ಲಿ ಜೆತ್ಪರ್ ಗ್ರಾಮದಲ್ಲಿ ‘ಉಪವಾಸ ಛಾವಣಿ’ ಹಾಕಿ ರೈತರು ಧರಣಿ ಕುಳಿತಿದ್ದರು. ಹಲವು ರೈತರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಬೇಕಾಯಿತು.
ಇದೀಗ ಕೊನೆಗೂ ರೈತರ ಹೋರಾಟಕ್ಕೆ ಮಣಿದ ಬಿಜೆಪಿ ಸರ್ಕಾರ, ಮಾರುಕಟ್ಟೆ ದರದ ದುಪ್ಪಟ್ಟು ಹಣ ನೀಡಲು ಮತ್ತು ರೈತರನ್ನೊಳಗೊಂಡ ಸಮಿತಿ ರಚಿಸಲು ಒಪ್ಪಿಕೊಂಡಿದೆ.
ಸರ್ಕಾರದ ಈ ಘೋಷಣೆಯನ್ನು ರೈತರು ಸ್ವಾಗತಿಸಿದ್ದರೂ, ಅಧಿಕೃತವಾಗಿ ಸರ್ಕಾರಿ ಆದೇಶ ಹೊರಬೀಳುವವರೆಗೂ ಹಾಗೂ ತಮ್ಮ ಇತರ ಕೆಲವು ತಾಂತ್ರಿಕ ಬೇಡಿಕೆಗಳು ಈಡೇರುವವರೆಗೂ ಜೆತ್ಪರ್‌ನಲ್ಲಿ ಹೋರಾಟ ಮತ್ತು ಧರಣಿಯನ್ನು ಮುಂದುವರಿಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.




