ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಒಳಜಗಳ ತೀವ್ರಗೊಂಡಿದೆ. ನಾಯಕರ ನಡುವಿನ ಮುಸುಕಿನ ಗುದ್ದಾಟ ಮತ್ತು ಬಣ ರಾಜಕೀಯ ಪಕ್ಷದ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ದಲಿತ ಸಿಖ್ ನಾಯಕ, ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮತ್ತು ಜಾಟ್ ಸಿಖ್ ನಾಯಕ, ಪಿಸಿಸಿ ಹಾಲಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ನಡುವಿನ ಪ್ರತಿಷ್ಠೆಯ ಕದನ ಸದ್ಯದ ಭಿನ್ನಮತಕ್ಕೆ ಪ್ರಮುಖ ಕಾರಣವಾಗಿದೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಚರಣಜಿತ್ ಸಿಂಗ್ ಚನ್ನಿ, ಅದೇ ಸ್ಥಾನದಲ್ಲಿ ಹಾಲಿ ಅಧ್ಯಕ್ಷ ರಾಜಾ ವಾರಿಂಗ್ ಅವರನ್ನು ಮುಂದುವರಿಸಲು ಹೈಕಮಾಂಡ್ ತೆಗೆದುಕೊಂಡ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಇನ್ನು, ವಾರಿಂಗ್ ಅವರನ್ನೇ ರಾಜ್ಯಾಧ್ಯಕ್ಷರಾಗಿ ಹಾಗೂ ಪ್ರತಾಪ್ ಸಿಂಗ್ ಬಾಜ್ವಾ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಸಲು ನಿರ್ಧರಿಸಿರುವ ಹೈಕಮಾಂಡ್, ಇತ್ತ ಚನ್ನಿ ಸೇರಿದಂತೆ ಇತರ ಹಿರಿಯ ನಾಯಕರಾದ ಸಂಸದ ಸುಖಜೀಂದರ್ ಸಿಂಗ್ ರಾಂಧವ, ಅಮರ್ ಸಿಂಗ್ ಮತ್ತು ವಿಜಯ್ ಇಂದರ್ ಸಿಂಗ್ಲಾ ಅವರನ್ನು ಪ್ರಮುಖ ಚುನಾವಣಾ ಸಮಿತಿಗಳ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ಬಂಡಾಯ ಶಮನಗೊಳಿಸಲು ಯತ್ನಿಸಿದೆ.
ರಾಜಾ ವಾರಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಎಂಬ ಕೂಗು ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಾಗ, ಎಐಸಿಸಿ ಖಜಾಂಚಿ ಅಜಯ್ ಮಾಕನ್ ನೇತೃತ್ವದ ಮೂವರು ಸದಸ್ಯರ ಸಮಿತಿಯು ಬರೋಬ್ಬರಿ 66 ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿತು. ಇದೇ ವೇಳೆ, ದಲಿತ ಸಿಖ್ ನಾಯಕ ಚನ್ನಿ ಅವರನ್ನು ಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿ ಕನಿಷ್ಠ 30 ಜಾಟ್ ಸಿಖ್ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಲಾಬಿ ನಡೆಸಿದ್ದರು.
ಆದರೆ, 2025ರ ನವೆಂಬರ್‌ನಲ್ಲಿ ನೇಮಕಗೊಂಡಿದ್ದ ಬಹುತೇಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಲಿ ಅಧ್ಯಕ್ಷ ವಾರಿಂಗ್ ಬೆಂಬಲಕ್ಕೆ ನಿಂತರು. ಇದಲ್ಲದೆ, ಚನ್ನಿ ಅವರಿಗೆ ಉನ್ನತ ಸ್ಥಾನ ಒಲಿಯದಂತೆ ತಡೆಯಲು ಹಿರಿಯ ಜಾಟ್ ಸಿಖ್ ನಾಯಕರಾದ ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಸುಖಜೀಂದರ್ ಸಿಂಗ್ ರಾಂಧವ ಕೈಜೋಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಚನ್ನಿ ಅಧ್ಯಕ್ಷರಾದರೆ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಷರತ್ತನ್ನು ವಿರೋಧಿ ಬಣ ಮುಂದಿಟ್ಟಿತ್ತು. ಅಲ್ಲದೆ, ಚುನಾವಣೆ ಹೊಸ್ತಿಲಲ್ಲಿ, 4 ವರ್ಷಗಳಿಂದ ಅಧ್ಯಕ್ಷರಾಗಿರುವ ವಾರಿಂಗ್ ಅವರನ್ನು ಬದಲಾಯಿಸಿದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ವಾದವೂ ಹೈಕಮಾಂಡ್ ಮಟ್ಟದಲ್ಲಿ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಭಕ್ತಿ ಮತ್ತು ಆರ್ಥಿಕತೆ: ಬದಲಾಗುತ್ತಿರುವ ಧಾರ್ಮಿಕ ಕ್ಷೇತ್ರಗಳ ಸ್ವರೂಪ
ಲೋಕಸಭಾ ಸಂಸದರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೇ ಎಂಬ ವಿಚಾರ ಭವಿಷ್ಯದಲ್ಲಿ ಮತ್ತೊಂದು ಸುತ್ತಿನ ಭಿನ್ನಮತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಚನ್ನಿ, ರಾಂಧವ, ಅಮರ್ ಸಿಂಗ್ ಹಾಗೂ ರಾಜಾ ವಾರಿಂಗ್ ಎಲ್ಲರೂ ಪ್ರಸ್ತುತ ಲೋಕಸಭಾ ಸಂಸದರಾಗಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತದ ಬೆನ್ನಲ್ಲೇ, ಗುರ್‌ದಾಸ್‌ಪುರದ ಕಾಂಗ್ರೆಸ್ ಸಂಸದ ಸುಖಜೀಂದರ್ ಸಿಂಗ್ ರಾಂಧವ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ತಮ್ಮ ಭೇಟಿಗೆ ರಾಜಕೀಯ ಬಣ್ಣ ಬಳಿಯುವುದನ್ನು ಖಚಿತವಾಗಿ ತಳ್ಳಿಹಾಕಿರುವ ರಾಂಧವ, “ಇದು ಮೊದಲೇ ನಿಗದಿಯಾಗಿದ್ದ ಭೇಟಿಯಾಗಿದ್ದು ಎಂದು ಸ್ಪಷ್ಟಪಡಿಸಿದ್ದಾರೆ




