ಈ ದಿನ ಸಂಪಾದಕೀಯ | ತೀಸ್ತಾ ನದಿ ತೀರದಲ್ಲಿ ‘ಚೀನಾ-ಪಾಕ್’ ವ್ಯೂಹ; ಎಚ್ಚರಿಕೆ ವಹಿಸಬೇಕಿದೆ ಭಾರತ

Date:

ಬಾಂಗ್ಲಾ ಮೇಲೆ ಚೀನಾ ಮತ್ತು ಪಾಕಿಸ್ತಾನದ ಪ್ರಭಾವವನ್ನು ಕಡಿತಗೊಳಿಸಲು ಭಾರತಕ್ಕೆ ಈಗ ಇದಕ್ಕಿಂತ ಬೇರೆ ಆಯ್ಕೆಗಳಿಲ್ಲ. ಭಾರತವು ನೆರೆಹೊರೆಯಲ್ಲಿ ತನ್ನ ಪ್ರಭಾವವನ್ನು ಕಾಯ್ದುಕೊಳ್ಳಬೇಕಾದರೆ ಕೇವಲ ರಾಜತಾಂತ್ರಿಕ ಮಾತುಗಳನ್ನಾಡುವುದನ್ನು ಬಿಟ್ಟು, ಹೆಚ್ಚಿನ ಆರ್ಥಿಕ ತ್ಯಾಗ, ಸೌಹಾರ್ದತೆ ಹಾಗೂ ತ್ವರಿತ ಉದಾರತೆಯನ್ನು ಪ್ರದರ್ಶಿಸಬೇಕು. ಇದೇ, ಇಂದಿನ ತುರ್ತು!

- Advertisement -

ಬಾಂಗ್ಲಾದೇಶದ ತೀಸ್ತಾ ನದಿ ಯೋಜನೆಗೆ ಚೀನಾ ನೆರವು ನೀಡಲು ಮುಂದಾಗಿದೆ. ಈ ನೆರವಿನ ಕುರಿತು ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, “ಚೀನಾ-ಬಾಂಗ್ಲಾದೇಶದ ಸಹಕಾರವು ಯಾವುದೇ ಮೂರನೇ ದೇಶವನ್ನು ಗುರಿಯಾಗಿಸಿಕೊಂಡಿಲ್ಲ. ಇದು ಮೂರನೇ ವ್ಯಕ್ತಿಯ ಪ್ರಭಾವದಿಂದ ಮುಕ್ತವಾಗಿರಬೇಕು” ಎಂದು ಅತ್ಯಂತ ಜಾಣ್ಮೆಯ ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಭಾರತವನ್ನು ತಿವಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಮೇಲ್ನೋಟಕ್ಕೆ ಇದು ಸಾಮಾನ್ಯ ರಾಜತಾಂತ್ರಿಕ ಹೇಳಿಕೆಯಂತೆ ಕಂಡರೂ, ಇದರ ಹಿಂದಿರುವ ಚೀನಾದ ನೀತಿ ಏನು ಎಂಬುದನ್ನು ಅರಿಯುವುದು ಕಷ್ಟವೇನಲ್ಲ. ತನ್ನ ನೆರೆಹೊರೆಯ ದೇಶಗಳ ಯೋಜನೆಗಳಲ್ಲಿ ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ಭಾಗಿಯಾದರೂ ಸಹಿಸಿಕೊಳ್ಳದ ಚೀನಾ, ಈ ‘ಉದಾತ್ತ’ ಹೇಳಿಕೆ ನೀಡಿರುವುದು ಕೇವಲ ನಾಟಕೀಯವೆಂದೇ ನೋಡಲಾಗುತ್ತದೆ.

ಮುಖ್ಯವಾಗಿ, ಸಾಮಾನ್ಯವಾಗಿ ಬಾಂಗ್ಲಾದೇಶದ ಪ್ರಧಾನಿಗಳು ಅಧಿಕಾರಕ್ಕೆ ಬಂದ ತಕ್ಷಣ ಭಾರತಕ್ಕೆ ಭೇಟಿ ನೀಡುವುದು ವಾಡಿಕೆ. ಆದರೆ, ಈಗ ಕಾಲ ಬದಲಾಗಿದೆ. ಬಾಂಗ್ಲಾದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರು ತಮ್ಮ ಮೊದಲ ವಿದೇಶಿ ಪ್ರವಾಸಕ್ಕಾಗಿ ಭಾರತದ ಬದಲಿಗೆ ಚೀನಾವನ್ನು ಆರಿಸಿಕೊಂಡರು. ಆಗಲೇ, ಬಾಂಗ್ಲಾ-ಭಾರತದ ಸಂಬಂಧ ಹಳಸುತ್ತಿದೆ ಎಂಬುದು ಸ್ಪಷ್ಟವಾಗಿ ಕಂಡಿತು. ದೆಹಲಿಯ ರಾಜತಾಂತ್ರಿಕ ವಲಯದಲ್ಲಿ ಆತಂಕದ ಗಂಟೆಯೂ ಮೊಳಗಿತ್ತು.

ರೆಹಮಾನ್ ಅವರ ಚೀನಾ ಪ್ರವಾಸದ ವೇಳೆ ನೀಡಿದ ‘ಜಂಟಿ ಪ್ರಕಟಣೆ’ಯಲ್ಲಿ, “ಚೀನಾ ತನ್ನ ಸಾಮರ್ಥ್ಯದ ಮಿತಿಯೊಳಗೆ ಬಾಂಗ್ಲಾದೇಶದ ತಜ್ಞರೊಂದಿಗೆ ಸೇರಿ ‘ತೀಸ್ತಾ ನದಿ ಸಮಗ್ರ ನಿರ್ವಹಣೆ ಮತ್ತು ಪುನಶ್ಚೇತನ ಯೋಜನೆ’ಗೆ (TRCMRP) ಸಂಪೂರ್ಣ ಬೆಂಬಲ ಮತ್ತು ಸಹಾಯವನ್ನು ನೀಡಲಿದೆ” ಎಂದು ಘೋಷಿಸಲಾಯಿತು. ಚೀನಾ ಎಂದಿಗೂ ಉಚಿತವಾಗಿ ಅಥವಾ ಉದಾರವಾಗಿ ಯಾರಿಗೂ ನೆರವು ನೀಡುವ ದೇಶವಲ್ಲ. ಹೀಗಿರುವಾಗ ಬಾಂಗ್ಲಾದ ನದಿ ನಿರ್ವಹಣೆಗೆ ಕೈ ಜೋಡಿಸಿರುವುದು ಭಾರತಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಯಾಕೆಂದರೆ, ತೀಸ್ತಾ ನದಿಯು ಭಾರತ-ಬಾಂಗ್ಲಾದೇಶ ಗಡಿಗೆ ಸಮಾನಾಂತರವಾಗಿ ಹರಿಯುತ್ತದೆ. ಉದ್ದೇಶಿತ ಯೋಜನೆಯು ಇರುವುದು ಈ ಗಡಿ ಭಾಗದ ಕೇವಲ 10 ರಿಂದ 20 ಕಿ.ಮೀ. ವ್ಯಾಪ್ತಿಯೊಳಗೆ. ಇದು ಭಾರತದ ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಅತ್ಯಂತ ಸೂಕ್ಷ್ಮವಾದ ‘ಸಿಲಿಗುರಿ ಕಾರಿಡಾರ್’ ಅಥವಾ ‘ಚಿಕನ್ಸ್ ನೆಕ್’ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೆ.

ಅಲ್ಲದೆ, ಈ ಯೋಜನೆಯಲ್ಲಿ ಭಾಗಿಯಾಗಿರುವ ‘ಪೊಸಿಷನ್ ಚೀನಾ’ ಅಥವಾ ‘ಪವರ್‌ಚೀನಾ’ ಸಂಸ್ಥೆಯು ನೇರವಾಗಿ ಚೀನಾದ ಕಮ್ಯುನಿಸ್ಟ್ ಪಕ್ಷ ಮತ್ತು ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ಜೊತೆ ಕಾರ್ಯತಂತ್ರದ ನಂಟು ಹೊಂದಿರುವ ಸರ್ಕಾರಿ ಸ್ವಾಮ್ಯದ ಬೃಹತ್ ಕಂಪನಿಯಾಗಿದೆ.

ಭೌಗೋಳಿಕ ಮತ್ತು ರಾಜತಾಂತ್ರಿಕ ಆಟಗಳು ಏನೇ ಇರಲಿ, ಈ ತೀಸ್ತಾ ಯೋಜನೆ ಭಾರತದ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ಚೀನಾಗೆ ಚೆನ್ನಾಗಿಯೇ ಗೊತ್ತು. ಇದನ್ನು ಅರಿತಿದ್ದ ಹಿಂದಿನ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು, ಭಾರತಕ್ಕೆ ಅತ್ಯಂತ ಸೂಕ್ಷ್ಮವಾಗಿರುವ ಗಡಿ ಪ್ರದೇಶದ ತೀರಾ ಸಮೀಪಕ್ಕೆ ಚೀನಾ ಕಾಲಿಡದಂತೆ ತಡೆದಿತ್ತು. ಶೇಖ್ ಹಸೀನಾ ಅವರು ತೀಸ್ತಾ ನದಿ ಹೂಳೆತ್ತುವಿಕೆ ಮತ್ತು ನೀರು ಸಂಗ್ರಹಣೆಯ ತಾಂತ್ರಿಕ ಅಧ್ಯಯನಕ್ಕಾಗಿ ಪವರ್‌ಚೀನಾ ಜೊತೆ ಒಪ್ಪಂದ ಮಾಡಿಕೊಂಡಾಗ, ಭಾರತದ ಅಂದಿನ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶೃಂಗ್ಲಾ ತಕ್ಷಣ ಢಾಕಾಗೆ ಧಾವಿಸಿ ಅದನ್ನು ತಡೆದಿದ್ದರು.

ಆದರೆ, ಈಗ ಬಾಂಗ್ಲಾದಲ್ಲಾದ ರಾಜಕೀಯ ಬದಲಾವಣೆ ಮತ್ತು ಭಾರತ-ಬಾಂಗ್ಲಾ ನಡುವಿನ ವಿರಸವನ್ನು ಚೀನಾ ತನಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಬಾಂಗ್ಲಾದೇಶದ ರಂಗ್‌ಪುರ ವಿಭಾಗದಲ್ಲಿ ಚೀನಿಯರು ಹೋಟೆಲ್, ಪ್ರವಾಸೋದ್ಯಮ ಹಾಗೂ ವಿವಿಧ ಸಣ್ಣ ಉದ್ಯಮಗಳ ಮೂಲಕ ಭದ್ರವಾಗಿ ನೆಲೆಸುತ್ತಿದ್ದಾರೆ. ಹೆದ್ದಾರಿ ಯೋಜನೆಗಳು, ತೀಸ್ತಾ ಸೇತುವೆ ನಿರ್ಮಾಣ, ಕಲ್ಲಿದ್ದಲು ಗಣಿಗಾರಿಕೆ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳ ನೆಪದಲ್ಲಿ ಚೀನಾದ ಬೃಹತ್ ಜನಸಂಖ್ಯೆ ಭಾರತದ ಗಡಿಯ ಸಮೀಪವೇ ಬೀಡುಬಿಟ್ಟಿದೆ. ಇದಲ್ಲದೆ, ಗಡಿಯ ಸನಿಹದಲ್ಲಿರುವ ಲಾಲ್ಮೋನಿರ್‌ಹತ್‌ನಲ್ಲಿರುವ ಎರಡನೇ ಮಹಾಯುದ್ಧದ ಕಾಲದ ವಾಯುನೆಲೆಯನ್ನು ಪುನಶ್ಚೇತನಗೊಳಿಸಲು ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರವು ಚೀನಾವನ್ನು ಆಹ್ವಾನಿಸಿತ್ತು. ಈ ಎಲ್ಲ ಬೆಳವಣಿಗೆಗಳು ಭಾರತದ ಸುತ್ತ ಚೀನಾ ಹೆಣೆಯುತ್ತಿರುವ ವ್ಯೂಹವನ್ನು ಸ್ಪಷ್ಟಪಡಿಸುತ್ತವೆ.

ಇದೆಲ್ಲದರ ನಡುವೆ, ಬಾಂಗ್ಲಾದೇಶದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದೆ. ದಶಕಗಳ ಕಾಲ ರಾಜಕೀಯದಿಂದ ಮೂಲೆಗುಂಪಾಗಿದ್ದ ಕಠೋರ ಇಸ್ಲಾಮಿಕ್ ಸಂಘಟನೆ ‘ಜಮಾತ್-ಎ-ಇಸ್ಲಾಮಿ’ ಇತ್ತೀಚಿಗೆ ಪುಟಿದೆದ್ದಿದೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಉನ್ನತ ಮಟ್ಟದವರೆಗೆ ಜಮಾತ್ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಇದೇ ಸನ್ನಿವೇಶವನ್ನು ಬಳಸಿಕೊಂಡು ಪಾಕಿಸ್ತಾನದ ರಾವಲಪಿಂಡಿ ಮಿಲಿಟರಿ ಪ್ರಧಾನ ಕಚೇರಿಯು ಬಾಂಗ್ಲಾದೇಶ ಎದುರು ‘ಜಂಟಿ ಮಿಲಿಟರಿ ಕಮಾಂಡ್’ ಸ್ಥಾಪನೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಅಷ್ಟೇ ಅಲ್ಲದೆ, ಚೀನಾದ ಸಹಭಾಗಿತ್ವದಲ್ಲಿ ತಯಾರಿಸಲಾದ ಯುದ್ಧ ವಿಮಾನಗಳು ಮತ್ತು ಮಿಲಿಟರಿ ಉಪಕರಣಗಳನ್ನು ಬಾಂಗ್ಲಾದೇಶಕ್ಕೆ ನೀಡಲು ಮುಂದಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ, ಭಾರತದ ವಿರುದ್ಧ ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ತ್ರಿಕೋನ ವ್ಯೂಹ ರೂಪುಗೊಳ್ಳುತ್ತದೆ.

ಒಂದೆಡೆ ಪರಿಸ್ಥಿತಿ ಹೀಗಿದ್ದರೆ, ಮತ್ತೊಂದೆಡೆ ನದಿ ನೀರು ಹಂಚಿಕೆ ಭಾರತ-ಬಾಂಗ್ಲಾ ದೇಶಗಳ ನಡುವಿನ ಪ್ರಮುಖ ದ್ವಿಪಕ್ಷೀಯ ವಿಷಯವಾಗಿದೆ. ಆದರೆ, ತೀಸ್ತಾ ವಿವಾದ 2010 ರಿಂದಲೂ ಇತ್ಯರ್ಥವಾಗದೇ ಉಳಿದಿದೆ. ಇದೇ ಸಮಯದಲ್ಲಿ, 1996ರ ಐತಿಹಾಸಿಕ ಗಂಗಾ ನದಿ ನೀರು ಹಂಚಿಕೆ ಒಪ್ಪಂದದ 30 ವರ್ಷಗಳ ಅವಧಿಯು 2026ರ ಡಿಸೆಂಬರ್‌ಗೆ ಕೊನೆಗೊಳ್ಳಲಿದೆ. ಈ ಒಪ್ಪಂದದ ನವೀಕರಣವು ಉಭಯ ದೇಶಗಳ ರಾಜತಾಂತ್ರಿಕತೆಗೆ ದೊಡ್ಡ ಅಗ್ನಿಪರೀಕ್ಷೆಯಾಗಲಿದೆ. ಆದ್ದರಿಂದ, ತೀಸ್ತಾ ನದಿಯ ಈ ಬಿಕ್ಕಟ್ಟನ್ನು ಬಾಂಗ್ಲಾದೇಶವು ಗಂಗಾ ನದಿ ನೀರು ಹಂಚಿಕೆ ಒಪ್ಪಂದದಲ್ಲಿ ತಮಗೆ ಅನುಕೂಲ ಮಾಡಿಕೊಳ್ಳಲು ಬಳಸಿಕೊಳ್ಳಬಹುದಾದ ಸಾಧ್ಯತೆಗಳಿವೆ.

ಇದೆಲ್ಲವನ್ನೂ ನಿಭಾಯಿಸುವ, ಚೀನಾ-ಬಾಂಗ್ಲಾ ದೋಸ್ತಿ ಬಲಗೊಳ್ಳದಂತೆ ತಡೆಯುವ ಹಾಗೂ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ.

ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?

ಸದ್ಯ ಭಾರತವು ಬಾಂಗ್ಲಾಗೆ ತನ್ನ ರಾಯಭಾರಿಯನ್ನು ನೇಮಿಸಿದೆ. ಈ ಮೂಲಕ ಭಾರತವು ತನ್ನ ನೆರೆಹೊರೆಯವರೊಂದಿಗೆ ಅತ್ಯುತ್ತಮ ಸಂಬಂಧವನ್ನು ಬಯಸುತ್ತದೆ ಎಂದು ಸಂದೇಶ ಸಾರಿದೆ. ಆದರೂ, ಅದು ಸಾಲದು. ಮೋದಿ ಸರ್ಕಾರವು ತನ್ನ ದೇಶೀಯ ರಾಜಕಾರಣಕ್ಕಾಗಿ ‘ಬಾಂಗ್ಲಾದೇಶಿ ವಲಸಿಗರು’ ಎಂಬ ಆಕ್ರಮಣಕಾರಿ ವಾಗ್ದಾಳಿಗಳನ್ನು ನಿರಂತರವಾಗಿ ನಡೆಸುತ್ತಿರುವಾಗ, ಇಂತಹ ಸಣ್ಣ ನೀತಿಗಳು ನೆರೆಹೊರೆಯವರೊಂದಿಗಿನ ಬಾಂಧವ್ಯವನ್ನು ಸುಧಾರಿಸಲು ಖಂಡಿತ ನೆರವಾಗುವುದಿಲ್ಲ.

ಸಧ್ಯಕ್ಕೆ, ನದಿ ನೀರಿನ ವಿಚಾರದಲ್ಲಿ ಬಾಂಗ್ಲಾದೊಂದಿಗೆ ಭಾರತವು ಸಹಕಾರ-ಸಹಬಾಳ್ವೆ ನೀತಿಯನ್ನು ಅನುಸರಿಸುವ ಅಗತ್ಯವಿದೆ. ಹವಾಮಾನ ವೈಪರೀತ್ಯ ಸೇರಿದಂತೆ ನಾನಾ ಕಾರಣಗಳಿಂದ ಗಂಗಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ಇದು ಬಾಂಗ್ಲಾ-ಭಾರತ ಎರಡೂ ರಾಷ್ಟ್ರಗಳಿಗೂ ಸಮಸ್ಯೆ. ಇದನ್ನು ನಿಭಾಯಿಸಲು ಭಾರತವು ಬಾಂಗ್ಲಾದೇಶದ ತಜ್ಞರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಿ, ಗಂಗಾ ನದಿಯ ಭವಿಷ್ಯವನ್ನು ಕಾಪಾಡಲು ಜಂಟಿ ಪಾಲುದಾರಿಕೆಯನ್ನು ಪ್ರಕಟಿಸಬೇಕು. ಇದರೊಂದಿಗೆ, ತೀಸ್ತಾ ಯೋಜನೆಗಾಗಿ ಭಾರತವು ಚೀನಾಕ್ಕಿಂತಲೂ ಹೆಚ್ಚು ಆಕರ್ಷಕ ಮತ್ತು ಉದಾರವಾದ ಆರ್ಥಿಕ ಪ್ಯಾಕೇಜ್ ಅನ್ನು ತಕ್ಷಣವೇ ಪ್ರಸ್ತಾಪಿಸಬೇಕು.

ಬಾಂಗ್ಲಾ ಮೇಲೆ ಚೀನಾ ಮತ್ತು ಪಾಕಿಸ್ತಾನದ ಪ್ರಭಾವವನ್ನು ಕಡಿತಗೊಳಿಸಲು ಭಾರತಕ್ಕೆ ಈಗ ಇದಕ್ಕಿಂತ ಬೇರೆ ಆಯ್ಕೆಗಳಿಲ್ಲ. ಭಾರತವು ನೆರೆಹೊರೆಯಲ್ಲಿ ತನ್ನ ಪ್ರಭಾವವನ್ನು ಕಾಯ್ದುಕೊಳ್ಳಬೇಕಾದರೆ ಕೇವಲ ರಾಜತಾಂತ್ರಿಕ ಮಾತುಗಳನ್ನಾಡುವುದನ್ನು ಬಿಟ್ಟು, ಹೆಚ್ಚಿನ ಆರ್ಥಿಕ ತ್ಯಾಗ, ಸೌಹಾರ್ದತೆ ಹಾಗೂ ತ್ವರಿತ ಉದಾರತೆಯನ್ನು ಪ್ರದರ್ಶಿಸಬೇಕು. ಇದೇ, ಇಂದಿನ ತುರ್ತು!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಚಾಕುವಿನಿಂದ ಇರಿದು ಮಾವನನ್ನೆ ಕೊಂದ ಅಳಿಯ

ಹಣ ನೀಡುವ ವಿಚಾರಕ್ಕೆ ಹಲವು ದಿನಗಳಿಂದ ನಡೆಯುತ್ತಿದ್ದ ಗಲಾಟೆ ವಿಕೋಪಕ್ಕೆ ತಿರುಗಿ,...

ಕಲಬುರಗಿ | ₹3 ಸಾವಿರ ಲಂಚ ಸ್ವೀಕಾರ: ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

ಜಾಮೀನು ಪಡೆದ ವ್ಯಕ್ತಿಯ ಹಾಜರಾತಿ ದಾಖಲಿಸುವ ವಿಚಾರದಲ್ಲಿ ₹3 ಸಾವಿರ ಲಂಚ...

SIR ವಿವಾದ | ಕೊಪ್ಪದಲ್ಲಿ 243 ಮತದಾರರ ಹೆಸರು ಡಿಲೀಟ್‌ಗೆ ನೀಡಿದ್ದ ಅರ್ಜಿ ಹಿಂಪಡೆದ ಬಿಜೆಪಿ ಮುಖಂಡ

ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು...