ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶದ ಬುಡಕಟ್ಟು ವ್ಯವಹಾರಗಳ ಸಚಿವ ವಿಜಯ್ ಶಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಮಧ್ಯಪ್ರದೇಶದ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರ ನಿರಾಕರಿಸಿದೆ.
ಮಂಗಳವಾರ ನಡೆದ ಸಂಪುಟ ಸಭೆಯ ಬಳಿಕ ಈ ಪ್ರಮುಖ ಬೆಳವಣಿಗೆ ನಡೆದಿದೆ. ಸಂಪುಟದ ಅಧಿಕೃತ ಕಾರ್ಯಸೂಚಿಗಳ ಚರ್ಚೆ ಮುಗಿದ ನಂತರ, ಹಿರಿಯ ಅಧಿಕಾರಿಗಳನ್ನು ಸಭೆಯಿಂದ ಹೊರಗೆ ಕಳುಹಿಸಿ ಈ ವಿಷಯದ ಕುರಿತು ಚರ್ಚಿಸಲಾಗಿದೆ. ಈ ವೇಳೆ, ಸಚಿವ ವಿಜಯ್ ಶಾ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಹೋದ್ಯೋಗಿಗಳ ಮುಂದೆ ವಿವರಣೆ ನೀಡಿದ್ದಾರೆ. ಸಚಿವ ವಿಜಯ್ ಶಾ ಈಗಾಗಲೇ ಮೂರು ಬಾರಿ ಬಹಿರಂಗವಾಗಿ ಕ್ಷಮೆಯಾಚಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡದಿರಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
2025ರ ಮೇನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಚಿವ ವಿಜಯ್ ಶಾ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದ್ದ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಕೋಮು ಪ್ರಚೋದಕ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಉನ್ನತ ನ್ಯಾಯಾಲಯಗಳು ತೀವ್ರವಾಗಿ ಖಂಡಿಸಿದ್ದವು. ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿ ಎಫ್‌ಐಆರ್ ನೋಂದಾಯಿಸಲು ಆದೇಶಿಸಿತ್ತು.
ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನ್ಯಾಯಾಲಯವು ಮೂರು ಸದಸ್ಯರ ಎಸ್‌ಐಟಿ ರಚಿಸಿತ್ತು. ತನಿಖೆ ಪೂರ್ಣಗೊಳಿಸಿದ ಎಸ್‌ಐಟಿ, ಸಮುದಾಯಗಳ ನಡುವೆ ದ್ವೇಷ ಹರಡುವಿಕೆ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಸಚಿವರ ವಿರುದ್ಧ ಪ್ರಕರಣ ಮುಂದುವರಿಸಲು ಸರ್ಕಾರದ ಅನುಮತಿ ಕೋರಿತ್ತು.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ಆದರೆ, ಅನುಮತಿ ನೀಡಲು ಸರ್ಕಾರ ನಿರಾಕರಿಸಿದೆ. ಸರ್ಕಾರದ ಈ ನಿರ್ಧಾರ ರಾಜಕೀಯವಾಗಿ ವಾಕ್ಸಮರಕ್ಕೆ ಗುರಿಯಾಗಿದೆ. ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್, “ಸಾಮಾನ್ಯ ಪ್ರಜೆಗೊಂದು ಕಾನೂನು, ಸಚಿವರಿಗೊಂದು ಕಾನೂನೇ?” ಎಂದು ಪ್ರಶ್ನಿಸಿದೆ. ಮಧ್ಯಪ್ರದೇಶದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಗಾರ್, “ಎಸ್‌ಐಟಿ ವರದಿ ಬಂದಿದ್ದರೂ ಸಚಿವರನ್ನು ರಕ್ಷಿಸಲು ಸರ್ಕಾರ ಯತ್ನಿಸುತ್ತಿದೆ” ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಆದಾಗ್ಯೂ, ತಮ್ಮ ಸರ್ಕಾರದ ಧೋರಣೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. “ಸರ್ಕಾರವು ಪ್ರಕರಣದ ಎಲ್ಲ ಆಯಾಮಗಳು ಮತ್ತು ಸಚಿವರ ಕ್ಷಮೆಯಾಚನೆಯನ್ನು ಪರಿಗಣಿಸಿಯೇ ಕಾನೂನುಬದ್ಧ ನಿರ್ಧಾರ ತೆಗೆದುಕೊಂಡಿದೆ” ಎಂದು ಹೇಳಿದೆ.
ಆಗಸ್ಟ್ 31 ರಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಸರ್ಕಾರದ ಈ ನಿರ್ಧಾರದ ವಿರುದ್ಧ ನ್ಯಾಯಾಲಯ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.



