ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುಪೌರ್ಣಿಮೆಯ ಸಂದರ್ಭದಲ್ಲಿ ಇಬ್ಬರು ಯುವಕರು ಪಟೋಲೆ ಅವರ ಪಾದ ತೊಳೆದು, ಹೂವು ಹಾಕಿ ಗೌರವ ಸಲ್ಲಿಸಿರುವ ದೃಶ್ಯ ಆ ವಿಡಿಯೋದಲ್ಲಿದೆ. ಈ ವಿಡಿಯೋ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಾನಾ ಪಟೋಲೆ ಸೋಫಾದ ಮೇಲೆ ಕುಳಿತಿದ್ದು, ಇಬ್ಬರು ಯುವಕರು ಅವರ ಪಾದಗಳನ್ನು ತೊಳೆದು ಹೂವುಗಳನ್ನು ಹಾಕುತ್ತಿರುವುದು ಕಾಣಿಸುತ್ತದೆ. ಪಾದಗಳ ಬಳಿ ಹಣ್ಣುಗಳನ್ನು ಇಟ್ಟು ಪೂಜಿಸುತ್ತಿರುವಂತೆಯೇ ದೃಶ್ಯದಲ್ಲಿ ಕಂಡುಬಂದಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಸಚಿವ, ಬಿಜೆಪಿ ನಾಯಕ ಚಂದ್ರಶೇಖರ್ ಬಾವಂಕುಲೆ, “ಇದು ಕಾಂಗ್ರೆಸ್ ನಾಯಕರ ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ಕೃತ್ಯಗಳು ಟೀಕೆ ಮತ್ತು ನಕಾರಾತ್ಮಕ ಪ್ರಚಾರವನ್ನಷ್ಟೇ ತರುತ್ತವೆ. ಇಂತಹ ಘಟನೆಗಳಿಂದ ಪಾಠ ಕಲಿಯಬೇಕಿತ್ತು” ಎಂದು ಟೀಕಿಸಿದ್ದಾರೆ.
ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ನಾನಾ ಪಟೋಲೆ, ಈ ವಿಚಾರವನ್ನು ಅನಗತ್ಯ ವಿವಾದವನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. “ಆ ದಿನ ಗುರುಪೂಜೆಯ ದಿನವಾಗಿತ್ತು. ನನ್ನ ಕುಟುಂಬದ ಇಬ್ಬರು ಕಿರಿಯ ಸದಸ್ಯರು ನನ್ನನ್ನು ಗುರುವಾಗಿ ಪರಿಗಣಿಸಿ ಗೌರವ ಸೂಚಕವಾಗಿ ಪಾದಪೂಜೆ ಮಾಡಲು ಒತ್ತಾಯಿಸಿದರು. ನಾನು ಯಾರನ್ನೂ ಬಲವಂತಪಡಿಸಿಲ್ಲ, ಯಾರಿಗೂ ಅಂತಹ ಸೂಚನೆಯನ್ನೂ ನೀಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಬಿಜೆಪಿಗೆ ತಿರುಗೇಟು ನೀಡಿದ ಪಟೋಲೆ, “ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಬೋಧನೆ ಮಾಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ದೇಣಿಗೆ ಹಣವನ್ನು (ರಾಮಮಂದಿರ ಕಾಣಿಕೆ) ಲೂಟಿ ಮಾಡುವವರು ನಮಗೆ ಸಂಸ್ಕೃತಿಯ ಪಾಠ ಹೇಳಬಾರದು”ಎಂದು ವಾಗ್ದಾಳಿ ನಡೆಸಿದ್ದಾರೆ.



