ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 03ರಂದು ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹೆಚ್ ವಿ ದರ್ಶನ್ ಅವರು ಭಾನುವಾರ ಸಂಜೆಯೇ ಆದೇಶ ಹೊರಡಿಸಿದ್ದಾರೆ.
ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯ ವಿಚಾರದಲ್ಲಿ ತಾಲೂಕುವಾರು ಕೆಲ ವ್ಯತ್ಯಾಸಗಳಿದ್ದು, ಅದರ ವಿವರ ಹೀಗಿದ್ದು, ಮಂಗಳೂರು ಉಪ ವಿಭಾಗದ ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಮತ್ತು ಉಳ್ಳಾಲ ತಾಲೂಕುಗಳು ಒಳಪಡುತ್ತವೆ. ಈ ತಾಲೂಕುಗಳ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ(10 ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ(ಎಲ್ಲ ವಸತಿ ಶಾಲೆಗಳಿಗೂ ಇದು ಅನ್ವಯಿಸುತ್ತದೆ).
ಪುತ್ತೂರು ಉಪ ವಿಭಾಗ: ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕುಗಳು ಒಳಪಡುತ್ತವೆ. ಈ ತಾಲೂಕುಗಳಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು(PUC/12 ನೇ ತರಗತಿವರೆಗೆ) ಹಾಗೂ ಎಲ್ಲ ITI ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ರಜೆ ನೀಡಲಾಗಿದೆ(ಎಲ್ಲಾ ವಸತಿ ಶಾಲಾ-ಕಾಲೇಜುಗಳಿಗೂ ಇದು ಅನ್ವಯಿಸುತ್ತದೆ).
ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಮತ್ತು ಮಾರ್ಗದರ್ಶಿ ಸೂಚಿಗಳು:
- ಮಕ್ಕಳ ಜಾಗ್ರತೆ: ನೀರಿರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಹಾಗೂ ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪೋಷಕರು ಕಡ್ಡಾಯವಾಗಿ ಜಾಗ್ರತೆ ವಹಿಸಬೇಕು.
ಮೀನುಗಾರರು: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಪ್ರವಾಸಿಗರು: ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ತೀರ ಹಾಗೂ ಸಮುದ್ರ ತೀರಕ್ಕೆ ತೆರಳಬಾರದು.
ಅಧಿಕಾರಿಗಳಿಗೆ ಸೂಚನೆ: ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯಗಳನ್ನು ನಿಭಾಯಿಸಬೇಕು.
ಇದನ್ನೂ ಓದಿದ್ದೀರಾ? ಯಾದಗಿರಿ | ಮಕ್ಕಳ ಹಕ್ಕು, ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ

ತುರ್ತು ಸಹಾಯವಾಣಿ: ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ತುರ್ತು ಸಮಸ್ಯೆಗಳಿಗೆ ಸಾರ್ವಜನಿಕರು ಉಚಿತ ಕರೆ ಸಂಖ್ಯೆ 1077 ಅಥವಾ 0824-2442590 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ತೀವ್ರಗೊಂಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲಾದ್ಯಂತ ಸರಾಸರಿ 100.6 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ(DDMA) ಬಿಡುಗಡೆ ಮಾಡಿರುವ ವರದಿಯನ್ವಯ, ಈ ಮುಂಗಾರು ಋತುವಿನಲ್ಲಿ ಜನವರಿ 1ರಿಂದ ಈವರೆಗೆ ಜಿಲ್ಲೆಯಲ್ಲಿ 2485.0 ಮಿಮೀ ಒಟ್ಟು ಮಳೆಯಾಗಿದೆ.





