ಜನರ ಒಂದು ವರ್ಗವನ್ನು ʼಇರುವೆʼ ಅಥವಾ ಮತ್ತಿತರೆ ಹೆಸರುಗಳಿಂದ ಕರೆವುದು ಕಾನೂನುಬಾಹಿರ ಅಥವಾ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದಾರೆ.
ನವದೆಹಲಿ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (IIC) ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಆಯೋಜಿಸಿದ್ದ ‘ದಿ ಜುಡಿಷಿಯಲ್ ಟ್ರಾನ್ಸ್‌ಪರೆನ್ಸಿ ಇಂಡೆಕ್ಸ್’ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ, ಮುಂದೆ ನ್ಯಾಯಾಧೀಶರಾದವರು ಒಂದು ವರ್ಗದ ಸಮಾಜವನ್ನು ಅವಹೇಳನಕಾರಿಯಾಗಿ ಕರೆಯುವಂತಹ ವ್ಯಕ್ತಿಗಳೂ ನ್ಯಾಯಾಂಗಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ದೇಶದ ನ್ಯಾಯಾಧೀಶರಾಗಲಿರುವವರು ಯಾರು ಎಂಬುದರ ಕುರಿತು ಸಾರ್ವಜನಿಕ ಚರ್ಚೆ ನಡೆದರೆ ಏನು ತೊಂದರೆ? ಇಂತಹ ಚರ್ಚೆಯೇ ಅಸಂವಿಧಾನಿಕ ಮನೋಭಾವ ಹೊಂದಿರುವವರ ಪ್ರವೇಶವನ್ನು ತಡೆಯಲು ಸಹಕಾರಿ. ಇಂತಹ ಚರ್ಚೆಗಳು ನಡೆಯುತ್ತಿರಬೇಕು ಎಂದು ಅವರು ಹೇಳಿದರು.
‘ದಿ ಜುಡಿಷಿಯಲ್ ಟ್ರಾನ್ಸ್‌ಪರೆನ್ಸಿ ಇಂಡೆಕ್ಸ್’ ವರದಿಯು ಸುಪ್ರೀಂ ಕೋರ್ಟ್ ಹಾಗೂ ದೇಶದ 25 ಹೈಕೋರ್ಟ್‌ಗಳು ನ್ಯಾಯಾಂಗದ ಆಡಳಿತ, ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿವೆ ಎಂಬುದನ್ನು ಪರಿಶೀಲಿಸಿದೆ. ಇತ್ತೀಚಿನ ಕೊಲೀಜಿಯಂ ನಿರ್ಣಯಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೂ, ಹಲವಾರು ಶಿಫಾರಸುಗಳಿಗೆ ಕಾರಣಗಳನ್ನು ದಾಖಲಿಸಲಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.
ನ್ಯಾಯಮೂರ್ತಿ ಭುಯಾನ್, ನ್ಯಾಯಮೂರ್ತಿಗಳ ಬಡ್ತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಕೊಲೀಜಿಯಂ (ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ) ಚರ್ಚೆಗಳು ಸಂಪೂರ್ಣ ಗೌಪ್ಯವಾಗಿರುವುದನ್ನು ಪ್ರಶ್ನಿಸಿದರು. ಶಿಫಾರಸುಗಳನ್ನು ತಿರಸ್ಕರಿಸುವುದು ಅಥವಾ ಮುಂದೂಡುವುದಕ್ಕೆ ಕಾರಣಗಳನ್ನು ಬಹಿರಂಗಪಡಿಸುವುದು ಅಪರೂಪವಾಗಿದೆ ಎಂದು ಹೇಳಿದರು.
2025ರಲ್ಲಿ ಪ್ರಕಟವಾದ ಸುಪ್ರೀಂ ಕೋರ್ಟ್ ಕೊಲೀಜಿಯಂನ ಮೂರು ನಿರ್ಣಯಗಳಲ್ಲಿ ಯಾವುದೇ ಕಾರಣಗಳನ್ನು ಉಲ್ಲೇಖಿಸಿಲ್ಲ. ಆದರೆ ಹಿಂದಿನ ಅನೇಕ ನಿರ್ಣಯಗಳಲ್ಲಿ ಶಿಫಾರಸುಗಳಿಗೆ ಸಮರ್ಪಕ ಕಾರಣಗಳನ್ನು ನೀಡಲಾಗಿತ್ತು ಎಂದು ಅವರು ನೆನಪಿಸಿದ್ದಾರೆ.
ಮುಕ್ತ ನ್ಯಾಯಾಂಗ (Open Court) ತತ್ವದಂತೆ, ನ್ಯಾಯಾಧೀಶರಾಗಿ ನೇಮಕವಾಗುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ನ್ಯಾಯಾಲಯದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ನಾಗರಿಕರಿಗೆ ಇದೆ. ತಮ್ಮ ನ್ಯಾಯಾಧೀಶರು ಯಾರು, ಅವರು ಯಾವ ರೀತಿಯ ತೀರ್ಪುಗಳನ್ನು ನೀಡಿದ್ದಾರೆ ಎಂಬ ಮಾಹಿತಿಯೂ ಸಾರ್ವಜನಿಕ ವಲಯದಲ್ಲಿರಬೇಕು” ಎಂದು ಅವರು ಅಭಿಪ್ರಾಯಪಟ್ಟರು..
ಮುಖ್ಯ ನ್ಯಾಯಮೂರ್ತಿಯ ಕಚೇರಿಯನ್ನೂ ಮಾಹಿತಿ ಹಕ್ಕು (RTI) ಕಾಯ್ದೆಯ ವ್ಯಾಪ್ತಿಗೆ ತಂದ ಸಂವಿಧಾನ ಪೀಠದ ತೀರ್ಪನ್ನು ಉಲ್ಲೇಖಿಸಿದ ಅವರು, “ನ್ಯಾಯಾಂಗದ ಸ್ವಾತಂತ್ರ್ಯವನ್ನು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುವ ಸಾಧನವಾಗಿ ಬಳಸಲಾಗದು” ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ಸ್ಮರಿಸಿದರು.
ಇದನ್ನೂ ಓದಿ: ನಾನಾ ಪಟೋಲೆ ಪಾದಪೂಜೆ: ವಿಡಿಯೋ ವೈರಲ್; ಬಿಜೆಪಿ–ಕಾಂಗ್ರೆಸ್ ವಾಕ್ಸಮರ
2023ರ ಜನವರಿ 18ರಂದು ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಶಿಫಾರಸನ್ನು ಪುನರುಚ್ಚರಿಸಿದ್ದ ಸುಪ್ರೀಂ ಕೋರ್ಟ್ ಕೊಲೀಜಿಯಂ ತನ್ನ ನಿರ್ಣಯದಲ್ಲಿ ವಿವರವಾದ ಕಾರಣಗಳನ್ನು ನೀಡಿತ್ತು ಎಂದು ನ್ಯಾಯಮೂರ್ತಿ ಭುಯಾನ್ ಉಲ್ಲೇಖಿಸಿದರು. ಆದರೆ ಆ ಶಿಫಾರಸು ಮೂರು ವರ್ಷಕ್ಕೂ ಹೆಚ್ಚು ಕಾಲ ಬಾಕಿಯೇ ಉಳಿದಿರುವುದನ್ನೂ ಅವರು ಸೂಚಿಸಿದರು.
ನ್ಯಾಯಾಲಯಗಳ ಕಾರ್ಯಚಟುವಟಿಕೆಗಳಲ್ಲಿ ನೇರಪ್ರಸಾರ (Live Streaming) ಸೇರಿದಂತೆ ಪಾರದರ್ಶಕತೆ ಹೆಚ್ಚಿರುವುದನ್ನು ಒಪ್ಪಿಕೊಂಡ ಅವರು, ನ್ಯಾಯಾಂಗದ ಆಂತರಿಕ ಆಡಳಿತ ಮತ್ತು ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ವಿಷಯದಲ್ಲಿ ಅದೇ ಮಟ್ಟದ ಮುಕ್ತತೆ ಇನ್ನೂ ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ತೀರ್ಪು ನೀಡುವ ಕಾರ್ಯದಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಂಡಿರುವ ನ್ಯಾಯಾಂಗವು, ತನ್ನದೇ ಸಂಸ್ಥೆಯ ರಚನಾ ಪ್ರಕ್ರಿಯೆಗೆ ಅದೇ ತತ್ವವನ್ನು ಅನ್ವಯಿಸಲು ಇನ್ನೂ ಹಿಂಜರಿಯುತ್ತಿದೆ ಎಂದು ಹೇಳಿದರು.




