NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜುಲೈ 20ರಂದು ನಡೆದ ಪ್ರತಿಭಟನೆಯಲ್ಲಿ ಕೈಗೊಂಡ ಪೊಲೀಸ್ ಕ್ರಮದ ವೇಳೆ ಎಲ್ಲಾ ಕಾರ್ಯಾಚರಣೆ ವಿಧಾನಗಳನ್ನು ಪಾಲಿಸಲಾಗಿತ್ತು ಹಾಗೂ ಪ್ರತಿಭಟನಾಕಾರರ ವಿರುದ್ಧ ‘ಮಾರಕವಲ್ಲದ’ ಪೆಲೆಟ್ ಗನ್ ಬಳಕೆಯೂ ಅಧಿಕಾರಿಗಳ ಅನುಮತಿಯೊಂದಿಗೆ ನಡೆದಿತ್ತು ಎಂದು CRPF (Central Armed Police Force) ಪರಿಶೀಲನಾ ವರದಿ ತಿಳಿಸಿದೆ.
ಗಲಭೆ ನಿಯಂತ್ರಣಕ್ಕೆ ನಿಯೋಜಿಸಲಾಗಿದ್ದ CRPF ನ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಕಾರ್ಯಾಚರಣೆಯನ್ನು ಪರಿಶೀಲಿಸಿದಾಗ, ಬಲಪ್ರಯೋಗದ ನಿಗದಿತ ಕ್ರಮವನ್ನು (Force Gradient) ಅನುಸರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು TOI ವರದಿ ಮಾಡಿದೆ.
ಮತ್ತೊಂದೆಡೆ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಾವು ಪೆಲೆಟ್ ಗನ್ ಬಳಕೆಗೆ ಅನುಮತಿ ನೀಡಿಲ್ಲ ಹಾಗೂ ಆ ಸಂದರ್ಭದಲ್ಲಿ ಸ್ಥಳದಲ್ಲಿಯೂ ಇರಲಿಲ್ಲ ಎಂದು ಹೇಳಿದ್ದಾರೆ. ಇದು ಸಿಆರ್‌ಪಿಎಫ್ ವರದಿ ಮತ್ತು ದೆಹಲಿ ಪೊಲೀಸರ ಹೇಳಿಕೆಗಳ ನಡುವೆ ಸಂಬಂಧವೇ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ವರದಿಯಾಗಿದೆ.
ಅಂದರೆ, ಮೊದಲು ಸಾರ್ವಜನಿಕರಿಗೆ ಚದುರಿಹೋಗುವಂತೆ ಘೋಷಣೆ ಮಾಡುವುದು, ಬಳಿಕ ಅಶ್ರುವಾಯು ಸಿಡಿಸುವುದು ಹಾಗೂ ಲಾಠಿಚಾರ್ಜ್ ನಡೆಸುವುದು ಸೇರಿದಂತೆ ಕಡಿಮೆ ಮಟ್ಟದ ಕ್ರಮಗಳನ್ನು ಕೈಗೊಂಡ ಬಳಿಕವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಾತ್ರ ಪಂಪ್ ಆಕ್ಷನ್ ಗನ್ (Pellet Gun) ಬಳಸಲಾಗಿದೆ ಎಂದು ವರದಿ ಹೇಳಿದೆ.
ಈ ಘಟನೆಯಲ್ಲಿ ಸುಮಾರು 3ರಿಂದ 5 ಪ್ರತಿಭಟನಾಕಾರರು ಲೋಹದ ಪೆಲೆಟ್‌ಗಳಿಂದ ಗಾಯಗೊಂಡಿದ್ದು, ಮತ್ತೊಂದೆಡೆ 47 ಮಂದಿ RAF ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಆರು ಮಂದಿಗೆ ತಲೆಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಆರ್‌ಪಿಎಫ್ ಮಹಾನಿರ್ದೇಶಕ ಜಿ.ಪಿ. ಸಿಂಗ್, ಪ್ರಕರಣವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವುದರಿಂದ ಈ ಸಂಬಂಧದ ಎಲ್ಲ ಮಾಹಿತಿ ಮತ್ತು ಪಡೆಯ ನಿಲುವನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಆರ್‌ಎಎಫ್ ಮೂಲಗಳ ಪ್ರಕಾರ, ಪ್ರತಿಭಟನೆ ನಡೆದ ಸ್ಥಳದಲ್ಲಿ ಬಲಪ್ರಯೋಗ ಸೇರಿದಂತೆ ಎಲ್ಲ ಕ್ರಮಗಳಿಗೂ ದೆಹಲಿ ಪೊಲೀಸರ ಅನುಮತಿ ಪಡೆಯಲಾಗಿತ್ತು. ಪ್ರತಿಭಟನಾ ಸ್ಥಳದ ಉಸ್ತುವಾರಿ ನೋಡುತ್ತಿದ್ದ ಡಿಸಿಪಿ ಅಥವಾ ಎಸಿಪಿ ಲಿಖಿತ ಆದೇಶದ ಮೇರೆಗೆ ಮಾತ್ರ ಪೆಲೆಟ್ ಗನ್ ಬಳಕೆಗೆ ಅನುಮತಿ ನೀಡಲಾಗಿತ್ತು. ಯಾವುದೇ ಮೌಖಿಕ ಆದೇಶದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಕೆಲವು ಪ್ರಚೋದಿತ ವ್ಯಕ್ತಿಗಳು ದೆಹಲಿ ಪೊಲೀಸರು ಮತ್ತು RAF ಸಿಬ್ಬಂದಿಯ ಮೇಲೆ ಕಲ್ಲು ಹಾಗೂ ಕೆಲವೆಡೆ ಕಬ್ಬಿಣದ ರಾಡ್‌ಗಳಿಂದ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮೇಣ ಬಲಪ್ರಯೋಗ ಮಾಡಬೇಕಾಯಿತು ಎಂದು ವರದಿ ಹೇಳಿದೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು: ಸಿಡಬ್ಲ್ಯುಆರ್‌ಸಿ ಆದೇಶದ ವಿರುದ್ಧ ಮೇಲ್ಮನವಿಗೆ ರಾಜ್ಯ ಸರ್ಕಾರದ ನಿರ್ಧಾರ
ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) ಪ್ರಕಾರ, ಕಾನೂನುಬಾಹಿರ ಸಭೆಯನ್ನು ಚದುರಿಸಲು ಅಗತ್ಯವಿದ್ದರೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನಾಗರಿಕ ಬಲವನ್ನು ಬಳಸಲು ಆದೇಶ ನೀಡಬಹುದು. ದೆಹಲಿಯಲ್ಲಿ ಈ ಅಧಿಕಾರ ಪೊಲೀಸ್ ಆಯುಕ್ತರಿಗೆ ಸೇರಿದ್ದು, ಅದನ್ನು ಸಹಾಯಕ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳಿಗೂ ನಿಯೋಜಿಸಬಹುದಾಗಿದೆ.
2016ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೆಲೆಟ್ ಗನ್ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಗಲಭೆ ಮತ್ತು ಹಿಂಸಾತ್ಮಕ ಪರಿಸ್ಥಿತಿಯಲ್ಲಿ ಬಲಪ್ರಯೋಗ ಅನಿವಾರ್ಯವಾಗಬಹುದು. ಯಾವ ಸಂದರ್ಭದಲ್ಲಿ ಯಾವ ರೀತಿಯ ಬಲವನ್ನು ಬಳಸಬೇಕು ಎಂಬುದನ್ನು ಸ್ಥಳದಲ್ಲಿರುವ ಅಧಿಕಾರಿಗಳು ನಿರ್ಧರಿಸಬೇಕಾಗುತ್ತದೆ. ನಿರ್ದಿಷ್ಟ ಘಟನೆಯಲ್ಲಿ ಬಲಪ್ರಯೋಗ ಅತಿಯಾಗಿದೆಯೇ ಎಂಬುದನ್ನು ಸೂಕ್ತ ಪ್ರಾಧಿಕಾರದ ನಿರ್ಧಾರವಿಲ್ಲದೆ ನ್ಯಾಯಾಲಯ ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯನ್ನು ಬಳಿಕ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ, ಯಾವುದೇ ಸಂಸ್ಥೆ ಪೆಲೆಟ್ ಗನ್ ಬಳಸಿದ್ದರೆ, ಅದನ್ನು ನ್ಯಾಯಾಲಯ ಸಂಪೂರ್ಣವಾಗಿ ನಿಷೇಧಿಸಿಲ್ಲ, ಹಿಂದಿನ ಆದೇಶಗಳ ಮೂಲಕ ಅದರ ಬಳಕೆಯನ್ನು ಮಾನ್ಯಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.




