“ನೀಟ್-ಯುಜಿ (National Eligibility cum Entrance Test-UG) ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಅವರ ಇಡೀ ಕುಟುಂಬಗಳು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿವೆ. ವರ್ಷಪೂರ್ತಿ ನಡೆಸಿದ ಕಠಿಣ ಪರಿಶ್ರಮ ಮತ್ತು ಭಾವನಾತ್ಮಕ ಹೂಡಿಕೆ ವ್ಯರ್ಥವಾಗಿದೆ” – ಹೀಗೆ ಸರ್ಕಾರಕ್ಕೆ ಎಚ್ಚರಿಸಿದ್ದು ಸುಪ್ರೀಂಕೋರ್ಟ್. “ಪರಿಸ್ಥಿತಿಯನ್ನು ಸ್ವತಃ ನರೇಂದ್ರ ಮೋದಿಯವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ” ಎಂದು ತಿಳಿಸಿರುವ ಕೇಂದ್ರ ಸರ್ಕಾರಕ್ಕೆ ಜಸ್ಟಿಸ್ ಪಿ.ಎಸ್. ನರಸಿಂಹ ಅವರ ನೇತೃತ್ವದ ಪೀಠವು, “ನೀಟ್-ಯುಜಿ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ತನ್ನ ತಪ್ಪುಗಳನ್ನು ಏಕೆ ಪುನರಾವರ್ತನೆ ಮಾಡುತ್ತಿದೆ? ಕೇಂದ್ರ ಲೋಕಸೇವಾ ಆಯೋಗ (UPSC) ಇದುವರೆಗೆ ಯಾವುದೇ ತಪ್ಪುಗಳನ್ನು ಮಾಡಿಲ್ಲವಲ್ಲ ಏಕೆ?” ಎಂದು ಮರು ಪ್ರಶ್ನಿಸಿದೆ.
ಹೌದು, ನೀಟ್ ವಿಚಾರದಲ್ಲಿ ಎನ್ಟಿಎ ಪದೇಪದೇ ಎಡವುತ್ತಿರುವುದು ಸಾಬೀತಾಗಿದೆ. 2019ರಲ್ಲಿ ಕಾರ್ಯಾರಂಭ ಮಾಡಿದ ಎನ್ಟಿಎ ಈಗಾಗಲೇ ಎರಡು ಗಂಭೀರ ನೀಟ್ ಹಗರಣಗಳನ್ನು ಎದುರಿಸುತ್ತಿರುವುದು ಯೋಚಿಸಬೇಕಾದ ಸಂಗತಿ. 2024ರಲ್ಲಿ ಪರೀಕ್ಷೆ ನಡೆದು ಫಲಿತಾಂಶ ಬಂದ ಮೇಲೆ ನೀಟ್ ಹಗರಣ ಹೊರಬಿದ್ದಿತ್ತು. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಎಲ್ಲರಿಗೂ ಮರುಪರೀಕ್ಷೆ (Re-NEET) ನಡೆಸಬೇಕೆಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಸುಪ್ರೀಂ ಕೋರ್ಟ್, “ಪ್ರಶ್ನೆ ಪತ್ರಿಕೆ ಸೋರಿಕೆಯು ವ್ಯವಸ್ಥಿತವಾಗಿ ಇಡೀ ದೇಶಾದ್ಯಂತ ಹರಡಿಲ್ಲ, ಅದು ಕೇವಲ ಬಿಹಾರದ ಪಟ್ನಾ ಮತ್ತು ಗುಜರಾತ್ನ ಗೋಧ್ರಾದಂತಹ ಕೆಲವು ನಿರ್ದಿಷ್ಟ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಇಡೀ ಪರೀಕ್ಷೆಯನ್ನು ರದ್ದುಗೊಳಿಸಿದರೆ ಪ್ರಾಮಾಣಿಕವಾಗಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ” ಎಂದು ಹೇಳಿ ಸಂಪೂರ್ಣ ರದ್ದತಿಗೆ ನಿರಾಕರಿಸಿತ್ತು. ನಿಯಮಬಾಹಿರವಾಗಿ ಕೃಪಾಂಕ (Grace Marks) ನೀಡಿದ್ದ 1,563 ವಿದ್ಯಾರ್ಥಿಗಳ ಫಲಿತಾಂಶವನ್ನು ಮಾತ್ರ ರದ್ದು ಮಾಡಿತು. 720ಕ್ಕೆ 720 ಅಂಕ ಪಡೆದಿದ್ದ ಟಾಪರ್ಗಳ ಸಂಖ್ಯೆ 67 ರಿಂದ ನೇರವಾಗಿ 17ಕ್ಕೆ ಕುಸಿಯಿತು ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ರ್ಯಾಂಕಿಂಗ್ ಬದಲಾಯಿತು.
2024ರಲ್ಲಿ ಪತ್ರಿಕೆ ಸೋರಿಕೆ ವ್ಯಾಪಕವಾಗಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಯನ್ನು ರದ್ದುಗೊಳಿಸಿರಲಿಲ್ಲ. ಆದರೆ, 2026ರ ಹಗರಣ ಹಾಗೆ ಇಲ್ಲ. ಭದ್ರತಾ ವ್ಯವಸ್ಥೆಯ ‘ಕಮಾಂಡ್ ಚೈನ್’ ಸಂಪೂರ್ಣ ಬ್ರೇಕ್ ಆಗಿ, ವಾಟ್ಸಾಪ್ ಮೂಲಕ ಪ್ರಶ್ನೆಗಳು ವ್ಯಾಪಕವಾಗಿ ಹರಡಿರುವುದು ಸಾಬೀತಾಗಿದೆ. ಹೀಗಾಗಿ ಮೇ 3, 2026ರಂದು ನಡೆದ ನೀಟ್ ಪರೀಕ್ಷೆಯನ್ನು ಸರ್ಕಾರವೇ ಅಧಿಕೃತವಾಗಿ ರದ್ದುಗೊಳಿಸಿದೆ.
ಸದ್ಯದ ಮಾಹಿತಿಯ ಪ್ರಕಾರ, ಇದು ಕೇವಲ ಒಬ್ಬಿಬ್ಬರು ಮಾಡಿದ ತಪ್ಪು ಅಥವಾ ಸಣ್ಣ ಕಳ್ಳತನವಲ್ಲ. ಇದೊಂದು ಕೋಚಿಂಗ್ ದಲ್ಲಾಳಿಗಳು, ಐಟಿ ತಜ್ಞರು, ಪರೀಕ್ಷಾ ಕೇಂದ್ರದ ಅಧಿಕಾರಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಸೇರಿ ನಡೆಸಿರುವ ಬೃಹತ್ ದಂಧೆ. ಹೀಗಾಗಿಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಮಹಾರಾಷ್ಟ್ರದ ಲಾತೂರ್, ಪುಣೆ, ದೆಹಲಿ, ಜೈಪುರ ಮತ್ತು ಗುರುಗ್ರಾಮ್ ಸೇರಿದಂತೆ 49ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಈ ಜಾಲವನ್ನು ಪತ್ತೆಹಚ್ಚಲಾಗಿದೆ. ಹಲವು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ತೇಜಸ್ ಹರ್ಷದ್ಕುಮಾರ್ ಶಾ- ಈತ ಪುಣೆಯ ಪ್ರಸಿದ್ಧ ‘ಡಾ. ಅಭಂಗ್ ಪ್ರಭು ಮೆಡಿಕಲ್ ಅಕಾಡೆಮಿ’ಯಲ್ಲಿ ಭೌತಶಾಸ್ತ್ರ ಶಿಕ್ಷಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದನು. ಈ ಹಗರಣದ ವಾಟ್ಸಾಪ್ ಚಾಟ್ಗಳಲ್ಲಿ ಈತನ ಹೆಸರನ್ನು ‘God’ (ದೇವರು) ಎಂದು ಉಳಿಸಿಕೊಳ್ಳಲಾಗಿತ್ತು. ಮನೀಷಾ ಹವಾಲ್ದಾರ್- ಪುಣೆಯ ಶಾಲೆಯೊಂದರ ಅಮಾನತುಗೊಂಡಿರುವ ಮುಖ್ಯೋಪಾಧ್ಯಾಯಿನಿ. ಈಕೆಯ ಮೊಬೈಲ್ನಿಂದಲೇ ಪ್ರಶ್ನೆ ಪತ್ರಿಕೆಗಳು ಕೈಬರಹದ ರೂಪದಲ್ಲಿ ತೇಜಸ್ ಶಾಗೆ ರವಾನೆಯಾಗಿದ್ದವು. ಪಿ. ವಿ. ಕುಲಕರ್ಣಿ – ರಸಾಯನಶಾಸ್ತ್ರ ಉಪನ್ಯಾಸಕ. ಈತ ಲಾತೂರ್ನಲ್ಲಿ ಪ್ರಭಾವಿ ಕುಟುಂಬಗಳ ಮಕ್ಕಳಿಗೆ ಸೋರಿಕೆಯಾದ ಕೆಮಿಸ್ಟ್ರಿ ಪ್ರಶ್ನೆಗಳನ್ನು ಒದಗಿಸಿ, ಪ್ರತ್ಯೇಕ ತರಬೇತಿ ಶಿಬಿರಗಳನ್ನು ನಡೆಸಿದ್ದ ಆರೋಪ ಎದುರಿಸುತ್ತಿದ್ದಾನೆ. ಶಿವ್ರಾಜ್ ಮೊಟೇಗಾಂಕರ್- ಲಾತೂರ್ ಮೂಲದ ಪ್ರಸಿದ್ಧ ‘RCC ಕೋಚಿಂಗ್ ಇನ್ಸ್ಟಿಟ್ಯೂಟ್’ ಸಂಸ್ಥಾಪಕ. ತೇಜಸ್ ಶಾನಿಂದ ಬಂದ ಪ್ರಶ್ನೆಗಳನ್ನು ಈತ ಪಡೆದುಕೊಂಡು, ವೈದ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸುವ ಜಾಲದಲ್ಲಿದ್ದನು. ಈತನ ಕುಟುಂಬದ ರಾಜಕೀಯ ಹಿನ್ನೆಲೆ ಭಾರಿ ವಿವಾದ ಸೃಷ್ಟಿಸಿದೆ.
ಸ್ಥಳೀಯ ವರದಿಗಳು ಮತ್ತು ವಿರೋಧ ಪಕ್ಷಗಳ ಆರೋಪದ ಪ್ರಕಾರ, ಆರೋಪಿ ಶಿವರಾಜ್ ಮೊಟೇಗಾಂವ್ಕರ್ ಅವರ ಸಹೋದರ ಶ್ರೀಕೃಷ್ಣ ಮೊಟೇಗಾಂವ್ಕರ್ ಲಾತೂರ್ ಜಿಲ್ಲೆಯ ರೇನಾಪುರದಲ್ಲಿ ಬಿಜೆಪಿ ಪದಾಧಿಕಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಅವರ ಪತ್ನಿ ಸುಮನ್ ಮೊಟೇಗಾಂವ್ಕರ್ ಅವರು ರೇನಾಪುರ ನಗರ ಪಂಚಾಯತಿಯಲ್ಲಿ ಬಿಜೆಪಿಯ ಹಾಲಿ ಕೌನ್ಸಿಲರ್ (ನಗರ ಸಭಾ ಸದಸ್ಯೆ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪ್ರಮುಖ ಬಿಜೆಪಿ ನಾಯಕರೊಂದಿಗೆ ಈ ಕುಟುಂಬ ಇಟ್ಟುಕೊಂಡಿದ್ದ ನಿಕಟ ಸಂಬಂಧದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿವೆ. ಆರೋಪಿಗಳಿಗೂ ಮತ್ತು ಬಿಜೆಪಿಗೂ ಇರುವ ಸಂಬಂಧಗಳನ್ನು ಬಿಜೆಪಿ ನಾಯಕರು ನಿರಾಕರಿಸುತ್ತಾ ಬಂದಿದ್ದಾರೆ. ಡಾ. ಮನೋಜ್ ಶಿರೂರೆ- ಲಾತೂರ್ ಮೂಲದ ಮಕ್ಕಳ ತಜ್ಞ. ಈತ ತನ್ನ ಸಂಬಂಧಿಕರು ಹಾಗೂ ಪ್ರಭಾವಿ ವ್ಯಕ್ತಿಗಳ ಮಕ್ಕಳಿಗಾಗಿ ಪಿ.ವಿ. ಕುಲಕರ್ಣಿ ಮತ್ತು ಶಿವ್ರಾಜ್ ಮೊಟೇಗಾಂಕರ್ ಮೂಲಕ ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿದ್ದ ಆರೋಪದ ಮೇಲೆ ಸಿಬಿಐನಿಂದ ಬಂಧನಕ್ಕೊಳಗಾಗಿದ್ದಾನೆ. ಹೀಗೆ ಹೆಸರುಗಳ ಪಟ್ಟಿ ದೊಡ್ಡದಿದೆ. ದೊಡ್ಡ ದೊಡ್ಡ ವೈಟ್ ಕಾಲರ್ ಖದೀಮರೇ ಈ ಜಾಲದ ಹಿಂದೆ ಇದ್ದಾರೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್ಐಆರ್’
ಈ ಎರಡು ಬೃಹತ್ ಸ್ಕ್ಯಾಮ್ಗಳ ಜೊತೆಗೆ ನೀಟ್ಗೆ ಸಂಬಂಧಿಸಿದಂತೆ ಕೆಲವು ಸಣ್ಣಪುಟ್ಟ ಹಗರಣಗಳು ದಾಖಲಾಗಿದ್ದವು. ಜೈಪುರದ ಪರೀಕ್ಷಾಕೇಂದ್ರವೊಂದರಿಂದ ವಾಟ್ಸಾಪ್ ಮೂಲಕ ಪ್ರಶ್ನೆ ಪತ್ರಿಕೆಹೊರಗೆ ಕಳುಹಿಸಿ, ಉತ್ತರಗಳನ್ನು ಒಳಗೆ ತಲುಪಿಸುವ ಪ್ರಯತ್ನ 2021ರಲ್ಲಿ ನಡೆದಿತ್ತು.ಇದರಲ್ಲಿ ಕೋಚಿಂಗ್ ಸೆಂಟರ್ ಮಾಲೀಕರು ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. 2022 ಮತ್ತು 2023 ರಲ್ಲೂ ಅಸಲಿ ವಿದ್ಯಾರ್ಥಿಗಳ ಬದಲಿಗೆ ಹಣ ಪಡೆದು ಬೇರೆ ಬುದ್ಧಿವಂತ ವಿದ್ಯಾರ್ಥಿಗಳನ್ನು (Impersonators/Solvers) ಪರೀಕ್ಷೆಬರೆಯಲು ಕೂರಿಸುವ ದಂಧೆಗಳನ್ನು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪೊಲೀಸರು ಪತ್ತೆಹಚ್ಚಿದ್ದರು.
ಎನ್ಟಿಎ ಸರಿದಾರಿಗೆ ಬರುವುದೇ?
ಎನ್ಟಿಎ ಜೂನ್ 21, 2026 ರಂದು ಮರು-ಪರೀಕ್ಷೆ (Re-NEET) ನಡೆಸಲು ಆದೇಶಿಸಿದೆ. ಆದರೆ ಇಂತಹ ತಪ್ಪುಗಳು ಮರುಕಳುಹಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಸುಪ್ರೀಂಕೋರ್ಟ್ಗೆ ಕೊಟ್ಟಿರುವ ಅಫಿಡವಿಟ್ನಲ್ಲಿ ಎನ್ಟಿಎ, ಮುಂದಿನ ದಿನಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿ ಹೇಳಿಕೊಂಡಿದೆ. “ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ವರ್ಷದಿಂದ ಪೆನ್-ಅಂಡ್-ಪೇಪರ್ (ಭೌತಿಕ) ಮಾದರಿಯ ಬದಲಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನೀಟ್-ಯುಜಿ ನಡೆಸಲು ಸಂಪೂರ್ಣವಾಗಿ ಸಿದ್ಧತೆ ನಡೆಸಲಾಗುತ್ತಿದೆ. ಉನ್ನತ ಮಟ್ಟದ ತಜ್ಞರ ಸಮಿತಿಯು (HLCE) ನೀಟ್-ಯುಜಿಯನ್ನು ಸಿಬಿಟಿ (CBT) ಮಾದರಿಗೆ ಬದಲಾಯಿಸಲು ಶಿಫಾರಸು ಮಾಡಿದೆ” ಎಂದಿದೆ ಎನ್ಟಿಎ.
ಮುಂದುವರಿದು, “ಸಂಸ್ಥೆಯು ಪ್ರಶ್ನೆ ಪತ್ರಿಕೆ ಸಿದ್ಧತೆ, ಮುದ್ರಣ, ಸಾಗಣೆ ಮತ್ತು ಸಂಗ್ರಹಣೆಯ ಪ್ರೋಟೋಕಾಲ್ಗಳು ಸೇರಿದಂತೆ ಪರೀಕ್ಷಾ ವ್ಯವಸ್ಥೆಯ ಹಲವಾರು ಆಯಾಮಗಳನ್ನು ಸಂಪೂರ್ಣವಾಗಿ ಸುಧಾರಿಸಿದೆ. ಪ್ರಮುಖ ಬದಲಾವಣೆಗಳ ಪೈಕಿ, ಸಂಸ್ಥೆಯು ಮಲ್ಟಿಪಲ್ ಸೆಟ್ (ಹಲವು ಸೆಟ್ಗಳ) ಪ್ರಶ್ನೆ ಪತ್ರಿಕೆಗಳನ್ನು ಪರಿಚಯಿಸಿದ್ದು, ಒಂದು ಸೆಟ್ ಅನ್ನು ಬ್ಯಾಕಪ್ ಆಗಿ ಇಟ್ಟುಕೊಳ್ಳಲಾಗುತ್ತದೆ. ನಿಯೋಜಿತ ಹಿರಿಯ ಅಧಿಕಾರಿಯೊಬ್ಬರು ಸಂಪೂರ್ಣ ಮುದ್ರಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಈಗ ನಿಷೇಧಿಸಲಾಗಿದೆ. ಎಲ್ಲಾ ಸಿಸಿಟಿವಿ ರೆಕಾರ್ಡಿಂಗ್ಗಳನ್ನು ಸಹ ಸಂರಕ್ಷಿಸಲಾಗುವುದು. ಪ್ರಶ್ನೆ ಪತ್ರಿಕೆಗಳ ಟ್ರಂಕ್ಗಳ ಸಾಗಣೆಯನ್ನು ಈಗ ಭಾರತೀಯ ಅಂಚೆ ಇಲಾಖೆಯ (ಸರ್ಕಾರಿ ಸಂಸ್ಥೆ) ಮೂಲಕ ಕಟ್ಟುನಿಟ್ಟಾದ ಭದ್ರತಾ ಪ್ರೋಟೋಕಾಲ್ಗಳೊಂದಿಗೆ ಮಾಡಲಾಗುತ್ತಿದೆ. ಮುದ್ರಣಾಲಯದಿಂದ ನೋಡಲ್ ಹಬ್ಗಳವರೆಗೆ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (CAPF) ಭದ್ರತೆಯಲ್ಲಿ ಪತ್ರಿಕೆಗಳನ್ನು ಕೊಂಡೊಯ್ಯಲಾಗುತ್ತದೆ. ನಂತರ ಭಾರತೀಯ ಅಂಚೆ ಇಲಾಖೆಯು ಪತ್ರಿಕೆಗಳನ್ನು ಜಿಲ್ಲಾ ಪಾಲಕರಿಗೆ ತಲುಪಿಸಲಿದೆ ಮತ್ತು ಜಿಲ್ಲಾ ಪೊಲೀಸರು ಅವುಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಿದ್ದಾರೆ. ರಹಸ್ಯ ಕಾರ್ಯಾಚರಣೆಯ (CONOPs) ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ” ಎಂದು ಅಫಿಡವಿಡ್ನಲ್ಲಿ ವಿವರಿಸಿದೆ.
ಜೂನ್ 21 ರಂದು ನಿಗದಿಯಾಗಿರುವ ಮರುಪರೀಕ್ಷೆಯನ್ನು ಮಲ್ಟಿ-ಲೇಯರ್ ಅಥೆಂಟಿಕೇಶನ್ (ಬಹು-ಹಂತದ ದೃಢೀಕರಣ), ಸುಧಾರಿತ ಕಣ್ಗಾವಲು ಮತ್ತು ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯತೆಯನ್ನು ಒಳಗೊಂಡ ಬಲವರ್ಧಿತ ಪ್ರಮಾಣಿತ ಕಾರ್ಯವಿಧಾನದ (SOP) ಅಡಿಯಲ್ಲಿ ನಡೆಸಲಾಗುವುದು ಎಂದು ಎನ್ಟಿಎ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಆದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ತೆರೆದುಕೊಳ್ಳುವ ಮುನ್ನ ಎನ್ಟಿಎ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದೇ ಎನ್ಟಿಎ ಇಂದು (ಮೇ 30, 2026 ರಂದು) ದೇಶದಾದ್ಯಂತ ನಡೆಸುತ್ತಿದ್ದ CUET-UG (Common University Entrance Test) ಪರೀಕ್ಷೆಯು ತಾಂತ್ರಿಕ ಅಡಚಣೆಯಿಂದ ವಿಳಂಬವಾಗಿದೆ. ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳ ಹೊರಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಗಂಟೆಗಟ್ಟಲೆ ಕಾಯಬೇಕಾಯಿತು ಬಂದಿತು. ಭಾರಿ ಗೊಂದಲ ಸೃಷ್ಟಿಯಾಯಿತು.
“ನೀಟ್, ಸಿಬಿಎಸ್ಇ, ಎಸ್ಎಸ್ಸಿ (SSC) ಮತ್ತು ಇಂದು ಸಿಯುಇಟಿ. ನಾಲ್ಕು ಪರೀಕ್ಷೆಗಳು, ಒಂದು ಕೋಟಿ ಮಕ್ಕಳು. ಆದರೆ ಒಂದೇ ಒಂದು ಪರೀಕ್ಷೆಯನ್ನೂ ಪ್ರಾಮಾಣಿಕವಾಗಿ ನಡೆಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ” ಎಂದು ಪ್ರಧಾನಿ ಮೋದಿ ವಿರುದ್ಧ ಲೋಕಸಭಾ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರು, “ದೇಶಕ್ಕೆ ಒಬ್ಬ ಸುಶಿಕ್ಷಿತ ಪ್ರಧಾನಿಯ ಅಗತ್ಯವಿದೆ” ಎಂದು ಕುಟುಕಿದ್ದಾರೆ. ಪದೇಪದೇ ಎಡವುತ್ತಿರುವ ಎನ್ಟಿಎ ಮತ್ತು ಕೇಂದ್ರ ಸರ್ಕಾರ ಪಾಠ ಕಲಿಯುತ್ತವೆಯೇ?



