ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಜೂನ್‌ನಲ್ಲಿ ಮುಗಿಯಲಿದ್ದು, ದೇವೇಗೌಡ ಮತ್ತೊಂದು ಅವಧಿಗೆ ರಾಜ್ಯ ಸಭೆಗೆ ಪ್ರವೇಶ ಪಡೆಯುವರೇ, ಬಿಜೆಪಿ ಇದಕ್ಕೆ ಅವಕಾಶ ಮಾಡಿಕೊಡಲಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿರುವುದರ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯಸಭೆಗೆ ದೇವೇಗೌಡರ ಮರುನಾಮನಿರ್ದೇಶನದ ಬಗ್ಗೆ ಬಿಜೆಪಿಗೆ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಬಿಜೆಪಿ, ಈವರೆಗೆ ಯಾವುದೇ ತಿರ್ಮಾನ ತೆಗೆದುಕೊಂಡಿಲ್ಲ. ದೇವೇಗೌಡರಂತಹ ಹಿರಿಯ ಅನುಭವಿ ನಾಯಕರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜ್ಯಸಭಾ ಚುನಾವಣೆಯ ವಿಷಯ ಚರ್ಚೆಗೆ ಬಂದಾಗ, ಈ ಬಗ್ಗೆ ಪಕ್ಷ ಮತ್ತು ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ದೇವೇಗೌಡ ದಕ್ಷಿಣ ಭಾರತದ ದನಿಯಾಗಬೇಕಿತ್ತಲ್ಲವೇ?
ದೇವೇಗೌಡರಲ್ಲದೆ, ಕಾಂಗ್ರೆಸ್‌ನ ಎಂ.ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ನಾರಾಯಣ ಕೊರಗಪ್ಪ ಮತ್ತು ಈರಣ್ಣ ಕಡಾಡಿ ಅವರ ಅವಧಿ ಜೂನ್ 25ಕ್ಕೆ ಮುಗಿಯಲಿದೆ.
ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾ ಬಲದ ಪ್ರಕಾರ ತೆರವಾಗುವ ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳು ಕಾಂಗ್ರೆಸ್‌ಗೆ ದೊರಕಲಿವೆ. ಬಿಜೆಪಿಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ.
93ರ ಇಳಿ ವಯಸ್ಸಿನ ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ. ಆದರೆ, ಅವರ ಪಕ್ಷಕ್ಕೆ ಸಂಖ್ಯಾ ಬಲ ಇಲ್ಲದ ಕಾರಣ, ಬಿಜೆಪಿ ಸಹಾಯಹಸ್ತ ಚಾಚಿದರೆ ರಾಜ್ಯಸಭೆ ಪ್ರವೇಶಿಸಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ವರಿಷ್ಠರದ್ದು.




