2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಪಕ್ಷದ ಮುಖವಾಗಿರಲಿದ್ದಾರೆ ಎಂದು ಬಿಜೆಪಿ ನಾಯಕ ನಿತಿನ್ ನಬಿನ್ ತಿಳಿಸಿದ್ದಾರೆ. ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಮತದಾನದ ಸಂದರ್ಭದಲ್ಲಿ ‘ನ್ಯೂಸ್ 18’ ವಾಹಿನಿಯೊಂದಿಗೆ ಮಾತನಾಡಿದ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಇದು ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.
“ನೋಡಿ, ಯೋಗಿ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿಯೇ ಸರ್ಕಾರ ನಡೆಯುತ್ತಿದೆ. ಹಾಗಾಗಿ, ಸ್ವಾಭಾವಿಕವಾಗಿ ನಾಯಕತ್ವದ ಮುಖ ಅವರೇ ಆಗಿರುತ್ತಾರೆ. ಯೋಗಿ ಅವರ ನಾಯಕತ್ವದಲ್ಲಿ ಪಕ್ಷವು ಮೂರನೇ ಬಾರಿ ಅಧಿಕಾರಕ್ಕೆ ಬರುವ ಪೂರ್ಣ ಆತ್ಮವಿಶ್ವಾಸ ಹೊಂದಿದೆ,” ಎಂದು ನಬಿನ್ ಹೇಳಿದ್ದಾರೆ. ಯುಪಿ ರಾಜ್ಯವು ಯೋಗಿ ಅವರ ಆಡಳಿತದಲ್ಲಿ ಭಾರಿ ಬದಲಾವಣೆ ಕಂಡಿದೆ ಎಂದು ಅವರು ಸಮರ್ಥಿಸಿಕೊಂಡರು. “ಒಂದು ಕಾಲದಲ್ಲಿ ವಸೂಲಿ ಮತ್ತು ಅಪರಾಧಗಳಿಗೆ ಹೆಸರಾಗಿದ್ದ ರಾಜ್ಯ, ಇಂದು ಉತ್ತಮ ಕಾನೂನು-ಸುವ್ಯವಸ್ಥೆ ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಗುರುತಿಸಿಕೊಳ್ಳುತ್ತಿದೆ,” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ರಾಜಕೀಯ ವಿಶ್ಲೇಷಕರ ಪ್ರಕಾರ ನಬಿನ್ ಅವರ ಈ ಹೇಳಿಕೆಯು ಮುಂದಿನ ಚುನಾವಣೆಯನ್ನು ನೇರವಾಗಿ ಯೋಗಿ ಅವರ ಆಡಳಿತದ ಮೇಲಿನ ಜನರ ತೀರ್ಪಾಗಿ ಎದುರಿಸುವ ಬಿಜೆಪಿಯ ನಿರ್ಧಾರವನ್ನು ತೋರಿಸುತ್ತಿದೆ. ಯುಪಿಯಲ್ಲಿ ಬಿಜೆಪಿ ಅನೇಕ ಶಕ್ತಿಕೇಂದ್ರಗಳನ್ನು (ಸಂಘಟನಾತ್ಮಕ ನಾಯಕರು, ಪ್ರಾಂತೀಯ ನಾಯಕರು ಮತ್ತು ಜಾತಿ-ಆಧಾರಿತ ಪ್ರಭಾವಿಗಳು) ಹೊಂದಿದ್ದರೂ, ಯೋಗಿ ಅವರ ಹೆಸರನ್ನು ಚುನಾವಣೆಗಿಂತಲೂ ಬಹಳ ಮುನ್ನವೇ ಘೋಷಿಸಿರುವುದು ಹಿಂದುತ್ವ ಮುಖ್ಯವಾದಂತೆ ಕಾಣುತ್ತಿದೆ.
ಯೋಗಿ ಅವರ ಮೂರನೇ ಅವಧಿಯ ಪ್ರಸ್ತಾಪವು ಆಡಳಿತ ವಿರೋಧಿ ಅಲೆಯನ್ನು ಕೂಡ ಎದುರಿಸಬೇಕಾಗಬಹುದು. ವಿಶೇಷವಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟುಕೊಟ್ಟ ವಿರೋಧ ಪಕ್ಷಗಳ ‘ಪಿಡಿಎ’ (ಪಿಚ್ಡಾ, ದಲಿತ, ಅಲ್ಪಸಂಖ್ಯಾತ) ಪ್ರಚಾರದ ಹಿನ್ನೆಲೆಯಲ್ಲಿ ಈ ಚುನಾವಣಾ ತಂತ್ರ ಅತ್ಯಂತ ನಿರ್ಣಾಯಕವಾಗಿದೆ ಎನ್ನಲಾಗುತ್ತಿದೆ.




