ಮಹಾರಾಷ್ಟ್ರ ರಾಜಕಾರಣದಲ್ಲಿ ಠಾಕ್ರೆ ಬಣದ ಶಿವಸೇನಾ (UBT) ಸಂಸದರು ಏಕನಾಥ್ ಶಿಂಧೆ ಬಣಕ್ಕೆ ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ತನ್ನ ಶಕ್ತಿ ಪ್ರದರ್ಶಿಸಿದೆ. ಭಾನುವಾರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಕರೆದಿದ್ದ ಮಹತ್ವದ ಸಭೆಗೆ ಪಕ್ಷದ ಎಲ್ಲಾ 9 ಲೋಕಸಭಾ ಸಂಸದರು ಹಾಜರಾಗುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಒಟ್ಟು 9 ಸಂಸದರ ಪೈಕಿ ನಾಲ್ವರು ಸಂಸದರು ಮುಂಬೈನ ಉದ್ಧವ್ ಠಾಕ್ರೆ ನಿವಾಸ ‘ಮಾತೋಶ್ರೀ’ಯಲ್ಲಿ ಖುದ್ದಾಗಿ ಉಪಸ್ಥಿತರಿದ್ದರೆ, ಉಳಿದ ಐದು ಸಂಸದರು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸಂಸದರಾದ ಅರವಿಂದ್ ಸಾವಂತ್, ರಾಜಾಭಾವು ವಾಜೆ, ಸಂಜಯ್ ದಿನಾ ಪಾಟೀಲ್ ಮತ್ತು ಅನಿಲ್ ದೇಸಾಯಿ ಅವರು ಖುದ್ದಾಗಿ ಹಾಜರಾಗಿದ್ದರು. ಉಳಿದ ಐವರು ಸಂಸದರು ಅನಿವಾರ್ಯ ಕಾರಣಗಳಿಂದಾಗಿ ಖುದ್ದಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಉದ್ಧವ್ ಅವರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ, ಆನ್‌ಲೈನ್ ಮೂಲಕ ಸಭೆಗೆ ಜಾಯಿನ್ ಆಗಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಉದ್ಧವ್ ಬಣದ ಸಂಸದರನ್ನು ಸೆಳೆಯಲು “ಆಪರೇಷನ್ ಟೈಗರ್” ನಡೆಸುತ್ತಿದೆ ಎಂಬ ವದಂತಿ ತೀವ್ರವಾಗಿ ಹರಡಿತ್ತು. ಲೋಕಸಭೆಯಲ್ಲಿ ಶಿವಸೇನೆ (UBT) ಒಟ್ಟು 9 ಸಂಸದರನ್ನು ಹೊಂದಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬೇರಾಗಲು ಕನಿಷ್ಠ ಮೂರನೇ ಎರಡರಷ್ಟು ಅಂದರೆ 6 ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಅವರು ಶನಿವಾರವೇ ಎಲ್ಲಾ ಸಂಸದರನ್ನು ಮುಂಬೈಗೆ ಬಂದು ತಂಗುವಂತೆ ತುರ್ತು ಸೂಚನೆ ನೀಡಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಉದ್ಧವ್ ಬಣದ ಸಂಸದರು ಎದುರಾಳಿ ಶಿಂಧೆ ಬಣದ ನಾಯಕರನ್ನು ಭೇಟಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಸಂಸದ ನಾಗೇಶ್ ಪಾಟೀಲ್ ಅಷ್ಟಿಕರ್ ಸಿಎಂ ಶಿಂಧೆ ನಿವಾಸಕ್ಕೆ ಭೇಟಿ ನೀಡಿದ್ದರೆ, ರಾಜಾಭಾವು ವಾಜೆ ಅವರು ಸಂಸದ ಶ್ರೀಕಾಂತ್ ಶಿಂಧೆ ಅವರನ್ನು ಭೇಟಿಯಾಗಿದ್ದರು. ಮತ್ತೊಬ್ಬ ಸಂಸದ ಭೌಸಾಹೇಬ್ ವಾಕಚೌರೆ ಸಚಿವ ಉದಯ್ ಸಾಮಂತ್ ಅವರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: ಪೇಪರ್ ಲೀಕ್ ತಡೆಯಲು ʼಮಿಲಿಟರಿʼ ಕರೆತಂದ ಮೋದಿ; ಇದು ಹತಾಶೆಯ ಪರಮಾವಧಿ ಎಂದ ಜನ!
ಅಲ್ಲದೆ, ಇತ್ತೀಚೆಗೆ ಸಂಸದ ಸಂಜಯ್ ಜಾಧವ್ ಅವರು, “ಚುನಾವಣೆಯಲ್ಲಿ ಆರ್ಥಿಕ ಲೆಕ್ಕಾಚಾರಗಳು ಮುಖ್ಯವಾಗುತ್ತವೆ, ಆದ್ದರಿಂದ ಮುಂದೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆ ಮತ್ತು ಇಬ್ಬರು ಸಂಸದರು ಎದುರಾಳಿ ಬಣದ ಕೇಂದ್ರ ಸಚಿವ ಪ್ರತಾಪ್ ಜಾಧವ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದು ಪಕ್ಷದಲ್ಲಿ ಒಡಕು ಉಂಟಾಗಬಹುದು ಎಂಬ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಸಂಸದರು ಸಭೆಗೆ ಹಾಜರಾಗುವ ಮೂಲಕ ಉದ್ಧವ್ ಠಾಕ್ರೆಗೆ ಬಲ ತುಂಬಿದ್ದಾರೆ.




