ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದ ಮೂವರು ಯುವಕರು ಹಾಸನ ಜಿಲ್ಲೆಯ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್ ಬಳಿ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರು ನಿವಾಸಿಗಳಾದ ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಎಂದು ಗುರುತಿಸಲಾಗಿದೆ.
ಬೆಂಗಳೂರಿನ 10 ಯುವಕರ ತಂಡವೊಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿತ್ತು. ದರ್ಶನ ಮುಗಿಸಿ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ ಪ್ರಯಾಣ ಬೆಳೆಸುತ್ತಿದ್ದಾಗ, ಹಾಸನ ತಾಲ್ಲೂಕಿನ ಗೊರೂರು ಬಳಿಯ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ವಾಹನ ನಿಲ್ಲಿಸಿದ್ದರು. ಈ ವೇಳೆ ತಂಡದಲ್ಲಿದ್ದ ಕೆಲವು ಯುವಕರು ಈಜಾಡಲು ಜಲಾಶಯದ ಹಿನ್ನೀರಿಗೆ ಇಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೀರಿನ ಆಳದ ಅರಿವಿಲ್ಲದೆ ಹಾಗೂ ಸರಿಯಾಗಿ ಈಜು ಬಾರದ ಕಾರಣ ಯುವಕರು ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ದಂಡೆಯ ಮೇಲಿದ್ದ ಅವರ ಸ್ನೇಹಿತರು ಜೋರಾಗಿ ಕಿರುಚಾಡಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಆದರೆ, ಆ ಪ್ರದೇಶವು ಜನರಿಲ್ಲದೆ ತುಸು ನಿರ್ಜನವಾಗಿದ್ದರಿಂದ ತಕ್ಷಣಕ್ಕೆ ಯಾವುದೇ ಸಹಾಯ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಠಾಕ್ರೆ ಬಣ ಒಡೆಯಲು ಬಿಜೆಪಿಯಿಂದ ʼಆಪರೇಷನ್ ಟೈಗರ್ʼ?; ಸಂಸದರ ಸಭೆ ಕರೆದು ಶಕ್ತಿ ಪ್ರದರ್ಶಿಸಿದ ಉದ್ಧವ್
ಮಾಹಿತಿ ತಿಳಿಯುತ್ತಿದ್ದಂತೆ ಗೊರೂರು ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳೀಯ ಈಜುಗಾರರ ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿ ತೀವ್ರ ಶೋಧ ಕಾರ್ಯ ನಡೆಸಿದರು. ಸದ್ಯ ಮೂವರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




