ಭಾಷಾ ಹೇರಿಕೆಯ ಪ್ರಸ್ತಾಪ ಬಂದಾಗಲೆಲ್ಲಾ ನಮ್ಮ ದೇಶದ ದಕ್ಷಿಣದ ರಾಜ್ಯಗಳು ಹೆಚ್ಚು ಸುದ್ದಿಯಾಗುತ್ತವೆ. ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸುವ ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷಿಕರ ಮೇಲಷ್ಟೆ ಈ ಭಾಷಾ ಹೇರಿಕೆಯಾಗುತ್ತಿದೆ ಎಂದರೆ ತಪ್ಪಾದೀತು. ಉತ್ತರದ ಎಲ್ಲರನ್ನೂ ಹಿಂದಿವಾಲಗಳು ಎಂದು ಭಾವಿಸುವ ನಮಗೆ, ಉತ್ತರದ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಉಂಟು ಮಾಡಿರುವ ಪರಿಣಾಮಗಳ ಘೋರತೆ ಅರಿವಿಗೆ ಬಂದಿರಲ್ಲ.
ಉತ್ತರ ಭಾರತದಲ್ಲಿ ಹಿಂದಿ ಮಾತನಾಡುವವರನ್ನು ಶ್ರೇಷ್ಠರನ್ನಾಗಿ ಪ್ರಾದೇಶಿಕ ಭಾಷೆಯಾದ ಭೋಜಪುರಿ ಮುಂತಾದ ಪ್ರಾದೇಶಿಕ ನುಡಿ ಬಳಸುವವರನ್ನು ಅನಕ್ಷರಸ್ಥ ದಂಡುಕೋರನಾಗಿ ನೋಡುವ ಕೆಟ್ಟ ಚಾಳಿಯಿದೆ. ಸುಮಾರು 56 ತಾಯಿನುಡಿಗಳ ಹೆಗ್ಗುರುತನ್ನು ಹಿಂದಿ ನುಂಗಿಹಾಕಿದೆ, ಕೋಟ್ಯಾಂತರ ಉತ್ತರ ಭಾರತೀಯರು ತಮ್ಮ ತಾಯ್ನುಡಿಯನ್ನು ಬಳಸಲು ಕೀಳರಿಮೆಗೆ ಒಳಗಾಗುವಂತೆ ಮಾಡಿದೆ ಹಿಂದಿ.
ಇಂಗ್ಲಿಷ್ ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಯಾವುದು ನಮ್ಮ ಪ್ರಾದೇಶಿಕ ಭಾಷೆಗಳಿಗೆ ಕುತ್ತು ಎಂಬ ಚರ್ಚೆ ಮುನ್ನೆಲೆಗೆ ಬಂದಾಗ ಬಹಳಷ್ಟು ಮಂದಿ ಇಂಗ್ಲಿಷ್ ಪರಭಾಷೆ ಇದರಿಂದ ಸ್ಥಳೀಯ ಭಾಷೆಗಳು ತೆರೆಮರೆಯಾಗಿದೆ ಎಂದು ವಾದಿಸುತ್ತಾರೆ. ನಿಜಕ್ಕೂ ಹಲವು ಭಾಷೆಗಳ ತವರಾದ ಭಾರತದ ಭಾಷಾ ವೈವಿಧ್ಯಕ್ಕೆ ಮಾರಿಯಾಗಿ ಪರಿಣಮಿಸಿದ್ದು ಹಿಂದಿ.
ಭಾಷಾ ಹೇರಿಕೆಯ ಪ್ರಸ್ತಾಪ ಬಂದಾಗಲೆಲ್ಲಾ ನಮ್ಮ ದೇಶದ ದಕ್ಷಿಣದ ರಾಜ್ಯಗಳು ಹೆಚ್ಚು ಸುದ್ದಿಯಾಗುತ್ತವೆ. ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸುವ ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷಿಕರ ಮೇಲಷ್ಟೆ ಈ ಭಾಷಾ ಹೇರಿಕೆಯಾಗುತ್ತಿದೆ ಎಂದರೆ ತಪ್ಪಾದೀತು. ಉತ್ತರದ ಎಲ್ಲರನ್ನೂ ಹಿಂದಿವಾಲಗಳು ಎಂದು ಭಾವಿಸುವ ನಮಗೆ, ಉತ್ತರದ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಉಂಟು ಮಾಡಿರುವ ಪರಿಣಾಮಗಳ ಘೋರತೆ ಅರಿವಿಗೆ ಬಂದಿರದು.
ಅಸ್ತಿತ್ವ ಕಳೆದುಕೊಂಡ ಉತ್ತರದ ರಾಜ್ಯ ಭಾಷೆಗಳು: ಹಿಂದಿ ಆಡಳಿತ ಭಾಷೆಯಾಗಿರುವ ಶಿಕ್ಷಣ ಮಾಧ್ಯಮವಾಗಿರುವ ಉತ್ತರದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಸಾಂಸ್ಥಿಕ ಸ್ಥಾನಮಾನ ಕಸಿದು ಜಾನಪದ ಭಾಷೆಗಳ ಸ್ಥಾನಮಾನ ಕೊಟ್ಟು ಮೂಲೆಗುಂಪು ಮಾಡಲಾಯಿತು. ಉತ್ತರ ಭಾರತದಲ್ಲಿ ಸುಮಾರು ನೂರಕ್ಕೂ ಹೆಚ್ಚು ಭಾಷೆಗಳು ಅಸ್ಮಿತೆ ಕಳೆದುಕೊಂಡಿವೆ. ಮೈಥಿಲಿ, ಅವಧಿ, ಭೋಜಪುರಿ, ಬ್ರಜ, ಮಗಧಿ, ಮಾರವಾರಿ, ಕುಮಾಂನಿ, ಬುಂಧೇಲಿ, ಗಢವಾಲಿ ಹೀಗೆ ಎಣಿಸುತ್ತಾ ಹೋದರೆ ಪಟ್ಟಿ ಮುಗಿಯದು.
ಯಾವುದೇ ಭಾಷೆ ಉಳಿಯ ಬೇಕಾದರೆ ಬೆಳೆಯ ಬೇಕಾದರೆ ಆ ಭಾಷೆಯನ್ನಾಡುವ ಮಕ್ಕಳಿಗೆ ಅದೇ ಭಾಷೆಯಲ್ಲಿ ಶಿಕ್ಷಣ ಕೊಡುವುದು , ಉದ್ಯೋಗ ಕಲ್ಪಿಸುವುದು ಮುಖ್ಯ ಆದರೆ ಉತ್ತರದ ರಾಜ್ಯಗಳಲ್ಲಿ ಮಕ್ಕಳು ತಮ್ಮ ತಾಯಿನುಡಿಯಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ.
ಇನ್ನು ಸರ್ಕಾರ ರೂಪಿಸಿರುವ ಎನ್‌ಇಪಿ ಮಕ್ಕಳ ಮೇಲೆ ನೇರವಾಗಿ ಹಿಂದಿ ಹೇರುವ ಹುನ್ನಾರ. ಈ ತ್ರಿಭಾಷ ಸೂತ್ರವು ಕಲಿಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಜೊತೆಗೆ ಮೂರು ಭಾಷೆಗಳನ್ನು ಏಕಕಾಲಕ್ಕೆ ಅಭ್ಯಾಸ ಮಾಡುವುದು ʼನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ.
ಭಾರತದಲ್ಲಿ ಹಿಂದಿ ಮಾತನಾಡುವವರು ಯಾರು?
ಸಹಜವಾಗಿ ಬಿಹಾರ, ಮಧ್ಯ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯದವರ ಭಾಷೆ ಹಿಂದಿ ಎಂಬುದು ಹಲವರ ಉತ್ತರ. ಆದರೆ ಈ ರಾಜ್ಯದವರ ತಾಯಿನುಡಿ ಹಿಂದಿಯಲ್ಲ. ಬಿಹಾರದಲ್ಲಿ ಭೋಜಪುರಿ, ಮೈಥಿಲಿ ಹಾಗೂ ಮಗಹಿ , ಮಧ್ಯಪ್ರದೇಶದಲ್ಲಿ ಅವಧಿ ಮತ್ತು ಬುಂದೇಲಿ, ಉತ್ತರ ಪ್ರದೇಶದಲ್ಲಿ ಭೋಜಪುರಿ ರಾಜಸ್ಥಾನದಲ್ಲಿ ಮಾರವಾರಿ ಹಾಗೂ ಮೆರ್ವಾರಿ ತಾಯಿನುಡಿಗಳು.
ಈ ನುಡಿಗಳನ್ನು ಆಡುವವರ ಸಂಖ್ಯೆ ಮಿಲಿಯನ್ ಲೆಕ್ಕದಲ್ಲಿದೆ ತಮ್ಮ ರಾಜಕೀಯ ಹಿತಾಸಕ್ತಿ ಕಾಯುವ ಸಲುವಾಗಿ ಹಿಂದಿಗೆ ಈ ಎಲ್ಲಾ ಭಾಷೆಗಳ ಸಾರ್ವಭೌಮತ್ವ ಕೊಡುವ ಆಡಳಿತ ಸರ್ಕಾರದ ನಿಲುವು ಭಾಷಾ ಯಾಜಮಾನ್ಯದ ಸಂಕೇತ.
ಭಾರತದ ರಾಷ್ಟ್ರ ಭಾಷೆ ಹಿಂದಿಯಾಗಬೇಕು ಎನ್ನುವ ಒಂದು ದೇಶ ಒಂದು ಭಾಷೆ ಎಂಬ ಮೂರ್ಖ ಧೋರಣೆಯ ಪರ ವಕಾಲತ್ತು ವಹಿಸುವವರಿಗೆ ಹಿಂದಿಯನ್ನು ಮಾತೃ ಭಾಷೆ ಎಂದು ಒಪ್ಪಿಕೊಂಡವರು 44% ಭಾಷಿಕರು ಎಂಬ ಲೆಕ್ಕ ತೋರಿಸುತ್ತಾರೆ. ಆದರೆ ಈ 44% ಭಾರತೀಯರಲ್ಲಿ ಬಹುತೇಕರಿಗೆ ಹಿಂದಿ ದ್ವಿತೀಯ ಇಲ್ಲವೇ ತೃತೀಯ ಭಾಷೆಯಾಗಿದೆ. ಕೇವಲ 24% ಜನರು ಮಾತ್ರ ತಮ್ಮ ಮಾತೃ ಭಾಷೆ ಹಿಂದಿ ಎಂದು ಹೇಳಿಕೊಂಡಿದ್ದಾರೆ. ಈಗ ಹೇಳಿ ಕೇವಲ 24% ಜನರು ಆಡುವ 150 ವರ್ಷಗಳ ಇತಿಹಾಸವುಳ್ಳ ಹಿಂದಿ ಸಾವಿರಾರು ವರುಷಗಳ ಸಾಹಿತ್ಯ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಭಾಷಾ ಸಮೂಹದ ಮೇಲೆ ನಡೆಸಿದ ಸವಾರಿ ನ್ಯಾಯವೇ?
ಭೋಜ್ಪುರಿ ಮತ್ತು ಅವಧಿ ಭಾಷೆಗಳು ಹೆಚ್ಚು ಭಾಷಿಕ ಸಮೂಹ ಹೊಂದಿರುವ ಭಾಷೆಗಳು. ಭೋಜ್ಪುರಿ ಸಿನಿಮಾ ಹಾಗೂ ಸಾಹಿತ್ಯಿಕ ಐತಿಹ್ಯವನ್ನು ಒಳಗೊಂಡಿದೆ. ಅವಧಿ ನುಡಿಯು ಅತಿದೊಡ್ಡ ಆಡುಗ ವರ್ಗವನ್ನು ಒಳಗೊಂಡಿರುವ ಭಾರತದ ಏಕೈಕ ಪ್ರಾದೇಶಿಕ ಭಾಷೆಯಾಗಿದೆ. ಇಷ್ಟು ಆಳವಾಗಿ ಬೇರುಬಿಟ್ಟ ಭಾಷೆಗಳ ಆಡುಗರನ್ನು ಹಿಂದಿ ಭಾಷಿಕರೆಂದು ಗುರುತಿಸಿ ಈ ರಾಜ್ಯಗಳನ್ನು ಹಿಂದಿ ಬೆಲ್ಟ್ ಎಂದು ಕರೆದು ಸ್ಥಳೀಯ ಭಾಷಿಕರ ಮೂಲಭೂತ ಹಕ್ಕನ್ನು ಸರ್ಕಾರ ಕೊಲೆಗೈದಿದೆ.
ಭಾಷೆ ಆಲೋಚನೆಯ ಭಾವನೆಯ ಅಭಿವ್ಯಕ್ತಿ ಸಾಧನ. ಭಾಷೆ ಕೇವಲ ಆಡು ನುಡಿಯಲ್ಲ ಆಯಾ ಭಾಷಿಕರ ಸಾಂಸ್ಕೃತಿಕ ಐತಿಹಾಸಿಕ ಪರಂಪರೆಯ ತಾಯಿಬೇರು ಅದಕ್ಕೆ ನಾವಾಡುವ ನುಡಿಯನ್ನು ಕೇವಲ ನುಡಿಯಲ್ಲ ತಾಯ್ನುಡಿ ಎಂದು ಕರೆಯುತ್ತೇವೆ.
ಇಂತಹ ಸಹಸ್ರ ತಾಯ್ನುಡಿಗಳನ್ನು ಹೊಂದಿರುವ ಭಾರತದಂತಹ ಒಕ್ಕೂಟ ರಾಷ್ಟ್ರಗಳಲ್ಲಿ ಯಾವುದೋ ಒಂದು ಭಾಷೆ ರಾಷ್ಟ್ರ ಭಾಷೆಯಾಗಲು ಪಟ್ಟು ಹಿಡಿಯುವ ಬುದ್ಧಿಹೀನರಿಗೆ ಉಳಿದ ಭಾಷೆಗಳ ಅಸ್ಮಿತೆಯ ಕುರಿತು ಎಂದಿಗೂ ಮುಗಿಯದ ತಾತ್ಸಾರವಿದೆ.
ಹಿಂದಿಗೆ ಸ್ವತಂತ್ರ ಅಸ್ತಿತ್ವ ಇದೆಯಾ?
ಹಿಂದಿ ಭಾಷೆಯ ಹುಟ್ಟು ಬೆಳವಣಿಗೆಯನ್ನು ಕೂಲಂಕುಷವಾಗಿ ನೋಡುವುದಾದರೆ ಹಿಂದಿ ಎನ್ನುವ ಒಟ್ಟು ಕಲ್ಪನೆಯೆ 19 ನೇ ಶತಮಾನದ ಈಚೆಯದ್ದು. ಹಿಂದುಸ್ಥಾನಿ ಹಿಂದಿ ಉರ್ದು ಎಂಬುದು ಒಂದೇ ನುಡಿ ಕವಲುಗಳು. ವಾಕ್ಯಸಂಯೋಜನೆ ವ್ಯಾಕರಣ ಪದನಿಕ್ಷೇಪ ಎಲ್ಲದರಲ್ಲೂ ಸಾಮ್ಯತೆ ಇದೆ. 12 ನೇ ಶತಮಾನದಲ್ಲಿ ಭಾರತಕ್ಕೆ ಕಾಲಿರಿಸಿದ ಮೊಘಲರಿಂದ ಪರಿಚಯವಾದ ಖಡೀಬೋಲಿ ಎಂಬ ಭಾಷೆಯು ಆಗಿನ ಗಂಗಾ ಯಮುನಾತೀರದಲ್ಲಿ ವ್ಯವಹಾರಿಕ ಭಾಷೆಯಾಗಿ ಚಾಲ್ತಿಗೆ ಬಂತು ಈ ಖಡೀಬೋಲಿ ಪರ್ಷಿಯನ್ ಮತ್ತು ಅರಬಿಕ್ ಭಾಷೆಯ ಸಮ್ಮಿಶ್ರಣ. ಇದನ್ನೇ ಅವರು ಹಿಂದೂಸ್ಥಾನಿ ಎಂದು ಕರೆದರು.ಈಗಿನ ಹಿಂದಿ ಇದೇ ಹಿಂದೂಸ್ಥಾನಿ ಭಾಷೆಗೆ ಬಳಿದ ಸಂಸೃತದ ಲೇಪ. ಅಲ್ಲಿಗೆ ಶತಮಾನಗಳ ಪರಂಪರೆ ಇರುವ ಈ ದೇಶದ ಭಾಷೆಗಳ ಅಸ್ಮಿತೆ ಹಾಳುಗೆಡವಲು ಸ್ವತಂತ್ರ ಅಸ್ತಿತ್ವ ಇಲ್ಲದ ಪರದೇಶಿ ಭಾಷೆಯಿಂದ ಸಾಧ್ಯವಾಗಿಸಿದ್ದು ಇಲ್ಲಿನ ಸರ್ಕಾರಗಳ ಮೂರ್ಖತನದ ಪರಮಾವಧಿ ಎನ್ನಬಹುದು.
ಕತ್ತಿಯು ಪರದೇಶಿಯಾದರದು ನೋವೆ.. ನಮ್ಮವರೆ ಹಾಕಿ ತಿವಿದರದು ಹೂವೇ?
ನಾಡು ನುಡಿಯ ಅಸ್ಮಿತೆಯ ಕುರಿತು ಅಪಾರ ಆಸ್ಥೆ ಇದ್ದ ಕುವೆಂಪು ಹಿಂದಿ ಹೇರಿಕೆಯ ವಿರುದ್ದ ಬರೆದ ಸಾಲುಗಳಿವು. ಇಂಗ್ಲಿಷ್ ಸ್ಥಳೀಯ ಭಾಷೆಗಳಿಗೆ ಕುತ್ತು ತರುತ್ತದೆ ಎಂದು ಭಾವಿಸಿದ ದಿನಗಳಲ್ಲಿ ಹಿಂದಿಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದ ಶುರುವಾತಿನಲ್ಲಿಯೇ ಹಿಂದಿ ರಾಜ್ಯ ಭಾಷೆಗಳಿಗೆ ತಂದೊಡ್ಡುವ ಮಿತಿಗಳು ಬಹಳ ಹಿಂದೆಯೇ ಚರ್ಚೆಗೆ ಗ್ರಾಸವಾಗಿದ್ದವು.
ಹಿಂದಿ ಅಥವಾ ಇಂಗ್ಲಿಷ್ ಯಾವ ಭಾಷೆಯೇ ಆಗಲಿ ನಮ್ಮ ತಾಯಿನುಡಿಗೆ ಸಿಗಬೇಕಾದ ಸ್ಥಾನಮಾನ ಕಿತ್ತುಕೊಳ್ಳುವುದು ಆಯಾ ಭಾಷಿಕರಿಗೆ ಮಾಡುವ ಅನ್ಯಾಯ. ಆಡು ಭಾಷೆಯಲ್ಲಿ ಕನಸುವ, ಬದುಕಿಗೆ ಕಸುವು ಕೊಡುವ ಕನಿಷ್ಟ ಅನುಕೂಲವನ್ನು ಒದಗಿಸದೆ ಇಂತಹದ್ದೇ ನಿರ್ದಿಷ್ಟ ಭಾಷೆಯಲ್ಲಿ ಮಾತನಾಡು, ನೀನು ಈ ಭಾಷೆಯನ್ನು ಕಲಿಯಲೇ ಬೇಕು ಎಂಬ ಅನಿವಾರ್ಯ ಸೃಷ್ಟಿಸುವುದು ಏಕ ಭಾಷಾ ಶ್ರೇಷ್ಠತೆಯ ಹೇರಿಕೆ.
ಇಂಗ್ಲಿಷ್ ಒಂದು ಜಾಗತಿಕ ಭಾಷೆಯಾಗಿ ವ್ಯಾಪಾರ ಉದ್ಯೋಗ ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಸಂವಹನಕ್ಕೆ ಬಳಕೆಯಾಗುತ್ತಿದೆ ಮತ್ತು ಈ ಭಾಷೆ ನೆಲದ ಬೇರಾವ ಭಾಷೆಗಳ ಅಸ್ತಿತ್ವವನ್ನು ಕಸಿದಿಲ್ಲ.




