‘ವಂದೇ ಮಾತರಂ’ ಗೀತೆಗೆ ಅಗೌರವ ತೋರುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026’ಕ್ಕೆ ಸಂಸತ್ತು ಅಸ್ತು ಎಂದಿದೆ. ಬುಧವಾರವಷ್ಟೇ (ಜು.29) ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಗೆ, ಗುರುವಾರ (ಜು.30) ಲೋಕಸಭೆಯೂ ಧ್ವನಿಮತದ ಒಪ್ಪಿಗೆ ನೀಡಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ- 1971’ಕ್ಕೆ ತಿದ್ದುಪಡಿ ತಂದು, ರಾಷ್ಟ್ರಗೀತೆ (ಜನ ಗಣ ಮನ), ರಾಷ್ಟ್ರಧ್ವಜ ಹಾಗೂ ಸಂವಿಧಾನದ ಸಾಲಿಗೆ ‘ವಂದೇ ಮಾತರಂ’ ಗೀತೆಯನ್ನೂ ಸೇರ್ಪಡೆಗೊಳಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಹೊಸ ಕಾನೂನಿನ ಅನ್ವಯ ವಂದೇ ಮಾತರಂ ಗೀತೆಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದರೆ, ಗಾಯನದ ವೇಳೆ ಅಡ್ಡಿಪಡಿಸಿದರೆ ಅಥವಾ ಗದ್ದಲವುಂಟು ಮಾಡಿದರೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಚರ್ಚೆಗೆ ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ತೀವ್ರ ಗದ್ದಲ ನಡೆಸಿದರು. ವಿಪಕ್ಷಗಳ ಈ ತೀವ್ರ ಪ್ರತಿಭಟನೆ ಹಾಗೂ ಕೋಲಾಹಲದ ನಡುವೆಯೇ ಮಸೂದೆಯನ್ನು ಮಂಡಿಸಿ, ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ನೀಟ್ ವಿವಾದದ ಕಾರಣಕ್ಕಾಗಿ ಕಳೆದೊಂದು ವಾರದಿಂದ ಸಂಸತ್ತಿನ ಉಭಯ ಸದನಗಳ ಕಲಾಪಗಳು ತೀವ್ರ ಅಡ್ಡಿಗೊಳಗಾಗುತ್ತಲೇ ಇವೆ.
ಬಂಕಿಮ್ ಚಂದ್ರ ಚಟರ್ಜಿ ಅವರು 1875ರಲ್ಲಿ ರಚಿಸಿದ ಹಾಗೂ 1882ರಲ್ಲಿ ಅವರ ‘ಆನಂದಮಠ’ ಕಾದಂಬರಿಯಲ್ಲಿ ಪ್ರಕಟಗೊಂಡ ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯನ್ನು ಕಡ್ಡಾಯವಾಗಿ ಹಾಡುವಂತೆ ರಾಜ್ಯ ಸರ್ಕಾರಗಳಿಗೂ ಕೇಂದ್ರವು ನಿರ್ದೇಶನಗಳನ್ನು ನೀಡಿದೆ.
ಬುಧವಾರ ರಾಜ್ಯಸಭೆಯಲ್ಲಿ ಈ ಮಸೂದೆ ಕುರಿತು ಮಾತನಾಡಿದ್ದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, “ವಂದೇ ಮಾತರಂ ಕೇವಲ ಗೀತೆಯಲ್ಲ, ಅದು ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ಪ್ರಜ್ಞೆಯ ಜಾಗೃತ ಸಂಕೇತ. ದೇಶದ ಗೌರವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಈ ಮಸೂದೆ ತರಲಾಗಿದೆ,” ಎಂದು ಸಮರ್ಥಿಸಿಕೊಂಡಿದ್ದರು. ರಾಜ್ಯಸಭೆಯಲ್ಲಿ ಈ ಕುರಿತ ಚರ್ಚೆಯ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಭಾತ್ಯಾಗ ಮಾಡಿದ್ದವು. ಜುಲೈ 24 ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದ ಈ ಮಸೂದೆಯು ಇದೀಗ ಉಭಯ ಸದನಗಳ ಒಪ್ಪಿಗೆ ಪಡೆದುಕೊಂಡಿದೆ.




