ನಕಲಿ ವಕೀಲರು, ನಕಲಿ ಕಾನೂನು ಪದವೀಧರರು ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (CJP- ಸಿಜೆಪಿ) ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳ ಚಟುವಟಿಕೆಗಳ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ಭಾರತೀಯ ವಕೀಲರ ಪರಿಷತ್ (BCI) ಹಾಗೂ ಸಿಬಿಐಗೆ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಕಳೆದ ಮೇ ತಿಂಗಳಲ್ಲಿ ನ್ಯಾಯಾಲಯದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಮೌಖಿಕ ಹೇಳಿಕೆಯ ಬೆನ್ನಲ್ಲೇ ಈ ‘ಸಿಜೆಪಿ’ ಅಸ್ತಿತ್ವಕ್ಕೆ ಬಂದಿತ್ತು. ಬಳಿಕ, ನೀಟ್-ಯುಜಿ (NEET-UG) ಪತ್ರಿಕೆ ಸೋರಿಕೆ ಖಂಡಿಸಿ ನಡೆದ ‘ಜೆನ್-ಝೆಡ್’ (Gen-Z) ಪ್ರತಿಭಟನೆಯ ನೇತೃತ್ವವನ್ನೂ ಇದು ವಹಿಸಿತ್ತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ವಕೀಲ ರಾಜಾ ಚೌಧರಿ ಅವರು ಖುದ್ದಾಗಿ (ಪಾರ್ಟಿ-ಇನ್-ಪರ್ಸನ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಮಂಗಳವಾರ ಈ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ‘ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ’ವನ್ನೂ (MeitY) ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ನ್ಯಾಯಾಲಯದ ಕಲಾಪದ ವೇಳೆ ನ್ಯಾಯಮೂರ್ತಿಗಳು ಮಾಡುವ ಮೌಖಿಕ ಟೀಕೆಗಳು ಅಥವಾ ಹೇಳಿಕೆಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುವುದು, ಟ್ರೇಡ್‌ಮಾರ್ಕ್ ಆಗಿ ಪರಿವರ್ತಿಸುವುದು ಮತ್ತು ಹಣಗಳಿಕೆಗಾಗಿ ಪ್ರಸಾರ ಮಾಡುತ್ತಿರುವ ಗಂಭೀರ ವಿಚಾರವನ್ನೂ ಈ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮೇ 15ರ ಕಲಾಪದ ಆಯ್ದ ಭಾಗಗಳನ್ನು ಕತ್ತರಿಸಿ, ಮೀಮ್‌ಗಳು, ವಿಡಿಯೊಗಳು, ಮಿಮಿಕ್ರಿ ಹಾಗೂ ರಾಜಕೀಯ ಪ್ರಚಾರ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಬಿಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಸಿಜೆಐ ಅವರು ಸಂಪೂರ್ಣ ಭಿನ್ನವಾದ ನ್ಯಾಯಾಂಗದ ಸನ್ನಿವೇಶದಲ್ಲಿ ಬಳಸಿದ್ದ “ಕಾಕ್ರೋಚ್” (ಜಿರಳೆ) ಎಂಬ ಪದವನ್ನು ಆಯ್ದುಕೊಂಡು, ಅದನ್ನು ತಿರುಚಿ ನ್ಯಾಯಾಂಗದ ಘನತೆ ಹಾಗೂ ಸಾಂಸ್ಥಿಕ ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವಾಣಿಜ್ಯಿಕವಾಗಿ ಹೇಗೆ ಬಳಸಿಕೊಳ್ಳಲಾಯಿತು ಎಂಬುದರ ಕುರಿತು ಆಳವಾದ ತನಿಖೆಯಾಗಬೇಕಿದೆ ಎಂದು ವಕೀಲರು ಪೀಠದ ಗಮನಕ್ಕೆ ತಂದರು.
ಸಂವಿಧಾನದ ಚೌಕಟ್ಟಿನೊಳಗೆ ಆರೋಗ್ಯಕರ ಟೀಕೆ, ಪ್ರಜಾಸತ್ತಾತ್ಮಕ ಭಿನ್ನಮತ, ವಿಡಂಬನೆ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಆದರೆ, ಇದನ್ನು ಮೀರಿ ನ್ಯಾಯಾಲಯದ ಮೌಖಿಕ ವೀಕ್ಷಣೆಗಳು/ರೂಪಕಗಳನ್ನು (ಸಿಜೆಪಿ ಚಟುವಟಿಕೆಗಳು ಸೇರಿ) ವಾಣಿಜ್ಯ ಉದ್ದೇಶಕ್ಕಾಗಿ ಅಥವಾ ಹಣಗಳಿಕೆಗಾಗಿ ಅನಧಿಕೃತವಾಗಿ ಬಳಸಿಕೊಳ್ಳುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಸಂಜಯ್ ದುಬೆ ಎಂಬುವವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯ ವಿಚಾರಣೆ ವೇಳೆ, ನಕಲಿ ವಕೀಲರು, ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆ ಹಾಗೂ ವೃತ್ತಿಪರ ಮೌಲ್ಯಗಳ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುವ ಸಂದರ್ಭದಲ್ಲಿ ಸಿಜೆಐ ಅವರು ಈ “ಕಾಕ್ರೋಚ್” ಪದವನ್ನು ಬಳಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆದರೆ, ಮೇ 15ರ ಬಳಿಕ ನ್ಯಾಯಾಲಯದ ಕಲಾಪಗಳ ವಿಡಿಯೊಗಳನ್ನು ತಿರುಚಿ, ಮೀಮ್‌ಗಳನ್ನಾಗಿ ಪರಿವರ್ತಿಸಿ, ಆರ್ಥಿಕ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರವೃತ್ತಿ ಮಿತಿಮೀರಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.




