ಅಮೆರಿಕದ ನ್ಯಾಯಾಲಯದಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಸಹಚರರ ವಿರುದ್ಧದ ಬೃಹತ್ ಲಂಚಾವಳಿ ಪ್ರಕರಣ ರದ್ದಾಗಿದೆ. ಈ ವಿಚಾರವಾಗಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅದಾನಿ ಅಕ್ರಮವನ್ನು ಮುಚ್ಚಿಹಾಕಲು ಪ್ರಧಾನಿ ಮೋದಿ ದೇಶದ ಹಿತಾಸಕ್ತಿಯನ್ನು ಅಡವಿಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌರ ವಿದ್ಯುತ್ ಗುತ್ತಿಗೆ ಪಡೆಯಲು ಭಾರತದ ಅಧಿಕಾರಿಗಳಿಗೆ ಸುಮಾರು $250 ಮಿಲಿಯನ್ (ಅಂದಾಜು 2,000 ಕೋಟಿ ರೂಪಾಯಿ) ಲಂಚ ನೀಡಿದ ಆರೋಪದ ಮೇಲೆ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣದ ತನಿಖೆಯೂ ನಡೆಯುತ್ತಿತ್ತು. ಈ ನಡುವೆ, ಪ್ರಕರಣ ವಿದೇಶಿ ನೆಲದಲ್ಲಿ ನಡೆದಿದೆ ಮತ್ತು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ಅಮೆರಿಕ ನ್ಯಾಯಾಂಗ ಇಲಾಖೆಯ ವಾದವನ್ನು ಸಮ್ಮಿತಿಸಿದ ನ್ಯೂಯಾರ್ಕ್ ನ್ಯಾಯಾಲಯ, ಪ್ರಕರಣವನ್ನು ವಜಾಗೊಳಿಸಿದೆ.
ಪ್ರಕರಣ ರದ್ದತಿ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಈ ಪ್ರಕರಣ ವಜಾದ ಹಿಂದೆ ಬೃಹತ್ ಒಳಸಂಚಿನ ವ್ಯವಹಾರವೇ ಅಡಗಿದೆ. ಸ್ವಯಂ ರಾಜಿ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಅಮೆರಿಕದ ಒತ್ತಡಕ್ಕೆ ಮಣಿದು ಭಾರತೀಯರ ಹಿತಾಸಕ್ತಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಇದಕ್ಕೆ ದೇಶವು ಭಾರಿ ಬೆಲೆ ತೆರಬೇಕಾಗಿದೆ” ಎಂದು ಕಿಡಿಕಾರಿದ್ದಾರೆ.



