ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರಧಾನಿಯವರೊಂದಿಗೆ ನಡೆಸಿದ ಸುದೀರ್ಘ ಸಭೆಯಲ್ಲಿ ಕರ್ನಾಟಕದ ಪ್ರಮುಖ ಆದ್ಯತೆಗಳ ಕುರಿತು ಮುಕ್ತ ಹಾಗೂ ರಚನಾತ್ಮಕ ಚರ್ಚೆ ನಡೆಸಿದ್ದಾರೆ. ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯವಿರುವ ‘ಅರ್ಬನ್ ಮೊಬಿಲಿಟಿ’ (ನಗರ ಸಾರಿಗೆ) ಯೋಜನೆಗಳು, ಮೆಟ್ರೋ ವಿಸ್ತರಣೆ ಮತ್ತು ಮೂಲಸೌಕರ್ಯಗಳ ವೃದ್ಧಿಗೆ ಕೇಂದ್ರದ ಅನುದಾನ ಕೋರಿದ್ದಾರೆ.
ಬೆಂಗಳೂರಷ್ಟೇ ಅಲ್ಲದೆ, ಕರಾವಳಿ, ಮಲೆನಾಡು ಮತ್ತು ಗ್ರಾಮೀಣ ಕರ್ನಾಟಕದ ಕಲ್ಯಾಣ ಯೋಜನೆಗಳ ಬಗ್ಗೆಯೂ ಗಮನಹರಿಸಲಾಗಿದೆ. ರಾಜ್ಯದ ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುವ ನಾವೀನ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಪ್ರಗತಿಯ ಬಗ್ಗೆ ಉಭಯ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದ ಮೂಲಕ ರಾಜ್ಯದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಗ್ರಾಮೀಣ ಭಾಗದ ಆರ್ಥಿಕ ಸ್ವಾವಲಂಬನೆಗೆ ಹೊಸ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಗಿದೆ.
ರಾಜ್ಯದ ಕೃಷಿ ವಲಯಕ್ಕೆ ಜೀವನಾಡಿಯಾಗಿರುವ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎದುರಾಗಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸುವಂತೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಡಿಕೆಶಿ ಮನವಿ ಮಾಡಿದ್ದಾರೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ರಾಷ್ಟ್ರೀಯ ಮಾನ್ಯತೆ ಮತ್ತು ಅಗತ್ಯ ಪರಿಸರ ಅನುಮತಿಗಳನ್ನು ಶೀಘ್ರವಾಗಿ ನೀಡುವ ಮೂಲಕ ಕರ್ನಾಟಕದ ರೈತರ ಆಕಾಂಕ್ಷೆಗಳನ್ನು ಈಡೇರಿಸಲು ಸಹಕರಿಸಬೇಕೆಂದು ಕೋರಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ಮೋದಿ ಅವರು, ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ಮತ್ತು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸಭೆಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾರತದ ಒಟ್ಟಾರೆ ಬೆಳವಣಿಗೆಗೆ ಕರ್ನಾಟಕವು ಯಾವಾಗಲೂ ಮುಂಚೂಣಿಯ ಕೊಡುಗೆ ನೀಡುತ್ತಾ ಬಂದಿದೆ ಮತ್ತು ಭವಿಷ್ಯದಲ್ಲೂ ಆ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಹಕಾರಿ ಒಕ್ಕೂಟ ವ್ಯವಸ್ಥೆಯ (Cooperative Federalism) ನೈಜ ಆಶಯದಂತೆ ಕೇಂದ್ರ ಸರ್ಕಾರದೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡಲು ಮತ್ತು ಆ ಮೂಲಕ ಕರ್ನಾಟಕದ ಜನರ ಆಕಾಂಕ್ಷೆಗಳನ್ನು ಪೂರೈಸಲು ತಾವು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ದಿಲ್ಲಿಯ ಅಂಗಳದಲ್ಲಿ ನಡೆದ ಈ ಸೌಹಾರ್ದಯುತ ಮಾತುಕತೆ ಮತ್ತು ಅಭಿವೃದ್ಧಿಯ ಭರವಸೆಗಳಿಂದ “ಕೇಂದ್ರದ ತೆರಿಗೆ ಹಂಚಿಕೆ ತಾರತಮ್ಯ” ಕೊನೆಯಾಗಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ. ದೇಶದ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಕ್ಕೆ ನ್ಯಾಯಸಮ್ಮತ ಅನುದಾನ ಹಂಚಿಕೆಯಾಗಬೇಕಿದೆ.
ಇದನ್ನೂ ಓದಿ: ಹದ್ದುಮೀರಿರುವ ʼEDʼಗೆ ಬೇಕಿದೆ ಹೊಣೆಗಾರಿಕೆಯ ಮೂಗುದಾರ!
ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿ (GST) ಮತ್ತು ನೇರ ತೆರಿಗೆ ಸಂಗ್ರಹಿಸಿಕೊಡುವ 2ನೇ ಅತಿ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಈ ಕೊಡುಗೆಗೆ ಪ್ರತಿಯಾಗಿ ಕೇಂದ್ರದಿಂದ ರಾಜ್ಯಕ್ಕೆ ಸಿಗುತ್ತಿರುವ ಆರ್ಥಿಕ ಪಾಲು ಅತ್ಯಂತ ಕಡಿಮೆ. ಅಂಕಿ-ಅಂಶಗಳ ಪ್ರಕಾರ, ಕರ್ನಾಟಕವು ಕೇಂದ್ರದ ಖಜಾನೆಗೆ ನೀಡುವ ಪ್ರತಿ 100 ರೂಪಾಯಿ ತೆರಿಗೆಗೆ ಪ್ರತಿಯಾಗಿ ವಾಪಸ್ ಪಡೆಯುತ್ತಿರುವುದು ಕೇವಲ 13 ರಿಂದ 15 ರೂಪಾಯಿಗಳನ್ನು ಮಾತ್ರ! ಉಳಿದ ಸಿಂಹಪಾಲು ಹಣ ಕೇಂದ್ರದ ವಶದಲ್ಲೇ ಉಳಿಯುತ್ತಿದೆ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಸಿಗುತ್ತಿದ್ದ ಕೇಂದ್ರದ ತೆರಿಗೆ ಪಾಲು ಶೇಕಡಾ 4.71 ರಷ್ಟಿತ್ತು. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇದನ್ನು ಶೇಕಡಾ 3.64 ಕ್ಕೆ ಕಡಿತಗೊಳಿಸಲಾಗಿದೆ. ಈ ಒಂದೇ ಕಡಿತದಿಂದಾಗಿ ಕರ್ನಾಟಕವು ಕಳೆದ ಕೆಲವು ವರ್ಷಗಳಲ್ಲಿ ಸುಮಾರು 60,000 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ನಷ್ಟ ಅನುಭವಿಸಿದೆ. ಆಯೋಗ ಈ ಅನ್ಯಾಯವನ್ನು ಸರಿದೂಗಿಸಲು ಶಿಫಾರಸು ಮಾಡಿದ್ದ 5,495 ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಸಹ ಕೇಂದ್ರ ಸರ್ಕಾರ ಇದುವರೆಗೂ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ.
ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮುಂದೆ ಪ್ರಸ್ತಾಪಿಸಿರುವ ಪ್ರಮುಖ ನೀರಾವರಿ ಯೋಜನೆಗಳ ಕತೆಯೂ ಇದೇ ಆಗಿದೆ. ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಕರ್ನಾಟಕದ ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ಸಂಜೀವಿನಿಯಾಗಲಿರುವ ‘ಮೇಲ್ಭದ್ರಾ ಯೋಜನೆ’ಗೆ 5,300 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೋಷಿಸಿತ್ತು. ಈವರೆಗೂ ಈ ಹಣ ರಾಜ್ಯದ ಕೈ ಸೇರಿಲ್ಲ. ಇನ್ನು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಲ್ಲ ‘ಮೇಕೆದಾಟು ಯೋಜನೆ’ಗೆ ರಾಷ್ಟ್ರೀಯ ಪರಿಸರ ಅನುಮತಿ ನೀಡುವ ಪ್ರಕ್ರಿಯೆಯೂ ಕೇಂದ್ರದ ಅಂಗಳದಲ್ಲೇ ಬಿದ್ದಿದೆ.
ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಸೌಹಾರ್ದ ಮಾತುಕತೆ ನಡೆಸಿ ಮನವಿ ಪತ್ರವನ್ನೇನೋ ಸಲ್ಲಿಸಿ ಬಂದಿದ್ದಾರೆ. ಅದರಂತೆ ಮುಂಬರುವ 16ನೇ ಹಣಕಾಸು ಆಯೋಗದ ಸಭೆಯಲ್ಲೂ ರಾಜ್ಯಕ್ಕೆ ಆಗುತ್ತಿರುವ ಈ ನಿರಂತರ ಆರ್ಥಿಕ ಅನ್ಯಾಯವನ್ನು ಬಲವಾಗಿ ಪ್ರತಿಪಾದಿಸಬೇಕಾಗಿದೆ. ಬರಬೇಕಾದ ತೆರಿಗೆಯ ಪಾಲನ್ನು ಸಕಾಲಕ್ಕೆ ತರುವ ಸವಾಲೂ ಸಿಎಂ ಮುಂದಿದೆ.




