ವಿಪಕ್ಷಗಳು, ಹೋರಾಟಗಾರರ ತೀವ್ರ ವಿರೋಧದ ನಡುವೆಯೂ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಕ್ಕೆ ತಿದ್ದುಪಡಿ ತಂದು ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ–2026 ಅನ್ನು ಅಂಗೀಕರಿಸಿದ್ದು, ಇದೀಗ ರಾಷ್ಟ್ರಪತಿ ಕೂಡಾ ಅಸ್ತು ಎಂದಿದ್ದಾರೆ.
ಈ ಮಸೂದೆಯ ವಿರುದ್ದ ಈಗಾಗಲೇ ತೀವ್ರ ಹೋರಾಟ ನಡೆದಿದೆ. ಮಸೂದೆಗೆ ಸಹಿ ಹಾಕದಂತೆ 140 ನ್ಯಾಯವಾದಿಗಳು ಮತ್ತು ಸ್ತ್ರೀವಾದಿಗಳು ಮುರ್ಮು ಅವರಿಗೆ ಪತ್ರ ಬರೆದಿದ್ದರು. ಈ ತಿದ್ದುಪಡಿಯಲ್ಲಿರುವ ಲೋಪದ ಬಗ್ಗೆ ವಿವರವಾದ ಮಾಹಿತಿಯನ್ನೂ ನೀಡಿದ್ದರು.
ಇದನ್ನು ಓದಿದ್ದೀರಾ? ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು
2019ರ ಕಾಯ್ದೆಯ ಸೆಕ್ಷನ್ 4(2) ಅಡಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಲಿಂಗವನ್ನು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಇದೆ. ಆದರೆ ಈ ಹಕ್ಕನ್ನು ತಿದ್ದುಪಡಿ ಮಸೂದೆಯಲ್ಲಿ ತೆಗೆದುಹಾಕಲಾಗಿದೆ. ಇದು ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ತಿದ್ದುಪಡಿ ಪ್ರಕಾರ ‘ಲಿಂಗತ್ವ ಅಲ್ಪಸಂಖ್ಯಾತರು’ ಎಂದರೆ ಕೇವಲ ಜೈವಿಕ ವ್ಯತ್ಯಾಸಗಳು ಉಳ್ಳವರು (inter sex) ಮತ್ತು ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ನಿರ್ದಿಷ್ಟ ಸಮುದಾಯಗಳಿಗೆ ಸೇರಿದವರು. ಅಂದರೆ ಈ ಸಮುದಾಯಕ್ಕೆ ಸೇರಿಲ್ಲದಿದ್ದರೆ ವ್ಯಕ್ತಿ ಲಿಂಗತ್ವ ಅಲ್ಪಸಂಖ್ಯಾತರಾಗಿದ್ದರೂ ಯಾವುದೇ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಪುರುಷ, ಜೆಂಡರ್ ಕ್ವೀರ್ ಎಂಬ ಮೊದಲಾದ ವ್ಯಕ್ತಿಗಳನ್ನು ಈ ‘ಲಿಂಗತ್ವ ಅಲ್ಪಸಂಖ್ಯಾತರು’ ಎಂಬ ವ್ಯಾಖ್ಯಾನದಿಂದ ಹೊರಗಿಡಲಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹಾಗೆಯೇ ಗುರುತಿನ ಚೀಟಿ ಪಡೆಯಬೇಕಾದರೆ ಇನ್ನು ಮುಂದೆ ಮುಖ್ಯ ವೈದ್ಯಕೀಯ ಅಧಿಕಾರಿ (CMO) ನೇತೃತ್ವದ ವೈದ್ಯಕೀಯ ಮಂಡಳಿಯ ಶಿಫಾರಸನ್ನು ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸುವುದು ಕಡ್ಡಾಯವಾಗಿದೆ. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (SRS) ಮಾಡಿಸಿಕೊಂಡವರು ಕಡ್ಡಾಯವಾಗಿ ಪರಿಷ್ಕೃತ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಆಸ್ಪತ್ರೆಗಳು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗಿದೆ.
ಇದನ್ನು ಓದಿದ್ದೀರಾ? ಮೂಲಭೂತ ಹಕ್ಕುಗಳನ್ನು ಕಸಿಯುವ ತಂತ್ರ: ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ ತಿದ್ದುಪಡಿ ವಿರುದ್ಧ ತೀವ್ರ ಆಕ್ರೋಶ
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ನಲ್ಸಾ’ (NALSA) ತೀರ್ಪಿನ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಲಿಂಗವನ್ನು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಹೊಂದಿರುತ್ತಾರೆ. ಆದರೆ ಈ ತಿದ್ದುಪಡಿಗಳ ಪ್ರಕಾರ ತಾನು ಲಿಂಗತ್ವ ಅಲ್ಪಸಂಖ್ಯಾತರು ಎಂದು ಸಾಬೀತುಪಡಿಸಲು ವೈದ್ಯಕೀಯ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆಯ ಪುರಾವೆಗಳನ್ನು ನೀಡಬೇಕು. ಇದು ಹಕ್ಕಿನ ಉಲ್ಲಂಘನೆಯೆಂದು ಹೋರಾಟಗಾರರು ಹೇಳಿದ್ದಾರೆ.
ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳುತ್ತಿದ್ದಂತೆ ರಾಷ್ಟ್ರೀಯ ಲಿಂಗತ್ವ ಅಲ್ಪಸಂಖ್ಯಾತರ ಮಂಡಳಿ (NCTP)ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದಾರೆ. ಮಂಡಳಿಯ ದಕ್ಷಿಣ ಪ್ರದೇಶದ ಪ್ರತಿನಿಧಿ ಕಲ್ಕಿ ಸುಬ್ರಮಣಿಯಂ ಮತ್ತು ಈಶಾನ್ಯ ಪ್ರದೇಶದ ಪ್ರತಿನಿಧಿ ರಿತುಪರ್ಣ ನಿಯೋಗ್ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಿಗೆ ರಾಜೀನಾಮೆ ನೀಡಿದ್ದಾರೆ. ಮಸೂದೆ ತಿದ್ದುಪಡಿ ವೇಳೆ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ದೂರಿದ್ದಾರೆ. ಈ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.




