ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಚುನಾವಣಾ ರಂಗ ಕಾವೇರಿದೆ. ಈ ಸಮಯದಲ್ಲಿ,ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಅತೃಪ್ತಗೊಂಡಿರುವ ಪುದುಚೇರಿ ಪ್ರದೇಶ ಕಾಂಗ್ರೆಸ್ ಸಮಿತಿಯ (PCC) ಮಾಜಿ ಅಧ್ಯಕ್ಷ, ಮಾಜಿ ಸ್ಪೀಕರ್ ಎ.ವಿ. ಸುಬ್ರಮಣಿಯನ್ ಅವರು ಕಾಂಗ್ರೆಸ್ ತೊರೆದಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಪುದುಚೇರಿ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ. ವೈದಿಲಿಂಗಂ ಅವರಿಗೆ ಸಲ್ಲಿಸಿರುವ ಸುಬ್ರಮಣಿಯನ್, “ವೈಯಕ್ತಿಕ ಕಾರಣಗಳಿಂದಾಗಿ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ” ಎಂದು ಉಲ್ಲೇಖಿಸಿದ್ದಾರೆ. ಆದರೆ, ರಾಜೀನಾಮೆಯ ಹಿಂದೆ ಚುನಾವಣಾ ಟಿಕೆಟ್ ಹಂಚಿಕೆಯ ಅಸಮಾಧಾನವೇ ಪ್ರಬಲ ಕಾರಣ ಎಂಬುದು ರಾಜಕೀಯ ವಲಯದಲ್ಲಿ ಸ್ಪಷ್ಟವಾಗಿದೆ.
ಕರೈಕಲ್ ಪ್ರದೇಶದ ಪ್ರಭಾವಿ ನಾಯಕರಾಗಿರುವ ಸುಬ್ರಮಣಿಯನ್, ಈ ಹಿಂದೆ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ, ಪುದುಚೇರಿ ವಿಧಾನಸಭೆಯ ಸ್ಪೀಕರ್ ಮತ್ತು ಉಪ ಸ್ಪೀಕರ್ ಆಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದರು.
2001ರಲ್ಲಿ ಕರೈಕಲ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಸುಬ್ರಮಣಿಯನ್, 2021ರ ಚುನಾವಣೆಯಲ್ಲಿ ಉತ್ತರ ಕರೈಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಕಣಕ್ಕಿಳಿಯುವ ಆಕಾಂಕ್ಷೆ ಹೊಂದಿದ್ದರು. ಆದರೆ, ಅವರಿಗೆ ಪಕ್ಷವು ಟಿಕೆಟ್ ನಿರಾಕರಿಸಿದೆ. ಪರಿಣಾಮ, ಅವರು ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಕೇಸರಿ ಫೈಲ್ | ಬಿಜೆಪಿ ನಾಯಕ ‘ಹರೇನ್ ಪಾಂಡ್ಯ’ರನ್ನು ಮೌನಗೊಳಿಸಿದ ಭೀಕರ ಕತೆ
ಚುನಾವಣೆಯ ಹೊಸ್ತಿಲಲ್ಲಿ ಹಿರಿಯ ನಾಯಕರೊಬ್ಬರು ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದೆ. ಕರೈಕಲ್ ಭಾಗದಲ್ಲಿ ಸುಬ್ರಮಣಿಯನ್ ಅವರು ಹೊಂದಿರುವ ಜನಬೆಂಬಲವು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸದ್ಯಕ್ಕೆ ಅವರು ಪಕ್ಷೇತರವಾಗಿ ಸ್ಪರ್ಧಿಸುತ್ತಾರೆಯೇ ಅಥವಾ ಬೇರೆ ಪಕ್ಷ ಸೇರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.



